ಮೊಳಹಳ್ಳಿ ಬಳಿ ಮತ್ತೆ ವಾರಾಹಿ ಎಡದಂಡೆಯಲ್ಲಿ ಜರಿತ: ನೀರು, ಮಣ್ಣು ನುಗ್ಗಿ ಮನೆ, ತೋಟ, ಗದ್ದೆಗೆ ಹಾನಿ
ಕುಂದಾಪುರ, ಮಾ.17: ವಾರಾಹಿ ನೀರಾವರಿ ಯೋಜನೆಯಿಂದ ಅಚ್ಚುಕಟ್ಟು ಪ್ರದೇಶದ ಜನತೆಗೆ ಸಿಗುವ ಪ್ರಯೋಜನದೊಂದಿಗೆ, ಅಧಿಕಾರಿಗಳ ನಿಷ್ಕೃಿಯತೆ, ಬೇಜವಾಬ್ದಾರಿತನಕದಿಂದ ಜನತೆ ಅನುಭವಿಸುವ ಸಂಕಷ್ಟಗಳಿಗೆ ಇಂದು(ಶುಕ್ರವಾರ) ಘಟಿಸಿದ ಮತ್ತೊಂದು ಪ್ರಕರಣ ಸಾಕ್ಷ ಒದಗಿಸಿತು.
ತಾಲೂಕಿನ ಮೊಳಹಳ್ಳಿ ಗ್ರಾಮದ ಕೊಕಾಡಿ ಕೆಳಹೆಬ್ಬಾಗಿಲು ಮನೆ ಬಳಿ ಇಂದು ಬೆಳಗಿನ ಜಾವ 6:00 ಗಂಟೆ ಸುಮಾರಿಗೆ ವಾರಾಹಿ ನೀರಾವರಿ ಯೋಜನೆಯ ಎಡದಂಡೆ ಕಾಲುವೆ 25.100ಕಿ.ಮೀ. ಬಳಿ ತೂತು ಬಿದ್ದು ಜರಿದು ಇದರಿಂದ ಭಾರೀ ಪ್ರಮಾಣದ ನೀರು ರಭಸದಿಂದ ಪಕ್ಕದ ಕೃಷಿ, ಮನೆ, ತೋಟಗಳಿಗೆ ಹರಿದು ಸುಮಾರು 6ರಿಂದ 7 ಎಕರೆ ಪ್ರದೇಶ ನೀರಿನಿಂದ ಆವೃತ್ತವಾಯಿತು.
ನೀರು ಹಾಗೂ ಅದರೊಂದಿಗೆ ಜೇಡಿಮಣ್ಣು ಕಾಲುವೆ ಪಕ್ಕದಲ್ಲಿರುವ ಕೊಕಾಡಿ ಬೇಬಿ ಶೆಟ್ಟಿ ಅವರ ಮನೆ, ಹಟ್ಟಿಗೆ ಮಾತ್ರವಲ್ಲದೇ ಅವರ ಅಡಿಕೆ ತೋಟ, ಮುಂದಿನ ತಿಂಗಳು ಕೃಷಿಗೆ ಸಿದ್ಧಗೊಳ್ಳಬೇಕಿದ್ದ ಭತ್ತದ ಗದ್ದೆಗಳಿಗೆ ನುಗ್ಗಿ, ಕಡುಬೀಸಿಗೆಯ ಈ ಸಮಯದಲ್ಲಿ ನೆರೆಯ ರೀತಿ ಕಂಡುಬಂದಿತ್ತು ಎಂದು ಮೊಳಹಳ್ಳಿ ಗ್ರಾಪಂ ಅಧ್ಯಕ್ಷ ಉದಯ ಕುಲಾಲ್ 'ವಾರ್ತಾಭಾರತಿ'ಗೆ ತಿಳಿಸಿದರು.
ಘಟನೆ ಬೆಳಗಾದ ಬಳಿಕ ನಡೆದುದರಿಂದ ತಕ್ಷಣ ಅಕ್ಕಪಕ್ಕದ ಮನೆಯವರು ಸ್ಥಳಕ್ಕೆ ಧಾವಿಸಿ ನೀರು ಮನೆಗೆ ಹಾಗು ದನಕರುಗಳಿದ್ದ ಹಟ್ಟಿಗೆ ನುಗ್ಗದಂತೆ ತಡೆದರಲ್ಲದೇ, ನೀರು ಹರಿದು ಹೋಗಲು ಅವಕಾಶ ಮಾಡಿಕೊಟ್ಟು ಹೆಚ್ಚಿನ ಅಪಾಯವಾಗದಂತೆ ತಡೆದರು. ಘಟನೆ ರಾತ್ರಿ ವೇಳೆ ನಡೆದಿದ್ದರೆ ಕೆಲ ವರ್ಷದ ಹಿಂದೆ ಪತಿಯನ್ನು ಕಳೆದುಕೊಂಡು ಸಣ್ಣ ಮಕ್ಕಳೊಂದಿಗೆ ಮಣ್ಣಿನ ಇಟ್ಟಿಗೆಯಿಂದ ನಿರ್ಮಿಸಿದ ಮನೆಯಲ್ಲಿರುವ ಬೇಬಿ ಶೆಟ್ಟಿ ಕುಟುಂಬ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇತ್ತು ಎಂದು ಅವರು ಹೇಳಿದರು.
ಊರವರು ತಕ್ಷಣ ಕಾರ್ಯಪ್ರವೃತ್ತರಾದ್ದರಿಂದ ನೀರು ಅಕ್ಕಪಕ್ಕದ ಪ್ರದೇಶ ಹಾಗೂ ಮನೆಗಳಿಗೆ ನುಗ್ಗಲಿಲ್ಲ. ಆದರೆ ನೀರು ಮತ್ತು ಮಣ್ಣು ನುಗ್ಗಿರುವುದರಿಂದ ಬೇಬಿ ಶೆಟ್ಟಿ ಅವರ 6-7 ಎಕರೆ ಪ್ರದೇಶಗಳಿಗೆ ಹಾನಿಯಾಗಿದೆ. ಐದಾರು ತಿಂಗಳ ಹಿಂದಷ್ಟೇ ಅವರು ನೆಟ್ಟಿರುವ ಸುಮಾರು 500 ಅಡಿಕೆ ಸಸಿಗಳಿಗೆ ಹಾನಿಯಾಗಿದೆ. ಅದೇ ರೀತಿ ಗದ್ದೆಯಲ್ಲಿ ಕೆಸರು, ಜೇಡಿ ಮಣ್ಣು ನಿಂತಿರುವುದರಿಂದ ಅದನ್ನು ತೆಗೆದು ಸ್ವಚ್ಛಗೊಳಿಸದೇ ಈ ಬಾರಿ ಬೇಸಾಯ ಮಾಡುವಂತಿಲ್ಲ ಎಂದು ಉಯ ಕುಲಾಲ್ ತಿಳಿಸಿದರು.
ಮೊದಲೇ ಸೂಚನೆ:
ಎಡದಂಡೆ ಕಾಲುವೆಯ 26ನೇ ಕಿ.ಮೀ.ನಲ್ಲಿ ಸಣ್ಣ ತೂಬು ಇದ್ದು, ಇದರಿಂದ ಕೆಲ ಸಮಯದಿಂದ ಸಣ್ಣಗೆ ನೀರು ಸೋರುತ್ತಿತ್ತು. ಅದನ್ನು ವಾರಾಹಿ ಇಂಜಿನಿಯರ್‌ಗಳ ಗಮನಕ್ಕೂ ತರಲಾಗಿತ್ತು. ಅವರು ಬಂದು ನೋಡಿ ಹೋಗಿದ್ದು ಯಾವುದೇ ದುರಸ್ತಿ ಮಾಡಿರಲಿಲ್ಲ. ಅದು ಸೋರಿಕೆ ದೊಡ್ಡದಾಗಿ ಮಣ್ಣು ಕುಸಿದು ನೀರು ಪಕ್ಕದ ಪ್ರದೇಶಗಳಿಗೆ ನುಗ್ಗಿದೆ ಎಂದು ಸ್ಥಳದಲ್ಲಿದ್ದ ಊರವರು ಆರೋಪಿಸಿದರು.
ಘಟನಾ ಸ್ಥಳಗಳಿಗೆ ಕುಂದಾಪುರ ತಹಶೀಲ್ದಾರ್, ಜಿಪಂ ಸದಸ್ಯೆ ಸುಪ್ರೀತಾ ಕುಲಾಲ್, ಕುಂದಾಪುರ ತಾಪಂ ಅಧ್ಯಕ್ಷೆ ಜಯಶ್ರೀ ಮೊಗವೀರ, ಗ್ರಾಪಂ ಅಧ್ಯಕ್ಷ ಉದಯಕುಲಾಲ್ ಭೇಟಿ ನೀಡಿ ಪರಿಶೀಲಿಸಿದರು. ತಾವು ತಕ್ಷಣ ಬೆಂಗಳೂರಿನಲ್ಲಿರುವ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದು, ಅವರು ವಾರಾಹಿ ಇಂಜಿನಿಯರ್‌ಗಳಿಗೆ ಕರೆ ಮಾಡಿ ಕಾಲುವೆಯಲ್ಲಿ ನೀರು ಹರಿಯುವುದನ್ನು ನಿಲ್ಲಿಸಲು ವ್ಯವಸ್ಥೆ ಮಾಡಿಸಿದರು ಎಂದು ಸುಪ್ರೀತಾ ಕುಲಾಲ್ ತಿಳಿಸಿದರು.
2 ವರ್ಷಗಳ ಹಿಂದೆ:
ಎರಡು ವರ್ಷಗಳ ಹಿಂದೆ 2015ರ ಜು.19ರ ರಾತ್ರಿ ವೇಳೆ ಇಲ್ಲಿಂದ ಎರಡು ಕಿ.ಮೀ. ಹಿಂದೆ 23ನೇ ಕಿ.ಮೀ. ಬಳಿ ಇದೇ ಮೊಳಹಳ್ಳಿ ಗ್ರಾಪಂನ ಬಾಸುಬೈಲ್ ಎಂಬಲ್ಲಿ ಎಡದಂಡೆ ಕಾಲುವೆ ಹಠಾತ್ತನೇ ಕುಸಿದ ಪರಿಣಾಮ ಜೇಡಿಮಣ್ಣು ಮಿಶ್ರಿತ ನೀರು ಆಸುಪಾಸಿನ ಮನೆ, ತೋಟ ಹಾಗೂ ಕೃಷಿಭೂಮಿಗಳಿಗೆ ನುಗ್ಗಿದ ಪರಿಣಾಮ ಭಾರೀ ಪ್ರಮಾಣದ ಬೆಳೆ ಹಾನಿ ಸಂಭವಿಸಿತ್ತು.
ಮೊಳಹಳ್ಳಿ, ಬಾಸುಬೈಲ್, ಹಾರ್ದಳ್ಳಿ ಮಂಡಳ್ಳಿಯ 50ಕ್ಕೂ ಅಧಿಕ ಮನೆಗಳು ನೆರೆ ನೀರಿನಿಂದ ಆವೃತ್ತವಾಗಿದ್ದಲ್ಲದೇ ಮನೆಯ ಬಾವಿಗಳಿಗೆ ಮಣ್ಣು ನುಗ್ಗಿ ಬಾವಿಗಳೇ ಮುಚ್ಚಿದ್ದವು. ನೂರಾರು ಎಕರೆ ತೋಟಗಳು, ಕೃಷಿ ಭೂಮಿಗೆ ಅಪಾರ ಪ್ರಮಾಣದ ಹಾನಿ ಸಂಭವಿಸಿತ್ತು. ಅದರಿಂದ ಸಂತ್ರಸ್ತರಾದವರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ ಎಂದು ಎರಡು ವಾರಗಳ ಹಿಂದೆ ಈ ಪ್ರದೇಶಗಳಿಗೆ ಭೇಟಿ ನೀಡಿದ ವೇಳೆ ಗ್ರಾಮದ ಮಹಿಳೆಯರು ಸಚಿವ ಪ್ರಮೋದ್ ಮಧ್ವರಾಜ್ ಎದುರು ದೂರಿದ್ದರು.
ತಕ್ಷಣ ದುರಸ್ಥಿಗೆ ಕ್ರಮ:
ಘಟನೆಯ ಕುರಿತು ಮಾಹಿತಿ ದೊರೆತ ತಕ್ಷಣ ಎಡದಂಡೆ ಕಾಲುವೆಗೆ ನೀರು ಬಿಡುವ ಇಲ್ಲಿಂದ 20ಕಿ.ಮೀ. ದೂರದಲ್ಲಿರುವ ಭರತ್ಕಲ್ ಅಕ್ವಡೇಕ್‌ನಿಂದ ನೀರಿನ ಹರಿಯುವಿಕೆಯನ್ನು ನಿಲ್ಲಿಸಲಾಗಿದೆ. ಈಗ ನೀರಿನ ಹರಿವಿನ ಪ್ರಮಾಣ ಗಣನೀಯವಾಗಿ ತಗ್ಗಿದ್ದು, ನಾಳೆ ಬೆಳಗಿನ ವೇಳೆ ನೀರು ಹರಿಯುವಿಕೆ ನಿಲ್ಲಲಿದೆ ಎಂದು ವಾರಾಹಿ ನೀರಾವರಿ ಯೋಜನೆಯ ಇಂಜಿನಿಯರ್ ಒಬ್ಬರು ತಿಳಿಸಿದರು.
ನೀರು ಹರಿಯುವಿಕೆ ನಿಂತ ಬಳಿಕ ಎಡದಂಡೆ ಒಡೆದ ಪ್ರದೇಶದಲ್ಲಿ ದುರಸ್ತಿ ಕಾರ್ಯ ಹಾಗೂ ದಂಡೆ ಜರಿಯಲು ಕಾರಣವಾದ ಅಂಶಗಳು ತಿಳಿಯಲಿವೆ. ಕೆಳಗಿನ ಮಣ್ಣಿಂದ ಅಥವಾ ಕಾಂಕ್ರಿಟ್‌ನ ದೋಷದಿಂದ ಇದು ಸಂಭವಿಸಿದೆಯೇ ಎಂದು ತಿಳಿಯಲಿದೆ. ನೀರು ಹರಿಯುವಿಕೆ ನಿಂತ ಬಳಿಕ ತ್ವರಿತವಾಗಿ ದುರಸ್ತಿ ಕಾರ್ಯ ನಡೆಯಲಿದೆ ಎಂದವರು ಹೇಳಿದರು.