ಕುಡಿಯುವ ನೀರಿನ ಪೈಪ್ ತುಂಡರಿಸಿದ ಅರಣ್ಯ ಇಲಾಖೆ ಸಿಬ್ಬಂದಿ...!
ಸುಳ್ಯ, ಮಾ.30: ಎಲ್ಲೆಡೆ ನೀರಿಗಾಗಿ ಹಾಹಾಕಾರ ಉಂಟಾಗಿರುವ ಇಂದಿನ ದಿನಗಳಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಕುಡಿಯುವ ನೀರಿನ ಪೈಪ್‌ಗಳನ್ನು ಕಡಿದು ತುಂಡರಿಸಿದ ಪರಿಣಾಮ ಹಲವು ಕುಟುಂಬಗಳು ನೀರಿಲ್ಲದೆ ತೊಂದರೆ ಪಡಬೇಕಾದ ಘಟನೆ ಸುಳ್ಯ ತಾಲೂಕಿನ ಮರ್ಕಂಜ ಮತ್ತು ಅರಂತೋಡು ಗ್ರಾಮದ ಗಡಿ ಭಾಗದಲ್ಲಿ ನಡೆದಿದೆ.
ಮರ್ಕಂಜ ಗ್ರಾಮದ ಅಜ್ಜಿಕಲ್ಲು, ಕಟ್ಟಕೋಡಿ, ಅರಂತೋಡು ಗ್ರಾಮದ ಬಾಜಿನಡ್ಕ ಪ್ರದೇಶದ 15ಕ್ಕೂ ಹೆಚ್ಚು ಕುಟುಂಬದ ಜನರು ಸುಮಾರು 15 ವರ್ಷಗಳಿಂದ ಮೈರಾಜೆ ಅರಣ್ಯ ಪ್ರದೇಶದ ಹೊಂಡಗಳಲ್ಲಿ ತುಂಬುವ ನೀರನ್ನು ಪೈಪ್ ಹಾಕಿ ತಂದು ಕುಡಿಯಲು ಮತ್ತು ಇತರ ಉಪಯೋಗಕ್ಕೆ ಬಳಸುತ್ತಿದ್ದರು. ಬುಧವಾರ ಮೈರಾಜೆ ಅರಣ್ಯದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದೆ ಎಂಬ ಕಾರಣಕ್ಕೆ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ ಪೈಪ್‌ಗಳನ್ನು ತುಂಡರಿಸಿದ್ದು, ನೀರು ಸರಬರಾಜು ಸಂಪೂರ್ಣ ಸ್ಥಗಿತಗೊಂಡಿದೆ ಎಂದು ಕುಟುಂಬಗಳ ಸದಸ್ಯರು ಆರೋಪಿಸಿದ್ದಾರೆ.
ಪ.ಜಾತಿ ಮತ್ತು ಪ.ಪಂಗಡಕ್ಕೆ ಸೇರಿದ ಜನರೇ ಹೆಚ್ಚಾಗಿರುವ ಈ ಪ್ರದೇಶದಲ್ಲಿ ವಾಸಿಸುವ ಬಡ ಮತ್ತು ಮಧ್ಯಮ ಪ್ರದೇಶದ ಜನರಿಗೆ ಕುಡಿಯಲು, ಜಾನುವಾರುಗಳಿಗೆ ನೀಡಲು ಕೆರೆ, ಬಾವಿ, ಬೋರ್‌ವೆಲ್‌ಗಳಾಗಲಿ ಇತರ ನೀರಿನ ಮೂಲಗಳಿಲ್ಲ. ಬೇಸಿಗೆಯಲ್ಲಿ ಪೈಪ್‌ನಲ್ಲಿ ಬರುವ ನೀರು ಮಾತ್ರ ಆಶ್ರಯ ಎಂದು ಈ ಪ್ರದೇಶದ ಸಂತ್ರಸ್ತ ಕುಟುಂಬಗಳು ಹೇಳುತ್ತಾರೆ.
ಈ ಪೈಪ್‌ನಲ್ಲಿ ಬರುವ ನೀರಿಲ್ಲದಿದ್ದರೆ 2-3ಕಿ.ಮೀ. ದೂರದಿಂದ ವಾಹನಗಳಲ್ಲಿ ನೀರು ತರಬೇಕಾದ ಪರಿಸ್ಥಿತಿ ಉಂಟಾಗಿದೆ. ಇಲ್ಲಿನ ಕುಟುಂಬಗಳು ಸೇರಿ ಸುಮಾರು 1,700 ಮೀ. ಉದ್ದದಲ್ಲಿ 8 ಪೈಪ್‌ಗಳನ್ನು ಅಳವಡಿಸಿ ನೀರನ್ನು ತರುತ್ತಾರೆ. ಇದರ ಬಹುತೇಕ ಭಾಗದಲ್ಲಿ ಪೈಪ್‌ಗಳನ್ನು ಅಲ್ಲಲ್ಲಿ ತುಂಡರಿಸಲಾಗಿದ್ದು, ನೀರು ಬರುವುದು ಸ್ಥಗಿತಗೊಂಡಿದೆ ಎನ್ನುತ್ತಾರೆ ಸ್ಥಳೀಯರಾದ ಅಣ್ಣು ಕಟ್ಟಕೋಡಿ.
ಒಂದೂವರೆ ಕಿ.ಮೀ.ಗಿಂತಲೂ ಅಧಿಕ ದೂರಕ್ಕೆ ಪೈಪ್ ಅಳವಡಿಸಲು ಒಂದೊಂದು ಕುಟುಂಬಕ್ಕೆ 15 ಸಾವಿರಕ್ಕಿಂತಲೂ ಹೆಚ್ಚು ಖರ್ಚು ತಗಲಿತ್ತು. ಸುಮಾರು 1 ಲಕ್ಷಕ್ಕೂ ಹೆಚ್ಚು ವೆಚ್ಚದ ಪೈಪ್ ಹಾಕಲಾಗಿದ್ದು, ಅದನ್ನು ತುಂಡರಿಸಲಾಗಿದೆ.ಪುನಃ ಅಷ್ಟು ಖರ್ಚು ಮಾಡಲು ಸಾಧ್ಯವಿಲ್ಲ. ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದೇ ಇಲ್ಲಿ ಪೈಪ್‌ಗಳನ್ನು ಅಳವಡಿಸಲಾಗಿದ್ದು, ಅನೇಕ ವರ್ಷಗಳಿಂದ ಯಾವುದೇ ಸಮಸ್ಯೆ ಇರಲಿಲ್ಲ. ಇದೀಗ ಕಾಡ್ಗಿಚ್ಚು ನಂದಿಸಲೆಂದು ಬಂದ ಅರಣ್ಯ ಇಲಾಖೆ ಸಿಬ್ಬಂದಿ ಏಕಾಏಕಿ ಪೈಪ್‌ಗಳನ್ನು ಕಡಿದು ಹಾಕಿ ನೀರು ಬಾರದಂತೆ ಮಾಡಿದ್ದಾರೆ ಎನ್ನುತ್ತಾರೆ.
ಸೋಮವಾರದ ಒಳಗಾಗಿ ಪೈಪ್ ಅಳವಡಿಸಿಕೊಟ್ಟು ನೀರಿನ ವ್ಯವಸ್ಥೆ ಮಾಡಿಸಿ ಕೊಡದಿದ್ದರೆ ಸುಳ್ಯ ಅರಣ್ಯ ಇಲಾಖೆಯ ಕಚೇರಿ ಎದುರಿನಲ್ಲಿ ಅಹೋರಾತ್ರಿ ಧರಣಿ ನಡೆಸಲು ನಿರ್ಧರಿಸಲಾಗಿದೆ. ಮಹಿಳೆಯರೂ, ಮಕ್ಕಳೂ ಸೇರಿ ಎಲ್ಲರೂ ಅರಣ್ಯ ಇಲಾಖೆ ಕಚೇರಿ ಎದುರಿನಲ್ಲಿ ಕುಳಿತುಕೊಳ್ಳುತ್ತೇವೆ ಎಂದು ಅಣ್ಣು ಕಟ್ಟಕೋಡಿ ತಿಳಿಸಿದ್ದಾರೆ.
ಅರಣ್ಯದಿಂದ ಕುಡಿಯುವ ನೀರು ತೆಗೆದುಕೊಳ್ಳುವುದು ಬೇಡ ಎಂದರೆ ನಮಗೆ ಸರಕಾರ ಬೇರೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿ ಕೊಡಲಿ. ತಮಗೆ ಯಾವುದೇ ಮಾಹಿತಿ ನೀಡದೆ ಪೈಪ್‌ಗಳನ್ನು ತುಂಡರಿಸಲಾಗಿದೆ. ನಮಗೆ ಕುಡಿಯಲು ಮತ್ತು ಇತರ ಅಗತ್ಯಕ್ಕೆ ಬೇರೆ ಯಾವುದೇ ನೀರಿನ ಮೂಲಗಳು ಇಲ್ಲ ಎನ್ನುತ್ತಾರೆ ಸ್ಥಳೀಯರಾದ ಲಕ್ಷ್ಮೀ ಕುದ್ಕುಳಿ.
ಕಳೆದ 15 ವರ್ಷಗಳಿಂದ ಪೈಪ್ ಹಾಕಿ ನೀರು ತರುತ್ತಿದ್ದೇವೆ. ಆದರೆ ಈಗ ಅರಣ್ಯ ಇಲಾಖೆಯ ಸಿಬ್ಬಂದಿ ಬಂದು ನೀವೇ ಅರಣ್ಯಕ್ಕೆ ಬೆಂಕಿ ಹಾಕುತ್ತೀರಿ ಎಂದು ಪದೇ ಪದೇ ಗದರಿಸುತ್ತಾರೆ. ಇದೀಗ ಕಾಡಿಗೆ ಬೆಂಕಿ ಹಾಕಿದ್ದು, ನೀವೇ ಎಂದು ನಮ್ಮ ಕುಡಿಯುವ ನೀರಿನ ಪೈಪ್‌ಗಳನ್ನು ತುಂಡರಿಸಿದ್ದಾರೆ. ಕಾಡ್ಗಿಚ್ಚು ಕಂಡು ಬಂದರೆ ಸ್ಥಳೀಯರೇ ಇಲಾಖೆಗೆ ಮಾಹಿತಿ ನೀಡಿ ಬೆಂಕಿ ನಂದಿಸಲು ಸಹಕರಿಸುತ್ತಾರೆ ಎಂದು ಮಹಾದೇವಿ ಅಜ್ಜಿಕಲ್ಲು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
ಪೈಪ್ ಹಾಕಿ ಕೊಡಲು ಒಪ್ಪಿಗೆ: ಪೈಪ್ ತುಂಡರಿಸಿದ ವಿಷಯ ತಿಳಿದು ಗುರುವಾರ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಬೇರೆ ಪೈಪ್ ತಂದು ಹಾಕಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಸೋಮವಾರಕ್ಕೆ ಮುಂಚಿತವಾಗಿ ಪೈಪ್ ತಂದು ಅಳವಡಿಸಿ ನೀರಿನ ವ್ಯವಸ್ಥೆ ಮಾಡಿಸಿಕೊಡುವುದಾಗಿ ತಿಳಿಸಿದ್ದಾರೆ ಎಂದು ಸ್ಥಳೀಯರಾದ ಲೋಹಿತ್ ಅಜ್ಜಿಕಲ್ಲು ಹೇಳಿದ್ದಾರೆ.