ಊರುಗಳನ್ನು ಬೆಸೆಯುವ ಸುಳ್ಯದ ಗಿರೀಶ್ ಭಾರದ್ವಾಜ್‌ರಿಗೆ ಪದ್ಮಶ್ರಿ ಪ್ರಶಸ್ತಿಯ ಗರಿ

Update: 2017-01-25 15:54 GMT

ಸುಳ್ಯ , ಜ.25 : ತೂಗುಸೇತುವೆಗಳ ಸರದಾರ ಗಿರೀಶ್ ಭಾರದ್ವಾಜ್ ಅವರಿಗೆ ಈ ಸಾಲಿನ ಪದ್ಮಶ್ರೀ ಪ್ರಶಸ್ತಿ ಘೋಷಣೆಯಗಿದೆ . ನವದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

ಅರಂಬೂರಿನ ಗಿರೀಶ್ ಭಾರದ್ವಾಜ್ ಮೆಕ್ಯಾನಿಕಲ್ ಎಂಜಿನಿಯರ್. ಪದವಿ ಪಡೆದ ನಂತರ ಅಪ್ಪನ ಅಣತಿಯಂತೆ ಸುಳ್ಯದಲ್ಲಿ ಸಣ್ಣದೊಂದು ವರ್ಕ್‌ಶಾಪ್ ಶುರು ಮಾಡಿದರು. 1986ರಲ್ಲಿ ತಮ್ಮದೇ ಊರಲ್ಲಿ ಮೊದಲ ತೂಗು ಸೇತುವೆ ನಿರ್ಮಿಸಿದ ಬಳಿಕ ಅವರು ಹಿಂತಿರುಗಿ ನೋಡಿಲ್ಲ. ಆ ದಿನಗಳಲ್ಲಿ ತೂಗು ಸೇತುವೆಯ ಕಲ್ಪನೆಯೇ ಹೊಸತು. 40 ಸ್ವಯಂ ಸೇವಕ ಯುವಕ ತಂಡದೊಂದಿಗೆ ಕೆಲಸ ಶುರು ಮಾಡಿದ ಗಿರೀಶ್ ಕೆಲವೇ ದಿನಗಳಲ್ಲಿ ಬಲಾಢ್ಯ ಸೇತುವೆ ಕಟ್ಟಿಬಿಟ್ಟರು. 30 ವರ್ಷಗಳ ನಂತರವೂ ಆ ಸೇತುವೆ ಜನರ ಸಂಪರ್ಕ ಕೊಂಡಿಯಾಗಿದೆ.

ಇದುವರೆಗೂ 127 ತೂಗು ಸೇತುವೆಗಳನ್ನು ಗಿರೀಶ್ ನಿರ್ಮಿಸಿದ್ದಾರೆ. ಈ ಪೈಕಿ 2 ಒಡಿಶಾದಲ್ಲಿ ಹಾಗೂ 3 ಆಂಧ್ರದಲ್ಲಿವೆ. ಉಳಿದವು ಕೇರಳ ಹಾಗೂ ಕರ್ನಾಟಕದಲ್ಲಿ ಸಂಪರ್ಕ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತಿವೆ. ಆಂಧ್ರದ ಸಿಎಂ ಆಗಿದ್ದ ಚಂದ್ರಬಾಬು ನಾಯ್ಡು ಗಿರೀಶ್ ಇವರ ಕೆಲಸವನ್ನು ಮನಸಾರೆ ಹೊಗಳಿದ್ದಾರೆ. ತೂಗು ಸೇತುವೆ ನಿರ್ಮಿಸಿಕೊಡಿ ಎಂದು ನಾನಾ ರಾಜ್ಯಗಳಿಂದ 30ಕ್ಕೂ ಹೆಚ್ಚು ಪ್ರಸ್ತಾಪಗಳು ಬಂದಿವೆ.

67 ವರ್ಷದ ಗಿರೀಶ್ ಭಾರದ್ವಾಜ್ ಸೇವೆ ಉಚಿತ. ಸರ್ವೆ ಮಾಡುವುದರಿಂದ ಹಿಡಿದು ವಿನ್ಯಾಸ, ತಾಂತ್ರಿಕ ಸಲಹೆಗೂ ಹಣ ಪಡೆಯುವುದಿಲ್ಲ. ಅನೇಕ ಹಳ್ಳಿಗಳಲ್ಲಿ ಜನರ ಬಳಿ ಹಣ ಇಲ್ಲ ಎಂದು ಗೊತ್ತಾದಾಗ ತಮ್ಮ ಸ್ವಂತ ಹಣವನ್ನು ಹಾಕಿ ಸೇತುವೆ ನಿರ್ಮಿಸಿಕೊಟ್ಟಿದ್ದಾರೆ. ಗಿರೀಶ್ ನೈಪುಣ್ಯತೆ ಅದೆಷ್ಟು ಜನಪ್ರಿಯವಾಗಿದೆ ಎಂದರೆ, ಈಗ ಸೇನೆ ಸಹ ಬುಲಾವ್ ನೀಡಿದೆ. ಜಮ್ಮು ಕಾಶ್ಮೀರದ ಪೂಂಛ್ ಬಳಿ ತೂಗು ಸೇತುವೆ ನಿರ್ಮಿಸಿಕೊಡಿ ಎಂದು ಸೇನಾಧಿಕಾರಿಗಳು ಪತ್ರ ಬರೆದಿದ್ದಾರೆ. ಪ್ರತಿ ಗ್ರಾಮದ ಪ್ರತಿ ವ್ಯಕ್ತಿಯೂ ತೂಗು ಸೇತುವೆಯ ತಂತ್ರಜ್ಞಾನಿಯಾಗಿ ರೂಪುಗೊಳ್ಳಬೇಕು ಎನ್ನುವುದು ಗಿರೀಶ್ ಅವರ ಆಶಯ. ಅವರ ಸಾಧನೆಯನ್ನು ಅರಸಿ ಹಲವು ಪ್ರತಿಷ್ಥಿತ ಪ್ರಶಸ್ತಿಗಳು ಇವರ ಮುಡಿಗೇರಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News