ಪ್ರೊ.ಎ.ವಿ.ನರಸಿಂಹಮೂರ್ತಿಗೆ ಪಿ.ಗುರುರಾಜ ಭಟ್ ಪ್ರಶಸ್ತಿ

Update: 2017-03-30 15:52 GMT

ಉಡುಪಿ, ಎ.30: ಖ್ಯಾತ ಇತಿಹಾಸಜ್ಞ ದಿ. ಪಾದೂರು ಗುರುರಾಜ ಭಟ್ ಅವರ ಹೆಸರಿನಲ್ಲಿ ಇತಿಹಾಸ ಸಂಸೋಧಕರಿಗೆ ನೀಡುವ ಪ್ರಶಸ್ತಿಗೆ ಈ ಬಾರಿ ಮೈಸೂರು ವಿವಿಯ ಇತಿಹಾಸ ಸಂಶೋಧಕ ಪ್ರೊ.ಎ.ವಿ.ನರಸಿಂಹಮೂರ್ತಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪಾದೂರು ಗುರುರಾಜ ಭಟ್ ಸ್ಮಾರಕ ಟ್ರಸ್ಟ್‌ನ ಗೌರವ ಅಧ್ಯಕ್ಷ ಪ್ರೊ.ಪಿ.ಶ್ರೀಪತಿ ತಂತ್ರಿ ಪ್ರಕಟಿಸಿದ್ದಾರೆ.

ಭಾರತದ ಪುರಾತತ್ವ, ಪ್ರಾಚೀನ ಇತಿಹಾಸ ಹಾಗೂ ನಾಣ್ಯಶಾಸ್ತ್ರದ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಅನೇಕ ಮೌಲಿಕ ಗ್ರಂಥಗಳನ್ನು ಪ್ರಕಟಿಸಿ, ಈ ಮೂರೂ ಕ್ಷೇತ್ರಗಳ ಶ್ರೀಮಂತಿಕೆಯನ್ನು ಹೆಚ್ಚಿಸಿದ, ಇದೀಗ ಮೈಸೂರಿನ ಭಾರತೀಯ ವಿದ್ಯಾಭವನದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಹಿರಿಯ ವಿದ್ವಾಂಸ ಪ್ರೊ. ಎ.ವಿ.ನರಸಿಂಹಮೂರ್ತಿ ಅವರಿಗೆ ಈ ಬಾರಿಯ ಪ್ರಶಸ್ತಿ ನೀಡಿ ಗೌರವಿಸಲು ಪಾದೂರು ಗುರುರಾಜ ಭಟ್ ಸ್ಮಾರಕ ಟ್ರಸ್ಟ್ ನಿರ್ಧರಿಸಿದೆ ಎಂದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಟ್ರಸ್ಟ್ ರಚಿಸಿದ ಮೂವರು ಶ್ರೇಷ್ಠ ವಿದ್ವಾಂಸರುಗಳ ಸಮಿತಿಯು ಈ ಬಾರಿಯ ಪ್ರಶಸ್ತಿಗೆ ಪ್ರೊ. ನರಸಿಂಹಮೂರ್ತಿ ಅವರ ಹೆಸರನ್ನು ಆಯ್ಕೆಮಾಡಿದೆ. ಸಮಿತಿಯು ಕರ್ನಾಟಕ ಜ್ಞಾನ ಆಯೋಗದ ಸದಸ್ಯ ಕಾರ್ಯದರ್ಶಿಯಾಗಿದ್ದ ಡಾ.ಕೆ. ಸುಧಾ ರಾವ್ (ಸಂಚಾಲಕರು), ಬೆಂಗಳೂರಿನ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಎಂಡ್ ಎಕನಾಮಿಕ್ ಚೇಂಜ್ (ಐಸಿಇಸಿ)ನ ನಿವೃತ್ತ ನಿರ್ದೇಶಕ, ಅರ್ಥಶಾಸ್ತ್ರಜ್ಞ ಡಾ.ಆರ್.ಎಸ್.ದೇಶಪಾಂಡೆ ಹಾಗೂ ಖ್ಯಾತ ಪುರಾತತ್ವ ಮತ್ತು ಇತಿಹಾಸ ವಿದ್ವಾಂಸ ಡಾ.ಅ.ಸುಂದರ್ ಇವರನ್ನೊಳಗೊಂಡಿತ್ತು.

 ಎ.17ರ ಸೋಮವಾರ ಸಂಜೆ 4:30ಕ್ಕೆ ಉಡುಪಿಯ ಪೂರ್ಣಪ್ರಜ್ಞ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭವು ನಡೆಯಲಿದ್ದು, ಕೇಂದ್ರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಡಿ.ವಿ.ಸದಾನಂದ ಗೌಡ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಪ್ರಸಿದ್ಧ ಅರ್ಥಶಾಸ್ತ್ರಜ್ಞ, ಭಾರತದ ಮಾಜಿ ಪ್ರಧಾನಿಯವರ ಆರ್ಥಿಕ ಸಲಹೆಗಾರರೂ, 14ನೇ ವಿತ್ತ ಆಯೋಗದ ಸದಸ್ಯರೂ ಆಗಿದ್ದ ಡಾ. ಮಾರ್ಪಳ್ಳಿ ಗೋವಿಂದರಾಯರು ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಆಯ್ಕೆ ಸಮಿತಿ ಯ ಡಾ.ಸುಧಾ ರಾವ್, ಡಾ.ಆರ್.ಎಸ್. ದೇಶಪಾಂಡೆ ಹಾಗೂ ಮಂಗಳೂರು ವಿವಿ ಕುಲಪತಿ ಡಾ.ಬೈರಪ್ಪಉಪಸ್ಥಿತರಿರುವರು ಪ್ರೊ.ಶ್ರೀಪತಿ ತಂತ್ರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News