'ಉತ್ತರಕಾಂಡ'ದಲ್ಲಿ ರಾಮಯಾಣದ ಸೀತೆಗೆ ನ್ಯಾಯ ಸಿಗಲ್ಲ: ಡಾ.ಮಹೇಶ್ವರಿ
ಉಡುಪಿ, ಮಾ.18: ರಾಮಯಾಣದಲ್ಲಿ ಸೀತೆಗಾದ ಅನ್ಯಾಯವನ್ನು ಸರಿಪಡಿಸುವ ಉದ್ದೇಶದಿಂದ ಉತ್ತರಕಾಂಡ ಕೃತಿ ರಚಿಸಿರುವುದಾಗಿ ಎಸ್. ಎಲ್.ಬೈರಪ್ಪ ಹೇಳಿಕೊಂಡಿದ್ದಾರೆ. ಅದಕ್ಕಾಗಿ ಕೃತಿಯಲ್ಲಿ ಸೀತೆಯ ಪರವಾದ ಸಮರ್ಥನೆಯನ್ನು ಮಾಡಲಾಗಿದೆ. ಸೀತೆಗಾದ ಅನ್ಯಾಯವನ್ನು ಬೈರಪ್ಪನವರು ತಮ್ಮ ಕಾದಂಬರಿಯಲ್ಲಿ ತಿದ್ದಿ ಬರೆದರೆ ಆಧುನಿಕ ಸೀತೆಯರಿಗೆ ನ್ಯಾಯ ಸಿಗಬಹುದೇ ಹೊರತು ರಾಮಯಾಣದ ಸೀತೆಗೆ ನ್ಯಾಯ ಸಿಗಲು ಸಾಧ್ಯವೇ ಎಂದು ಕವಿ, ಸಾಹಿತಿ ಡಾ.ಮಹೇಶ್ವರಿ ಕಾಸರಗೋಡು ಪ್ರಶ್ನಿಸಿದ್ದಾರೆ.
ಉಡುಪಿ ರಥಬೀದಿ ಗೆಳೆಯರು ಹಾಗೂ ಹಿರಿಯಡಕ ಸಂಸ್ಕೃತಿ ಸಿರಿ ಟ್ರಸ್ಟ್ ವತಿಯಿಂದ ಉಡುಪಿ ಗೋವಿಂದ ಪೈ ಸಂಶೋಧನ ಕೇಂದ್ರದ ಧ್ವನ್ಯಾ ಲೋಕದಲ್ಲಿ ಶನಿವಾರ ಆಯೋಜಿಸಲಾದ ಎಸ್.ಎಲ್.ಬೈರಪ್ಪ ಅವರ ಕಾದಂಬರಿ 'ಉತ್ತರಕಾಂಡ' ಕುರಿತ ಸಮೀಕ್ಷೆ- ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.
ರಾಮನ ಸಂಕಟ, ನೋವುಗಳಿಗೆ ಜಾಗ ನೀಡದೆ ಅವನನ್ನು ಅನುಕಂಪ ಹುಟ್ಟಿಸುವ ದುರಂತ ನಾಯಕನಾಗಿ ಈ ಕಾದಂಬರಿಯಲ್ಲಿ ಚಿತ್ರಿಸಲಾಗಿದೆ. ಸೀತೆಯನ್ನು ರಾಮ ಮೆಚ್ಚಿ ವಿವಾಹವಾದುದಲ್ಲ, ವಚನ ಭ್ರಷ್ಟನಾಗಬಾರ ದೆಂಬ ಉದ್ದೇಶದಿಂದ ಆಕೆಯನ್ನು ಮದುವೆಯಾದ ಎಂದು ಹೇಳಲಾಗಿದೆ. ಇವರ ಕೃತಿಯಲ್ಲಿ ಪೊಲಂಕಿ ರಾಮಯಾಣದ ಬೀಜ ಕಾಣಸಿಗುತ್ತದೆ ಎಂದು ಅವರು ಹೇಳಿದರು.
ಡಾ.ನಿಕೇತನ ಮಾತನಾಡಿ, ಸೀತೆಯ ಮೂಲಕ ಉತ್ತರಕಾಂಡದ ಕಥೆ ಬಿಚ್ಚಿಕೊಳ್ಳುತ್ತದೆ. ಈ ಕಾದಂಬರಿ ವಾಲ್ಮೀಕಿ ರಾಮಯಾಣದ ಪ್ರೇರಣೆ ಯಿಂದ ಮಾತ್ರವಲ್ಲದೆ ವಾಸ್ತವವಾದಿ ದೃಷ್ಠಿಯಿಂದಲೂ ಗಮನಸೆಳೆಯುತ್ತದೆ ಎಂದು ಅಭಿಪ್ರಾಯ ಪಟ್ಟರು.
ಅಧ್ಯಕ್ಷತೆಯನ್ನು ನಿವೃತ್ತ ಪ್ರಾಂಶುಪಾಲ ಪ್ರೊ.ಎಂ.ಎಲ್.ಸಾಮಗ ವಹಿಸಿ ದ್ದರು. ರಥಬೀದಿ ಗೆಳೆಯರು ಅಧ್ಯಕ್ಷ ಪ್ರೊ.ಮುರಳೀಧರ ಉಪಾಧ್ಯ ಸ್ವಾಗತಿಸಿ ದರು. ಕಾರ್ಯದರ್ಶಿ ಪ್ರೊ.ಸುಬ್ರಹ್ಮಣ್ಯ ಜೋಶಿ ವಂದಿಸಿದರು. ಪ್ರಭಾಕರ ತುಮರಿ ಕಾರ್ಯಕ್ರಮ ನಿರೂಪಿಸಿದರು.