ಸವಿತಾ ಕಣ್ಣಲ್ಲಿ ಅಂಬೇಡ್ಕರ್

ಬಾಬಾಸಾಹೇಬ ಅಂಬೇಡ್ಕರ್ ಒಂದು ಅನಿರೀಕ್ಷಿತ ಭೇಟಿಯಲ್ಲಿ ತಮ್ಮ ಜೀವದ ಗೆಳತಿಯನ್ನು ಕಂಡುಕೊಂಡರು. ಆ ಗೆಳತಿ ಅಂಬೇಡ್ಕರ್ ಬದುಕಿನ ಕೊನೆಯ ತನಕ ಅವರ ನೆರಳಾಗಿ ನಿಂತು ಅವರನ್ನು ಪೊರೆದ ರೀತಿ, ಅವರೊಡನೆ ಬೌದ್ಧ ಧರ್ಮ ಸ್ವೀಕರಿಸಿದ ರೀತಿ ಅಪೂರ್ವವಾದುದು.
ಡಾ. ಅಂಬೇಡ್ಕರ್ ಹಾಗೂ ಡಾ. ಶಾರದಾ ಕಬೀರ್ ಅವರ ಭೇಟಿ ಆಕಸ್ಮಿಕವಾಗಿತ್ತು. ಸಾವಿರಾರು ವರ್ಷಗಳ ದಲಿತ ದಮನದ ಭೀಕರ ಇತಿಹಾಸ ಚಕ್ರದ ಓಟದ ದಿಕ್ಕನ್ನು ತಮ್ಮ ಪುಟ್ಟ ಕೈಗಳ ಮೂಲಕ ಬೇರೆಡೆ ತಿರುಗಿಸಲು ಹೊರಟಿದ್ದ ಅಂಬೇಡ್ಕರರಿಗೆ ತಮ್ಮ ಆರೋಗ್ಯದ ಕಡೆಗೆ ಗಮನ ಕೊಡುವ ಲಕ್ಷುರಿಯಿರಲಿಲ್ಲ. ತಮ್ಮ ತಾರುಣ್ಯದ ಶುರುವಿನಲ್ಲಿ ಉನ್ನತ ವಿದ್ಯಾಭ್ಯಾಸಕ್ಕಾಗಿ ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾನಿಲಯ ಹೊಕ್ಕ ಕಾಲದಿಂದಲೂ ಹದಿನಾರು, ಹದಿನೆಂಟು ಗಂಟೆಗಳ ಕಾಲ ಕೆಲಸ ಮಾಡುವುದು ಅಂಬೇಡ್ಕರ್ ಬದುಕಿನ ರೂಢಿಯಾಗಿಬಿಟ್ಟಿತ್ತು. ಹೊತ್ತುಹೊತ್ತಿನ ಊಟ, ನಿದ್ರೆ, ವಿರಾಮಗಳ ದಿನಚರಿಯ ದಿನಗಳು ಅವರ ಜೀವನದಲ್ಲಿ ತೀರಾ ಕಡಿಮೆಯಿದ್ದವು.
ತಮ್ಮ ಐವತ್ತೇಳನೆಯ ವಯಸ್ಸಿನಲ್ಲಿ ದೇಹ ಪೂರಾ ಹತೋಟಿ ತಪ್ಪಿಹೋಗುತ್ತಿದೆ ಎಂಬುದು ಅಂಬೇಡ್ಕರ್‌ಗೆ
ಅರಿವಾಗತೊಡಗಿತು. ಡಯಾಬಿಟೀಸ್, ನರಗಳ ಸಮಸ್ಯೆ, ಕೀಲು ನೋವು, ರಕ್ತದ ಅತಿ ಒತ್ತಡ...ಹೀಗೆ ಹಲವು ಕಷ್ಟಗಳ ನಡುವೆಯೂ ದೇಶದ ಹಿತ ನೋಡಿಕೊಳ್ಳುತ್ತಿದ್ದ ಅಂಬೇಡ್ಕರ್‌ರ ದೇಹವನ್ನು ನೋಡಿಕೊಳ್ಳುವವರು ಯಾರೂ ಇರಲಿಲ್ಲ. ಕೊನೆಗೂ ಅಂಬೇಡ್ಕರ್ ತಮ್ಮ ಮಿತ್ರ ಡಾ. ರಾವ್ ಕೊಟ್ಟ ಸಲಹೆಯಂತೆ ಡಾ. ಮಾವ್ಲಂಕರ್ ಅವರನ್ನು ಕಾಣಲೇಬೇಕಾಯಿತು.
ಅಂಬೇಡ್ಕರ್ ಡಾ. ಮಾವ್ಲಂಕರ್‌ರ ಆಸ್ಪತ್ರೆಗೆ ಭೇಟಿ ಕೊಡುವ ಮೊದಲು ಡಾ. ಶಾರದಾ ಕಬೀರ್ ಎಂಬ ಸಾರಸ್ವತ ಬ್ರಾಹ್ಮಣ ತರುಣಿಯನ್ನು ಭೇಟಿ ಮಾಡಿದ್ದು ಆಕಸ್ಮಿಕವಾಗಿತ್ತು. ಮುಂಬೈನ ಹೊರವಲಯದಲ್ಲಿ ನೆಲೆಸಿದ್ದ ಮೈಸೂರು ಕಡೆಯ ಡಾ. ರಾವ್ ಅಂಬೇಡ್ಕರ್ ಅವರ ಗೆಳೆಯರಾಗಿದ್ದರು; ರಾವ್ ಮನೆಗೆ ಅಂಬೇಡ್ಕರ್ ಒಮ್ಮೊಮ್ಮೆ ಭೇಟಿ ಕೊಡುತ್ತಿದ್ದರು. ರಾವ್ ಅವರ ತಂಗಿಯ ಗೆಳತಿಯಾಗಿದ್ದ ಶಾರದಾ ಅಷ್ಟೊತ್ತಿಗೆ ಎಂ.ಬಿ.ಬಿ.ಎಸ್. ಮುಗಿಸಿದ್ದರು. ಗೆಳತಿಯನ್ನು ಭೇಟಿ ಮಾಡಲು ಶಾರದಾ ಆಗಾಗ ರಾವ್ ಮನೆಗೆ ಬರುತ್ತಿದ್ದರು.
1947ರ ಶುರುವಿನಲ್ಲಿ ಒಮ್ಮೆ ಅಂಬೇಡ್ಕರ್ ಡಾ. ರಾವ್ ಮನೆಗೆ ಬಂದರು. ಅವತ್ತು ಶಾರದಾ ಕೂಡ ಅಲ್ಲಿದ್ದರು. ವೈಸರಾಯ್ ಸಂಪುಟದಲ್ಲಿ ಮಂತ್ರಿಯಾಗಿದ್ದ ಅಂಬೇಡ್ಕರ್ ಹೆಸರನ್ನು ಶಾರದಾ ಕೇಳಿದ್ದರು. ಅಂಬೇಡ್ಕರ್ ವಿದೇಶದಲ್ಲಿ ಅಷ್ಟೆಲ್ಲ ಡಿಗ್ರಿಗಳನ್ನು ಪಡೆಯಲು ಪಟ್ಟ ಪರಿಶ್ರಮ, ಕಷ್ಟ, ಅವರು ಏರಿದ ಎತ್ತರ, ಬೆಲೆ ಕಟ್ಟಲಾಗದ ಬರಹಗಳು, ಅವರ ಹೋರಾಟ ಎಲ್ಲವನ್ನೂ
ಡಾ. ರಾವ್ ಶಾರದಾಗೆ ಹೇಳಿದ್ದರು. ತಾನೊಬ್ಬ ಮಹಾನ್ ವ್ಯಕ್ತಿಯೆದುರು ಇರುವುದು ಶಾರದಾಗೆ ಅರಿವಾಯಿತು.
ಮೊದಲ ಭೇಟಿಯಲ್ಲೇ ಅಂಬೇಡ್ಕರ್ ಮಹಿಳೆಯರ ಪ್ರಗತಿಯ ಬಗ್ಗೆ, ಮಹಿಳೆಯರು ಗಂಡಸರಿಗೆ ಸಮಾನವಾಗಿ ಹೆಜ್ಜೆ ಹಾಕುವ ಬಗ್ಗೆ ಮಾತಾಡಿದಾಗಲಂತೂ ಶಾರದಾಗೆ ಅವರ ಬಗ್ಗೆ ಅಪಾರ ಗೌರವ ಹುಟ್ಟಿತು. ಇದಾದ ಮೇಲೆ, ರಾವ್ ಮನೆಯಲ್ಲಿ ನಡೆದ ಭೇಟಿಗಳಲ್ಲಿ ಅಂಬೇಡ್ಕರ್ ಓದಿನ ಆಳ, ಗ್ರಹಿಕೆ ಶಾರದಾಗೆ ಮನದಟ್ಟಾಗತೊಡಗಿತು.
ಕೆಲ ದಿನಗಳ ನಂತರ ಅಂಬೇಡ್ಕರ್ ಮಾವ್ಲಂಕರ್ ಅವರ ಆಸ್ಪತ್ರೆಗೆ ಬಂದಾಗ ಅಲ್ಲಿ ಜೂನಿಯರ್ ಡಾಕ್ಟರಾಗಿದ್ದ ಶಾರದಾಗೆ ಅಂಬೇಡ್ಕರ್ ಅವರನ್ನು ಕಂಡು ಅಚ್ಚರಿ-ಆನಂದ! ಮಾವ್ಲಂಕರ್ ಅಂಬೇಡ್ಕರ್ ಅವರ ಪೂರ್ಣ ತಪಾಸಣೆ ಮಾಡಿ, ಅವರ ಮುಂದಿನ ಚಿಕಿತ್ಸೆಯ ಬಗ್ಗೆ ಶಾರದಾಗೆ ಸೂಚನೆಗಳನ್ನು ಕೊಟ್ಟರು.
ಶಾರದಾ ಅಂಬೇಡ್ಕರ್ ಅವರಿಗೆ ಮಾತ್ರೆ ಚೀಟಿಗಳನ್ನು ಸಿದ್ಧಪಡಿಸುತ್ತಾ, ಮುಂದೆ ಅವರ ಜೀವನ ಶೈಲಿ ಹೇಗಿರಬೇಕು ಇತ್ಯಾದಿಗಳ ಬಗ್ಗೆ ಸೂಚನೆ ಕೊಡುತ್ತಾ, ‘ನಾನು ಬಂದು ನಿಮ್ಮ ಹೆಂಡತಿಗೆ ಇದನ್ನೆಲ್ಲ ಹೇಳಿಕೊಡುತ್ತೇನೆ’ ಎಂದರು. ರಮಾಬಾಯಿ ತೀರಿಕೊಂಡಿದ್ದು ಶಾರದಾಗೆ ಗೊತ್ತಾದ ಮೇಲೆ, ‘ನಿಮ್ಮ ಮನೆಗೇ ಬಂದು ಕೆಲವು ದಿನ ಇದ್ದು ನಿಮ್ಮ ಸಹಾಯಕರಿಗೆ ಇದನ್ನೆಲ್ಲ ಹೇಳಿಕೊಡುತ್ತೇನೆ’ ಎಂದರು.
ಅಂಬೇಡ್ಕರ್: ಅಯ್ಯೋ ಡಾಕ್ಟರ್! ಹಾಗೆಲ್ಲ ಮಾಡಿಬಿಟ್ಟೀರಿ. ನಾನು ಒಬ್ಬಂಟಿ. ಒಬ್ಬ ಹೆಂಗಸು ಬಂದು ನನ್ನ ಮನೆಯಲ್ಲಿದ್ದರೆ ಜನ ಏನೆಂದುಕೊಳ್ಳುತ್ತಾರೆ?
ಶಾರದಾ: ಅದರಲ್ಲೇನಿದೆ! ನೀವು ಮಿನಿಸ್ಟರ್. ನಿಮ್ಮ ಬಂಗಲೆಯಲ್ಲಿರುತ್ತೀರಿ. ಅಲ್ಲಿ ನಾನು ನಿಮ್ಮ ಗೆಸ್ಟ್ ಹೌಸಿನಲ್ಲಿದ್ದು ಇದನ್ನೆಲ್ಲ ನಿಮ್ಮ ಸಹಾಯಕರಿಗೆ ಹೇಳಿಕೊಟ್ಟು ಬರುತ್ತೇನೆ.
ಕೊನೆಗೂ ಅಂಬೇಡ್ಕರ್ ಅದಕ್ಕೆ ಒಪ್ಪಲಿಲ್ಲ. ‘ಹಾಗಾದರೆ ನೀವು ಮದುವೆಯಾಗುವುದು ಒಳ್ಳೆಯದು’ ಎಂದು ಶಾರದಾ ಅಂಬೇಡ್ಕರ್ ಅವರನ್ನು ಬೀಳ್ಕೊಟ್ಟರು.
1947ರ ಡಿಸೆಂಬರ್ ತಿಂಗಳ ಒಂದು ದಿನ ಅಂಬೇಡ್ಕರ್ ತಮ್ಮ ಆಯ್ಕೆಯನ್ನು ಶಾರದಾಗೆ ಹೇಳಿಬಿಟ್ಟರು. ತಕ್ಷಣ ಏನು ಹೇಳಬೇಕೆಂಬುದು ಶಾರದಾಗೆ ಹೊಳೆಯಲಿಲ್ಲ. ಪತ್ರಗಳ ಅಡ್ಡಾಟ ಶುರುವಾಯಿತು. ಅಂಬೇಡ್ಕರ್ ತಾವು ‘ಶಾರು’ ಎಂದು ಕರೆಯುತ್ತಿದ್ದ ಹುಡುಗಿಯನ್ನು ಸವಿತಾ ಎಂದರು; ಸವಿತಾರ ಪತ್ರಗಳಲ್ಲಿ ಅಂಬೇಡ್ಕರ್ ‘ರಾಜ’ ಆದರು. ‘ಒಂದು ಆತ್ಮ ಇನ್ನೊಂದು ಆತ್ಮವನ್ನು ನೋಡಿತು. ಎರಡೂ ಆತ್ಮಗಳು ಒಂದು ಕಾಮನ್ ಐಡೆಂಟಿಟಿಯನ್ನು ಕಂಡುಕೊಂಡವು.’ ಅಂಬೇಡ್ಕರ್ 1948ರಲ್ಲಿ ಬರೆದ ಪತ್ರದಲ್ಲಿ ಶಾರದಾಗೆ ಹೇಳಿದ ಮಾತಿದು.
ಅಂಬೇಡ್ಕರ್ ಅವರ ಐವತ್ತೇಳನೇ ಹುಟ್ಟುಹಬ್ಬದ ಮಾರನೆಯ ದಿನ 15 ಎಪ್ರಿಲ್ 1948ರಂದು ದಿಲ್ಲಿಯಲ್ಲಿ ಸವಿತಾ- ಅಂಬೇಡ್ಕರ್ ಮದುವೆ ನಡೆಯಿತು. ನಂತರ ಸವಿತಾ ಡಾಕ್ಟರ್ ಕೆಲಸ ಬಿಟ್ಟಿದ್ದು; ಸದಾ ಹಿನ್ನೆಲೆಯಲ್ಲಿದ್ದು ಅಂಬೇಡ್ಕರ್ ಅವರನ್ನು ಅಪಾರ ಕಾಳಜಿಯಿಂದ ನೋಡಿಕೊಂಡಿದ್ದು; ಬೌದ್ಧ ಧರ್ಮವನ್ನು ಆಳವಾಗಿ ಓದಿ, ಪ್ರೀತಿಸಿದ್ದ ಸವಿತಾ ಬಾಬಾಸಾಹೇಬರ ಜೊತೆ ಬೌದ್ಧಧರ್ಮ ಸ್ವೀಕಾರ ಮಾಡಿದ್ದು...ಇದೆಲ್ಲ ಈಗ ಎಲ್ಲರಿಗೂ ಗೊತ್ತಿದೆ.
ಆದರೆ ಸವಿತಾ ಮನಸ್ಸಿನಲ್ಲಿ ಉಳಿದಿದ್ದ ಅಂಬೇಡ್ಕರ್ ವಿಶಿಷ್ಟ ಚಿತ್ರಗಳು ಅನೇಕರಿಗೆ ಗೊತ್ತಿರಲಿಕ್ಕಿಲ್ಲ. ಅಂಬೇಡ್ಕರ್ ಆರೋಗ್ಯದ ಅಸ್ಥಿರತೆ, ಸಂವಿಧಾನ ರಚನೆಯ ಕಾಲದಲ್ಲಿ ಕುಸಿಯುತ್ತಿದ್ದ ಅವರ ಆರೋಗ್ಯ ಡಾಕ್ಟರ್ ಸವಿತಾರನ್ನೂ ಕಂಗೆಡಿಸುತ್ತಿದ್ದವು. ಇದರ ಜೊತೆಗೆ, ಅಂಬೇಡ್ಕರ್ ಅವರ ಹಾಸ್ಯ ಪ್ರಜ್ಞೆಯನ್ನೂ ಸವಿತಾ ಸವಿಯುತ್ತಿದ್ದರು. ಅಂಬೇಡ್ಕರ್ ಕೆಲವರನ್ನು ಅಣಕ ಮಾಡುತ್ತಿದ್ದರೆ, ತಾನೂ ಉಳಿದವರೂ ಬಿದ್ದುಬಿದ್ದು ನಗುತ್ತಿದ್ದುದನ್ನು ಸವಿತಾ ನೆನೆಯುತ್ತಾರೆ. ಅಡುಗೆಯ ಬಗೆಗೆ ವಿಶೇಷ ತಿಳುವಳಿಕೆಗಳಿದ್ದ ಅಂಬೇಡ್ಕರ್ ಒಂದು ದಿನ ಎಲ್ಲರಿಗೂ ಅಡುಗೆ ಮಾಡಿ ಬಡಿಸಿದ ದಿನ ಮಸಾಲೆಯ ಬಗ್ಗೆ ಹೇಳಿದ್ದು ಕೂಡ ಸವಿತಾಗೆ ನೆನಪಿತ್ತು: ‘ಮಸಾಲೇನ ಬೆಣ್ಣೆ ಥರ ಸಾಫ್ಟಾಗಿ ಅರೀಬೇಕು; ಅದು ಎಷ್ಟು ನುಣ್ಣಗಿರಬೇಕೂಂದ್ರೆ ಅದನ್ನ ಯಾರ ಕಣ್ಣಿಗಾದ್ರೂ ಇಟ್ರೂ ಅದು ಅವರಿಗೆ ಗೊತ್ತಾಗಬಾರದು!’
ಸವಿತಾ ಅಂಬೇಡ್ಕರ್ (1909-2003) ಬರೆದಿರುವ ‘ಬಾಬಾಸಾಹೇಬ್: ಮೈ ಲೈಫ್ ವಿತ್ ಡಾ. ಅಂಬೇಡ್ಕರ್’ ಆತ್ಮಚರಿತ್ರೆಯಲ್ಲಿ ಸವಿತಾ ತಮ್ಮ ವೃತ್ತಿ ಬಿಟ್ಟು ಭಾರತದ ಮಹಾನ್ ವ್ಯಕ್ತಿಯೊಬ್ಬರ ನೆರಳಾಗಿ, ಅವರ ದೈಹಿಕ, ಮಾನಸಿಕ ಆರೋಗ್ಯ ಕಾಯುವ ಕಾಯಕಕ್ಕೆ ತಮ್ಮನ್ನು ತಾವು ಅರ್ಪಿಸಿಕೊಂಡ ತ್ಯಾಗದ ಚಿತ್ರ ನನ್ನೊಳಗೆ ಗಾಢವಾಗಿ ಉಳಿದುಬಿಟ್ಟಿದೆ. ಆದರೆ ಅಂಬೇಡ್ಕರ್ ತೀರಿಕೊಂಡ ನಂತರ ಸವಿತಾರ ಮೇಲೆ ಎರಗಿದ ಪೂರ್ವಾಗ್ರಹಗಳು ಹಾಗೂ ಆಪಾದನೆ ಗಳಿಂದಾಗಿ ಅವರ ಮೇಲೆ ಹೇರಲ್ಪಟ್ಟ ದಶಕಗಳ ಅಜ್ಞಾತವಾಸದ ಪಾಡು ಕಂಡು ಅಪಾರ
ದುಗುಡ ಮುತ್ತುತ್ತದೆ.
ಸವಿತಾರ ಅಜ್ಞಾತವಾಸದ ಹಿನ್ನೆಲೆ ಇದು: 1956ರ ಡಿಸೆಂಬರ್ 6ರ ಬೆಳಗ್ಗೆ ಸವಿತಾ ಎಂದಿನಂತೆ ಚಹಾದ ಟ್ರೇ ಹಿಡಿದು ಅಂಬೇಡ್ಕರ್ ಅವರ ರೀಡಿಂಗ್ ರೂಮಿಗೆ ಬಂದರು. ಅಷ್ಟೊತ್ತಿಗೆ ಅಂಬೇಡ್ಕರ್ ಕೊನೆಯ ಉಸಿರೆಳೆದಿದ್ದರು. ನಂತರದ ದಿನಗಳಲ್ಲಿ ಸವಿತಾ ಅಪಾರ ಅವಮಾನಕ್ಕೊಳಗಾದರು; ಅನುಮಾನಕ್ಕೊಳಗಾದರು. ದಶಕಗಳ ಕಾಲ ಎಣೆಯಿಲ್ಲದಷ್ಟು ನೋವನ್ನನುಭವಿಸಿದರು. ಅಜ್ಞಾತರಾಗಿ ಹೇಗೋ ಬದುಕಿದರು.
ಸವಿತಾ ಬಗೆಗಿನ ಕೆಲವರ ಪೂರ್ವಾಗ್ರಹ ಎಲ್ಲಿಯವರೆಗೆ ಹೋಗಿತ್ತೆಂದರೆ, ಅಂಬೇಡ್ಕರ್ ಅವರ ‘ಬುದ್ಧ ಆಂಡ್ ಹಿಸ್ ದಮ್ಮ’ ಪುಸ್ತಕದ ಮುನ್ನುಡಿಯಲ್ಲಿ ಸವಿತಾ ಬಗ್ಗೆ ಕೃತಜ್ಞತೆಯಿತ್ತು ಎಂಬ ಕಾರಣಕ್ಕಾಗಿ ಆ ಮುನ್ನುಡಿಯೇ ಬಹುಕಾಲ ಮಾಯವಾಯಿತು. 1956ರ ಡಿಸೆಂಬರ್ 5-6ರ ನಡುವಣ ರಾತ್ರಿ ತಿದ್ದಿರಬಹುದಾದ ಈ ಮುನ್ನುಡಿಯ ಕೊನೆಗೆ ಅಂಬೇಡ್ಕರ್ ಬರೆಯುತ್ತಾರೆ: ‘ಬುದ್ಧ ಆಂಡ್ ಹಿಸ್ ದಮ್ಮ’ ಪುಸ್ತಕ ಬರೆಯಲು ಶುರು ಮಾಡಿದ ಕಾಲಕ್ಕೆ ನನ್ನ ಆರೋಗ್ಯ ಕೆಡತೊಡಗಿತ್ತು; ಸ್ಥಿತಿ ಈಗಲೂ ಹಾಗೇ ಇದೆ. ಕಳೆದ ಐದು ವರ್ಷಗಳಲ್ಲಿ ನನ್ನ ಆರೋಗ್ಯ ಹಲವು ಏರಿಳಿತಗಳನ್ನು ಕಂಡಿದೆ. ಎಷ್ಟೋ ಸಲ ನನ್ನ ಆರೋಗ್ಯ ಎಷ್ಟು ಹದಗೆಟ್ಟಿತೆಂದರೆ, ವೈದ್ಯರು ನನ್ನನ್ನು ‘ನಂದಿಹೋಗುತ್ತಿರುವ ಜ್ವಾಲೆ’ ಎಂದಿದ್ದೂ ಇದೆ.
ಆದರೆ ಈ ನಂದಿಹೋಗುತ್ತಿರುವ ಜ್ವಾಲೆಗೆ ಮತ್ತೆ ಜೀವ ತುಂಬಿದ್ದು ನನ್ನ ಪತ್ನಿ ಮತ್ತು ಡಾ. ಮಲ್ವಂಕರ್ ಅವರ ವೈದ್ಯಕೀಯ ಕೌಶಲ್ಯ. ಈ ಪುಸ್ತಕವನ್ನು ಮುಗಿಸಲು ನೆರವಾದವರು ಅವರಿಬ್ಬರೇ.’
ಸವಿತಾ ಸುತ್ತ ಕೆಲವರು ಹಬ್ಬಿಸಿದ ಕೆಟ್ಟ ಪೂರ್ವಾಗ್ರಹ ಈ ಮುನ್ನುಡಿಯ ಸಾಲುಗಳನ್ನೇ ಕಣ್ಮರೆಯಾಗಿಸಿತ್ತು. ಒಂದೇ ಸಮಾಧಾನವೆಂದರೆ, ಅಂಬೇಡ್ಕರ್ ತೀರಿಕೊಂಡ ಎರಡು ಮೂರು ದಶಕಗಳ ನಂತರವಾದರೂ ಆವರೆಗೆ ಸವಿತಾರನ್ನು ಮೂದಲಿಸಿ ಅವಮಾನಿಸಿದ್ದ ಸಮುದಾಯದ ಮತ್ತೊಂದು ತಲೆಮಾರು ಅವರನ್ನು ಆದರಿಸತೊಡಗಿತು. ಸವಿತಾರ ಆತ್ಮಚರಿತ್ರೆಯನ್ನು ನಿರೂಪಿಸಲು ವಿಜಯರಾವ್ ಸುರ್ವಾಡೆ ಮುಂದಾದರು. ಅಂಬೇಡ್ಕರ್ ಅನುಯಾಯಿಗಳು ಅವರನ್ನು ‘ಮಾಯಿ ಸಾಹೇಬ್’ ಎಂದು ಗೌರವಿಸತೊಡಗಿದರು. ಈ ಬದಲಾವಣೆ ಕಂಡಾಗ ಮನುಷ್ಯರ ಸುತ್ತ ಹಬ್ಬುವ ದುರುಳ ಪೂರ್ವಾಗ್ರಹಗಳು ಕೂಡ ಒಂದಲ್ಲ ಒಂದು ದಿನ ಚದುರಬಲ್ಲವು ಎಂಬ ಭರವಸೆ ಮೂಡುತ್ತದೆ.
1990ರಲ್ಲಿ ವಿ.ಪಿ. ಸಿಂಗ್ ಪ್ರಧಾನಿಯಾಗಿದ್ದ ಯನೈಟೆಡ್ ಫ್ರಂಟ್ ಕೇಂದ್ರ ಸರಕಾರ ಅಂಬೇಡ್ಕರ್ ಅವರಿಗೆ ಭಾರತರತ್ನ ಪ್ರಶಸ್ತಿ ಘೋಷಿಸಿತು; ಅಂಬೇಡ್ಕರ್ ಪರವಾಗಿ ಸವಿತಾ ಭಾರತರತ್ನ ಪ್ರಶಸ್ತಿಯನ್ನು ಸ್ವೀಕರಿಸಿದರು. 1995ರಲ್ಲಿ ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾನಿಲಯ ಬಾಬಾಸಾಹೇಬರ ಪುತ್ಥಳಿಯನ್ನು ಸ್ಥಾಪಿಸಿದಾಗ, ಮಾಯಿಸಾಹೇಬ್ ಪುತ್ಥಳಿಯನ್ನು ಅನಾವರಣಗೊಳಿಸಿದರು.
29 ಮೇ 2003ರಂದು, ತೊಂಭತ್ತನಾಲ್ಕನೆಯ ವಯಸ್ಸಿನಲ್ಲಿ ಸವಿತಾ ಮುಂಬೈನಲ್ಲಿ ತೀರಿಕೊಂಡರು. ಅಂಬೇಡ್ಕರ್ ಸವಿತಾಗೆ ಬರೆದ ಪತ್ರಗಳು, ಅಂಬೇಡ್ಕರರಿಗೆ ಸವಿತಾ ಬರೆದ ಪತ್ರಗಳು ಇಂಡಿಯಾದ ಅಪೂರ್ವ ಸಂಬಂಧವೊಂದರ ಅಪೂರ್ವ ದಾಖಲೆಗಳಾಗಿವೆ. ಈ ಅನನ್ಯ ಆತ್ಮಸಂಗಾತ ಎಲ್ಲ ಓದುಗಿಯರ, ಓದುಗರ ಆತ್ಮಗಳೂ ಬೆಳಗಬಲ್ಲದು.
natarajhuliyar.com