ಭಟ್ಕಳಿಗರ ಪ್ರಯತ್ನಕ್ಕೆ ಯಶಸ್ಸು : 9 ತಿಂಗಳಿಂದ ಕೋಮಾಸ್ಥಿತಿಯಲ್ಲಿದ್ದ ವ್ಯಕ್ತಿ ಮರಳಿ ಭಾರತಕ್ಕೆ
ಭಟ್ಕಳ, ಫೆ. 8: ಒಂದು ಕೋಟಿ ರೂ.ಗೂ ಹೆಚ್ಚು ಬಾಕಿಯಿದ್ದ ಆಸ್ಪತ್ರೆಯ ಬಿಲ್ ಭರಿಸದೆ ಕಳೆದ 9ತಿಂಗಳುಗಳಿಂದ ಕೋಮಾ ಸ್ಥಿತಿಯಲ್ಲಿದ್ದು, ಜೀವನ್ಮರಣ ಹೋರಾಟ ನಡೆಸುತ್ತಿದ್ದ ಭಟ್ಕಳ ಮೂಲದ ಅಬೂಬಕರ್ ಮಾಕಡೆ, ಭಟ್ಕಳಿಗರ ನಿರಂತರ ಪ್ರಯತ್ನದಿಂದಾಗಿ ಕೊನೆಗೂ ಭಾರತಕ್ಕೆ ಮರಳಿದ್ದು, ಶುಕ್ರವಾರ ಸಂಜೆ ಬೆಂಗಳೂರಿಗೆ ತಲುಪಿದ್ದಾರೆ.
ಅಬೂಬಕರ್ ಮಾಕಡೆ ಅವರನ್ನು ಅನಿವಾಸಿ ಭಾರತಿಯರಾದ ಡಾ.ವಾಸೀಮ್ ಮಾಣಿ, ಶಹಬಾಝ್ ಮುನ್ನಾ ಶುಕ್ರವಾರ ಸಂಜೆ ಸೌದಿ ಏರ್ ಲೈನ್ ಮೂಲಕ ಬೆಂಗಳೂರು ಏರ್ಪೋರ್ಟ್‌ಗೆ ತಂದಿದ್ದು, ಅವರನ್ನು ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುವುದು ಎಂದು ಅವರು ಈ ಕುರಿತು ವಾರ್ತಾಭಾರತಿಯೊಂದಿಗೆ ದೂರವಾಣಿ ಮೂಲಕ ಮಾತನಾಡಿದರು.
ಇಲ್ಲಿನ ಹೆಬಳೆ ಗ್ರಾಪಂ, ಉಪಾಧ್ಯಕ್ಷ ಇಬ್ಬು ಅಲಿ ಎಂಬವರ ಅಳಿಯ(ಪುತ್ರಿಯ ಪತಿ) ಶಿರೂರು ನಿವಾಸಿ ಅಬೂಬಕರ್ ಮಾಕಡೆ ಎಂಬವರು ಸೌದಿ ಅರೇಬಿಯಾದಲ್ಲಿ ಉದ್ಯೋಗಿಯಾಗಿದ್ದು, ಅಪಘಾತವೊಂದರಲ್ಲಿ ಕೋಮಾ ಅವಸ್ಥೆಗೆ ತಲುಪಿದ್ದು, ಅಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದರು.
ಸರಕಾರಿ ಆಸ್ಪತ್ರೆಯೆಂದರೆ ಉಚಿತ ಚಿಕಿತ್ಸೆ ಎಂದು ಭಾವಿಸಿದ ಅವರ ಸಂಬಂಧಿಕರು ಚಿಕಿತ್ಸೆಯನ್ನು ಪ್ರಾರಂಭಿಸಿದರು. ಕಳೆದ ಒಂಬತ್ತು ತಿಂಗಳಿಂದ ಅವರ ಆರೋಗ್ಯದಲ್ಲಿ ಯಾವುದೇ ಬದಲಾವಣೆ ಕಾಣದೆ ಇರುವಾಗ ಅವರನ್ನು ಭಾರತಕ್ಕೆ ತರುವ ಪ್ರಯತ್ನಕ್ಕೆ ಕುಟುಂಬದವರು ಪ್ರಯತ್ನಿಸಿದರಾದರೂ ಆಸ್ಪತ್ರೆಯ ಒಂದು ಕೋಟಿ ರೂ. ಬಿಲ್ ನೋಡಿ ದಂಗಾದರು. ಜೀವನವಿಡಿ ದುಡಿದರೂ ಒಂದು ಕೋಟಿ ರೂ. ಹೊಂದಿಸಲು ಸಾಧ್ಯವಾಗುವುದಿಲ್ಲ ಎಂದು ತಿಳಿದು ತನ್ನ ಸ್ವದೇಶಕ್ಕೆ ಮರಳುವ ಆಸೆಯನ್ನು ಕೈಬಿಟ್ಟಿದ್ದರು.
ಆದರೆ, ಇತ್ತಿಚೆಗೆ ಇಲ್ಲಿನ ಸಾಹಿಲ್ ಆನ್ ಲೈನ್ ಅಂತರ್ಜಾಲ ತಾಣವು ಈ ಕುರಿತಂತೆ ವಿಸ್ತೃತ ವರದಿಯನ್ನು ಪ್ರಕಟಿಸಿದ್ದು, ಇದರ ಪರಿಣಾಮವಾಗಿ ಸೌದಿಯಲ್ಲಿರುವ ಭಟ್ಕಳ ಹಾಗೂ ಮುರುಡೇಶ್ವರದ ನವಾಯತ್ ಸಮುದಾಯ ಇದಕ್ಕಾಗಿ ಹಗಲಿರುಳು ಪ್ರಯತ್ನಿಸಿತ್ತು. ಇವರ ಪ್ರಯತ್ನಕ್ಕೀಗ ಯಶಸ್ಸು ದೊರಕಿದ್ದು, ಆಶ್ಚರ್ಯಕರ ಬೆಳವಣೆಗೆಯೊಂದರಲ್ಲಿ ಸೌದಿ ಆಸ್ಪತ್ರೆಯ ಅಧಿಕಾರಿಗಳು ಒಂದು ಕೋಟಿ ರೂ. ಬಿಲ್ಲನ್ನು ಮನ್ನಾ ಮಾಡಿದ್ದಲ್ಲದೆ ಈ ವ್ಯಕ್ತಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ತಿಳಿಸಿದ್ದರು.
ಇದಕ್ಕಾಗಿ ಅನಿವಾಸಿ ಭಾರತೀಯರಾದ ಭಟ್ಕಳದ ಡಾ. ಝಹೀರ್ ಕೋಲಾ ಹಾಗೂ ಡಾ.ವಸೀಮ್ ಮಾಣಿಯವರು ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಿದ್ದು, ಅಬೂಬಕರ್ ಮಾಕಡೆಯವರ ಕುಟುಂಬ ಈಗ ನಿಟ್ಟುಸಿರು ಬಿಡುವಂತೆ ಮಾಡಿದೆ.
ಈ ನಡುವೆ ಸೌದಿ ಅರೇಬಿಯಾದ ರಿಯಾದ್‌ನಲ್ಲಿ ಡಾ.ಝಹೀರ್ ಹಾಗೂ ಡಾ.ವಸೀಮ್‌ಸಭೆಯೊಂದನ್ನು ಆಯೋಜಿಸಿದ್ದು, ಅಲ್ಲಿ ಅಬೂಬಕರ್ ಮಾಕಡೆಯ ಚಿಕಿತ್ಸೆಗಾಗಿ ಸಹಾಯಹಸ್ತ ಚಾಚುವಂತೆ ಕೆಲವರಲ್ಲಿ ವಿನಂತಿಸಿಕೊಂಡಿದ್ದರು. ಇದಕ್ಕೆ ಅಭೂತಪೂರ್ವ ಬೆಂಬಲ ಕೂಡ ದೊರೆತಿತ್ತು. ಬೆಂಗಳೂರಿನಲ್ಲಿ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ದಾನಿಗಳು ಭರಿಸಿರುವುದರಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದ ಭಟ್ಕಳದ ಅಬೂಬಕರ್ ಕುಟುಂಬ ಈಗ ಸ್ವಲ್ಪಮಟ್ಟಿಗೆ ಉಸಿರಾಡುವಂತಾಗಿದೆ.
ರಿಯಾದ್‌ನ ಸಭೆಯನ್ನುದ್ದೇಶಿಸಿ ಮಾತನಾಡಿದ ಮುರುಡೇಶ್ವರ ಮುಸ್ಲಿಮ್ ಜಮಾಅತ್ ರಿಯಾದ್ ಇದರ ಅಧ್ಯಕ್ಷ ಅಶ್ಫಾಖ್ ಕೋಟೇಶ್ವರ, ಡಾ.ಝಹೀರ್ ಹಾಗೂ ಡಾ.ವಸೀಮ್‌ರ ಕಾರ್ಯ ಶ್ಲಾಘನೀಯವಾಗಿದ್ದು, ಮುಂಬರುವ ದಿನಗಳಲ್ಲಿ ನಾವು ಒಟ್ಟಾಗಿ ಇಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ. ಭಟ್ಕಳದ ಎಲ್ಲ ಸಮುದಾಯದದವರು ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ನಮ್ಮಿಂದಾದ ಸಹಾಯ ಸಹಕಾರ ಮಾಡಬೇಕಾಗಿದೆ ಎಂದು ತಿಳಿಸಿದರು.