ದ.ಕ.ಜಿಲ್ಲೆಯಲ್ಲಿ ಅನಧಿಕೃತವಾಗಿ 10 ರೂ. ನಾಣ್ಯ ಚಲಾವಣೆ ಸ್ಥಗಿತ !
ಮಂಗಳೂರು, ಮಾ.6: ದ.ಕ.ಜಿಲ್ಲೆಯಲ್ಲಿ 10 ರೂ.ನಾಣ್ಯವು ಕಳೆದ 2 ವಾರದಿಂದ ಅನಧಿಕೃತವಾಗಿ ಚಲಾವಣೆ ಸ್ಥಗಿತಗೊಂಡಿದೆ. ಇದರಿಂದ 500 ಮತ್ತು 1,000 ರೂ. ನೋಟುಗಳ ಅಮಾನ್ಯದಿಂದ ತತ್ತರಿಸಿದ್ದ ಸಾರ್ವಜನಿಕರು ಮತ್ತೆ ಗೊಂದಲಕ್ಕೀಡಾಗಿದ್ದಾರೆ.
ಬಸ್, ರಿಕ್ಷಾವಲ್ಲದೆ ಅಂಗಡಿಮುಂಗಟ್ಟುಗಳಲ್ಲೂ ಕೂಡ 10 ರೂ. ನಾಣ್ಯವನ್ನು ಸ್ವೀಕರಿಸಲಾಗುತ್ತಿಲ್ಲ. ಗ್ರಾಹಕರು ಕೊಟ್ಟರೆ ಬಸ್-ರಿಕ್ಷಾ, ಅಂಗಡಿ ವ್ಯಾಪಾರಿಗಳು ತಿರಸ್ಕರಿಸುವ ವಿದ್ಯಮಾನ ಒಂದೆಡೆಯಾದರೆ, ಬಸ್-ರಿಕ್ಷಾ, ಅಂಗಡಿ ವ್ಯಾಪಾರಿಗಳು ಕೊಟ್ಟರೆ ಗ್ರಾಹಕರು ಸ್ವೀಕರಿಸದಂತಹ ವಾತಾವರಣ ಸೃಷ್ಟಿಯಾಗಿದೆ. ಇದರಿಂದ ಯಾರಿಗೆ ಯಾರು ಉತ್ತರಿಸಬೇಕು ಎಂಬ ಪ್ರಶ್ನೆ ಎದುರಾಗಿದೆ. ಈ ವಿಷಯದಲ್ಲಿ ಕೆಲವು ಬಸ್‌ಗಳಲ್ಲಿ ಪ್ರಯಾಣಿಕರು ಮತ್ತು ಸಿಬ್ಬಂದಿಯ ಮಧ್ಯೆ ಮಾತಿನ ಚಕಮಕಿ ನಡೆದ ಉದಾಹರಣೆಯೂ ಇದೆ.
10 ರೂ. ನಾಣ್ಯವನ್ನು ಬಸ್‌ಗಳಲ್ಲಿ ಸಿಬ್ಬಂದಿ ವರ್ಗ ಸ್ವೀಕರಿಸದ ಕಾರಣ ಪ್ರಯಾಣಿಕರು ಅತಂತ್ರರಾಗಿದ್ದಾರೆ. ಅಷ್ಟೇ ಅಲ್ಲ, ತಾವು ಶೇಖರಿಸಿಟ್ಟ 10 ರೂ. ನಾಣ್ಯಗಳನ್ನು ಹೊರಹಾಕಲು ಹರಸಾಹಸ ಪಡುತ್ತಿದ್ದಾರೆ. ಅದಕ್ಕಾಗಿ ಜಾತ್ರೆ, ಉರೂಸ್, ಕಾಣಿಕೆ ಡಬ್ಬಗಳಿಗೆ ಹರಕೆ ರೂಪದಲ್ಲಿ ಸಂದಾಯ ಮಾಡುತ್ತಿದ್ದಾರೆ.
ಚಿಲ್ಲರೆ ಮತ್ತು ರಖಂ ಅಂಗಡಿಗಳಲ್ಲೂ ಕೂಡ 10 ರೂ. ನಾಣ್ಯವನ್ನು ಅನಧಿಕೃತವಾಗಿ ಚಲಾವಣೆ ಸ್ಥಗಿತಗೊಳಿಸಲಾಗಿದೆ. ಪೆಟ್ರೋಲ್ ಬಂಕ್‌ಗಳಲ್ಲೂ ಕೂಡ 10 ರೂ. ನಾಣ್ಯ ಸ್ವೀಕರಿಸುತ್ತಿಲ್ಲ. ಹಾಗಾಗಿ ಗ್ರಾಹಕರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಎಲ್ಲಿ ಹೋದರೂ 10 ರೂ.ನಾಣ್ಯ ಬೇಡ ಎಂಬ ಮಾತು ಕೇಳಿ ಬರುತ್ತಿವೆ. ಇದರಿಂದ ವ್ಯವಹಾರಕ್ಕೆ ಲಕ್ಷಾಂತರ ರೂ. ನಷ್ಟವಾಗಿದೆ. ಆದರೆ, ಯಾರಿಗೂ ಯಾವ ಕಾರಣಕ್ಕೆ 10 ರೂ.ನಾಣ್ಯ ಚಲಾವಣೆಯಾಗುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರವಿಲ್ಲ.
ಅಂದಹಾಗೆ, ಈ ನಾಣ್ಯವನ್ನು ಆರ್‌ಬಿಐ ನಿಷೇಧಿಸಿಲ್ಲ. ಆದರೆ ಕೆಲವು ಬ್ಯಾಂಕ್ ಸಿಬ್ಬಂದಿ ವರ್ಗ ಎಣಿಸುವ ರಗಳೆಯಿಂದ ದೂರ ಉಳಿಯುವುದಕ್ಕಾಗಿ ಸ್ವೀಕರಿಸಲು ಹಿಂದೇಟು ಹಾಕಿದೆ ಎನ್ನಲಾಗಿದೆ. ಬ್ಯಾಂಕ್‌ಗಳೇ ಸ್ವೀಕರಿಸದ್ದನ್ನು ಸಹಜವಾಗಿ ನಂಬಿದ ಗ್ರಾಹಕರು 10 ರೂ. ನಾಣ್ಯ ನಿಷೇಧವಾಗಿದೆ ಎಂದು ಭಾವಿಸಿದ್ದಾರಲ್ಲದೆ, ಮಾತಿನ ಮಧ್ಯೆ ಅದನ್ನು ತೇಲಿಬಿಟ್ಟಿದ್ದಾರೆ. ಇದು ಎಲ್ಲೆಡೆ ಫೋಬಿಯೋ ಮಾದರಿಯಲ್ಲಿ ಹಬ್ಬಿದ್ದು, ಗೊಂದಲಕ್ಕೆ ಎಡೆಮಾಡಿಕೊಟ್ಟಿದೆ.
ಖೋಟಾ ನಾಣ್ಯ:
ಈ ಮಧ್ಯೆ 10 ರೂ.ನಾಣ್ಯದ 'ಖೋಟಾ' ಚಲಾವಣೆಗೆ ಬಿಡಲಾಗಿದೆ ಎಂದು ಹೇಳಲಾಗುತ್ತಿದೆ. 2008ರಲ್ಲಿ ಹೊರತರಲಾದ 10 ರೂ. ನಾಣ್ಯದಲ್ಲಿ 'ರೂ.' ಚಿಹ್ನೆ ಇಲ್ಲ ಮತ್ತು ಮೇಲ್ಭಾಗದಲ್ಲಿ 15 ಗೆರೆಗಳಿವೆ. 2015ರಲ್ಲಿ ಹೊರತರಲಾದ 10 ರೂ.ನಾಣ್ಯದಲ್ಲಿ 'ರೂ.' ಚಿಹ್ನೆ ಮತ್ತು ಮೇಲ್ಭಾಗದಲ್ಲಿ 10 ಗೆರೆಗಳಿವೆ. ಅಂದರೆ, ಒಂದೇ ಮುಖಬೆಲೆಯ 2 ನಾಣ್ಯದ ಈ ವ್ಯತ್ಯಾಸವನ್ನೇ ಮುಂದಿಟ್ಟುಕೊಂಡು ಹಲವರು 10 ರೂ. ನಾಣ್ಯ 'ಖೋಟಾ' ಆಗಿದೆ ಎಂದು ಹೇಳಿಕೊಳ್ಳತೊಡಗಿದ್ದಾರೆ. ಆದರೆ, ಈ ಬಗ್ಗೆ ಬ್ಯಾಂಕ್ ಅಧಿಕಾರಿಗಳಲ್ಲಿ ಯಾವುದೇ ಮಾಹಿತಿ ಇಲ್ಲ.
ನಮಗೆ 10 ರೂ. ನಾಣ್ಯ ಸ್ವೀಕರಿಸಬಾರದು ಎಂದು ಆರ್‌ಬಿಐ ಹೇಳಲಿಲ್ಲ. ಅದನ್ನು ಸ್ವೀಕರಿಸಬೇಕು ಎಂದು ಸೂಚನೆ ನೀಡಿದೆ. ಇನ್ನು 10 ರೂ. ನಾಣ್ಯ 'ನಕಲಿ' ಬಗ್ಗೆ ಮಾಹಿತಿ ಇಲ್ಲ. ನಾಣ್ಯಗಳ ವ್ಯತ್ಯಾಸದ ಬಗ್ಗೆಯೂ ನಮ್ಮಲ್ಲಿ ಗೊಂದಲಗಳಿಲ್ಲ ಎಂದು ಹೆಸರು ಹೇಳಲಿಚ್ಛಿಸದ ಬ್ಯಾಂಕ್ ವ್ಯವಸ್ಥಾಪಕರೊಬ್ಬರು 'ವಾರ್ತಾಭಾರತಿ'ಗೆ ತಿಳಿಸಿದ್ದಾರೆ.
ಒಟ್ಟಿನಲ್ಲಿ 10 ರೂ.ನಾಣ್ಯವು ಅನಧಿಕೃತವಾಗಿ ಸ್ಥಗಿತಗೊಂಡಿದ್ದು, ಇದಕ್ಕೆ ಬ್ಯಾಂಕ್‌ಗಳ ಶಾಖಾ ಕಚೇರಿ, ಬಸ್-ರಿಕ್ಷಾ, ಅಂಗಡಿ ಮುಂಗಟ್ಟು ಸಹಿತ ಎಲ್ಲೆಡೆ ಜಾಗೃತಿ ಮೂಡಿಸುವ ಅಗತ್ಯವಿದೆ.