ಗ್ರಾಮಾಂತರ ಪ್ರದೇಶಗಳಲ್ಲಿ ‘ಬಾಪೂಜಿ ಸೇವಾ ಕೇಂದ್ರ’ಕೆ್ಕ ಸರ್ವರ್ ಕಾಟ
ಮಂಗಳೂರು, ಫೆ.16: ರಾಜ್ಯ ಸರಕಾರ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ‘ಬಾಪೂಜಿ ಸೇವಾ ಕೇಂದ್ರ’ಕ್ಕೆ ಗ್ರಾಮಾಂತರ ಪ್ರದೇಶಗಳಲ್ಲಿ ‘ಸರ್ವರ್’ ಕಾಟ ಶುರುವಾಗಿದೆ. ಇದರಿಂದ ‘ಬಾಪೂಜಿ’ಯಲ್ಲಿ ‘100’ ಯೋಜನೆಗಳ ಸೇವೆ ಪಡೆಯಲು ಬಂದವರು ನಿರಾಶೆಯಿಂದ ಬರಿಗೈಯಲ್ಲಿ ಮರಳುವಂತಾಗಿದೆ.
ದೇಶದಲ್ಲೇ ಪ್ರಪ್ರಥಮ ಬಾರಿಗೆ 2016ರ ಜುಲೈಯಲ್ಲಿ ಈ ಕೇಂದ್ರವನ್ನು ತೆರೆದ ಕೀರ್ತಿ ರಾಜ್ಯ ಸರಕಾರಕ್ಕೆ ಸಂದಿತ್ತು. ಆದರೆ ಐದಾರು ತಿಂಗಳಲ್ಲೇ ಈ ಕೇಂದ್ರ ಅವನತಿಯತ್ತ ಸಾಗುವ ಲಕ್ಷಣ ಗೋಚರಿಸುತ್ತಿದೆ.
ತುರ್ತಾಗಿ ಜಮೀನಿನ ಆರ್‌ಟಿಸಿ ಮತ್ತಿತರ ಸೇವೆ ಪಡೆಯಲು ಗ್ರಾಮಾಂತರ ಪ್ರದೇಶದ ಜನರು ಸುಮಾರು 10-15 ಕಿ.ಮೀ. ದೂರವಿರುವ ನಾಡಕಚೇರಿಗಳಿಗೆ ಅಲೆದಾಡುವುದು ಸಹಜವಾಗಿತ್ತು. ಅದನ್ನು ತಪ್ಪಿಸಲು ರಾಜ್ಯ ಸರಕಾರ ‘ಬಾಪೂಜಿ ಸೇವಾ ಕೇಂದ್ರ’ ತೆರೆದಿತ್ತು. ಈ ‘ಕೇಂದ್ರ’ದಲ್ಲಿ ಕಂದಾಯ ಇಲಾಖೆಗೆ ಸಂಬಂಸಿ 40 ಮತ್ತು ಆರ್‌ಡಿಪಿಆರ್ (ಗ್ರಾಮೀಣ ಅಭಿವೃದ್ಧಿಗೆ ಸಂಬಂಸಿ)ನ 43 ಹಾಗೂ ಇತರ 17 ಸಹಿತ 100 ಸೇವೆಗಳನ್ನು ಪಡೆಯಲು ಅವಕಾಶ ಕಲ್ಪಿಸಲಾಗಿತ್ತು. ಹೆಚ್ಚಿನ ಗ್ರಾಮಸ್ಥರು ಆರ್‌ಟಿಸಿ ಪಡೆಯುವುದಕ್ಕಾಗಿಯೇ ‘ಬಾಪೂಜಿ ಸೇವಾ ಕೇಂದ್ರ’ವನ್ನು ಅವಲಂಬಿಸಿದ್ದಾರೆ. ದ.ಕ. ಜಿಲ್ಲೆಯ 230 ಗ್ರಾಪಂಗಳಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಆದರೆ ಹೆಚ್ಚಿನ ಗ್ರಾಪಂಗಳಲ್ಲಿ ಇಂಟರ್‌ನೆಟ್ ಸಮಸ್ಯೆ ಮತ್ತು ಸಿಬ್ಬಂದಿ ಹಾಗೂ ಕೊಠಡಿಯ ಕೊರತೆಯಿದೆ. ಹಲವು ಕಡೆ ಗ್ರಾಪಂ ಕಟ್ಟಡಗಳಲ್ಲೇ ಈ ಕೇಂದ್ರ ತೆರೆಯಲಾಗಿದ್ದು, ಸಿಬ್ಬಂದಿ ಕೊರತೆಯಿರುವ ಕಡೆ ಗ್ರಾಪಂ ಸಿಬ್ಬಂದಿ ವರ್ಗವನ್ನೇ ಬಳಸಲಾಗುತ್ತದೆ. ಗ್ರಾಪಂನ ಇತರ ಕೆಲಸಗಳ ಜೊತೆ ‘ಬಾಪೂಜಿ 100’ ಯೋಜನೆಯ ಸೇವೆಯನ್ನೂ ನೀಡಬೇಕಾದ ಅನಿವಾರ್ಯತೆ ಗ್ರಾಪಂ ಸಿಬ್ಬಂದಿಗೆ ಇದೆ.
ಜಿಲ್ಲೆಯಲ್ಲಿ ಈ ಯೋಜನೆಗೆ ಉತ್ತಮ ಪ್ರತಿಕ್ರಿಯೆಯಿದ್ದು, ಎಲ್ಲ ಕಡೆಯೂ ತೃಪ್ತಿದಾಯಕ ಸೇವೆ ನೀಡಲಾಗುತ್ತದೆ ಎಂದು ಸಂಬಂಧಪಟ್ಟ ಇಲಾಖೆಯು ಅಕಾರಿಗಳು ಹೇಳಿಕೊಂಡರೂ ವಸ್ತುಸ್ಥಿತಿಯನ್ನು ಗಮನಿಸಿದಾಗ ಎಲ್ಲವೂ ವ್ಯತಿರಿಕ್ತವಾಗಿದೆ. ಅಂದರೆ ಇಂಟರ್ನೇಟ್‌ಗೆ ‘ಸರ್ವರ್’ ಕಾಟದಿಂದ ಜನರು ತತ್ತರಿಸಿದ್ದಾರೆ. ಯಾವ ಹೊತ್ತು ಹೋದರೂ ‘ನೆಟ್’ ಇಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಕೆಲವು ಗ್ರಾಪಂಗಳಲ್ಲಿ ‘ನೆಟ್’ ಇದ್ದರೂ ಪ್ರಿಂಟರ್ ಇಲ್ಲದ ಸಮಸ್ಯೆ, ಪ್ರಿಂಟರ್ ಇದ್ದರೂ ‘ಟೋನರ್’ ಇಲ್ಲ ಎಂಬ ಸಮಸ್ಯೆಯೂ ಕಾಡುತ್ತಿದೆ.
ಹಲವು ಕಡೆ ಸಿಬ್ಬಂದಿ ಇದೆ, ಕಂಪ್ಯೂಟರ್ ಸಿಸ್ಟಮ್ ಕೂಡ ಇದೆ. ಆದರೆ ಕೊಠಡಿ ಇಲ್ಲ. ಇನ್ನೂ ಕೆಲವು ಕಡೆ ಕೊಠಡಿಯಿದ್ದರೂ ಸಿಬ್ಬಂದಿ ಇಲ್ಲ. ಹೀಗೆ ಜಿಲ್ಲೆಯ 230 ಗ್ರಾಪಂಗಳಲ್ಲೂ ಒಂದಲ್ಲೊಂದು ಸಮಸ್ಯೆ ಇದ್ದೇ ಇದೆ. ಯೋಜನೆಯ ಯಶಸ್ವಿಗೆ ಗುತ್ತಿಗೆ ಆಧಾರದಲ್ಲಿ ಸಿಬ್ಬಂದಿ ವರ್ಗವನ್ನು ನಿಯೋಜಿಸುವ ಅಕಾರವನ್ನು ಗ್ರಾಪಂಗಳಿಗೆ ನೀಡಲಾಗಿದ್ದರೂ ಅಲ್ಲಿ ಸಿಗುವ ಕಡಿಮೆ ವೇತನವು ಯುವಪೀಳಿಗೆಯ ಗಮನ ಸೆಳೆಯುತ್ತಿಲ್ಲ. ಸಿಬ್ಬಂದಿ ಕೊರತೆ ಕೂಡ ಯೋಜನೆಯ ಯಶಸ್ವಿಗೆ ಭಾರೀ ತೊಡಕಾಗಿ ಪರಿಣಮಿಸಿದೆ.
ಸರಕಾರ ವಿದ್ಯುತ್, ದೂರವಾಣಿ, ವಿಮೆ, ಮೊಬೈಲ್ ರಿಜಾರ್ಜ್, ಆರ್‌ಟಿಸಿ, ಸರಕಾರದ ಬೇರೆ ಬೇರೆ ಯೋಜನೆಯ ಆನ್‌ಲೈನ್ ಅರ್ಜಿ ಸಲ್ಲಿಕೆ ಇತ್ಯಾದಿಯಾಗಿ 100 ಸೇವೆಗಳು ಒಂದೇ ಸೂರಿನಡಿ ಸಕಾಲಕ್ಕೆ ಸಿಗುವಂತೆ ಮಾಡುವ ಈ ಯೋಜನೆ ಸರಕಾರದ್ದಾದರೂ ‘ಸರ್ವರ್’ ಹಲವರ ನೆಮ್ಮದಿ ಕೆಡಿಸಿದೆ. ಹಾಗಾಗಿ ನಾಡಕಚೇರಿಗಳ ‘ನೆಮ್ಮದಿ’ ಕೇಂದ್ರಕ್ಕೆ ಅಲೆಯುವುದು ಅನಿವಾರ್ಯವಾಗಿ ಪರಿಣಮಿಸಿದೆ.
ಒಟ್ಟಿನಲ್ಲಿ ಅಬ್ಬರದ ಪ್ರಚಾರದೊಂದಿಗೆ ಲೋಕಾರ್ಪಣೆಗೊಂಡಿದ್ದ ಸೇವಾಕೇಂದ್ರವು ಆರೇ ತಿಂಗಳಲ್ಲಿ ಸೊರಗುವ ಹಂತ ತಲುಪಿದೆ.
ಅರಿವು ಇಲ್ಲ
ಗ್ರಾಮದ ಬಹುತೇಕರಿಗೆ ಇಂಥದ್ದೊಂದು ಸೇವೆ ಗ್ರಾಪಂನಲ್ಲೇ ಇದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಹಲವರು ಹಿಂದಿನಂತೆ ನಾಡಕಚೇರಿಗಳಿಗೆ ಅಲೆದಾಡುತ್ತಲೇ ಇದ್ದಾರೆ. ಮಾಹಿತಿ ನೀಡುವ ಮತ್ತು ಪಡೆಯುವ ಆಸಕ್ತಿ ಗ್ರಾಮಸ್ಥರಿಗೆ, ಅಕಾರಿ ವರ್ಗ-ಜನಪ್ರತಿನಿಗಳಿಗೆ ಇದ್ದಂತಿಲ್ಲ.
ಬಾಪೂಜಿ ಸೇವಾ ಕೇಂದ್ರಗಳಲ್ಲಿ ಡಾಟಾ ಎಂಟ್ರಿ ಸಿಬ್ಬಂದಿಯನ್ನು ಪ್ರತ್ಯೇಕವಾಗಿ ನೇಮಿಸಿಲ್ಲ. ಗ್ರಾಪಂ ಸಿಬ್ಬಂದಿ ಯನ್ನೇ ಇದಕ್ಕಾಗಿ ಬಳಕೆ ಮಾಡಲಾಗುತ್ತದೆ. ಆದರೆ ಈಗಾಗಲೇ ನಮಗೆ ಗ್ರಾಪಂನ ಕೆಲಸಗಳೇ ಹೊರೆಯಾಗಿದೆ. ಇದರಿಂದ ಬಾಪೂಜಿ ಸೇವಾ ಕೇಂದ್ರಗಳಲ್ಲಿ ನಿರೀಕ್ಷಿತ ಕೆಲಸ ಮಾಡಲು ಸಮಯ ಸಿಗುತ್ತಿಲ್ಲ. ಅಲ್ಲದೆ ಅಲ್ಲಿನ ‘ಸರ್ವರ್’ ಸಮಸ್ಯೆಯು ನಮ್ಮ ತಾಳ್ಮೆಯನ್ನೂ ಪರೀಕ್ಷಿಸುತ್ತಿದೆ. ಹಾಗಾಗಿ ಸರಕಾರ ಇದಕ್ಕೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸುವ ಅಗತ್ಯವಿದೆ ಎನ್ನುತ್ತಾರೆ, ಗ್ರಾಪಂವೊಂದರ ಸಿಬ್ಬಂದಿ ಮುಸ್ತಾ.