ಕೈಕಂಬ, ಬಿ.ಸಿ.ರೋಡ್ ರಸ್ತೆ ದುರಸ್ತಿಗೆ 15 ದಿನಗಳ ಗಡುವು

Update: 2017-05-04 17:07 GMT

ಬಂಟ್ವಾಳ, ಮೇ 4: ರಾಷ್ಟ್ರೀಯ ಹೆದ್ದಾರಿ 75ರ ರಾಜ ರಸ್ತೆಯ ಕೈಕಂಬ ಮತ್ತು ಬಿ.ಸಿ.ರೋಡಿನ ಇಕ್ಕೆಲೆಗಳಲ್ಲಿ ಅಗೆದು ಅರ್ಧದಲ್ಲಿ ಸ್ಥಗಿತಗೊಂಡಿರುವ ಕಾಮಗಾರಿಯನ್ನು ಪೂರ್ತಿಗೊಳಿಸುವಂತೆ ಆಗ್ರಹಿಸಿ ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆಯವರಿಗೆ ಮನವಿ ಸಲ್ಲಿಸಿದ ಎಸ್‌ಡಿಪಿಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ 15 ದಿನಗಳ ಗಡುವು ವಿಧಿಸಿದೆ.

ಬಸ್‌ಬೇ ಹಾಗೂ ಅಗಲೀಕರಣದ ನೆಪದಲ್ಲಿ ಕೈಕಂಬದ ರಸ್ತೆಯ ಎರಡೂ ಬದಿಯನ್ನು ಅಗೆದು ಹಾಕಿ ಒಂದು ವರ್ಷ ಸಮೀಪಿಸುತ್ತಿದ್ದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇನ್ನು ಕೂಡಾ ಅಗೆದ ಹೊಂಡವನ್ನು ತುಂಬಿಸಿ ಸುಸ್ಥಿತಿಗೆ ತರುವ ಕೆಲಸ ಮಾಡಿಲ್ಲ. ಪರಿಣಾಮ ಸಾರ್ವಜನಿಕರು ಹಾಗೂ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ. ಬುಧವಾರ ಸುರಿದ ಮಳೆಗೆ ಇಲ್ಲಿನ ಅಂಗಡಿಗಳಿಗೆ ನೀರು ನುಗ್ಗಿ ಮತ್ತೊಂದು ಸಮಸ್ಯೆ ಉಂಟಾಗಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಹಾಗೆಯೇ ಬಿ.ಸಿ.ರೋಡಿನ ಸರ್ವೀಸ್ ರಸ್ತೆಯನ್ನು ಚರಂಡಿ ಕಾಮಗಾರಿಗಾಗಿ ಅಗೆದು ಹಾಕಲಾಗಿದ್ದು ಇದರ ಕಾಮಗಾರಿ ಕೂಡಾ ಆಮೆಗತಿಯಲ್ಲಿ ಸಾಗುತ್ತಿದ್ದು ಪಾದಚಾರಿಗಳು ಹಾಗೂ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ. ಈ ಎರಡೂ ಕಾಮಗಾರಿಯನ್ನು 15 ದಿನಗಳ ಒಳಗಾಗಿ ಪೂರ್ಣಗೊಳಿಸದಿದ್ದಲ್ಲಿ ಎಸ್‌ಡಿಪಿಐ ಸಾರ್ವಜನಿಕರನ್ನು ಒಟ್ಟುಗೂಡಿಸಿ ಪ್ರತಿಭಟನೆ ನಡೆಸಲಿದೆ ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.

ಈ ಸಂದರ್ದಲ್ಲಿ ಎಸ್‌ಡಿಪಿಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಎಸ್.ಎಚ್., ಪುರಸಭಾ ಸಮಿತಿ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಮೈನ್ಸ್, ರಿಕ್ಷಾ ಯೂನಿಯನ್ ಅಧ್ಯಕ್ಷ ಯಾಕೂಬ್, ಎಸ್‌ಡಿಪಿಐ ಮುಖಂಡರಾದ ಇಸಾಕ್ ತಲಪಾಡಿ, ಬಶೀರ್ ಮದ್ದ, ನೌಶಾದ್ ಕಲಾಯಿ, ರಿಝ್ವಾನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News