ಸಾಣಿಕಟ್ಟಾದಲ್ಲಿ ‘ಉಪ್ಪು’ ಉತ್ಪಾದನೆಯ ಸುಗ್ಗಿ ಕಾಲ

Update: 2025-04-07 10:57 IST
ಸಾಣಿಕಟ್ಟಾದಲ್ಲಿ ‘ಉಪ್ಪು’ ಉತ್ಪಾದನೆಯ ಸುಗ್ಗಿ ಕಾಲ
  • whatsapp icon

ಗೋಕರ್ಣ : ತಾಪಮಾನ ಏರಿಕೆಯಿಂದಾಗಿ ಜನರು, ಪ್ರಾಣಿ ಪಕ್ಷಿಗಳು ಬಸವಳಿಯುತ್ತಿದ್ದರೆ, ಇನ್ನೊಂದೆಡೆ ಉಪ್ಪು ಉತ್ಪಾದನೆ ಭರದಿಂದ ಸಾಗುತ್ತಿದೆ. ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿರುವ ಸಾಣಿಕಟ್ಟಾದ ಉಪ್ಪಿನ ಆಗರದಲ್ಲಿ ಈಗ ಉಪ್ಪು ತೆಗೆದು ಸಂಗ್ರಹಿಸುವ ಕಾರ್ಯ ಕಣ್ಣಿಗೆ ಕಟ್ಟುತ್ತದೆ. ಎತ್ತ ಕಣ್ಣು ಹಾಯಿಸಿದರೂ ಉಪ್ಪಿನ ರಾಶಿಗಳು ಕಾಣ ಸಿಗುತ್ತವೆ.

ಹಾಗೇ ಸಾಣಿಕಟ್ಟಾದ ಉಪ್ಪಿಗೆ ಐತಿಹಾಸಿಕ ಹಿನ್ನೆಲೆಯಿದೆ. ಇಲ್ಲಿನ ಉಪ್ಪನ್ನು ಕರ್ನಾಟಕ, ಗುಜರಾತ್, ತಮಿಳುನಾಡು, ರಾಜಸ್ಥಾನ, ಮಹಾರಾಷ್ಟ್ರ, ಆಂಧ್ರಪ್ರದೇಶ ರಾಜ್ಯಗಳಲ್ಲಿ ಉತ್ಪಾದಿಸಲಾಗುತ್ತದೆ. ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಸಾಣಿಕಟ್ಟಾದ ಉಪ್ಪಿನ ಕಾರ್ಖಾನೆಯು ಅತ್ಯಂತ ಹಳೆಯ ಮತ್ತು ದೊಡ್ಡ ಉಪ್ಪಿನ ಆಗರವಾಗಿದೆ. 1720ರಿಂದ ಇಲ್ಲಿ ಉಪ್ಪನ್ನು ಉತ್ಪಾದಿಸಲಾಗುತ್ತಿದೆ.

ಪ್ರಾರಂಭದಲ್ಲಿ ಕೇವಲ 50 ಎಕರೆಯೊಂದಿಗೆ ಆರಂಭಗೊಂಡು ಈಗ 450 ಎಕರೆ ಪ್ರದೇಶದಲ್ಲಿ ಉಪ್ಪನ್ನು ಉತ್ಪಾದಿಸಲಾಗುತ್ತಿದೆ. 1952ರಲ್ಲಿ ನಾಗರಬೈಲ್ ಉಪ್ಪು ತಯಾರಕರ ಸಹಾಯಕ ಸಂಘ ಸ್ಥಾಪನೆಯಾಯಿತು. ಇಲ್ಲಿ ವಿಶೇಷವೆಂದರೆ ‘ಕೆಂಪು ಉಪ್ಪು’ ತಯಾರಾಗುತ್ತಿದೆ. ಹವಾಮಾನ ವೈಪರೀತ್ಯ ಹಾಗೂ ಅಕಾಲಿಕ ಮಳೆಗೆ ಅನುಗುಣವಾಗಿ ಉತ್ಪಾದನೆ ಹೆಚ್ಚಳ ಮತ್ತು ಕಡಿಮೆಯಾಗುತ್ತದೆ.

19ನೇ ಶತಮಾನದಲ್ಲಿ ಉಪ್ಪಿಗೆ ಪ್ರಮುಖ ಬೇಡಿಕೆಯಿತ್ತು. ಪ್ರಾಚೀನ ರೋಮ್ ಸಾಮ್ರಾಜ್ಯದಲ್ಲಿ ಉಪ್ಪನ್ನು ಹಣವಾಗಿ ಬಳಸಲಾಗುತ್ತಿತ್ತು ಮತ್ತು ಅಂದಿನ ಕಾಲದಲ್ಲಿ ಉಪ್ಪನ್ನು ವರದಕ್ಷಿಣೆ ರೂಪದಲ್ಲಿ ನೀಡಲಾಗುತ್ತಿತ್ತು. ಉತ್ತರ ಕನ್ನಡ ಜಿಲ್ಲೆಯು ಬೈಂದೂರ ಅರಸರ ಆಳ್ವಿಕೆಗೆ ಒಳಪಟ್ಟಿತ್ತು. ನಂತರ ಈ ಪ್ರದೇಶವನ್ನು ಹೈದರಾಲಿ ಆಕ್ರಮಿಸಿಕೊಂಡಿದ್ದರು. ಟಿಪ್ಪು ಸುಲ್ತಾನರ ಕಾಲದಲ್ಲಿ ಇಲ್ಲಿಯ ಉಪ್ಪನ್ನು ಮೈಸೂರಿಗೆ ಸಾಗಾಟ ಮಾಡಲಾಗುತ್ತಿತ್ತು. ನಂತರ ಈ ಪ್ರದೇಶವು ಬ್ರಿಟಿಷರ ವಶವಾಯಿತು.

ಸಾಣಿಕಟ್ಟಾದಲ್ಲಿ ನೈಸರ್ಗಿಕವಾಗಿಯೇ ಉಪ್ಪು ಉತ್ಪಾದನೆಯಾಗುವುದರಿಂದ ಇದಕ್ಕೆ ಕರ್ನಾಟಕದಲ್ಲಿ ಮಾತ್ರವಲ್ಲದೆ ಹೊರ ರಾಜ್ಯಗಳಲ್ಲಿಯೂ ಸಾಕಷ್ಟು ಬೇಡಿಕೆಯಿತ್ತು. ಆದರೆ, ಈಗ ಕರ್ನಾಟಕದ ವಿವಿಧ ಭಾಗಗಳಿಗೆ ಉಪ್ಪನ್ನು ಸರಬರಾಜು ಮಾಡಲಾಗುತ್ತದೆ.

ಉಪ್ಪನ್ನು ಪ್ಯಾಕ್ ಮಾಡುವ ಸಂದರ್ಭದಲ್ಲಿ ಅಯೋಡಿನ್ ಬಳಸಲಾಗುತ್ತದೆ. ಹೀಗಾಗಿ ಇಲ್ಲಿಯ ಕೆಂಪು ಉಪ್ಪಿಗೆ ಬಹು ಬೇಡಿಕೆಯಿದೆ. ಉಪ್ಪು ತಯಾರಾಗುವಲ್ಲಿ ಪ್ರತಿದಿನ ನೂರಾರು ಮಹಿಳೆಯರು ಮತ್ತು ಪುರುಷರು ದುಡಿಯುತ್ತಾರೆ. ಉಪ್ಪುನೀರು ಸಂಗ್ರಹಿಸುವುದರಿಂದ ಹಿಡಿದು, ಉಪ್ಪು ಪ್ಯಾಕ್‌ಮಾಡುವುದೂ ಇಲ್ಲಿ ನಡೆಯುತ್ತದೆ.

2006ರಲ್ಲಿ ಅತಿ ಹೆಚ್ಚು ಅಂದರೆ 15 ಸಾವಿರ ಮೆಟ್ರಿಕ್ ಟನ್ ಉಪ್ಪು ಉತ್ಪಾದಿಸಿದರೆ, 2022ರಲ್ಲಿ ಕೇವಲ 3,500 ಮೆಟ್ರಿಕ್ ಟನ್ ಉಪ್ಪನ್ನು ಉತ್ಪಾದಿಸುವ ಮೂಲಕ ಕಡಿಮೆ ಸಾಲಿಗೆ ಸೇರುತ್ತದೆ ಎಂದು ಪ್ರೊಡಕ್ಷನ್ ಮ್ಯಾನೇಜರ್ ದುರ್ಗೇಶ ಕಾಗಾಲ ವಿವರಿಸುತ್ತಾರೆ.

ಈ ಉಪ್ಪಿನ ಆಗರದಲ್ಲಿ ಆಗೇರ ಸಮುದಾಯದವರು ಅಧಿಕವಾಗಿದ್ದಾರೆ. ಉಪ್ಪಿನ ಆಗರದಲ್ಲಿಯೇ ಇವರು ಇರುವುದರಿಂದ ಈ ಜನಾಂಗಕ್ಕೆ ‘ಆಗೇರರು’ ಎಂಬ ಹೆಸರು ಬಂತು ಎಂದು ಹಿರಿಯ ಸಾಹಿತಿ ಡಾ.ರಾಮಕೃಷ್ಣ ಗುಂದಿ ತಮ್ಮ ಕೃತಿಯಲ್ಲಿ ಉಲ್ಲೇಖಿಸಿದ್ದಾರೆ.

5 ವರ್ಷಗಳ ಉತ್ಪನ್ನಗಳು :

2024 - 4,800 ಮೆಟ್ರಿಕ್ ಟನ್

2023 - 8,700 ಮೆಟ್ರಿಕ್ ಟನ್

2022 - 3,500 ಮೆಟ್ರಿಕ್ ಟನ್

2021 - 6,000 ಮೆಟ್ರಿಕ್ ಟನ್

2020 - 8,600 ಮೆಟ್ರಿಕ್ ಟನ್

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ನಾಗರಾಜ ಮಂಜಗುಣಿ

contributor

Similar News