ತಾರಸಿಯಲ್ಲಿ ತೆಂಗು, ಬಾಳೆ, ಅಡಿಕೆ ಮರಗಳು !

Update: 2017-05-04 18:48 GMT

ಮಂಗಳೂರು, ಮೇ 4: ನಗರದಲ್ಲಿ ತಾರಸಿ ತೋಟ ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನಪ್ರಿಯವಾಗುತ್ತಿದೆ. ತರಕಾರಿ, ಹಣ್ಣು ಹಂಪಲು ಗಳಿಗೆ ಕೈತೋಟ ಮಾಡಲು ಜಾಗದ ಕೊರತೆಯನ್ನು ನೀಗಿಸುವಲ್ಲಿ ತಾರಸಿ ತೋಟಕ್ಕೆ ಹೆಚ್ಚಿನ ಆದ್ಯತೆಯನ್ನೂ ನೀಡಲಾಗುತ್ತಿದೆ. ಆದರೆ ಇಲ್ಲೊಬ್ಬರು ಗೃಹಿಣಿ ತಾರಸಿಯಲ್ಲಿ ಬಾಳೆ, ತೆಂಗು, ಅಡಿಕೆ ಮರಗಳನ್ನೂ ಬೆಳೆಸಬಹುದು ಎಂಬುದನ್ನು ಸಾಬೀತುಪಡಿಸಿದ್ದಾರೆ. ನಗರದ ಅತ್ತಾವರದ ನಿವಾಸಿಯಾಗಿರುವ ಫಾತಿಮಾ ರೆಹ್ಮಾನ್‌ರವರೇ ಈ ಗೃಹಿಣಿ. ತಮ್ಮ ಫ್ಲಾಟ್‌ನ ಮೇಲ್ಛಾವಣಿಯಲ್ಲಿ ನಾನಾ ಬಗೆಯ ಹಣ್ಣು ಹಂಪಲುಗಳು, ಹೂವಿನ ಗಿಡಗಳನ್ನು ಬೆಳೆಸಿದ್ದಾರೆ. ಕೈತೋಟದಲ್ಲಿ ಹವ್ಯಾಸವನ್ನು ಬೆಳೆಸಿಕೊಂಡಿದ್ದ ಫಾತಿಮಾ ಹಿಂದೆ ತಮ್ಮ ಮನೆಯ ಸುತ್ತಲಿದ್ದ ಜಾಗದಲ್ಲಿ ಹೂವು, ಹಣ್ಣು-ಹಂಪಲುಗಳ ಗಿಡ, ಮರಗಳನ್ನು ಬೆಳೆಸಿದ್ದರು. ಸುಮಾರು 27 ವರ್ಷಗಳಿಂದ ಅವರು ಈ ಹವ್ಯಾಸದಲ್ಲಿ ತಮ್ಮನ್ನು ತೊಡಗಿಸಿದ್ದಾರೆ. 9 ವರ್ಷಗಳ ಹಿಂದೆ ಇವರಿದ್ದ ಹಳೆಯ ಮನೆಯ ಬದಲಿಗೆ ಫ್ಲಾಟ್ ತಲೆ ಎತ್ತಿದೆ. ಮೂರು ಮಹಡಿಗಳ ಈ ಫ್ಲಾಟ್‌ನ ಸುಮಾರು 2,800 ಚದರ ಅಡಿಯ ಮಹಡಿಯ ಅಂಚಿನಲ್ಲಿ ಮಾತ್ರ ದೊಡ್ಡದಾದ ಮಣ್ಣಿನ ಜಾಡಿಗಳಲ್ಲಿ ಇವರು ಹಸಿರು ಲೋಕವನ್ನು ಸೃಷ್ಟಿಸಿದ್ದಾರೆ. 

ಮಹಡಿಯಲ್ಲಿ ಹಸಿರಿಗೆ ಒತ್ತು ನೀಡುವ ಜತೆಯಲ್ಲಿ ಆರಾಮವಾಗಿ ಮನೆ ಮಂದಿಯ ವಿಹಾರ ತಾಣವಾಗಿ, ಒಂದು ರೀತಿಯಲ್ಲಿ ಮಿನಿ ಉದ್ಯಾನ ವನನ್ನೇ ಫಾತಿಮಾ ಸೃಷ್ಟಿ ಮಾಡಿದ್ದಾರೆ. ಪತಿ ನಗರದ ಖ್ಯಾತ ನ್ಯಾಯವಾದಿ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಎಂ.ಬಿ. ಅಬ್ದುರ್ರಹ್ಮಾನ್ ಮನೆಯಿಂದ ಹೊರಗೆ ತಮ್ಮ ಕೆಲಸದಲ್ಲಿ ನಿರತರಾಗಿದ್ದರೆ, ಪತ್ನಿ ಫಾತಿಮಾ ಮನೆ ಕೆಲಸ ಮುಗಿಸಿ ತಮ್ಮ ಮರಗಿಡಗಳ ಆರೈಕೆಯಲ್ಲಿ ತೊಡಗಿಕೊಳ್ಳುತ್ತಾರೆ. ಮಹಡಿಯ ಮೇಲ್ಛಾವಣಿಯನ್ನು ಸಂಪೂರ್ಣ ವಾಗಿ ರೂಫಿಂಗ್ ಮಾಡಲಾಗಿದ್ದು, ಮಳೆ, ಬಿಸಿಲು ಬೀಳುವಂತೆ ಮರಗಿಡಗಳಿಗೆ ಸಹಜ ಪ್ರಾಕೃತಿಕ ವಾತಾವರಣವನ್ನು ಕಲ್ಪಿಸಲಾಗಿದೆ. ತಾರಸಿಯ ಒಂದು ಪಾರ್ಶ್ವದಲ್ಲಿ ಬೃಹತ್ತಾದ ಉಯ್ಯಾಲೆ, ಆರಾಮದಾಯಕ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಹಸಿರು ಉದ್ಯಾನವನದ ನಡುವೆ ಮನೆಯ ಸಣ್ಣದಾದ ಕಾರ್ಯಕ್ರಮಗಳು ನಡೆಯುವಂತೆ, ಏಕಕಾಲಕ್ಕೆ ಸುಮಾರು 100 ಮಂದಿಯಷ್ಟು ಸೇರ ಬಹುದಾದ ವ್ಯವಸ್ಥೆ ಮಾಡಲಾಗಿದೆ. ಕಡಿಮೆ ಜಾಗ.... ನೂರಾರು ಮರ, ಗಿಡಗಳು...!

ತಮ್ಮ ಫ್ಲಾಟ್‌ನ ತಾರಸಿಯ ವಿಶಾಲವಾದ ಜಾಗದ ಕಡಿಮೆ ಭಾಗವನ್ನಷ್ಟೇ ಫಾತಿಮಾ ಅವರು ಅತ್ಯಂತ ಕಲಾತ್ಮಕವಾಗಿ ತಾರಸಿ ತೋಟಕ್ಕಾಗಿ ಉಪಯೋಗಿಸಿಕೊಂಡಿದ್ದಾರೆ. ತಾರಸಿಯಲ್ಲಿ ಬೊನ್ಸಾಯಿ ರೂಪದ ಹಣ್ಣು ಹಂಪಲುಗಳು, ಹೂವಿನ ಗಿಡಗಳಿಗೆ ಆದ್ಯತೆ ನೀಡಿದ್ದಾರೆ. ಉದ್ದವಾಗಿ, ಬೃಹದಾಕಾರವಾಗಿ ಬೆಳೆಯುವ ಮರಗಿಡಗಳಿದ್ದರೂ ಅವುಗಳನ್ನು ಕಾಲಾನುಸಾರವಾಗಿ ಟ್ರಿಮ್ ಮಾಡುವ (ಕಟ್ ಮಾಡಿಸುವ) ಮೂಲಕ ಹಸಿರು ಸೌಂದರ್ಯವನ್ನು ಕಾಪಾಡಿಕೊಳ್ಳುತ್ತಿದ್ದಾರೆ. ಇವರ ತಾರಸಿಯಲ್ಲಿ ಮೆಣಸು, ಬಾಂಬೆ ನೆಲ್ಲಿ, ಪುನರ್ಪುಳಿ, ಸೀತಾಫಲ, ಕರಿ ಮೆಣಸು ಬಳ್ಳಿ, ಪೇರಳೆ, ಮುಂಬೈ ಬುಗರಿ, ದಾಳಿಂಬೆ, ಅನನಾಸು, ನೆಲ್ಲಿಕಾಯಿ, ನಿಂಬೆ, ಸಪೋಟಾ, ಬಿಳಿ ಜಾಮೂನ್, ಧಾರೆ ಹುಳಿಯಂತಹ ಸ್ಥಳೀಯ ಹಣ್ಣು ಹಂಪಲುಗಳ ಗಿಡಗಳ ಜತೆ, ಮಿಲಿಟ್ರಿ ಸಪೋಟಾ, ಐಸ್‌ಕ್ರೀಂನಲ್ಲಿ ಬಳಸುವ ಕೆಂಪಾದ ಚೆರ್ರಿ, ಥ್ಯಾಯ್ಲೆಂಡ್‌ನ ಆ್ಯಪಲ್, ಮಾವು, ರಂಬುಟಾನ್ ಮೊದಲಾದ ವಿದೇಶಿ ತಳಿಯ ಗಿಡಗಳೂ ಇವೆ. ಜತೆಯಲ್ಲೇ ಬೋಗನ್ ವಿಲ್ಲಾ (ಕಾಗದ ಹೂವು )ದ 8 ಬಣ್ಣಗಳ ಗಿಡಗಳು ಇವರ ತೋಟದಲ್ಲಿದೆ. ಗುಲಾಬಿ ಹಾಗೂ ಸಂಪಿಗೆ ಗಿಡಗಳು, ಬಗೆ ಬಗೆಯ ಅಂಥೋರಿಯಂ ಗಿಡಗಳೂ ಇಲ್ಲಿವೆ. 168 ಬಗೆಯ ವಿವಿಧ ಬಗೆಯ ಸುಮಾರು 250ರಷ್ಟು ಮರಗಿಡಗಳು ಇವರ ತೋಟದಲ್ಲಿವೆ. ಆಕರ್ಷಕ ಕುಂಡಗಳು:

ತಾರಸಿಯಲ್ಲಿ ಸಾಕಷ್ಟು ಜಾಗವನ್ನು ಉಳಿತಾಯ ಮಾಡುವ ಜತೆಗೆ ಹೆಚ್ಚಿನ ಗಿಡಗಳನ್ನು ಬೆಳೆಸಲು ಸಾಧ್ಯವಾಗುವಂತೆ ಇವರು ಗಿಡಗಳನ್ನು ನೆಡುವ ಕುಂಡಗಳನ್ನು ವಿಶೇಷವಾಗಿ ಮಾಡಿಸಿಕೊಂಡಿದ್ದಾರೆ. ಫಾತಿಮಾರವರು ಈ ಮೂಲಕ ತಮ್ಮ ತೋಟಕ್ಕೆ ವಿಶೇಷ ಆಕರ್ಷಣೆಯನ್ನು ನೀಡಿದ್ದಾರೆ. ಬಾತ್ ಟಬ್‌ನಲ್ಲಿ ಬಸಳೆ:

ಮನೆಯ ಬಳಕೆಯಾಗದ ಬಾತ್ ಟಬ್‌ನಲ್ಲಿ ಮಣ್ಣು ತುಂಬಿ ಬಸಳೆ ಗಿಡವನ್ನು ನೆಟ್ಟು ಬೆಳೆಸಿರುವ ಫಾತಿಮಾ, ನಾದುರಸ್ತಿಲ್ಲಿದ್ದ ವಾಶಿಂಗ್ ಮಿಶಿನ್‌ನ ಒಳಗಿನ ಪ್ಲಾಸ್ಟಿಕ್ ಟಬ್‌ನಲ್ಲಿ ಕ್ರೋಟನ್ ಗಿಡಗಳನ್ನು ಬೆಳೆಸಿದ್ದಾರೆ. ದೊಡ್ಡದಾದ ಡ್ರಮ್‌ನಲ್ಲಿ 4 ವರ್ಷಗಳ ಹಿಂದೆ ತೆಂಗಿನ ಮರವನ್ನು ನೆಡಲಾಗಿದ್ದು, ಅದೀಗ ಕಾಯಿ ಬಿಡಲು ಸಿದ್ಧವಾಗಿ ನಿಂತಿದೆ. ದೊಡ್ಡದಾದ ಕುಂಡದಲ್ಲಿ ಬಾಳೆ ಗಿಡವನ್ನ್ನು ತಾರಸಿ ಮೇಲೆ ನೆಡುವ ಪ್ರಯೋಗವನ್ನೂ ಮಾಡಿದ್ದಾರೆ. 27 ವರ್ಷದ ಪಾಪಾಸು ಕಳ್ಳಿ: ಈ ತಾರಸಿ ತೋಟದಲ್ಲಿ 27 ವರ್ಷದ ಹಳೆಯದಾದ ಪಾಪಾಸು ಕಳ್ಳಿಯ ಗಿಡವಿದೆ. ಬೋನ್ಸಾಯಿ ರೂಪದಲ್ಲಿ ಬೃಹತ್ ಕುಂಡದಲ್ಲಿ ಅತ್ಯಂತ ಮನೋಹರವಾಗಿ ಬೆಳೆದ ಪಾಪಾಸು ಕಳ್ಳಿ ಆಕರ್ಷಣೀಯವಾಗಿದೆ.

ತಾರಸಿಯಲ್ಲಿ ಬಗೆ ಬಗೆಯ ಬಿದಿರು!

ಬಿದಿರು ಗಿಡಗಳು ಎತ್ತರಕ್ಕೆ ಬೆಳೆಯುತ್ತವೆ. ಹಾಗಾಗಿ ಮನೆಯ ಸುತ್ತಲಿನ ಕಂಪೌಂಡ್‌ಗಳಲ್ಲಿ ಬೆಳೆಸಲಾಗುತ್ತದೆಯೇ ವಿನಃ ಮಹಡಿಗಳಲ್ಲಿ ತೀರಾ ಅಪರೂಪ. ಆದರೆ ಫಾತಿಮಾ ಬಗೆ ಬಗೆಯ ಬಿದಿರುಗಳನ್ನು ತಾರಸಿಯಲ್ಲಿ ನೆಟ್ಟು ತಮ್ಮ ಮಿನಿ ಉದ್ಯಾನವನಕ್ಕೊಂದು ವಿಶೇಷ ಮೆರುಗು ನೀಡಿದ್ದಾರೆ.

ಹವ್ಯಾಸ ಸಂತೃಪ್ತಿಯನ್ನು ನೀಡಿದೆ

‘ಗಿಡ ಮರಗಳೆಂದರೆ ನನಗೆ ಚಿಕ್ಕಂದಿನಿಂದಲೂ ಅಚ್ಚುಮೆಚ್ಚು. ಹಿಂದೆಯೂ ಮನೆಯ ಸುತ್ತ ನಾನು ಗಿಡಮರಗಳನ್ನು ನೆಟ್ಟು ಬೆಳೆಸುತ್ತಿದ್ದೆ. ಮನೆಯ ಜಾಗದಲ್ಲಿ ಫ್ಲಾಟ್ ಆದ ಮೇಲೆ ನೆಲದಲ್ಲಿದ್ದ ಮರಗಿಡಗಳನ್ನೆಲ್ಲಾ ಕುಂಡದಲ್ಲಿ ನೆಟ್ಟು ಮಹಡಿಯಲ್ಲಿ ಇರಿಸಿ ಪೋಷಿಸುತ್ತಿದ್ದೇನೆ. ನನ್ನ ಬಿಡುವಿನ ವೇಳೆ ಈ ಮರ ಗಿಡಗಳ ಜತೆಗಿನ ಸಂಬಂಧ ನನಗೆ ಸಂತೃಪ್ತಿಯನ್ನು ನೀಡಿದೆ’’ ಎನ್ನುತ್ತಾರೆ ಫಾತಿಮಾ ರೆಹ್ಮಾನ್.

Writer - ಸತ್ಯಾ ಕೆ.

contributor

Editor - ಸತ್ಯಾ ಕೆ.

contributor

Similar News