ಹವಾ ನಿಯಂತ್ರಿತ ಕೊಠಡಿಗಳಲ್ಲಿ ಕುಳಿತು ಹಣ ಎಣಿಸುವವರಿಂದ ದುಡಿಮೆಯ ಮಾತು...

Update: 2025-01-25 10:48 IST
ಹವಾ ನಿಯಂತ್ರಿತ ಕೊಠಡಿಗಳಲ್ಲಿ ಕುಳಿತು ಹಣ ಎಣಿಸುವವರಿಂದ ದುಡಿಮೆಯ ಮಾತು...
  • whatsapp icon

ಇತ್ತೀಚೆಗೆ ಕೆಲವು ಉದ್ಯಮಿಗಳಿಗೆ ಬಿಟ್ಟಿ ಉಪದೇಶ ಮಾಡುವ ಚಟ ಆರಂಭವಾಗಿದೆ. ಒಬ್ಬರು ವಾರಕ್ಕೆ 70 ಗಂಟೆ ಕೆಲಸ ಮಾಡಿ ಎಂದರೆ ಮತ್ತೊಬ್ಬರು 90 ಗಂಟೆ ಕೆಲಸ ಮಾಡಿ ಎನ್ನುತ್ತಾರೆ. ಹೀಗೆ ಹೇಳುತ್ತಿರುವವರೆಲ್ಲರೂ ಹವಾ ನಿಯಂತ್ರಿತ ಕೊಠಡಿಗಳಲ್ಲಿ ಕುಳಿತು ಉದ್ಯಮಿಗಳಾಗಿರುವವರಷ್ಟೇ. ಇದರ ಜೊತೆಗೆ ಇವರ ಇನ್ನೂ ಅಂಬೆಗಾಲಿಡಲು ಸಾಧ್ಯವಾಗದ ಮಕ್ಕಳು, ಮರಿ ಮೊಮ್ಮಕ್ಕಳಿಗೆ ನೂರಾರು ಕೋಟಿ ರೂಪಾಯಿಗಳ ಆಸ್ತಿಯನ್ನು ಮೀಸಲಿಟ್ಟವರು.

ಬೆವರು ಸುರಿಸಿ ದುಡಿಯುವ ಜನರಿಗೆ ಮಾತ್ರವೇ ಗೊತ್ತಿರುತ್ತದೆ ದುಡಿಮೆಯ ಬೆಲೆ. ರಸ್ತೆಗಳನ್ನು ನಿರ್ಮಾಣ ಮಾಡುವ, ಕಟ್ಟಡಗಳನ್ನು ಕಟ್ಟುವ, ಮೂಟೆ ಹೊತ್ತು ಕೂಲಿ ಮಾಡುವ, ಕಾರ್ಖಾನೆಗಳಲ್ಲಿ ದುಡಿಯುವ, ಹತ್ತಾರು ಮನೆಗಳಲ್ಲಿ ಮನೆ ಕೆಲಸ ಮಾಡುವ ಮಹಿಳೆಯರ, ಲಾರಿ ಚಾಲಕರ, ಆಟೊ ಚಾಲಕರ, ಬಾಡಿಗೆ ಕಾರು ಓಡಿಸುವವರ ದುಡಿಮೆಯ ಅವಧಿ ಎಷ್ಟು ಎನ್ನುವುದು ಬಹುಶಃ ಇವರೆಲ್ಲ ತಿಳಿದೇ ಇರುವುದಿಲ್ಲ.

ಬೆವರು ಸುರಿಸಿ ಬಯಲಿನಲ್ಲಿ ದುಡಿಯುವ ಜನರಿಗೆ ವಾರಕ್ಕೆ 70 ಗಂಟೆ ಇಲ್ಲವೇ 90 ಗಂಟೆ ಇವುಗಳೆಲ್ಲವೂ ಲೆಕ್ಕವೇ ಅಲ್ಲ. ದಿನದ 24 ಗಂಟೆಯಲ್ಲಿ ಇವರಿಗೆ ವಿಶ್ರಾಂತಿ ಎನ್ನುವುದು ಕೆಲವೇ ಕೆಲವು ಗಂಟೆಗಳಲ್ಲಿ ಮಾತ್ರ ದೊರೆಯುತ್ತದೆ. ಉಳಿದಂತೆ ಇವರು ಬದುಕು ಕಟ್ಟಿಕೊಳ್ಳಲು ದುಡಿಯಲೇ ಬೇಕು. ಕಾಯಿಲೆ ಬಂದರೂ ವಿಶ್ರಾಂತಿ ಪಡೆಯುವ ಹಾಗಿಲ್ಲ. ಕೈಯಲ್ಲಿ ಆಗದಿದ್ದರೂ ಮನೆಯಲ್ಲಿ ಕುಳಿತು ಬದುಕುವ ಹಾಗಿರುವುದಿಲ್ಲ. ದುಡಿಮೆ ಎನ್ನುವುದು ಇವರಿಗೆ ಅನಿವಾರ್ಯ ಮತ್ತು ಅತ್ಯಂತ ಅವಶ್ಯ ಸಂಗತಿ ಆಗಿರುತ್ತದೆ.

ಎಲ್ಲರೂ 70 ಗಂಟೆ ಇಲ್ಲವೇ 90 ಗಂಟೆ ದುಡಿದರೆ ದೇಶಕ್ಕೆ ಒಳ್ಳೆಯದಾಗುತ್ತದೆ ಎನ್ನುವ ‘ದೊಡ್ಡವರ’ ಮಾತು ಪೂರ್ಣ ಸತ್ಯವಲ್ಲ. ಕಾರ್ಮಿಕರು, ನೌಕರರು ಹೆಚ್ಚು ಹೆಚ್ಚು ಗಂಟೆಯ ಕಾಲ ದುಡಿದರೆ ಇದರಿಂದ ಉದ್ಯಮಿಗಳ ಮತ್ತು ಮಾಲಕರ ಖಜಾನೆ ಹೆಚ್ಚು ತುಂಬುತ್ತದೆ. ಹೆಚ್ಚು ಹೆಚ್ಚು ಲಾಭ ಬಂದಿತೆಂದು ಕಾರ್ಮಿಕರಿಗೆ ಅತಿಹೆಚ್ಚು ಸಂಬಳವನ್ನು ಯಾರೂ ಕೊಡುವುದಿಲ್ಲ.

ಪದೇ ಪದೇ ದುಡಿಮೆಯ ಉಪದೇಶವನ್ನು ಮಾಡುವ, ಪ್ರಚಾರ ಪಡೆಯುವವರು ತಮ್ಮ ತಮ್ಮ ಕಂಪೆನಿ ಮತ್ತು ಕಾರ್ಖಾನೆಗಳಲ್ಲಿ ಬೆವರು ಸುರಿಸಿ ದುಡಿವ ಕಾರ್ಮಿಕರಿಗೆ ಎಷ್ಟರಮಟ್ಟಿಗೆ ಸೌಕರ್ಯ, ಸೌಲಭ್ಯವನ್ನು ಕಲ್ಪಿಸಿ ಕೊಟ್ಟಿದ್ದಾರೆ ಹಾಗೂ ಅವರ ದುಡಿಮೆಗೆ ತಕ್ಕ ಹಾಗೆ ಸಂಬಳವನ್ನು ನೀಡುತ್ತಿದ್ದಾರೆಯೇ ಎಂದು ತಮ್ಮನ್ನು ತಾವೇ ಪ್ರಶ್ನೆ ಮಾಡಿಕೊಳ್ಳಬೇಕಾಗಿದೆ.

ದುಡಿಯುವ ಜನ ದುಡಿಯುತ್ತಲೇ ಇದ್ದಾರೆ. ದುಡಿದೇ ಬದುಕುತ್ತಿದ್ದಾರೆ. ಆದರೆ ಅವರ ಸತತ ದುಡಿಮೆಯ ನಡುವೆಯೂ ಆನಂದದ ಬದುಕನ್ನು ಸಾಗಿಸಲು ಸಾಧ್ಯವಾಗಿಲ್ಲ. ಆದರೆ ದೇಶದ ಒಂದಷ್ಟು ಮಂದಿ ದುಡಿಯದೆಯೇ ಬದುಕುತ್ತಿದ್ದಾರೆ. ಬದುಕುವುದರ ಜೊತೆಗೆ ಸಂಭ್ರಮದಿಂದಲೂ ಇದ್ದಾರೆ. ಯಾರದೋ ಬೆವರಿನ ಫಲವನ್ನು ಅವರು ಅನುಭವಿಸುತ್ತಿದ್ದಾರೆ. ಇಂತಹವರ ಮನೆಯ ಶ್ವಾನಕ್ಕೂ ಪ್ರತ್ಯೇಕವಾದ ಕೊಠಡಿಯಿದೆ. ಓಡಾಡಲು ದುಬಾರಿ ವಾಹನ, ಆರೈಕೆ ಮಾಡಲು ಸಹಾಯಕರಿದ್ದಾರೆ. ಆದರೆ ಬಹಳಷ್ಟು ಮಾಲಕರು ಇಂತಹ ಸೌಜನ್ಯವನ್ನು ತಮ್ಮ ಕಾರ್ಮಿಕರಿಗೆ ತೋರಿಸಿ ಅವರಿಗೆ ಕನಿಷ್ಠ ಸೌಕರ್ಯ ಸೌಲಭ್ಯವನ್ನು ಕಲ್ಪಿಸಿ ಕೊಡುವಂತಹ ದೊಡ್ಡತನವನ್ನೂ ತೋರಿದ್ದಾರೆಯೇ?

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ದುಡಿಯುತ್ತಿರುವ ಯುವ ಜನಾಂಗ ಯಾವ ರೀತಿಯಲ್ಲಿ ಆರೋಗ್ಯದ ಮೇಲೆ ಪರಿಣಾಮವನ್ನು ಎದುರಿಸುತ್ತಿದ್ದಾರೆ ಎನ್ನುವುದನ್ನು ಇತ್ತೀಚಿನ ದಿನಗಳಲ್ಲಿ ಹಲವಾರು ವರದಿಗಳು ಹೇಳುತ್ತಿವೆ. ಇದನ್ನು ಗಮನಿಸಿದಾಗ ಆತಂಕವಾಗುತ್ತದೆ. ಇವರಲ್ಲಿ ಹೆಚ್ಚಿನವರು ವಾರದಲ್ಲಿ 70 ಗಂಟೆಯಲ್ಲ, ಅದಕ್ಕಿಂತಲೂ ಹೆಚ್ಚು ಕಾಲ ದುಡಿಯುತ್ತಿದ್ದಾರೆ. ಹೆಚ್ಚಿನ ಅವಧಿಯಲ್ಲಿ ಕೆಲಸ ಮಾಡುವುದರಿಂದ ಇವರ ಕಣ್ಣಿನ ಮೇಲೆ ಪರಿಣಾಮ ಬೀರಿದೆ. ಮಾನಸಿಕ ಒತ್ತಡ ಹೆಚ್ಚಾಗಿದೆ. ಇದರಿಂದಾಗಿ ಈ ವರ್ಗದ ಯುವಜನರು ಆರೋಗ್ಯದ ವಿಚಾರದಲ್ಲಿ ಎಷ್ಟೆಲ್ಲಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎನ್ನುವುದನ್ನು ಗಮನಿಸಿದಾಗ ಯಾವ ರೀತಿಯಲ್ಲಿ ಇವರನ್ನು ದುಡಿಸಿಕೊಳ್ಳುತ್ತಿದ್ದಾರೆ ಎಂದು ಕಾರ್ಪೊರೇಟ್ ಉದ್ಯಮಿಗಳು ಎಂದಾದರೂ ಕಲ್ಪಿಸಿಕೊಂಡಿದ್ದಾರೆಯೇ? ಯಾವುದೇ ರೀತಿಯ ಉದ್ಯೋಗದ ಭದ್ರತೆಯೂ ಇವರಿಗೆ ಇರುವುದಿಲ್ಲ. ಯಾವ ಮುನ್ಸೂಚನೆಯನ್ನೂ ನೀಡದೆ ಕೆಲಸದಿಂದ ತೆಗೆದು ಹಾಕಲಾಗುತ್ತದೆ. ಇದರಿಂದಾಗಿ ಇವರ ಮನಸ್ಸಿನ ಮೇಲೆ ಆಗುತ್ತಿರುವ ಪರಿಣಾಮಗಳೇನು ಎನ್ನುವ ಕಲ್ಪನೆಯಾದರೂ ಇವರಿಗಿದೆಯೇ?

‘ದೇಶಕ್ಕೆ ಒಳ್ಳೆಯದಾಗುತ್ತದೆ’ ಎಂದು ತಮ್ಮ ತಿಜೋರಿ ತುಂಬಿಸಿಕೊಳ್ಳುವವರಿಗೆ ದುಡಿಯುವವರ ಕಷ್ಟ ಅರಿವಿಗೆ ಬರುವ ಸಾಧ್ಯತೆ ಇರುತ್ತದೆಯೇ?

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಕೆ.ಎಸ್. ನಾಗರಾಜ್

contributor

Similar News