ವಿಶ್ವಕರ್ಮ ಜಯಂತಿ ಕುರಿತು ಚಿಂತನ-ಮಂಥನ ಕಾರ್ಯಕ್ರಮ
ಉಡುಪಿ, ಮೇ 3: ಉಡುಪಿ ಹಾಗೂ ದ.ಕ. ಜಿಲ್ಲೆಗಳ ವಿಶ್ವಕರ್ಮ ಸಮಾಜ ಸೇವಾ ಸಂಘ-ಸಂಸ್ಥೆಗಳ ಕೇಂದ್ರವಾದ ವಿಶ್ವಕರ್ಮ ಒಕ್ಕೂಟದ ವತಿಯಿಂದ ‘ವಿಶ್ವಕರ್ಮ ಜಯಂತಿ ಅಥವಾ ವಿಶ್ವಕರ್ಮ ಮಹೋತ್ಸವ’ ವಿಷಯದ ಕುರಿತ ಚಿಂತನ-ಮಂಥನ ಕಾರ್ಯಕ್ರಮ ಇತ್ತೀಚೆಗೆ ಉಡುಪಿಯ ಕುಂಜಿಬೆಟ್ಟಿನ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಜರಗಿತು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಒಕ್ಕೂಟದ ಅಧ್ಯಕ್ಷ ಯು.ಕೆ.ಎಸ್.ಸೀತಾ ರಾಮ ಆಚಾರ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕರಾವಳಿಯ ಜನರು ವಿಶ್ವಕರ್ಮ ಮಹೋತ್ಸವವಾಗಬೇಕೆಂದು ಒಮ್ಮತದ ಅಭಿಪ್ರಾಯಕ್ಕೆ ಬಂದರೂ, ಉಳಿದ ಜಿಲ್ಲೆಗಳ ಸಮಾಜ ಬಾಂಧವರ ಅಭಿಪ್ರಾಯಗಳನ್ನು ಸಂಗ್ರಹಿಸಿಕೊಳ್ಳಬೇಕು. ಬೆಂಗಳೂರಲ್ಲಿ ಜರಗುವ ಅಖಿಲ ಭಾರತ ವಿಶ್ವಕರ್ಮ ಸಂತ ಸಮ್ಮೇಳನದಲ್ಲಿ ಈ ಬಗ್ಗೆ ಚರ್ಚೆಯಾಗಬಹುದು. ಅಲ್ಲಿನ ನಿರ್ಣಯಕ್ಕೆ ಪೂರಕವಾಗಿ ನಾವು ತೀರ್ಮಾನ ತೆಗೆದುಕೊಳ್ಳಬೇಕು ಎಂದರು.
ವಿಷಯ ತಜ್ಞರಾಗಿ ಆಗಮಿಸಿದ ಪುರೋಹಿತ್ ಮಹೇಶ್ ವಿಶ್ವಕರ್ಮ ಬೆಂಗಳೂರು ಮಾತನಾಡಿ, ವಿಶ್ವಕರ್ಮರು ವಿಶ್ವಕರ್ಮ ಮಹೋತ್ಸವವನ್ನು ಮಾಘ ಶುದ್ಧ ತ್ರಯೋದಶಿಯಂದು, ದೇವಶಿಲ್ಪಿ ವಿಶ್ವಕರ್ಮ ಜಯಂತಿಯನ್ನು ಕನ್ಯಾ ಸಂಕ್ರಮಣದಂದು ಆಚರಿಸುವ ಜತೆಗೆ ವಿಶ್ವಕರ್ಮ ಜನಾಂಗದ ಪ್ರಥಮ ವಿಶ್ವಕರ್ಮ ಜಯಂತಿಯನ್ನು ಚೈತ್ರಶುದ್ಧ ಪಂಚಮಿಯಂದು ಆಚರಿಸುವುದಕ್ಕೆ ಶಾಸ್ತ್ರಾಧಾರಗಳಿವೆ ಎಂದರು.
ಕುಂಜೂರು ಗಣೇಶ ಆಚಾರ್ಯ ಮಾತನಾಡಿ, ವಿಶ್ವಕರ್ಮ ಜಯಂತಿ ಪದ ಪ್ರಯೋಗ ಸರಿಯಲ್ಲ ಎಂದರು. ಸಮನ್ವಯಕಾರ ಸಹ ಚಿಂತನ ಮಾಸಪತ್ರಿಕೆಯ ಗೌರವ ಸಂಪಾದಕ ಬಿ.ಎ.ಆಚಾರ್ಯ ಮಣಿಪಾಲ ಮಾತನಾಡಿದರು. ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ಮುರಳೀಧರ್, ಉಪಾಧ್ಯಕ್ಷ ಮಧು ಆಚಾರ್ಯ, ಕೋಶಾಧಿಕಾರಿ ಜನಾರ್ದನ ಆಚಾರ್ಯ, ಡಾ.ದಾಸಾಚಾರ್ಯ ಡಾ.ಕೆ.ಕೆ.ಆಚಾರ್ಯ, ಮಹಾಬಲೇಶ್ವರ ಆಚಾರ್ಯ ಸಾಲಿಗ್ರಾಮ, ಉದಯ ಆಚಾರ್ಯ ಪಳ್ಳಿ, ಸುರೇಶ ಆಚಾರ್ಯ ಮಂದಾರ್ತಿ, ಗಣೇಶ ಆಚಾರ್ಯ ಪಡುಬಿದ್ರೆ, ಕೆಮ್ಮಣ್ಣು ಚಂದ್ರಶೇಖರ ಆಚಾರ್ಯ, ಲೋಕೇಶ ಆಚಾರ್ಯ, ಶ್ರೀಧರ ಆಚಾರ್ಯ ಕರಂಬಳ್ಳಿ ಮೊದಲಾದವರು ಉಪಸ್ಥಿತರಿದ್ದರು.
ಅಲೆವೂರು ಯೋಗೀಶ ಆಚಾರ್ಯ ಸ್ವಾಗತಿಸಿದರು. ಬಿ.ಜಿ.ರಮೇಶ ಆಚಾರ್ಯ ಪ್ರಾಸ್ತಾವಿಕ ಮಾತನ್ನಾಡಿದರು. ಸುಧೀಂದ್ರ ಆಚಾರ್ಯ ವಂದಿಸಿದರು. ಭಾರತಿ ಬೆಳ್ತಂಗಡಿ ಕಾರ್ಯಕ್ರಮ ನಿರೂಪಿಸಿದರು.