ಹರೇಕಳ-ಅಡ್ಯಾರ್ ಅಥವಾ ಇನೋಳಿ-ಫರಂಗಿಪೇಟೆ ಸಂಪರ್ಕ ಸೇತುವೆಗೆ ಗ್ರಾಮಸ್ಥರ ಒಲವು

Update: 2017-04-24 18:40 GMT

ಮಂಗಳೂರು, ಎ.24: ಪಾವೂರು ಗ್ರಾಮದ ಇನೋಳಿ ಮತ್ತು ಪುದು ಗ್ರಾಮದ ಫರಂಗಿಪೇಟೆ ಅಥವಾ ಹರೇಕಳ ಗ್ರಾಮದ ಕಡವಿನ ಬಳಿ ಮತ್ತು ಅಡ್ಯಾರ್ ಗ್ರಾಮದ ಅಡ್ಯಾರ್‌ಕಟ್ಟೆ ಮಧ್ಯೆ ಹರಿಯುವ ನೇತ್ರಾವತಿ ನದಿಗೆ ಸೇತುವೆ ನಿರ್ಮಿಸಿದರೆ ಗ್ರಾಮಗಳ ಮಧ್ಯೆ ಸಂಪರ್ಕವೇರ್ಪಡುತ್ತದೆ ಅಲ್ಲದೆ ಪಾವೂರು, ಬೋಳಿಯಾರು, ಪಜೀರ್, ಕೊಣಾಜೆ, ಹರೇಕಳ, ಅಂಬ್ಲಮೊಗರು ಗ್ರಾಮದ ಜನರಿಗೆ ರಾಷ್ಟ್ರೀಯ ಹೆದ್ದಾರಿ 77 ಹಾಗೂ ಮಂಗಳೂರು ನಗರ ಮತ್ತಷ್ಟು ಹತ್ತಿರವಾಗಲಿದೆ. ಆ ಹಿನ್ನಲೆಯಲ್ಲಿ ಈ ಭಾಗದ ಜನರು ಸೇತು ವೆಯ ನಿರ್ಮಾಣಕ್ಕೆ ಭಾರೀ ಒಲವು ತೋರುತ್ತಿದ್ದು, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಆಸಕ್ತಿ ವಹಿಸಬೇಕು ಎಂದು ಆಶಿಸುತ್ತಿದ್ದಾರೆ.

ಪಾವೂರು, ಪುದು ಹಾಗೂ ಹರೇಕಳ ಗ್ರಾಮಗಳು ಆಹಾರ ಮತು್ತ ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್‌ರ ಕ್ಷೇತ್ರವಾಗಿರುವ ಮಂಗಳೂರು ವಿಧಾನಸಭಾ ವ್ಯಾಪ್ತಿಗೆ ಬರುತ್ತದೆ. ಅವರು ಗರಿಷ್ಠ ಪ್ರಯತ್ನ ಮಾಡಿದರೆ ಈ ಯೋಜನೆ ಈಡೇ ರುವುದರಲ್ಲಿ ಸಂಶಯವಿಲ್ಲ ಎಂಬ ಮಾತು ಸ್ಥಳೀಯವಾಗಿ ಕೇಳಿ ಬರುತ್ತಿದೆ. ಇತ್ತ ಅಡ್ಯಾರ್ ಗ್ರಾಮ ಶಾಸಕ ಜೆ.ಆರ್.ಲೋಬೊರ ಕ್ಷೇತ್ರ ವ್ಯಾಪ್ತಿಗೆ ಸೇರಿದೆ. ಸಚಿವರೊಂದಿಗೆ ಲೋಬೊ ಕೂಡ ಕೈಜೋಡಿಸಬೇಕು ಎಂದು ಜನರು ಆಗ್ರ ಹಿಸುತ್ತಿದ್ದಾರೆ.

ಪಾವೂರು ಗ್ರಾಮದ ಇನೋಳಿ ದೇವಂದಬೆಟ್ಟು ವಿನಲ್ಲಿ ಪುರಾತನ ದೇವಸ್ಥಾನ, ಬೋಳಿಯಾರ್ ಗ್ರಾಮದ ಇನೋಳಿಯಲ್ಲಿ ಬ್ಯಾರೀಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಬಿಐಟಿ) ಶಿಕ್ಷಣ ಸಂಸ್ಥೆ, ಪಜೀರ್ ಗ್ರಾಮದ ಗ್ರಾಮಚಾವಡಿ ಎಂಬಲ್ಲಿ ಪುರಾ ತನ ಲೇಡಿ ಆಫ್ ಮರ್ಸಿ ಚರ್ಚ್ ಇದೆ. ಅಲ್ಲದೆ ಉಳ್ಳಾಲ-ಮಾಣಿ ರಾಜ್ಯ ಹೆದ್ದಾರಿಯಲ್ಲೇ ಸಿಗುವ ಕೊಣಾಜೆಯಲ್ಲಿ ಮಂಗಳೂರು ವಿವಿ, ಮುಡಿಪು ವಿನಲ್ಲಿ ಇನ್ಫೋಸಿಸ್, ಕೊಣಾಜೆ ನಡುಪದವಿನಲ್ಲಿ ಪಿ.ಎ. ಇಂಜಿನಿಯರಿಂಗ್ ಕಾಲೇಜು, ಅಸೈಗೋಳಿಯಲ್ಲಿ ಕೆಎಸ್‌ಆರ್‌ಪಿ 7ನೆ ಪಡೆ, ದೇರಳಕಟ್ಟೆಯಲ್ಲಿ ಕಣಚೂರು ಪಬ್ಲಿಕ್ ಸ್ಕೂಲ್ ಮತ್ತು ವೈದ್ಯಕೀಯ ಕಾಲೇಜು ಆಸ್ಪತ್ರೆ, ನಿಟ್ಟೆ ಕೆ.ಎಸ್. ಹೆಗ್ಡೆ ಕಾಲೇಜು ಆಸ್ಪತ್ರೆ, ಫಾದರ್ ಮುಲ್ಲರ್ ಹೋಮಿಯೋಪಥಿ ಕಾಲೇಜು ಆಸ್ಪತ್ರೆ, ಯೆನೆಪೊಯ ವಿವಿ ಮತ್ತು ಕಾಲೇಜು ಆಸ್ಪತ್ರೆ ಹೀಗೆ ಹಲವಾರು ಶಿಕ್ಷಣ ಸಂಸ್ಥೆಗಳು ಮತ್ತು ಆಸ್ಪತ್ರೆಗಳಿವೆ. ಈ ಎಲ್ಲ ಪ್ರಮುಖ ಕೇಂದ್ರಗಳಿಗೆ ದಿನಂಪ್ರತಿ ಸಾವಿರಾರು ಮಂದಿ ಭೇಟಿ ನೀಡುತ್ತಿದ್ದಾರೆ. ಇಲ್ಲಿಗೆ ರಾ.ಹೆ. 66ರ ಮೂಲಕ ಸಂಪರ್ಕಿಸುವವರು ತೊಕ್ಕೊಟ್ಟು ಮತ್ತು ರಾ.ಹೆ.77ರ ಮೂಲಕ ಸಂಪ ರ್ಕಿಸುವವರು ಪಂಪ್‌ವೆಲ್ ಸರ್ಕಲ್ ಅಥವಾ ಮೆಲ್ಕಾರ್ ಕ್ರಾಸ್ ಮೂಲಕ ಕ್ರಮಿಸಬೇಕಾಗಿದೆ.

ಆದರೆ, ಈ ಪಯಣ ಅಷ್ಟು ಸುಲಭವಲ್ಲ. ಯಾಕೆಂದರೆ, ಎರಡೂ ರಾ.ಹೆ.ಮೂಲಕ ಇಲ್ಲಿಗೆ ಸಂಪರ್ಕಿಸಲು ಸುತ್ತು ಬಳಸಬೇಕಾಗಿದೆ. ಆದರೆ, ನೇತ್ರಾವತಿ ನದಿಯ ಒಂದು ತಟದಲ್ಲಿರುವ ರಾ.ಹೆ.77ರಲ್ಲಿ ಸಿಗುವ ಫರಂಗಿಪೇಟೆ ಮತ್ತು ಇನ್ನೊಂದು ತಟದಲ್ಲಿರುವ ಇನೋಳಿಗೆ ಸೇತುವೆ ನಿರ್ಮಿಸಿದರೆ ಅಥವಾ ಹರೇಕಳ-ಅಡ್ಯಾರ್‌ಗೆ ಸೇತುವೆ ನಿರ್ಮಿಸಿದರೆ ಈ ಎಲ್ಲ ಪ್ರಮುಖ ಸ್ಥಳ ಗಳಿಗೆ ತಲುಪಲು ಸುತ್ತು ಬಳಸಬೇಕಾಗಿಲ್ಲ. ದೇರಳಕಟ್ಟೆ, ಕುತ್ತಾರ್, ಕೊಣಾಜೆ, ಮುಡಿಪು, ಮಂಜನಾಡಿ, ಭಾಗದ ಜನರು ಇನೋಳಿ ಮೂಲಕ ಫರಂಗಿಪೇಟೆ ತಲುಪಿ ಅಲ್ಲಿಂದ ಇತ್ತ ಅಡ್ಯಾರ್ ಕಣ್ಣೂರು, ಪಂಪ್‌ವೆಲ್, ಮಂಗಳೂರಿಗೆ ಮತ್ತು ಅತ್ತ ತುಂಬೆ, ಬಿ.ಸಿ.ರೋಡ್ ಕಡೆಗೆ ಸಾಗಬಹುದು ಅಥವಾ ಹರೇಕಳ ಮೂಲಕ ಅಡ್ಯಾರ್ ತಲುಪಿ ಅಲ್ಲಿಂದ ಫರಂಗಿಪೇಟೆ ಅಥವಾ ಮಂಗಳೂರು ನಗರ ತಲುಪಬಹುದು. ಅಡ್ಯಾರ್, ನೀರುಮಾರ್ಗ, ವಳಚಿಲ್ ಪ್ರದೇಶ ದಲ್ಲೂ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿವೆ. ಹಾಗಾಗಿ ಫರಂಗಿಪೇಟೆ-ಇನೋಳಿ ಅಥವಾ ಹರೇಕಳ- ಅಡ್ಯಾರ್‌ಗೆ ಸೇತುವೆ ನಿರ್ಮಾಣವಾದರೆ ದೇರಳಕಟ್ಟೆ, ಕೊಣಾಜೆ ಭಾಗದ ವಿದ್ಯಾರ್ಥಿಗಳಿಗೂ ಹೆಚ್ಚು ಅನುಕೂಲವಾಗಲಿದೆ. ಎರಡು ಸ್ಥಳಗಳ ಪೈಕಿ ಯಾವುದಾದರೊಂದು ಕಡೆ ಸೇತುವೆ ನಿರ್ಮಾಣಗೊಂಡರೆ ಸ್ಥಳೀಯ ಗ್ರಾಮ ಗಳ ಅಭಿವೃದ್ಧಿ ಮಾತ್ರವಲ್ಲದೆ ಕೊಣಾಜೆ- ಮಂಗಳೂರು ರಸ್ತೆಯಲ್ಲಿ ವಾಹನ ದಟ್ಟಣೆ ತಡೆ ಯಲು ಸಾಧ್ಯವಿದೆ. ಜೊತೆಗೆ ಬೆಂಗಳೂರಿಗೆ ತೆರ ಳಲು ಈ ಸೇತುವೆ ಸಂಪರ್ಕ ಸಾಧಿಸಲಿದೆ.

ಫರಂಗಿಪೇಟೆ-ಇನೋಳಿ ಅಥವಾ ಹರೇಕಳ- ಅಡ್ಯಾರ್ ಮಧ್ಯೆ ಹರಿಯುವ ನೇತ್ರಾವತಿ ನದಿಯ ಆಸುಪಾಸಿನ ಜನರು ದೋಣಿ ಮೂಲಕ ಸಂಪರ್ಕ ಸಾಧಿಸುತ್ತಿದ್ದರೂ ಮಳೆಗಾಲದಲ್ಲಿ ಪ್ರಾಕೃತಿಕ ವಿಕೋಪವಾದರೆ ದೋಣಿ ಪ್ರಯಾಣ ಕ್ಲಿಷ್ಟಕರ. ಹಾಗಾಗಿ ಇಲ್ಲಿನ ಜನರು ಸೇತುವೆ ನಿರ್ಮಾಣದ ಕನಸು ಕಾಣುತ್ತಾರೆ.

  •    ಪಾವೂರು ಗ್ರಾಮದ ಪಕ್ಕದಲ್ಲೇ ಹರೇಕಳ ಗ್ರಾಮ ವಿದೆ. ಪುದು ಗ್ರಾಮದ ಪಕ್ಕದಲ್ಲೇ ಅಡ್ಯಾರ್ ಗ್ರಾಮವಿದೆ. ಹರೇಕಳ ಮತ್ತು ಅಡ್ಯಾರ್ ನಡುವೆಯೂ ನೇತ್ರಾವತಿ ನದಿ ಹರಿಯುತ್ತಿದ್ದು, ಎರಡೂ ಕಡೆ ಕಡವು ಇದೆ. ಇಲ್ಲೊಂದು ಸೇತುವೆ ನಿರ್ಮಾಣಕ್ಕೆ ಸ್ಥಳೀಯ ಜನಪ್ರತಿನಿಧಿಗಳ ಸಹಿತ ಸಾರ್ವಜನಿಕರು, ಸಚಿವರು, ಅಧಿಕಾರಿಗಳಲ್ಲಿ ಹಲವು ವರ್ಷಗಳ ಹಿಂದೆಯೇ ಬೇಡಿಕೆ ಸಲ್ಲಿಸಿದ್ದರು. ಅಭಿವೃದ್ಧಿ ದೃಷ್ಟಿಯಿಂದ ಅಧಿಕಾರಿಗಳು ಕೂಡ ಆಸಕ್ತಿ ವಹಿಸಿ ನೀಲನಕಾಶೆ ರಚಿಸಿದ್ದರಲ್ಲದೆ ಈ ಸೇತುವೆ ಯಿಂದ ಆಸುಪಾಸಿನ ಸುಮಾರು 2 ಸಾವಿರ ಎಕರೆ ಪ್ರದೇಶ ಅಭಿವೃದ್ಧಿ ಕಾಣಲಿದೆ ಎಂದಿದ್ದರು. ಆರಂಭದಲ್ಲಿ ಈ ಸೇತುವೆ ನಿರ್ಮಾಣಕ್ಕೆ 35 ಕೋ.ರೂ. ಬೇಕು ಎಂದು ಅಧಿಕಾರಿಗಳು ತಿಳಿಸಿದ್ದರು. ವರ್ಷಗಳು ಉರುಳುತ್ತಲೇ ಅದರ ನಿರ್ಮಾಣ ವೆಚ್ಚ 80 ಕೋ.ರೂ.ಗೆ ಏರಿತ್ತು. ಆದರೆ ಹರೇಕಳ ಗ್ರಾಮದ ರಸ್ತೆಬದಿಯಲ್ಲಿ ನೂರಾರು ಮನೆಗಳಿರುವುದರಿಂದ ರಸ್ತೆ ವಿಸ್ತರಣೆ ಪ್ರಯಾಸವಾಗಲಿದೆ. ಕುಟುಂಬಗಳ ಎತ್ತಂಗಡಿ, ಪರಿಹಾರ ಧನ ವಿತರಣೆ, ಪರ್ಯಾಯ ವ್ಯವಸ್ಥೆ ಯಲ್ಲದೆ ಸಂತ್ರಸ್ತರಾಗುವ ಸ್ಥಳೀಯರ ವಿರೋಧ ಕಟ್ಟಿಕೊಂಡರೆ ಕಷ್ಟವಾಗಬಹುದು ಎಂದು ಮನಗಂಡ ಜನಪ್ರತಿನಿಧಿಗಳು ಈ ಬಗ್ಗೆ ನಿರಾಸಕ್ತಿ ತಾಳತೊಡಗಿದರು. ಹಾಗಾಗಿ ಇಲ್ಲಿ ಹೊಸ ಸೇತುವೆ ನಿರ್ಮಾಣದ ಕನಸು ಸದ್ಯದ ಮಟ್ಟಿಗೆ ಭಗ್ನ ಗೊಂಡಂತಿದೆ.

  

ನಾನು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಆಯುಕ್ತನಾಗಿದ್ದಾಗ ಹರೇಕಳ-ಅಡ್ಯಾರ್ ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿ ಅಧ್ಯಯನ ವರದಿ ತಯಾರಿಸಿದ್ದೆ. ಅಂದಿನ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಕೂಡ ಈ ಬಗ್ಗೆ ಹೆಚ್ಚು ಆಸಕ್ತಿ ವಹಿಸಿದ್ದರು. ಇದೊಂದು ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಇದು ನಿರ್ಮಾಣಗೊಂಡರೆ ಹರೇಕಳ ಮಾತ್ರವಲ್ಲ, ಪಾವೂರು ಮತ್ತು ಕೊಣಾಜೆ, ಅಂಬ್ಲಮೊಗರು ಗ್ರಾಮದ ಜನರಿಗೂ ಅನುಕೂಲವಾಗಲಿದೆ.

-ಮುಹಮ್ಮದ್ ನಝೀರ್ ಮನಪಾ ಆಯುಕ್ತ

ಹರೇಕಳ-ಅಡ್ಯಾರ್ ಅಥವಾ ಇನೋಳಿ- ಫರಂಗಿಪೇಟೆಗೆ ಸೇತುವೆ ಸಂಪರ್ಕ ರಸ್ತೆ ಕಲ್ಪಿಸುವ ಯೋಜನೆಯಿಂದ ನಾನು ಹಿಂದೆ ಸರಿದಿಲ್ಲ. ಈ ಬಗ್ಗೆ ಈಗಾಗಲೇ ಮುಖ್ಯಮಂತ್ರಿಯವರೊಂದಿಗೆ ಚರ್ಚೆ ನಡೆಸಿದ್ದೇನೆ. 2 ಸೇತುವೆ ಸಂಪರ್ಕದ ಪೈಕಿ ಯಾವುದು ಜನರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಅಧ್ಯಯನ ವರದಿ ನೀಡಲು ಲೋಕೋ ಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿ ದ್ದೇನೆ. ಅಗತ್ಯವಿದ್ದರೆ ಕೇಂದ್ರ ಸರಕಾರದ ಅನುದಾನ ಪಡೆ ಯಲು ಪ್ರಯತ್ನಿಸುತ್ತೇನೆ. ಒಟ್ಟಿನಲ್ಲಿ ಇದು ನನ್ನ ಕನಸಿನ ಯೋಜನೆ. ಇದನ್ನು ಖಂಡಿತಾ ನನಸು ಮಾಡುವೆ.

 ಯು.ಟಿ.ಖಾದರ್ , ಸಚಿವರು

ಮಂಗಳೂರಿನಿಂದ ರಾತ್ರಿ 8:30ರ ಬಳಿಕ ಪಾವೂರು-ಇನೋಳಿಗೆ ಬಸ್ ಸಂಚಾರ ವಿರುವುದಿಲ್ಲ. ಇದರಿಂದ ಅನೇಕ ಮಂದಿಗೆ ತುಂಬಾ ಸಮಸ್ಯೆಯಾಗುತ್ತದೆ. ಫರಂಗಿಪೇಟೆ-ಇನೋಳಿಗೆ ಸೇತುವೆ ನಿರ್ಮಾಣಗೊಂಡರೆ ರಾ.ಹೆ.77ರ ಮೂಲಕ ಯಾವುದಾದರು ವಾಹನದಲ್ಲಿ ಫರಂಗಿಪೇಟೆ ತಲುಪಿದರೆ ಬಳಿಕ ಅಲ್ಲಿಂದ ತಡರಾತ್ರಿ ಯಾದರೂ ಮನೆ ಸೇರಬಹುದು.

-ಧನರಾಜ್, ಪಾವೂರು

ಖಾಸಗಿ ಸಂಸ್ಥೆಯ ಉದ್ಯೋಗಿ

Writer - ಹಂಝ ಮಲಾರ್

contributor

Editor - ಹಂಝ ಮಲಾರ್

contributor

Similar News