ಹಾಜಬ್ಬರ ಶಾಲಾ ಮಕ್ಕಳಿಗಿಲ್ಲ ತುಳುಪಠ್ಯದ ‘ಹಾಜಬ್ಬರ ಯಶೋಗಾಥೆ’ ಭಾಗ್ಯ
ಮಂಗಳೂರು, ೆ.20: ಅಕ್ಷರ ಸಂತ ಹರೇಕಳ ಹಾಜಬ್ಬರ ಯಶೋಗಾಥೆ 2017-18ನೆ ಸಾಲಿನ 8ನೆ ತರಗತಿಯ ತುಳುಪಠ್ಯ ಪುಸ್ತಕದಲ್ಲಿ ಸೇರ್ಪಡೆಗೊಳ್ಳಲಿದೆ. ಆದರೆ, ಆ ಪಠ್ಯವನ್ನು ಅಭ್ಯಸಿಸುವ ಭಾಗ್ಯದಿಂದ ‘ಹಾಜಬ್ಬ’ರ ಶಾಲಾ ಮಕ್ಕಳು ವಂಚಿತರಾಗುತ್ತಿದ್ದಾರೆ. ಅಂದರೆ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಈ ಶಾಲೆಯ 8ನೆ ತರಗತಿಯಲ್ಲಿ ಸುಮಾರು 25 ವಿದ್ಯಾರ್ಥಿಗಳ ಹಾಜರಾತಿಯ ನಿರೀಕ್ಷೆಯಲ್ಲಿದ್ದರೂ ಈ ಮಕ್ಕಳಲ್ಲಿ ಕೇವಲ ಒಂದಿಬ್ಬರು ಮಾತ್ರ ತುಳು ಮಾತೃಭಾಷಿಗರಿದ್ದಾರೆ. ಉಳಿದಂತೆ ಎಲ್ಲ ಮಕ್ಕಳು ಬ್ಯಾರಿ ಭಾಷಿಗರಾಗಿದ್ದಾರೆ. ಸಾಮಾನ್ಯವಾಗಿ ತುಳುಪಠ್ಯ ಅಳವಡಿಸಲು ಆಯಾ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು, ಹೆತ್ತವರು, ಎಸ್‌ಡಿಎಂಸಿ ಪದಾಕಾರಿ ಗಳು ಪರಸ್ಪರ ಚರ್ಚೆ ನಡೆಸಿ ತುಳು ಸಾಹಿತ್ಯ ಅಕಾಡಮಿ ಅಥವಾ ಬಿಇಒ, ಡಿಡಿಪಿಐ ಗಮನಕ್ಕೆ ತರಬೇಕಿದೆ. ಈ ಬಗ್ಗೆ ವಿದ್ಯಾರ್ಥಿಗಳ ಮೇಲೆ ಒತ್ತಡ ಹಾಕುವಂತಿಲ್ಲ. ಅದೇನಿದ್ದರೂ ಐಚ್ಛಿಕವಾಗಿದೆ.
ಮುಂದಿನ ಶೈಕ್ಷಣಿಕ ವರ್ಷದಲ್ಲಿ 8ನೆ ತರಗತಿಯ ಸುಮಾರು 250ರಷ್ಟು ವಿದ್ಯಾರ್ಥಿಗಳು ತುಳು ಪಠ್ಯವನ್ನು ಅಭ್ಯಸಿಸುವ ನಿರೀಕ್ಷೆಯಿದೆ. ಆ ಮೂಲಕ ಹರೇಕಳ ಹಾಜಬ್ಬರ ಯಶೋಗಾಥೆಯನ್ನು ಈ ಮಕ್ಕಳು ತಿಳಿದುಕೊಳ್ಳಲಿದ್ದಾರೆ. ಆದರೆ ಸ್ವತ: ಹಾಜಬ್ಬರ ಶಾಲಾ ಮಕ್ಕಳು ಇದರಿಂದ ವಂಚಿತರಾಗಲಿರುವುದು ಗಮನಾರ್ಹ. ತನ್ನ ಬದುಕಿನ ಬಗ್ಗೆ ರಚಿಸಲ್ಪಟ್ಟ ಪಠ್ಯವನ್ನು ತನ್ನದೇ ಶಾಲೆಯ ಮಕ್ಕಳು ಅಭ್ಯಸಿಸಬೇಕು ಎಂಬ ಆಸೆ ಹರೇಕಳ ಹಾಜಬ್ಬರಿಗಿದ್ದರೂ ಅದನ್ನೆಂದೂ ಬಹಿರಂಗವಾಗಿ ಹೇಳಿಕೊಳ್ಳುವ ಸ್ಥಿತಿಯಲ್ಲಿ ಅವರಿಲ್ಲ.
ಜಿಲ್ಲೆಯ ಬ್ಯಾರಿ ಭಾಷಿಗ ಮಕ್ಕಳಿಗೆ ತುಳುಭಾಷೆ ಕಬ್ಬಿಣದ ಕಡಲೆಯಾಗದು. ಆದರೆ ಹಾಜಬ್ಬರನ್ನು ಎಲ್ಲ ವಿಧದಿಂದಲೂ ಹತ್ತಿಕ್ಕುವ ಪ್ರಯತ್ನ ಸ್ಥಳೀಯ ಮಟ್ಟದಲ್ಲೇ ನಡೆಯುವ ಕಾರಣ ಇಂತಹ ವಿಷಯಕ್ಕೆ ಆದ್ಯತೆ ಸಿಗುವ ಸಾಧ್ಯತೆ ತೀರಾ ಕಡಿಮೆ. ಮಕ್ಕಳು ಬೇಕು ಎಂದರೂ ಸ್ಥಳೀಯರು ಅಡ್ಡಗಾಲು ಹಾಕುವ ಪ್ರಮೇಯವೇ ಹೆಚ್ಚು. ಹಾಗಾಗಿ ‘ಹಾಜಬ್ಬ’ರ ಶಾಲಾ ಮಕ್ಕಳು ಸ್ವತ: ಹಾಜಬ್ಬ ಬಗ್ಗೆಗಿನ ಪಠ್ಯಪುಸ್ತಕ ಅಭ್ಯಸಿಸುವ ಅವಕಾಶದಿಂದ ವಂಚಿತರಾಗಲಿದ್ದಾರೆ.
ಪತ್ರಕರ್ತ ಗುರುವಪ್ಪ ಬಾಳೆಪುಣಿ 8ನೆ ತರಗತಿಯ ತುಳು ಪುಸ್ತಕಕ್ಕೆ ಹಾಜಬ್ಬರ ಕುರಿತು ಪಠ್ಯ ರಚಿಸಿದ್ದಾರೆ. ವಿದ್ವಾಂಸ ಎ.ವಿ.ನಾವಡ ಅಧ್ಯಕ್ಷತೆಯ ತುಳು ಪಠ್ಯ ಪುಸ್ತಕ ರಚನಾ ಸಮಿತಿ ಇದನ್ನು ಆಯ್ಕೆ ಮಾಡಿದೆ. ರಾಜ್ಯ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಅಧ್ಯಕ್ಷ ಬರಗೂರು ರಾಮಚಂದ್ರಪ್ಪ ಇದಕ್ಕೆ ಅಂಗೀಕಾರ ನೀಡಿದ್ದಾರೆ. ಅಷ್ಟೇ ಅಲ್ಲ, ಸರಕಾರಿ ಪಠ್ಯಪುಸ್ತಕ ಸಂಘದ ನಿರ್ದೇಶಕರು ಪುಸ್ತಕ ಮುದ್ರಣಕ್ಕೆ ಟೆಂಡರ್ ಕರೆದಿದ್ದಾರೆ. ಹಾಗಾಗಿ ಮುಂದಿನ ಶೈಕ್ಷಣಿಕ ವರ್ಷದಿಂದಲೇ ಹರೇಕಳ ಹಾಜಬ್ಬರ ಯಶೋಗಾಥೆ ತುಳುಪಠ್ಯದಲ್ಲಿ ಬರಲಿದೆ.
ಈಗಾಗಲೇ ಮಂಗಳೂರು, ದಾವಣಗೆರೆ, ಕುವೆಂಪು ವಿವಿ ಹಾಜಬ್ಬರ ಯಶೋಗಾಥೆಯ ಬಗ್ಗೆ ಪಠ್ಯಪುಸ್ತಕದಲ್ಲಿ ಅಳವಡಿಸಲಾಗಿದೆ. ಕೇರಳ ಸರಕಾರ ಕೂಡ 8ನೆ ತರಗತಿಯ ಕನ್ನಡ ಪಠ್ಯದಲ್ಲಿ ಹಾಜಬ್ಬರ ಅಕ್ಷರ ಕನಸುಗಳ ಬಗ್ಗೆ ಅಳವಡಿಸಿದೆ. ಇದೀಗ ತುಳುವಿನಲ್ಲೂ ಹಾಜಬ್ಬ ಮೂಡಿಬರಲಿದ್ದಾರೆ. ಅಲ್ಲದೆ ಯೆನೆಪೊಯ ವಿವಿಯೂ ತನ್ನ ಅೀನದ ಕಾಲೇಜುಗಳ ಪಠ್ಯಪುಸ್ತಕದಲ್ಲಿ ಹಾಜಬ್ಬರ ಜೀವನಚರಿತ್ರೆಯ ಬಗ್ಗೆ ಅಳವಡಿಸಲು ಚಿಂತನೆ ನಡೆಸಿದೆ. ಆದರೆ ರಾಜ್ಯ ಸರಕಾರ ಮಾತ್ರ ಪ್ರಾಥಮಿಕ, ಪ್ರೌಢ ಶಾಲೆ, ಪಿಯು ತರಗತಿಗಳ ಪಠ್ಯದಲ್ಲಿ ಹಾಜಬ್ಬರ ಬದುಕನ್ನು ಅನಾವರಣಗೊಳಿಸಲು ಮುಂದಾಗದಿರುವುದು ವಿಪರ್ಯಾಸ.
ನಮ್ಮ ಶಾಲೆಯಲ್ಲಿ ಮುಂದಿನ ವರ್ಷ 8ನೆ ತರಗತಿಗೆ ಸುಮಾರು 25 ಮಕ್ಕಳಿರಬಹುದು. ಅವರಲ್ಲಿ ಹೆಚ್ಚಿನವರು ಬ್ಯಾರಿ ಮುಸ್ಲಿಮರೇ ಆಗಿದ್ದಾರೆ. ಅವರಿಗೆ ತುಳು ಪಠ್ಯ ಕಲಿಯಲು ಕಷ್ಟವಾಗಬಹುದು. ಈ ವಿಷಯದಲ್ಲಿ ಶಾಲೆಯ ಮಕ್ಕಳು, ಪೋಷಕರು, ಶಿಕ್ಷಕರು ಆಸಕ್ತಿ ವಹಿಸಬೇಕೇ ವಿನ: ನಾನಲ್ಲ. ಈ ವಿಷಯದಲ್ಲಿ ನಾನು ಹೆಚ್ಚು ಮಾತನಾಡುವುದು ಸರಿಯಲ್ಲ ಎಂದು ಪ್ರೌಢಶಾಲಾ ಎಸ್‌ಡಿಎಂಸಿ ಅಧ್ಯಕ್ಷರೂ ಆಗಿರುವ ಹರೇಕಳ ಹಾಜಬ್ಬ ಹೇಳುತ್ತಾರೆ.
ನನ್ನ ಬದುಕಿನ ಬಗ್ಗೆ ಪಠ್ಯಪುಸ್ತಕದಲ್ಲಿ ಅಳವಡಿಕೆ ಯಾಗಿರುವುದು ಸಂತಸದ ವಿಚಾರ. ಆದರೆ ನಮ್ಮ ಶಾಲೆಯಲ್ಲಿ ಈಗ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಹರೇಕಳದ ನ್ಯೂಪಡ್ಪುವಿನಲ್ಲಿರುವ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಆರಂಭದ ದಿನಗಳಲ್ಲಿ 300ಕ್ಕೂ ಅಕ ಮಕ್ಕಳಿದ್ದರು. ಈಗ ಅದು 190ಕ್ಕಿಳಿದಿದೆ. ಕಳೆದ ನಾಲ್ಕೆದು ತಿಂಗಳಿನಿಂದ ಅಂಬ್ಲಮೊಗರು ರೂಟ್‌ನ 2ನಂಬ್ರ ಬಸ್ ಓಡಾಡುತ್ತಿಲ್ಲ. ಹಾಗಾಗಿ ಬರ್ವ, ಮದಕ ಆಸುಪಾಸಿನ ಮಕ್ಕಳು ನಡೆದುಕೊಂಡೇ ಬರುತ್ತಿದ್ದಾರೆ. ಮುಂದಿನ ವರ್ಷ ಅವರು ಮತ್ತೆ ಈ ಶಾಲೆಗೆ ಬರುತ್ತಾರೋ ಇಲ್ಲವೋ ಎಂಬ ಆತಂಕ ನನಗೆ ಕಾಡುತ್ತಿದೆ. ಪಿಯುಸಿ ತೆರೆಯಲು ಹೊರಟ ನನಗೆ ಈಗ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿರುವುದು ಬೇಸರವನ್ನುಂಟು ಮಾಡಿದೆ.
*ಹರೇಕಳ ಹಾಜಬ್ಬ.
ಯಾವುದೇ ಶಾಲೆಯಲ್ಲಿ ತುಳು ಪಠ್ಯ ಅಳವಡಿಸಲು ಆಸಕ್ತಿಯಿದ್ದರೆ ಅವರು ಅಕಾಡಮಿಯನ್ನು ಸಂಪರ್ಕಿಸಬಹುದು. ಶಿಕ್ಷಕರ ಗೌರವಧನದ ನೆಲೆಯಲ್ಲಿ ಪ್ರತೀ ಶಾಲೆಗೆ ಮಾಸಿಕ 3 ಸಾವಿರ ರೂ. ಕೊಡಲಾಗುವುದು. ಸದ್ಯ 20 ಶಾಲೆಗಳಿಗೆ ಅಕಾಡಮಿ ಈ ಗೌರವಧನ ಬಿಡುಗಡೆ ಮಾಡುತ್ತದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ದ.ಕ. ಮತ್ತು ಉಡುಪಿ ಜಿಲ್ಲೆಯ 6ರಿಂದ 10ನೆ ತರಗತಿಯಲ್ಲಿ 1 ಸಾವಿರ ಮಕ್ಕಳು ತುಳುಪಠ್ಯ ಅಭ್ಯಸಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ತುಳು ಪಠ್ಯ ಅಳವಡಿಸುವ ಬಗ್ಗೆ ಜಾಗೃತಿ ಮೂಡಿಸಲಾಗುವುದು.
*ಚಂದ್ರಹಾಸ ಬಿ. ರೈ, ತುಳು ಸಾಹಿತ್ಯ ಅಕಾಡಮಿ ರಿಜಿಸ್ಟ್ರಾರ್.
‘ನನಗೆ ಹರೇಕಳ ಹಾಜಬ್ಬ, ಕಟೀಲಿನ ರಾಮಕ್ಕ ಮುಗೇರ್ತಿಯಂತಹ ಸಜ್ಜನರ ಬದುಕಿನ ಬಗ್ಗೆ ತುಳು ಪಠ್ಯದಲ್ಲಿ ಅಳವಡಿಸುವುದು ಹೆಮ್ಮೆಯೆನಿಸುತ್ತದೆ. ಏಕೆಂದರೆ ಇವರೆಲ್ಲಾ ಕರ್ನಾಟಕ್ಕೆ ಕೀರ್ತಿ ತಂದವರು. ದಿಲ್ಲಿಯ ಎನ್‌ಸಿಆರ್‌ಟಿಯ ಮಾರ್ಗದರ್ಶನದಂತೆ ಪಠ್ಯಪುಸ್ತಕ ರಚಿಸಲಾಗಿದೆ. ತುಳುನಾಡಿನ ಸಂಸ್ಕೃತಿ, ಕಲೆ, ಸಾಹಿತ್ಯಕ್ಕೆ ಈ ಪಠ್ಯದಲ್ಲಿ ಹೆಚ್ಚು ಒತ್ತು ನೀಡಲಾಗಿದೆ. ಹರೇಕಳ ಹಾಜಬ್ಬ ಬ್ಯಾರಿ ಭಾಷಿಗರಾಗಿದ್ದರೂ ‘ಅಕ್ಷರ’ಕ್ಕಾಗಿ ಅವರ ಹೋರಾಟ ಎಲ್ಲರಿಗೂ ಪಾಠ. ಹಾಗಾಗಿ ಅತ್ಯಂತ ಗೌರವದಿಂದಲೇ ಅವರ ಬದುಕಿನ ಯಶೋಗಾಥೆಯನ್ನು ತುಳುಪಠ್ಯದಲ್ಲಿ ಅಳವಡಿಸಲಾಗಿದೆ.
*ಪ್ರೊ.ಎ.ವಿ.ನಾವಡ,
ತುಳು ಪಠ್ಯಪುಸ್ತಕ ರಚನಾ ಸಮಿತಿ ಅಧ್ಯಕ್ಷ.