ದ.ಕ. ಜಿಲ್ಲೆಯ 189 ಶಾಲೆಗಳಲ್ಲಿ 2,369 ಆರ್‌ಟಿಇ ಸೀಟು ಮೀಸಲು

Update: 2017-03-02 18:38 GMT

ಮಂಗಳೂರು, ಮಾ.2: ಎಲ್ಲರಿಗೂ ಶಿಕ್ಷಣ ಲಭ್ಯ ವಾಗಬೇಕು ಎಂಬ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಜಾರಿಗೊಳಿಸಲಾಗು ತ್ತಿರುವ ‘ಆರ್‌ಟಿಇ’ ಸೀಟುಗಳ ಮೀಸಲು ಪಟ್ಟಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಬಿಡುಗಡೆಗೊಳಿಸಿದೆ. ಅದರಂತೆ ದ.ಕ. ಜಿಲ್ಲೆಯ ಅನುದಾನರಹಿತ 189 ಶಾಲೆಗಳಲ್ಲಿ 2,369 ಸೀಟುಗಳು ಲಭ್ಯವಿದೆ. ಆ ಪೈಕಿ ಎಸ್ಸಿ 720, ಎಸ್ಟಿ 175 ಮತ್ತು ಇತರ 1,474 ಸೀಟುಗಳು ಮೀಸಲಿಡಲಾಗಿದೆ.

2017-18ನೆ ಸಾಲಿನಲ್ಲಿ ಜಿಲ್ಲೆಯ 189 ಅನುದಾನ ರಹಿತ ಶಾಲೆಗಳಲ್ಲಿ ಎಲ್‌ಕೆಜಿ ಮತ್ತು 1ನೆ ತರಗತಿಯಲ್ಲಿ ಒಟ್ಟು 9,015 ವಿದ್ಯಾರ್ಥಿಗಳು ಪ್ರವೇಶ ಪಡೆಯಲಿದ್ದಾರೆ. ಪ್ರತೀ ಶಾಲೆಯ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶೇ.25 ರಷ್ಟು ಸೀಟುಗಳನ್ನು ಆರ್‌ಟಿಇ ಕಾಯ್ದೆಯಡಿ ಅದರಲ್ಲೂ ಶೇ.7.25ಕ್ಕೆ ಕಡಿಮೆಯಾಗದಂತೆ ಎಸ್ಸಿಗೆ, ಶೇ.1.5ಕ್ಕೆ ಕಡಿಮೆಯಾಗದಂತೆ ಎಸ್ಟಿಗೆ, ಶೇ.16 ಕಡಿಮೆಯಾಗದಂತೆ ಇತರ ಜಾತಿಯ ಮಕ್ಕಳಿಗೆ ಸೀಟು ಮೀಸಲಿಡಬೇಕಿದೆ. ದ.ಕ. ಜಿಲ್ಲೆಯಲ್ಲಿ ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಸುಳ್ಯ ತಾಲೂಕು, ಮಂಗಳೂರು ತಾಲೂಕಿನಲ್ಲಿ ಮಂಗಳೂರು ಉತ್ತರ ಮತ್ತು ದಕ್ಷಿಣ ಹಾಗೂ ಮೂಡುಬಿದಿರೆ ಸೇರಿದಂತೆ ಒಟ್ಟು 7 ಶೈಕ್ಷಣಿಕ ವಿಭಾಗಗಳಿವೆ. ಈ ಏಳು ಶೈಕ್ಷಣಿಕ ವಿಭಾಗಗಳ ಅನುದಾನರಹಿತ ಶಾಲೆಗಳಲ್ಲಿ ಪ್ರವೇಶಕ್ಕೆ ಲಭ್ಯವಿರುವ ಆರ್‌ಟಿಇ ಸೀಟುಗಳ ಪಟ್ಟಿಯನ್ನು ರಾಜ್ಯ ಶಿಕ್ಷಣ ಇಲಾಖೆಯು ಸಿದ್ಧಪಡಿಸಿದೆ.

‘ಸ್‌ಟಾವೇರ್’ ಸಮಸ್ಯೆ: ಮಾ.1ರಿಂದ ಆರ್‌ಟಿಇ ಕಾಯ್ದೆಯಡಿ ಅರ್ಜಿ ಸಲ್ಲಿಕೆ ಆರಂಭವಾಗಿದ್ದರೂ ‘ಸ್‌ಟಾವೇರ್’ ಸಮಸ್ಯೆ ತಲೆನೋವಾಗಿ ಪರಿಣಮಿಸಿದೆ. ಯಾವ ಸೈಬರ್ ಸೆಂಟರ್‌ಗೆ ಹೋದರೂ ಸ್‌ಟಾವೇರ್ ಸಮಸ್ಯೆ ಮಾಮೂಲಿ ಎಂಬಂತಾಗಿದೆ. ವಿದ್ಯಾರ್ಥಿಗಳ ಹೆತ್ತವರು ಉದ್ಯೋಗ- ಕೆಲಸಗಳಿಗೆ ರಜೆ ಹಾಕಿ ಹೋದರೂ ಅದೇ ದಿನ ಆರ್‌ಟಿಇ ಸೀಟುಗಳನ್ನು ಪಡೆಯುವ ವಿಶ್ವಾಸವಿಲ್ಲ. ಏಕೆಂದರೆ ಯಾವ ಕ್ಷಣ ವಿದ್ಯುತ್ ಮಾತ್ರವಲ್ಲ, ಇಂಟರ್ನೆಟ್ ಕೈ ಕೊಡುತ್ತದೆ ಎಂದು ಹೇಳಲಿಕ್ಕಾಗುವುದಿಲ್ಲ.

ಮಾಹಿತಿಯ ಕೊರತೆ:  ಅಂದಹಾಗೆ, ಸೀಟು ಮೀಸಲು ಪ್ರಕ್ರಿಯೆಯು ಮಂಗಳವಾರ ಸಂಜೆ ಜಿಲ್ಲಾ ಶಿಕ್ಷಣ ಇಲಾಖೆಗೆ ರವಾನೆಯಾಗಿದೆ. ಬಳಿಕ ಅದು ಬಿಇಒ ವ್ಯಾಪ್ತಿಗೆ ರವಾನೆಯಾಗಿ, ಆಯಾ ಶಾಲೆಗಳಿಗೆ ತಲುಪಬೇಕು. ಆದರೆ ಯಾವ ಯಾವ ಶಾಲೆಗಳಲ್ಲಿ ಎಷ್ಟೆಷ್ಟು ಸೀಟುಗಳು ಆರ್‌ಟಿಇ ಕಾಯ್ದೆಯಡಿ ಲಭ್ಯವಿದೆ ಎಂಬ ಮಾಹಿತಿ ವಿದ್ಯಾರ್ಥಿ-ಹೆತ್ತವರಿಗೆ ಇರುವುದಿಲ್ಲ. ಬಹುತೇಕ ಶಾಲೆಗಳ ಆಡಳಿತ ಮಂಡಳಿಯು ಆರ್‌ಟಿಇ ಸೀಟುಗಳ ಪಟ್ಟಿಯನ್ನು ಕೊನೆಯ ಕ್ಷಣದಲ್ಲಿ ಬಿಡುಗಡೆ ಮಾಡಿ ಆರ್‌ಟಿಇ ಕಾಯ್ದೆಗೆ ಸವಾಲೆಸೆಯುತ್ತದೆ ಎಂಬ ಆರೋಪವಿದೆ.

ಆರ್‌ಟಿಇ ಸೀಟಿಗೆ ಸಂಬಂಸಿದಂತೆ ಶಿಕ್ಷಣ ಇಲಾಖೆಯು ಪ್ರತೀ ವರ್ಷ ನಿಯಮಾವಳಿಗಳನ್ನು ಬದಲಾಯಿಸುವುದರಿಂದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯಲು ಆರ್ಥಿಕವಾಗಿ ಹಿಂದುಳಿದ ಮಕ್ಕಳ ಹೆತ್ತವರ ಕನಸು ನುಚ್ಚುನೂರಾಗುತ್ತಿವೆ. ಕಳೆದ ವರ್ಷ ದ.ಕ. ಜಿಲ್ಲೆಗೆ 2,274 ಸೀಟುಗಳು ಲಭ್ಯವಾಗಿತ್ತು. ಈ ಬಾರಿ ಕೇವಲ 95 ಸೀಟುಗಳು ಹೆಚ್ಚಾಗಿವೆ. ಪ್ರಸಕ್ತ ಲಭ್ಯವಾದ 2,369 ಸೀಟುಗಳಿಗೆ ಅದರ ದುಪ್ಪಟ್ಟು ಅರ್ಜಿ ಸಲ್ಲಿಕೆಯಾಗಬಹುದಾದರೂ ಮೀಸಲು ಸೀಟು ಭರ್ತಿಯಾಗುವ ಸಾಧ್ಯತೆಯಿಲ್ಲ.

ಸರಕಾರಕ್ಕೆ ಹೊರೆ: ಆರ್‌ಟಿಇ ಕಾಯ್ದೆಯಡಿ ನೀಡಲಾಗುವ ಸೀಟುಗಳ ಶುಲ್ಕ ಕಡಿಮೆಯಾಗುತ್ತಿದೆ ಎಂದು ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ ನ್ಯಾಯಾಲಯದ ಮೆಟ್ಟಲೇರಿತ್ತು. ನ್ಯಾಯಾಲಯದ ಆದೇಶದಂತೆ ಸರಕಾರವು ಪ್ರವೇಶ ಶುಲ್ಕವನ್ನು ಪರಿಷ್ಕರಿಸಿದೆ. ಎಲ್‌ಕೆಜಿಗೆ ಪ್ರತೀ ಸೀಟಿಗೆ 5,924ರ ಬದಲು 8 ಸಾವಿರ ರೂ. ಮತ್ತು 1ನೆ ತರಗತಿಗೆ 11,848ರ ಬದಲು 16 ಸಾವಿರ ಕೊಡಲು ನಿರ್ಧರಿಸಿದೆ. ಇದು ಸರಕಾರಕ್ಕೆ ಹೊರೆಯಾಗಲಿದೆ. ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರಕ್ಕೆ ಹಿರಿಯ ಸಚಿವರು ತೀವ್ರ ವಿರೋಧ ವ್ಯಕ್ತಪಡಿಸಿರುವುದು ಗಮನಾರ್ಹ. ಅಂದಹಾಗೆ, ಇದಕ್ಕಿಂತ ಕಡಿಮೆ ಶುಲ್ಕ ನೀಡುವ ಗ್ರಾಮಾಂತರ ಪ್ರದೇಶದ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಲಭಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ.

ಯುನಿಟ್ ಸ್ಥಾಪನೆ

ಈ ಮೊದಲು ಕಿ.ಮೀ. ವ್ಯಾಪ್ತಿ ಮತ್ತು ವಾರ್ಡ್‌ವಾರು ಆರ್‌ಟಿಇ ಸೀಟುಗಳಿಗಾಗಿ ಅರ್ಜಿ ಸಲ್ಲಿಸಬೇಕಿತ್ತು. ಆದರೆ, ಈ ಬಾರಿ ಆ ಪ್ರಕ್ರಿಯೆಯನ್ನು ಕೈಬಿಡಲಾಗಿದೆ. ಅಂದರೆ ವಾರ್ಡ್, ಕಿ.ಮೀ. ವ್ಯಾಪ್ತಿಯ ಬದಲು ಯುನಿಟ್ ಸ್ಥಾಪಿಸಲಾಗಿದೆ. ಸಾಮಾನ್ಯವಾಗಿ ಗ್ರಾಮಾಂತರ ಪ್ರದೇಶದಲ್ಲಿ ಈ ಯುನಿಟ್ ಒಂದು ಗ್ರಾಪಂ ವ್ಯಾಪ್ತಿಯನ್ನು ಹೊಂದಿರುತ್ತದೆ. ಗ್ರಾಪಂ, ಪಟ್ಟಣ ಪಂಚಾಯತ್, ಪುರಸಭೆಯ ವ್ಯಾಪ್ತಿಯ ಜನರು ಅಲ್ಲಿನ ಅನುದಾನರಹಿತ ಖಾಸಗಿ ಶಾಲೆಗಳಿಗೆ ಆರ್‌ಟಿಇ ಕಾಯ್ದೆಯಡಿ ಅರ್ಜಿ ಸಲ್ಲಿಸಿ ಸೀಟು ಪಡೆಯಬಹುದಾಗಿದೆ. ಆದರೆ ಇದು ನಗರ ಪಾಲಿಕೆ ವ್ಯಾಪ್ತಿಗೆ ಬರುವಾಗ ಸಮಸ್ಯೆಗೆ ಕಾರಣವಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

Writer - ಹಂಝ ಮಲಾರ್

contributor

Editor - ಹಂಝ ಮಲಾರ್

contributor

Similar News