ಇಂದಿರಾ-ವಾಣಿ

Update: 2017-05-06 18:47 GMT

ಪುರುಷಪ್ರಧಾನ ಸಮಾಜದಲ್ಲಿ, ಸಾಹಿತ್ಯದಲ್ಲೂ ಆವರಿಗೆ ಸರಿಗಟ್ಟುವಂತೆ ಲೇಖಕಿಯರು ಪ್ರಯೋಗಶೀಲರಾಗಿದ್ದ ಕಾಲಘಟ್ಟದ ಇಬ್ಬರು ಪ್ರಮುಖ ಲೇಖಕಿಯರಾದ ಇಂದಿರಾ ಮತ್ತು ವಾಣಿಯವರ ಜನ್ಮ ಶತಮಾನೋತ್ಸವ ಕಾರ್ಯಕ್ರಮಗಳನ್ನು ನಡೆಸಲು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕರ್ನಾಟಕ ಲೇಖಕಿಯರ ಸಂಘ ಉತ್ಸುಕವಾಗಿರುವುದು ಶ್ಲಾಘನೀಯ. 


ಇಪ್ಪತ್ತನೆಯ ಶತಮಾನದ ಕನ್ನಡ ಸಾಹಿತ್ಯದಲ್ಲಿ ಮಹಿಳೆಯರ ಪಾಲು ಎಂದಾಗ, ಈ ಇತಿಹಾಸ ನಂಜನಗೂಡು ತಿರುಮಲಾಂಬ ಅವರಿಂದ ಪ್ರಾರಂಭವಾಗಿ ಕೊಡಗಿನ ಗೌರಮ್ಮ, ಸರಸ್ವತಿ ಬಾಯಿ ರಾಜವಾಡೆ, ಎಚ್. ವಿ. ಸಾವಿತ್ರಮ್ಮನವರವರೆಗೆ ಒಂದು ಘಟ್ಟಕ್ಕೆ ಬಂದು ನಿಲ್ಲುತ್ತದೆ. ಮುಂದೆ ತ್ರಿವೇಣಿ, ರಾಜಲಕ್ಷ್ಮೀ ಎನ್.ರಾವ್, ಅನುಪಮಾ ನಿರಂಜನ, ಆರ್ಯಾಂಬ ಪಟ್ಟಾಭಿ, ಎಂ.ಕೆ. ಇಂದಿರಾ, ವಾಣಿ, ನೀಳಾದೇವಿ, ವೀಣಾ ಶಾಂತೇಶ್ವರ, ವೈದೇಹಿ ಹೀಗೆ ಸಾಗುತ್ತದೆ ಪಟ್ಟಿ. ನಾಡು ಹೆಮ್ಮೆ ಪಡುವಂಥ ಲೇಖಕಿಯರ ದೊಡ್ಡ ಯಾದಿ ಇದು.

ಈ ಯಾದಿಯಲ್ಲಿ ಎಂ.ಕೆ. ಇಂದಿರಾ ಮತ್ತು ವಾಣಿ ಕನ್ನಡ ಕಥಾ ಸಾಹಿತ್ಯಕ್ಕೆ ನೀಡಿರುವ ಗಣನೀಯ ಕೊಡುಗೆಯಿಂದಾಗಿ ಪ್ರಮುಖರಲ್ಲಿ ಪ್ರಮುಖರು. ಸೃಜನಶೀಲ ಲೇಖಕಿಯರಾಗಿ ಈ ಇಬ್ಬರು ಸೋದರಿಯರ ಕೊಡುಗೆ ಎಷ್ಟು ಘನವಾದುದೆಂದರೆ ಹಿರಿಯಕ್ಕನ ಚಾಳಿಯಂತೆ ಮುಂದಿನ ಪೀಳಿಗೆಗೂ ಒಂದು ಪರಂಪರೆಯಾಗಿ ಬೆಳೆದಿದೆ ಇವರ ಬರವಣಿಗೆ. ಇದೀಗ ನಾವು ಈ ಇಬ್ಬರು ಸೋದರಿ ಲೇಖಕಿಯರ ಜನ್ಮಶತಾಬ್ದಿಯನ್ನು ಆಚರಿಸುತ್ತಿದ್ದೇವೆ. ಎಂದೇ ನೆನಪು ಜನಪ್ರಿಯ ಲೇಖಕಿಯರಾಗಿ ಈ ಸೋದರಿಯರು ಕನ್ನಡಿಗರ ಹೃನ್ಮನಗಳನ್ನು ಗೆದ್ದ ಆ ದಿನಗಳತ್ತ ಸರಿಯುತ್ತಿದೆ.

ಇಂದಿರಾ ಎಂದರೆ ಇಂದಿಗೂ ಕಣ್ಣಮುಂದೆ ಸುಳಿಯುವುದು, ತಮ್ಮ ಟಿ.ಎಸ್.ರಾಮಚಂದ್ರ ರಾವ್ ಅವರನ್ನ ಕಾಣಲು ಅಂದು ‘ಪ್ರಜಾವಾಣಿ’ ಕಚೇರಿಗೆ ಬಂದ ಇಂದಿರಾ, ಮಧ್ಯ ಬೈತಲೆಯಲ್ಲಿ ಮೆಟ್ಟಿಲು ಮೆಟ್ಟಿಲಾಗಿ ಎರಡಾಗಿ ಟಿಸಿಲೊಡೆದ ಕಪ್ಪುಕೂದಲ, ಚೂಪು ಮೂಗಿನ, ಚುರುಕು ಕಣ್ಣುಗಳ, ಥೇಟ್ ನನ್ನಮ್ಮನಂತೆ ಕಾಣುತ್ತಿದ್ದ ತಾಯಿ. ಅವರ ಕಣ್ಣುಗಳಲ್ಲಿ ಏನನ್ನೋ ಕಳೆದುಕೊಂಡ ಆತಂಕ...ರಾಮಚಂದ್ರ ರಾಯರು ರೆಕ್ಕೆಬಾಗಿಲು ತೆರೆದು ಕೊಠಡಿಯೊಳಗೆ ಹೊಕ್ಕಂತೆ ಬಾಗಿಲು ಮುಚ್ಚಿಕೊಂಡಿತು. ಅಕ್ಕನೂ ತಮ್ಮನೊಂದಿಗೆ ಒಳಗೆ ಸೇರಿಕೊಂಡು ನಮಗೆ ನಿಗೂಢವಾಗಿಬಿಟ್ಟರು....

ಈ ವೇಳೆಗಾಗಲೇ ‘ತುಂಗಭದ್ರ’ ಕಾದಂಬರಿಯಿಂದ ಕನ್ನಡ ವಾಚಕರಿಗೆ ಮಾತೃವಾತ್ಸಲ್ಯದ ರೂಪಕವಾಗಿದ್ದ ಎಂ.ಕೆ. ಇಂದಿರಾ ಪ್ರೀತಿ, ವಾತ್ಸಲ್ಯ, ಆತಿಥ್ಯಗಳಿಗೆ ತೌರುಮನೆಯಾದ ಮಲೆನಾಡಿನವರು. ಹುಟ್ಟಿದ್ದು 1917ರ ಜನವರಿ 5ರಂದು ಮಂಡಗದ್ದೆಯಲ್ಲಿ. ತಂದೆ ಟಿ. ಸೂರ್ಯನಾರಾಯಣ ರಾವ್, ತಾಯಿ ಬನಶಂಕರಮ್ಮ. ಹನ್ನೆರಡು ಮಕ್ಕಳ ದೊಡ್ಡ ಕುಟುಂಬದಲ್ಲಿ, ಖ್ಯಾತ ಪತ್ರಕರ್ತ ಟಿ.ಎಸ್.ರಾಮಚಂದ್ರ ರಾವ್ ಇಂದಿರಾರ ತಮ್ಮ.ಸೂರ್ಯನಾರಾಯಣ ರಾವ್ ದಂಪತಿಗೆ ಒಂಬತ್ತು ಮಕ್ಕಳಲ್ಲಿ ಉಳಿದವರು ಇಂದಿರಾ, ಆನಂದ ರಾವ್ ಮತ್ತು ರಾಮಚಂದ್ರ ರಾವ್ ಮಾತ್ರ. ಇಂದಿರಾ ಅವರ ತಾತ ತರೀಕೆರೆ ಶ್ರೀನಿವಾಸರಾಯರು ನಾಲ್ಕು ಲಕ್ಷ ರೂಪಾಯಿ ಆಸ್ತಿಯ ಶ್ರೀಮಂತರಾಗಿದ್ದರಂತೆ.

ಆಸ್ತಿಯೆಲ್ಲ ಹಿಸ್ಸೆಯಾಗಿ ಸೂರ್ಯನಾರಾಯಣ ರಾಯರ ಪಾಲಿಗೆ ಬಂದದ್ದೂ ಮುಂಜಿ ಮದುವೆ ಬಾಣಂತನಗಳಲ್ಲಿ ವ್ಯಯವಾಗಿ ರಾಮಚಂದ್ರ ರಾಯರು ತಾಯಿಯೊಂದಿಗೆ ಉದ್ಯೋಗ ಅರಸುತ್ತಾ ಬೆಂಗಳೂರಿಗೆ ಬಂದದ್ದು ಬೇರೆಯೇ ಕಥೆ. ಪ್ರಕಟವಾಗುತ್ತಿದ್ದಂತೆಯೇ ಬೆಳಗಾಗುವುದರಲ್ಲಿ ಇಂದಿರಾ ಅವರನ್ನು ಲೇಖಕಿಯರ ಪೀಠದಲ್ಲಿ ಪ್ರತಿಷ್ಠಾಪಿಸಿದ, ಕಾದಂಬರಿ ಪ್ರಿಯ ಓದುಗರ ಹೃದಯಕ್ಕೆ ಲಗ್ಗೆ ಹಾಕಿದ ‘ತುಂಗಭದ್ರ’ದ ಸೃಷ್ಟಿ, ಪ್ರಕಾಶನದ್ದೇ ಒಂದು ರೋಚಕ ಕಥೆ. ಸಾಹಿತ್ಯದಲ್ಲಿ ಆಸಕ್ತಿ ಇತ್ಯಾದಿ ಇದ್ದ ಇಂದಿರಾ ಲೇಖಕಿಯಾದದ್ದು ಒಂದು ಆಕಸ್ಮಿಕವೇ.

ಮಲೆನಾಡಿನ ಮಳೆಗಾಲದ ಒಂದು ಸಂಜೆ. ಓರಗೆಯ ಬಂಧುಗಳೊಂದಿಗೆ ಇಂದಿರಾ ಹರಟೆಯಲ್ಲಿ ಭಾಗಿಯಾಗಿದ್ದಾಗ ಮಾತುಕತೆ ತುಂಗಭದ್ರಾ ನದಿಯ ಸುತ್ತಮುತ್ತಣ ಜನಜೀವನದತ್ತ ಹೊರಳಿತು. ಕಂಡುಂಡ ಸುಖದುಃಖಗಳನ್ನು, ಮರೆಯಲಾಗದ ಅಂತಃಕರಣ ಕರಗಿಸುವ ಘಟನೆಗಳನ್ನು ಮೆಲುಕುಹಾಕಿದರು. ಈ ಮೆಲುಕು, ಇದನ್ನೆಲ್ಲ ದಾಖಲಿಸಬಾರದೇಕೆ ಎಂಬ ಉಮೇದನ್ನು ಅಚಾನಕ್ಕಾಗಿ ಇಂದಿರಾರಲ್ಲಿ ಹುಟ್ಟಿಸಿತು. ಫಲ: ‘ತುಂಗಭದ್ರ’ ಕಾದಂಬರಿ. ಇದನ್ನು ಓದಿ ಮೆಚ್ಚಿಕೊಂಡ ಸೋದರ ಸಂಬಂಧಿ ಡಾ.ಎಚ್.ಕೆ.ರಂಗನಾಥ್ ಹಸ್ತಪ್ರತಿಯನ್ನು ಮನೋಹರ ಗ್ರಂಥಮಾಲೆಯ ಜಿ.ಬಿ.ಜೋಶಿಯವರ ಕೈಯಲ್ಲಿಟ್ಟರು.

ಜಿಬಿಯವರು ಗ್ರಂಥ ಮಾಲೆಯ ಸಾಹಿತ್ಯ ಸಲಹೆಗಾರ ಕುರ್ತಕೋಟಿಯವರ ಕೈಯಲ್ಲಿಟ್ಟರು, ಅಭಿಪ್ರಾಯ ತಿಳಿಯಲು. ಹಸ್ತಪ್ರತಿ ಕುರ್ತಕೋಟಿಯವರ ಲೆದರ್ ಬ್ಯಾಗ್ ಸೇರಿತು. ಮುಂಬೈ ಪಯಣ ಕಾಲದಲ್ಲಿ ಕುರ್ತಕೋಟಿ ಈ ಬ್ಯಾಗನ್ನು ಕಳೆದುಕೊಂಡರು. ಇಂದಿರಾ ಬಳಿ ಹಸ್ತಪ್ರತಿಯ ನಕಲು ಇರಲಿಲ್ಲ. ಉದಯೋನ್ಮುಖ ಲೇಖಕಿಗೆ ತಮ್ಮಿಂದ ಅನ್ಯಾಯವಾಯಿತೆಂದು ಜಿಬಿ, ಕುರ್ತಕೋಟಿ ಮಮ್ಮಲ ಮರುಗಿದರು.ಇಂದಿರಾ ಹತಾಶರಾಗಲಿಲ್ಲ. ನೆನಪಿನ ಮೇಲೆ ಮತ್ತೆ ‘ತುಂಗಭದ್ರ’ ಬರೆದರು. ಹದಿನೈದು ದಿನಗಳಲ್ಲಿ ಬರೆದು ಮುಗಿಸಿ ಮತ್ತೆ ಜಿಬಿಯವರಿಗೆ ತಲುಪಿಸಿದರು. ‘ತುಂಗಭದ್ರ’ ಪ್ರಕಟವಾಯಿತು. ಅಂದಿನಿಂದ ಲೇಖಕಿ ಇಂದಿರಾ ಹಿಂದಿರುಗಿ ನೋಡಿದ್ದೇ ಇಲ್ಲ.

‘ತುಂಗ ಭದ್ರ’ ಪ್ರಕಟವಾದಾಗ ಇಂದಿರಾ ಅವರಿಗೆ ನಲವತ್ತೈದರ ಪ್ರಾಯ. ನಂತರ ‘ಸದಾನಂದ’, ‘ಗೆಜ್ಜೆ ಪೊಜೆ’, ‘ಫಣಿಯಮ್ಮ’ ಮೊದಲಾದ ಕಾದಂಬರಿಗಳು, ಕಥಾ ಸಂಕಲನಗಳು ಹೊರಬಂದವು. ಇಂದಿರಾ ಅವರು ನಲವತ್ತಕ್ಕೂ ಹೆಚ್ಚು ಕಾದಂಬರಿಗಳನ್ನು ಬರೆದಿದ್ದಾರೆ. ಕಥಾ ಸಂಕಲನಗಳೂ ಸೇರಿದಂತೆ ಅವರ ಕೃತಿಗಳ ಸಂಖ್ಯೆ ಅರ್ಧಶತಕ ದಾಟುತ್ತದೆ. ಕಾಡು, ಗುಡ್ಡ-ಬೆಟ್ಟ, ನದಿ-ತೊರೆಗಳಿಂದ ಆವೃತವಾದ ರಮಣೀಯ ಪ್ರಕೃತಿ ಪರಿಸರದ ವರ್ಣನೆ ಮತ್ತು ಮಧ್ಯಮವರ್ಗದ ಜೀವನದ ಸ್ಥಿತಿಗತಿಯ ವಾಸ್ತವಿಕ ನಿರೂಪಣೆ ಎಂ.ಕೆ.ಇಂದಿರಾ ಅವರ ಬರವಣಿಗೆಯ ಮಖ್ಯ ಆಕರ್ಷಣೆ.

ಆಡುಮಾತಿನಲ್ಲೇ ಕಾವ್ಯಕ್ಕೆ ಹತ್ತಿರವಾಗುವ ಧ್ವನಿಪೂರ್ಣ ಭಾಷೆ ಮತ್ತು ನೇರವಾಗಿ ಹೃದಯಸಂವಾದಿಯಾಗುವಂಥ ಆಪ್ತ ಶೈಲಿ ಇಂದಿರಾ ಅವರ ಸೃಜನಶೀಲ ಪ್ರತಿಭೆಯ ಇನ್ನೆರಡು ಸಾಧನೆಗಳು. ಅವರ ಕಾದಂಬರಿಗಳ ಸಾಲಿನಲ್ಲಿ ಮಹತ್ವದ ಕೃತಿ ‘ಫಣಿಯಮ್ಮ’. 19-20ರ ನಡುವಣ ಸಮಾಜದ ಬ್ರಾಹ್ಮಣ ಸಮುದಾಯದ ಮಹಿಳೆಯರ ಸ್ಥಿತಿಗತಿಯನ್ನು ಕಪ್ಪುಬಿಳುಪಿನಲ್ಲಿ ನಿರೂಪಿಸುವ ಈ ಕಾದಂಬರಿ ಅನಾಮಧೇಯ ವಿಧವೆಯೊಬ್ಬಳ ಜೀವನ ಚರಿತ್ರೆ. ಫಣಿಯಮ್ಮನನ್ನು ಆಕೆಯ ಕೊನೆಯ ದಿನಗಳಲ್ಲಿ ಕಣ್ಣಾರೆ ಕಂಡಿದ್ದ ಇಂದಿರಾ ಅವರು, ಕುಮಾರಿ-ವಿವಾಹಿತೆ ಮತ್ತು ವಿಧವೆ ಈ ಮೂರುಘಟ್ಟಗಳಲ್ಲಿ ಫಣಿಯಮ್ಮನ ಬದುಕನ್ನೂ ಸಂಪ್ರದಾಯದ ಕೂಪದಲ್ಲಿ ಬಿದ್ದ ಆಗಿನ ಸಾಮಾಜಿಕ ಬದುಕನ್ನೂ ಹೃದಯಂಗಮವಾಗಿ ಚಿತ್ರಿಸಿದ್ದಾರೆ.

ಸಂಪ್ರದಾಯಗಳ ಬಗ್ಗೆ, ಹೆಣ್ಣಿಗೊಂದು-ಗಂಡಿಗೊಂದು ನೀತಿ ಹೇರುವ ಸಮಾಜದ ವಿಭಿನ್ನ ಮಾನದಂಡಗಳ ಬಗ್ಗೆ ಫಣಿಯಮ್ಮ ಪ್ರತಿಕ್ರಿಯಿಸುವ ರೀತಿಯಲ್ಲಿ ಆಧುನಿಕತೆಯ ಹೊಳಹು ಇರುವುದು ಈ ಕಾದಂಬರಿಯ ಇನ್ನೊಂದು ವೈಶಿಷ್ಟ್ಯವಾಗಿದೆ. ಹಿರಿಯ ವಿಮರ್ಶಕ ಅಮೂರರು ಹೇಳಿರುವಂತೆ ‘ಫಣಿಯಮ್ಮ’ ಕೇವಲ ಒಬ್ಬ ಅಸಾಮಾನ್ಯ ವ್ಯಕ್ತಿಯ ಜೀವನ ಚರಿತ್ರೆಯಾಗಿರದೆ ಮಹಿಳಾ ಪ್ರಜ್ಞೆಯಲ್ಲಿ ಮೂಡಿಬಂದಿರುವ ಕೃತಿಯಾಗಿದೆ. ‘ಫಣಿಯಮ್ಮ’ ಇಂಗ್ಲಿಷಿಗೂ ಭಾಷಾಂತರಗೊಂಡಿದೆ-ತೇಜಸ್ವಿನಿ ನಿರಂಜನ ಅವರಿಂದ.

‘ಗೆಜ್ಜೆಪೂಜೆ’ ಮತ್ತು ‘ಫಣಿಯಮ್ಮ’ ಚಲನಚಿತ್ರವಾಗಿಯೂ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ ಪಡೆದಿವೆ. ‘ತುಂಗಭದ್ರ’, ‘ಸದಾನಂದ’, ‘ಫಣಿಯಮ್ಮ’ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿಗೆ ಭಾಜನವಾಗಿವೆ. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಎಂ.ಕೆ.ಇಂದಿರಾ ಅವರ ಜನ್ಮಶತಾಬ್ದಿಯ ವರ್ಷ ಇದು. ಅಂತೆಯೇ ವಾಣಿಯವರದೂ.
    
ವಾಣಿ

 -ತಮ್ಮ ವಿಶಿಷ್ಟವಾದ ಕೌಟುಂಬಿಕ ಕಥಾನಕಗಳಿಂದ ಕನ್ನಡಿಗರಲ್ಲಿ ಸದಭಿರುಚಿಯ ಸಾಹಿತ್ಯಾಸಕ್ತಿಯನ್ನು ಮೂಡಿಸಿದ ವಾಣಿಯವರೂ ಇಂದಿರಾರಂತೆ ಕಳೆದ ಶತಮಾನದ ಅರವತ್ತು ಎಪ್ಪತ್ತರ ದಶಕಗಳ ಜನಪ್ರಿಯ ಕಾದಂಬರಿಕಾರರು. ವಾಣಿಯವರು ಜನಿಸಿದ್ದು 1917ರ ಮೇ 12ರಂದು. ವಾಣಿ ಕಾವ್ಯನಾಮ. ಹುಟ್ಟಿದಾಗ ತಂದೆ ತಾಯಿ ಇಟ್ಟ ಹೆಸರು ಸುಬ್ಬಮ್ಮ.ಹುಟ್ಟಿದ್ದು ಸಾಹಿತ್ಯಕಲೆಗಳ ತೌರೂರಾದ ಮೈಸೂರಿನಲ್ಲಿ. ತಂದೆ ನರಸಿಂಗ ರಾಯರು ಆ ಕಾಲಕ್ಕೆ ಮೈಸೂರಿನ ಸಾಮಾಜಿಕ ಶ್ರೇಣಿಯಲ್ಲಿ ಪ್ರತಿಷ್ಠಿತ ವಕೀಲರು.

ಸುಬ್ಬಮ್ಮನವರ ಜೀವನ ಸಂಗಾತಿ ನಂಜುಂಡಯ್ಯನವರೂ ಸುಸಂಪನ್ನರು, ಸಾಹಿತ್ಯಾಭಿಮಾನಿಗಳು. ತೌರಿನಲ್ಲಿ ತಂದೆ ನರಸಿಂಗರಾಯರು ಮಗಳ ಸಾಹಿತ್ಯಾಭಿರುಚಿಗೆ ಪ್ರೋತ್ಸಾಹವೆರೆದರೆ ಅತ್ತೆಯ ಮನೆಯಲ್ಲಿ ಸ್ವತಃ ಪತಿ ನಂಜುಂಡಯ್ಯನವರೇ ಬೆಂಬಲವಾಗಿ ನಿಂತರು. ಪರಿಣಾಮ: ಕನ್ನಡಕ್ಕೆ ಸುಸಂಸ್ಕೃತ ಕೌಟುಂಬಿಕ ಸಾಹಿತ್ಯದ ಕೊಡುಗೆ. ‘ವಾಣಿ’ ಕನ್ನಡಕ್ಕೆ ಪರಿಚಿತವಾದದ್ದೂ ಒಂದು ಕುತೂಹಲದಾಯಕ ಸಂದರ್ಭದಲ್ಲೇ. ಸುಬ್ಬಮ್ಮನವರ ಕಥೆ ಬರೆಯುವ ಉತ್ಸಾಹ ಮೇರೆ ಮುಟ್ಟಿದ್ದು ‘ತಾರಾ’ ಕಥೆಯಲ್ಲಿ.

ಅಳುಕುತ್ತಲೇ ಹೈಸ್ಕೂಲು ತರಗತಿಯ ವಿದ್ಯಾರ್ಥಿನಿ ಸುಬ್ಬಮ್ಮ ಮೊದಲ ಕಥೆಯನ್ನು ಆ ಕಾಲದ ಜನಪ್ರಿಯ ಕಥಾ ನಿಯತಕಾಲಿಕ ‘ಕಥಾಂಜಲಿ’ಗೆ ಕಳುಹಿಸಿದರು-‘‘ಈ ಕಥೆಯನ್ನು ದಯವಿಟ್ಟು ನನ್ನ ಹೆಸರಿನಲ್ಲಿ ಪ್ರಕಟಿಸಬೇಡಿ, ಪ್ರಕಟಿಸುವುದಾದಲ್ಲಿ ಪುರುಷ ನಾಮಧೇಯದಲ್ಲಿ ಪ್ರಕಟಿಸಿ’’ ಎನ್ನುವ ಷರಾದೊಂದಿಗೆ. ಸಂಪಾದಕರಿಗೆ ಕಥೆ ಪ್ರಕಟಣೆಗೆ ಯೋಗ್ಯವೆನ್ನಿಸಿತು. ಈ ಸುಬ್ಬಮ್ಮ ಏಕೆ ತನ್ನ ಹೆಸರಿನಲ್ಲಿ ಕಥೆ ಪ್ರಕಟಿಸಲು ಬಯಸುತ್ತಿಲ್ಲ? ಸಾಹಿತ್ಯ, ಕಲೆಗಳೆಂದರೆ ಮಡಿವಂತ ಸಮಾಜ ಮೂಗು ಮುರಿಯುತ್ತಿದ್ದ ದಿನಗಳು. ಸಂಪಾದಕರಿಗೆ ಲೇಖಕಿಯ ಸಂಕೋಚ, ಹೆದರಿಕೆಗಳು ಅರ್ಥವಾಯಿತು.

‘‘ನಿಮ್ಮ ಹೆಸರಿನಲ್ಲಿ ಪ್ರಕಟಿಸುವುದು ಬೇಡವಾದಲ್ಲಿ ಕಾವ್ಯನಾಮದಲ್ಲಿ ಪ್ರಕಟಿಸೋಣ’’ ಎಂದು ಸಲಹೆ ಮಾಡಿದರು. ಜೊತೆಗೆ ‘ವಾಣಿ’ ಕಾವ್ಯನಾಮವನ್ನೂ ಸೂಚಿಸಿದರು. ಹೀಗೆ, ಕನ್ನಡ ಕಥಾ ಸಾಹಿತ್ಯ ಕ್ಷಿತಿಜದಲ್ಲಿ ‘ತಾರೆ’ ಕಥೆಯ ಮೂಲಕ ಲೇಖಕಿ ವಾಣಿಯ ಉದಯವಾಯಿತು. ನಂತರ ವಾಣಿ ಬರೆದ ಕಥೆಯೊಂದಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಎ.ಇ.ಭಾಸ್ಕರ ರಾವ್ ಸ್ಮಾರಕ ಬಹುಮಾನ ಲಭಿಸಿ ಅವರ ಸೃಜನಶೀಲ ಪ್ರತಿಭೆಯ ರೆಕ್ಕೆಗಳಿಗೆ ನೀರುತಟ್ಟಿದಂತಾಯಿತು. ‘ಕಸ್ತೂರಿ’ ವಾಣಿಯವರ ಪ್ರಥಮ ಕಥಾ ಸಂಕಲನ. ಏಳು ಕಥೆಗಳ ಈ ಸಂಕಲನಕ್ಕೆ ಕನ್ನಡ ಸಣ್ಣ ಕಥೆಯ ಮಾರ್ಗ ಪ್ರವರ್ತಕ ಮಾಸ್ತಿಯವರ ಮುನ್ನುಡಿ. ‘‘ಸಹಜವಾದ ಲೇಖನ ಶಕ್ತಿಯಲ್ಲಿ ಧಾರಾಳದೊದಿಗೆ ವಿವೇಚನೆಯೂ ಸೇರಿಕೊಂಡಿದೆ’’ ಎಂದು ಮಾಸ್ತಿ ಆಶೀರ್ವದಿಸಿದ್ದರು.

ಪ್ರಕಟವಾದದ್ದು 1944ರಲ್ಲಿ. ಪ್ರಕಟಿಸಿದವರು, ಮನೆಯಿಂದ ಮನೆಗೆ ಪುಸ್ತಕ ಒಯ್ದು ಕನ್ನಡ ಸಾಹಿತ್ಯದ ಪರಿಚಾರಿಕೆ ಮಾಡುತ್ತಿದ್ದ ಲೇಖಕ ದ.ಬಾ.ಕುಲಕರ್ಣಿ. ‘ಬಿಡುಗಡೆ’ ಮೊದಲ ಕಾದಂಬರಿ. ವಾಣಿಯವರು ಹದಿನೈದಕ್ಕೂ ಹೆಚ್ಚು ಕಾದಂಬರಿಗಳನ್ನು ಬರೆದಿದ್ದಾರೆ. ‘ಶುಭ ಮಂಗಳ’, ‘ಎರಡು ಕನಸು’, ‘ಹೊಸ ಬೆಳಕು’ ಅವರ ಅತ್ಯಂತ ಪ್ರಸಿದ್ಧ ಕಾದಂಬರಿಗಳು. ಇವು ಚಲಚಿತ್ರವಾಗಿಯೂ ಅಪಾರ ಜನಪ್ರಿಯತೆ ಗಳಿಸಿದವು. ‘ನವನೀತ’ ವಾಣಿಯುವರ 518 ವಚನಗಳ ಸಂಗ್ರಹ. ವಾಣಿ, 1962ರಲ್ಲಿ ಕರ್ನಾಟಕ ಸರಕಾರದ ಪ್ರಶಸ್ತಿ ಮತ್ತು 1972ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪುರಸ್ಕೃತರು. ವಾಣಿ ಮತ್ತು ಇಂದಿರಾ ವಯಸ್ಸಿನಲ್ಲಿ ಓರಗೆಯವರಾ ದರೂ ಬರವಣಿಗೆಯಲ್ಲಿ ವಾಣಿ ಹಿರಿಯರು. ಅವರ ಮೊದಲ ಕೃತಿ 1944ರಲ್ಲಿ ಪ್ರಕಾಶನ ಭಾಗ್ಯ ಕಂಡರೆ ಇಂದಿರಾ ಅವರು ಬರವಣಿಗೆ ಶುರುಮಾಡಿದ್ದೇ ಅರವತ್ತರ ದಶಕದ ಆರಂಭದಲ್ಲಿ. ಮೊದಲ ಕಾದಂಬರಿ ‘ತುಂಗಭದ್ರ’ ಲೋಕದ ಬೆಳಕು ಕಂಡದ್ದು 1963ರಲ್ಲಿ.

ಸಾಹಿತ್ಯ ಚರಿತ್ರೆಯ ದೃಷ್ಟಿಯಿಂದ ಇಬ್ಬರೂ ಸಮಕಾಲೀನರೇ. ತಡವಾಗಿ ಬರವಣಿಗೆ ಶುರುಮಾಡಿದರೂ ಇಂದಿರಾ ಅವರು ಕಾದಂಬರಿಕಾರ್ತಿಯಾಗಿ ಖ್ಯಾತರಾದ ಅರವತ್ತು-ಎಪ್ಪತ್ತರ ದಶಕಗಲ್ಲಿ ವಾಣಿಯವರೂ ಜನಪ್ರಿಯತೆಯಲ್ಲಿ ಮುಂಚೂಣಿಯಲ್ಲಿದ್ದವರು. ಹುಟ್ಟಿದ ಮನೆ ಮತ್ತು ಸೇರಿದ ಮನೆಗಳೆರಡರಲ್ಲೂ ಸುಸಂಸ್ಕೃತ ಸಂಪ್ರದಾಯಶೀಲ ವಾತಾವರಣದಲ್ಲಿ ಬೆಳೆದ ವಾಣಿಯವರು ಸಂಪ್ರದಾಯಬದ್ಧ ಲೇಖಕಿಯೇ. ಬರವಣಿಗೆಯಲ್ಲಿ ವಾಣಿ-ಇಂದಿರಾರ ಕೈ ಪಳಗುವ ವೇಳೆಗೆ ಕಾದಂಬರಿ ಜನಪ್ರಿಯ ಮನೋರಂಜನಾ ಮಾಧ್ಯಮವಾಗಿ ಅಗ್ರಸ್ಥಾನದಲ್ಲಿತ್ತು-ವಿಶೇಷವಾಗಿ ಮಹಿಳಾ ಓದುಗರಲ್ಲಿ. ವಾಣಿಯವರು ಪ್ರಗತಿಶೀಲ ಅಥವಾ ನವ್ಯ ಈ ಯಾವ ಪಂಥಗಳ ಗೋಜಿನಲ್ಲೂ ತಮ್ಮನ್ನು ಸಿಲುಕಿಸಿಕೊಳ್ಳದೆ ಸುಲಭವಾಗಿ ವಾಚಕರನ್ನು ತಲುಪುವ ಜನಪ್ರಿಯತೆಯ ಸಿದ್ಧ ಅಚ್ಚಿಗೆ ಒಗ್ಗಿಕೊಂಡರು.

ಎಲ್ಲ ವಯೋಮಾನದ ಜನರ ಮನಸ್ಸನ್ನು ಸೂರೆಗೊಳ್ಳುವ ಪ್ರೀತಿಪ್ರೇಮಗಳು ವಾಣಿಯವರ ಕಥೆ ಕಾದಂಬರಿಗಳಲ್ಲಿ ಪ್ರಧಾನವಾದವು. ವಾಣಿಯವರ ಕೃತಿಗಳು ಪ್ರೇಮ ಕಥೆಗಳಾಗಿ ಓದಿಸಿಕೊಳ್ಳುತ್ತವೆಯೇ ಹೊರತು ವಿಚಾರವಂತಿಕೆಯಿಂದಲ್ಲ ಎನ್ನುವುದು ವಿಮರ್ಶಕರ ಅಂಬೋಣ. ‘ಶುಭ ಮಂಗಳ’ದಲ್ಲಿ ಕಥಾ ನಾಯಕಿಯನ್ನು ವಿಮುಕ್ತ ಮಹಿಳೆಯಾಗಿ ಚಿತ್ರಿಸುವ ಅವಕಾಶವಿದ್ದರೂ, ಆಕೆಯನ್ನು ಬದುಕಿನ ಪ್ರವಾಹದಲ್ಲಿ ಒಂದು ದಡ ಕಂಡುಕೊಳ್ಳುವ ಎಲ್ಲರಲ್ಲೊಬ್ಬಳಂತೆಯೇ ಚಿತ್ರಿಸಲಾಗಿದೆ. ಪ್ರೇಮ ವಿವಾಹವೇ ಪ್ರಗತಿಪರ ಘಟನೆಯೇ! ಇದ್ದೀತು, ಪ್ರೇಮ ವಿವಾಹವೂ ಕ್ರಾಂತಿಕಾರಿಯೇ ಎಂಬ ಕಲ್ಪನೆ ಇನ್ನೂ ಇದೆಯಲ್ಲ.

ಇಂದಿರಾ ಅವರ ಕಾದಂಬರಿಗಳಲ್ಲೂ ಪ್ರೇಮಕಾಮಗಳಿವೆ. ‘ತುಂಗಭದ್ರ’ದಲ್ಲಿ ಪ್ರೇಮ ವಿವಾಹಗಳು ಜರಗುತ್ತವೆ. ‘ಸದಾನಂದ’ ಕಾದಂಬರಿಯಲ್ಲಿ ವಿಧವಾ ವಿವಾಹದ ಸಮಸ್ಯೆ ಇದೆ.ಇಂದಿರಾ ಅವರು ವಾಣಿಯವರಿಗಿಂತ ಭಿನ್ನವಾಗಿ ಕಾಣುವುದು ಅವರ ಜೀವನದೃಷ್ಟಿ ಮತ್ತು ಸ್ತ್ರೀ ಸಂಬಂಧಿತ ಕಾಳಜಿಗಳಲ್ಲಿ. ಹೆಣ್ಣಿನ ಅಳಲು, ನೋವು-ಸಂಕಟಗಳು, ಪ್ರಾಂಜಲ ಸೇವಾ ಮನೋಭಾವ ಇವುಗಳ ಅಭಿವ್ಯಕ್ತಿಯ ಜೊತೆಯಲ್ಲೇ ಸಾಮಾಜಿಕ ಕಟ್ಟುಪಾಡುಗಳು ಮತ್ತು ಸಂಪ್ರದಾಯಿಕ ಬಂಧನಗಳಿಂದ ಬಿಡುಗಡೆಗೆ ಹಾತೊರೆಯುವ ದನಿಗಳೂ ಇಂದಿರಾ ಅವರ ಕಾದಂಬರಿ/ಕಥೆಗಳಲ್ಲಿ ಕೇಳಿಬರುತ್ತವೆ. ಸಮಾಜದಲ್ಲಿ ಸ್ತ್ರೀಯರ ಬಗೆಗಿನ ದೃಷ್ಟಿ ಬದಲಾಗಬೇಕು, ಸ್ತ್ರೀಯರ ಸ್ಥಾನಮಾನ ಉತ್ತಮಗೊಳ್ಳಬೇಕು ಎಂಬ ಕಾಳಜಿಯ ಸುಧಾರಣಾ ಮನೋಧರ್ಮವೂ ಕಾಣಬರುತ್ತದೆ. ಈ ಮಾತಿಗೆ ನಿದರ್ಶನವಾಗಿ ಫಣಿಯಮ್ಮ, ಸದಾನಂದ, ವರ್ಣಲೀಲೆ ಮೊದಲಾದ ಕೃತಿಗಳನ್ನು ಗಮನಿಸಬಹುದು. ಹೀಗೆ, ಸ್ತ್ರೀವಾದಿ ವಿಮರ್ಶೆ ಗುರುತಿಸಿರುವಂತೆ, ಎಂ.ಕೆ.ಇಂದಿರಾ, ವಾಣಿ ಅವರಿಗಿಂತ ಹೆಚ್ಚು ಸತ್ವಶಾಲಿ ಲೇಖಕಿಯಾಗಿ ಎದ್ದು ಕಾಣುತ್ತಾರೆ.

ಪುರುಷಪ್ರಧಾನ ಸಮಾಜದಲ್ಲಿ, ಸಾಹಿತ್ಯದಲ್ಲೂ ಆವರಿಗೆ ಸರಿಗಟ್ಟುವಂತೆ ಲೇಖಕಿಯರು ಪ್ರಯೋಗಶೀಲರಾಗಿದ್ದ ಕಾಲಘಟ್ಟದ ಇಬ್ಬರು ಪ್ರಮುಖ ಲೇಖಕಿಯರಾದ ಇಂದಿರಾ ಮತ್ತು ವಾಣಿಯವರ ಜನ್ಮ ಶತಮಾನೋತ್ಸವ ಕಾರ್ಯಕ್ರಮಗಳನ್ನು ನಡೆಸಲು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕರ್ನಾಟಕ ಲೇಖಕಿಯರ ಸಂಘ ಉತ್ಸುಕವಾಗಿರುವುದು ಶ್ಲಾಘನೀಯ. ವಿಚಾರ ಸಂಕಿರಣ, ಶಾಲಾಕಾಲೇಜುಗಳಲ್ಲಿ ಇಂದಿರಾ-ವಾಣಿ ಸಾಹಿತ್ಯದ ಓದು-ಚರ್ಚೆ ಮೊದಲಾದ ಕಾರ್ಯಕ್ರಮಗಳನ್ನು ವರ್ಷವಿಡೀ ನಡೆಸಲು ಲೇಖಕಿಯರ ಸಂಘ ಉದ್ದೇಶಿಸಿದೆ. ಇದು ಈ ಇಬ್ಬರು ಲೇಖಕಿಯರ ಕೊಡುಗೆಯ ಸ್ಮರಣೆಗೆ, ಅವರ ಕೃತಿಗಳ ಮರುಓದಿಗೆ ಪುಟಕೊಡುವಂತಾಗಲಿ. 

Writer - ಜಿ.ಎನ್.ರಂಗನಾಥ್ ರಾವ್

contributor

Editor - ಜಿ.ಎನ್.ರಂಗನಾಥ್ ರಾವ್

contributor

Similar News

ನಾಸ್ತಿಕ ಮದ