ಸಂಶೋಧನೆ, ಉನ್ನತ ಶಿಕ್ಷಣಕ್ಕೆ ಕೇಂದ್ರದಿಂದ ಪ್ರೋತ್ಸಾಹ: ಸದಾನಂದ ಗೌಡ
ಉಡುಪಿ, ಎ.17: ದೇಶದಲ್ಲಿ ಸಂಶೋಧನಾ ಕ್ಷೇತ್ರವು ಬಹಳಷ್ಟು ದಯನೀಯ ಸ್ಥಿತಿಯಲ್ಲಿದ್ದು, ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಗುಣಮಟ್ಟದ ಸಂಶೋಧನೆ ಮತ್ತು ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಲು ನಿರ್ಧರಿಸಿದೆ ಎಂದು ಕೇಂದ್ರ ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.
ಪಾದೂರು ಗುರುರಾಜ್ ಭಟ್ ಸ್ಮಾರಕ ಟ್ರಸ್ಟ್ ವತಿಯಿಂದ ಸೋಮವಾರ ಉಡುಪಿ ಪೂರ್ಣಪ್ರಜ್ಞ ಆಡಿಟೋರಿಯಂನ ಮಿನಿ ಹಾಲ್‌ನಲ್ಲಿ ಮೈಸೂರಿನ ಹಿರಿಯ ಇತಿಹಾಸ ತಜ್ಞ ಪ್ರೊ.ಎ.ವಿ.ನರಸಿಂಹಮೂರ್ತಿ ಅವರಿಗೆ ಡಾ. ಪಾದೂರು ಗುರುರಾಜ್ ಭಟ್ ಸ್ಮಾರಕ ಪ್ರಶಸ್ತಿಯನ್ನು ಪ್ರದಾನ ಮಾಡಿ ಅವರು ಮಾತನಾಡುತ್ತಿದ್ದರು.
ಇದೀಗ ಕೇಂದ್ರ ಸರಕಾರ ಸಂಶೋಧನೆ ಹಾಗೂ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪ್ರತಿ ರಾಜ್ಯದಲ್ಲಿ ಐದು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈಯನ್ಸ್ ಸೇರಿದಂತೆ ವಿವಿಧ ವಿದ್ಯಾ ಸಂಸ್ಥೆಗಳನ್ನು ಸ್ಥಾಪಿಸಲಾಗುವುದು ಎಂದು ಅವರು ತಿಳಿಸಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರೊ.ಎ.ವಿ.ನರಸಿಂಹಮೂರ್ತಿ, ಮೊದಲು ಕರಾವಳಿಯನ್ನು ಕೆನರಾ ಎಂಬುದಾಗಿ ಗುರುತಿಸಲಾಗಿತ್ತು. ಗುರುರಾಜ್ ಭಟ್ ಸಂಶೋಧನೆ ನಡೆಸಿದ ಬಳಿಕ ಕರಾವಳಿ ಜಿಲ್ಲೆಗಳನ್ನು ತುಳುನಾಡು ಎಂಬುದಾಗಿ ಗುರುತಿಸಿ ಅದಕ್ಕೊಂದು ಘನತೆಯನ್ನು ತಂದುಕೊಟ್ಟರು ಎಂದು ಹೇಳಿದರು.
ಅಧ್ಯಕ್ಷತೆಯನ್ನು ಭಾರತ ಸರಕಾರದ 14ನೆ ಹಣಕಾಸು ಆಯೋಗದ ಸದಸ್ಯ ಮತ್ತು ಪ್ರಧಾನಮಂತ್ರಿಯ ಮಾಜಿ ಆರ್ಥಿಕ ಸಲಹೆಗಾರ ಡಾ.ಎಂ.ಗೋವಿಂದ ರಾವ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಾಜಿ ಶಿಕ್ಷಣ ಸಚಿವ ಪ್ರೊ.ಬಿ.ಕೆ. ಚಂದ್ರಶೇಖರ್, ಕರ್ನಾಟಕ ಮುಕ್ತ ವಿವಿಯ ವಿಶ್ರಾಂತ ಉಪಕುಲಪತಿ ಡಾ. ಕೆ.ಸುಧಾ ರಾವ್, ಟ್ರಸ್ಟ್‌ನ ಅಧ್ಯಕ್ಷೆ ಪಾರ್ವತಮ್ಮ ಉಪಸ್ಥಿತರಿದ್ದರು.
ಟ್ರಸ್ಟ್‌ನ ಕಾರ್ಯಾಧ್ಯಕ್ಷ ಪ್ರೊ.ಪಿ.ಶ್ರೀಪತಿ ತಂತ್ರಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ವಿಶ್ವನಾಥ್ ಪಾದೂರು ಪ್ರಶಸ್ತಿ ಪತ್ರ ವಾಚಿಸಿ ದರು. ರಘುಪತಿ ತಂತ್ರಿ ಕಾರ್ಯಕ್ರಮ ನಿರೂಪಿಸಿದರು.