ಸತ್ಯ ಘಟನೆಗಳನ್ನು ಆಧರಿಸಿ ಸಿನೆಮಾ ಮಾಡುವುದು ತಪ್ಪೇ?

ಮೋಹನ್ ಲಾಲ್ ಅಭಿನಯದ ‘ಎಂಪುರಾನ್’ ಮತ್ತು ‘ದಿ ಕೇರಳ ಸ್ಟೋರಿ’ ಎರಡೂ ಬೇರೆ ಬೇರೆ ರೀತಿಯ ಸಿನೆಮಾಗಳು.
ಕೇರಳ ಸ್ಟೋರಿ ಪಕ್ಕಾ ಪ್ರೊಪಗಂಡಾ ಸಿನೆಮಾ ಆಗಿತ್ತು. ಕೇರಳದ ವಿರುದ್ಧ ಅಪಪ್ರಚಾರ ಮಾಡುವ ರಾಜಕೀಯ ಉದ್ದೇಶ ಅದಕ್ಕಿತ್ತು. ಆದರೆ ಎಂಪುರಾನ್ ಆ್ಯಕ್ಷನ್ ಸಿನೆಮಾ.
ಕೇರಳ ಸ್ಟೋರಿ, ಸಾಬರಮತಿ ರಿಪೋರ್ಟ್ ಅಂಥ ಪ್ರೊಪಗಂಡಾ ಸಿನೆಮಾಗಳು ಸ್ವತಃ ಸರಕಾರದಿಂದಲೇ ಸಿಕ್ಕಾಪಟ್ಟೆ ಬೆಂಬಲ ಪಡೆದವು.
ಅವುಗಳ ಪ್ರಚಾರಕ್ಕೆ ಮೋದಿ ಸರಕಾರವೇ ನಿಂತಿತ್ತು.
ಅವುಗಳಲ್ಲಿನ ಬಲಪಂಥೀಯ ನಿಲುವನ್ನು ಬೆಂಬಲಿಸುವುದಕ್ಕೆ ಮಡಿಲ ಮೀಡಿಯಾ ಕೂಡ ಜೊತೆಯಾಗಿತ್ತು.
ಎಂಪುರಾನ್ ವಿರುದ್ಧ ದೊಡ್ಡ ಗದ್ದಲವಾದದ್ದು ಅದರಲ್ಲಿನ ಬಾಬಾ ಬಜರಂಗಿ ಪಾತ್ರದ ವಿಚಾರವಾಗಿ. ಆ ಪಾತ್ರ ಗುಜರಾತಿನ ಮಾಜಿ ಬಜರಂಗ ದಳ ನಾಯಕ ಬಾಬು ಬಜರಂಗಿಯನ್ನು ಹೋಲುತ್ತದೆ ಎನ್ನಲಾಯಿತು.
97 ಮುಸ್ಲಿಮರ ಹತ್ಯೆಗೆ ಕಾರಣವಾಗಿದ್ದ ನರೋಡಾ ಪಾಟಿಯಾ ಹತ್ಯಾಕಾಂಡದಲ್ಲಿ ಬಾಬು ಬಜರಂಗಿ ಶಿಕ್ಷೆಗೆ ಒಳಗಾಗಿದ್ದ.
ಎಂಪುರಾನ್ ಬಗೆಗಿನ ಆಕ್ರೋಶಕ್ಕೆ ಕಾರಣವೆನ್ನಲಾಗುವ ಮತ್ತೊಂದು ಅಂಶ ಅದು 2002ರ ಗುಜರಾತ್ ಹತ್ಯಾಕಾಂಡವನ್ನು ಹೋಲುವ ಸನ್ನಿವೇಶಗಳನ್ನು ಹೊಂದಿದೆ ಎಂಬುದು.
ಬಿಜೆಪಿ ಪಾಲಿಗೆ ಗುಜರಾತ್ ಹತ್ಯಾಕಾಂಡದ ಬಗ್ಗೆ ಮಾತಾಡುವುದೆಂದರೆ ಆಗದು. ಯಾಕೆಂದರೆ ಆ ಘಟನೆಯಿಂದಾಗಿ ಬಿಜೆಪಿಗೆ ಮೆತ್ತಿರುವ ಕಳಂಕ ದೊಡ್ಡದು.
ಈಗಿನ ಪ್ರಧಾನಿ ಮೋದಿಯವರೇ ಆಗ ಗುಜರಾತ್ ಸಿಎಂ ಆಗಿದ್ದರು. ಮುಸ್ಲಿಮ್ ವಿರೋಧಿ ಗಲಭೆಗೆ ಮೋದಿಯೇ ಅವಕಾಶ ಮಾಡಿಕೊಟ್ಟರು ಎಂಬ ಗಂಭೀರ ಆರೋಪಗಳು ಇವೆ. ಹಾಗಾಗಿಯೇ ಗುಜರಾತ್ ಗಲಭೆಯ ವಿಚಾರ ಎತ್ತುವುದೆಂದರೆ ಬಿಜೆಪಿಗೆ ಆಗುವುದಿಲ್ಲ. ಅದರ ಕುರಿತ ಎಲ್ಲ ಚರ್ಚೆಗಳನ್ನೂ ಅದು ಹತ್ತಿಕ್ಕಲು ನೋಡುತ್ತದೆ.
ಬಿಬಿಸಿಯ ಸಾಕ್ಷ್ಯಚಿತ್ರವನ್ನು ಕೂಡ ಅದು ಬ್ಲಾಕ್ ಮಾಡಿತ್ತು ಎಂಬುದನ್ನು ನೆನಪಿಸಿಕೊಳ್ಳಬಹುದು. ಹಾಗೆಯೇ ರಾಜಕೀಯ ವಿರೋಧಿ ನಿರೂಪಣೆಗಳನ್ನು ತಡೆಯುವ ಯತ್ನಗಳನ್ನು ಅದು ಮಾಡುತ್ತಲೇ ಬಂದಿದೆ.
ಆಗ ಗುಜರಾತ್ ಪೊಲೀಸರ ಸಭೆಯಲ್ಲಿ ಸಿಎಂ ಮೋದಿ ಗಲಭೆಕೋರರಿಗೆ ಪೂರ್ಣ ಸ್ವಾತಂತ್ರ್ಯ ಕೊಡಿ ಎಂದಿದ್ದರು ಎಂದು ಗಂಭೀರ ಆರೋಪ ಮಾಡಿದ್ದ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ವರ್ಷಗಳಿಂದ ಜೈಲಿನಲ್ಲಿ ಕೊಳೆಯುತ್ತಿದ್ದಾರೆ.
ಈ ವಿಚಾರದಲ್ಲಿ ಸಿನೆಮಾ ನಿರ್ಮಾಪಕರ ಮೇಲೆಯೂ ಅದು ನಿಯಂತ್ರಣ ಸಾಧಿಸಿದೆ.
ಯಾಕೆ ಹೀಗೆ ಎಂಬುದು ಸ್ಪಷ್ಟ.
ಟೀಕಿಸುವವರನ್ನು ಕಂಡರೆ ಬಿಜೆಪಿಗೆ, ಸಂಘ ಪರಿವಾರಕ್ಕೆ ಆಗುವುದಿಲ್ಲ. ಇಂಥ ಸನ್ನಿವೇಶದಲ್ಲಿ, ಟೀಕಿಸುವುದು ಪ್ರಜಾತಂತ್ರದ ಆತ್ಮ ಎಂಬ ಮಾತು ಬಿಜೆಪಿಯ ‘ದೊಡ್ಡವರ’ ಬಾಯಿಂದ ಬರುವುದು ಮತ್ತೊಂದು ದೊಡ್ಡ ವ್ಯಂಗ್ಯ.
ಎಂಪುರಾನ್ ಬಂದಾಗಲೂ ಇದೇ ಆಯಿತು.
ಸಿನೆಮಾವನ್ನು ಬಹಿಷ್ಕರಿಸುವ ಬೆದರಿಕೆಗಳು ಸಾಮಾಜಿಕ ಮಾಧ್ಯಮದಲ್ಲಿ ದೊಡ್ಡ ಪ್ರಮಾಣದಲ್ಲಿ ಬಂದವು. ಮೋಹನ್ ಲಾಲ್ ಅಭಿಮಾನಿಗಳೇ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸತೊಡಗಿದರು. ಮತ್ತೆಂದೂ ಅವರ ಸಿನೆಮಾ ನೋಡುವುದಿಲ್ಲ ಎನ್ನತೊಡಗಿದರು.
ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್ ವಿರುದ್ಧವೂ ಆಕ್ರೋಶ ವ್ಯಕ್ತವಾಯಿತು. ನಿರ್ಮಾಪಕಿಯಾಗಿರುವ ಪೃಥ್ವಿರಾಜ್ ಅವರ ಪತ್ನಿ ಸುಪ್ರಿಯಾ ಮೆನನ್ ಅವರನ್ನು ಅರ್ಬನ್ ನಕ್ಸಲ್ ಎಂದು ಕರೆಯುವವರೆಗೂ ಕೇರಳದ ಬಿಜೆಪಿ ನಾಯಕರು ಹೋದರು.
ಈಗ ಸಿನೆಮಾದ ನಿರ್ಮಾಪಕ ಹಾಗೂ ನಿರ್ದೇಶಕರಿಗೆ ಐಟಿ ಇಲಾಖೆಯಿಂದ ನೋಟಿಸ್ ಹೋಗಿದೆ.
ಎಂಪುರಾನ್ ಇಂಥದೊಂದು ವಿವಾದಕ್ಕೆ ತುತ್ತಾದೀತು ಎಂದು ಅದರ ತಂಡ ಅಂದುಕೊಂಡೇ ಇರಲಿಲ್ಲ.
ಮೋಹನ್ ಲಾಲ್ ರಾಜಕೀಯ ಸಿದ್ಧಾಂತಗಳನ್ನು ಸಿನೆಮಾದಲ್ಲಿ ಸೂಚಿಸುವುದನ್ನು ಅತ್ಯಂತ ಎಚ್ಚರಿಕೆಯಿಂದ ತಪ್ಪಿಸುತ್ತಲೇ ಬಂದವರು. ಅವರು ಚುನಾವಣೆಗಳ ಹೊತ್ತಲ್ಲಿ ಕೂಡ ಯಾವುದೇ ಪಕ್ಷದ ಪರವಾಗಿ ನಿಂತವರಲ್ಲ. ಹಾಗೆ ನೋಡಿದರೆ ಅವರು ಮೋದಿ ನಿಲುವುಗಳನ್ನು ಬೆಂಬಲಿಸುತ್ತಲೇ ಬಂದವರು
ಮೋದಿ ನೋಟ್‌ಬ್ಯಾನ್ ಮಾಡಿದಾಗ ಮೋಹನ್ ಲಾಲ್ ಅದರ ಪರವಾಗಿದ್ದರು. ಕೋವಿಡ್ ಸಮಯದಲ್ಲಿ ಮೋದಿ ಹಣತೆ ಹಚ್ಚಲು ಹೇಳಿದಾಗಲೂ ಅದನ್ನು ಬೆಂಬಲಿಸುವಂತೆ ತನ್ನ ಅಭಿಮಾನಿಗಳನ್ನು ಅವರು ಕೇಳಿಕೊಂಡಿದ್ದರು. ಕೆಲವು ಬಿಜೆಪಿ ಮಂದಿಯೊಂದಿಗೆ ಅವರು ಒಳ್ಳೆಯ ಬಾಂಧವ್ಯವನ್ನೇ ಹೊಂದಿದ್ದಾರೆ. ಮೋಹನ್ ಲಾಲ್ ಅವರನ್ನು ಪಕ್ಷ ಸೇರುವಂತೆ ಬಿಜೆಪಿ ಆಹ್ವಾನಿಸಿದ ಬಗ್ಗೆಯೂ ಸುದ್ದಿಗಳಿದ್ದವು. ಆದರೆ ಮೋಹನ್ ಲಾಲ್ ಆ ವಿಚಾರವಾಗಿ ತಮ್ಮ ನಿಲುವನ್ನು ಯಾವತ್ತೂ ಹೇಳಿಕೊಂಡಿರಲಿಲ್ಲ.
ಹೀಗಿದ್ದಾಗಲೇ ಎಂಪುರಾನ್ ವಿಚಾರವಾಗಿ ಮೋಹನ್ ಲಾಲ್ ವಿರುದ್ಧ ಆಕ್ರೋಶ ವ್ಯಕ್ತವಾಯಿತು.
ಗಮನಿಸಬೇಕಾದ ಸಂಗತಿಯೆಂದರೆ ಮೋಹನ್ ಲಾಲ್ ಎಂದೂ ತಮ್ಮ ರಾಜಕೀಯ ನಿಲುವನ್ನು ಬಹಿರಂಗವಾಗಿ ವ್ಯಕ್ತಪಡಿಸುವ ಧೈರ್ಯ ತೋರಿಸಿದವರಲ್ಲ.
ಮಲಯಾಳಂ ಚಿತ್ರರಂಗದಲ್ಲಿನ ಲೈಂಗಿಕ ಕಿರುಕುಳ ವಿಚಾರ ಅಷ್ಟೊಂದು ಗದ್ದಲ ಎಬ್ಬಿಸಿದಾಗಲೂ ಮೋಹನ್ ಲಾಲ್ ಅದರ ಬಗ್ಗೆ ಗಟ್ಟಿ ದನಿಯಲ್ಲಿ ಮಾತಾಡಲಿಲ್ಲ.
ಬದಲಾಗಿ, ಹೇಮಾ ಸಮಿತಿ ವರದಿ ಅಂಥದೊಂದು ದೊಡ್ಡ ಆರೋಪವನ್ನು ಮಾಡಿದಾಗ, ಇಂಥವುಗಳ ಮೂಲಕ ಮಲಯಾಳಂ ಚಿತ್ರರಂಗದ ಹೆಸರು ಕೆಡಿಸದಂತೆ ಕೇಳಿಕೊಂಡಿದ್ದರು.
ಆರೋಪಿಯಾಗಿದ್ದ ದಿಲೀಪ್ ಪರವಾಗಿ ಅವರ ಮಾತುಗಳಿದ್ದವು. ಈ ಇಡೀ ವಿವಾದದ ಬಗೆಗಿನ ಅವರ ಮೌನ ತೀವ್ರ ಟೀಕೆಗೆ ಗುರಿಯಾಗಿತ್ತು.
ಎಂಪುರಾನ್ ವಿರುದ್ಧ ಬಲಪಂಥೀಯರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಅವರು ಕ್ಷಮೆ ಕೇಳಿದ್ದರು. ಅಭಿಮಾನಿಗಳಿಗೆ ಉಂಟಾದ ನೋವಿಗೆ ವಿಷಾದಿಸುತ್ತೇನೆ ಎಂದು ಮೋಹನ್ ಲಾಲ್ ಹೇಳಿದ್ದರು.
ಆದರೆ, ಮೋಹನ್ ಲಾಲ್ ಕ್ಷಮೆ ಯಾಚಿಸಿದ್ದಕ್ಕೆ ಮತ್ತು ಸಿನೆಮಾದ ಹಲವು ಭಾಗಗಳನ್ನು ಕತ್ತರಿಸುವ ಬಗ್ಗೆ ಒಪ್ಪಿದ್ದಕ್ಕೆ ಸ್ವತಃ ಕೇರಳ ಸಿಎಂ ಪಿಣರಾಯಿ ವಿಜಯನ್ ಬೇಸರ ವ್ಯಕ್ತಪಡಿಸಿದ್ದರು. ಅವರು ಬಹಿರಂಗವಾಗಿಯೇ ಸಿನೆಮಾಕ್ಕೆ ಬೆಂಬಲ ವ್ಯಕ್ತಪಡಿಸಿದ್ದರು. ಸಂಘ ಪರಿವಾರ ಭಯದ ವಾತಾವರಣ ಸೃಷ್ಟಿಸುತ್ತಿದೆ ಎಂದು ಅವರು ಆರೋಪಿಸಿದ್ದರು.
ವಿಶೇಷ ಅಂದರೆ ಎಂಪುರಾನ್ ಸಿನೆಮಾದಲ್ಲಿ ಕೇರಳದ ಎಡಪಕ್ಷಗಳನ್ನು ವ್ಯಂಗ್ಯ ಮಾಡಲಾಗಿದೆ. ಕೇರಳದ ಎಡರಂಗದಂತೆ ತೋರಿಸಲಾದ ಪಕ್ಷದ ನಾಯಕನೇ ಆಡಳಿತ ಪಕ್ಷದ ನಾಯಕನ ಜೊತೆ ಸೀಕ್ರೆಟ್ ಮೀಟಿಂಗ್ ಮಾಡುತ್ತಾರೆ ಎಂಬಂತೆ ಚಿತ್ರಿಸಲಾಗಿದೆ. ಆದರೂ ಎಡರಂಗ ಹಾಗೂ ಕೇರಳ ಸಿಎಂ ಪಿಣರಾಯಿ ಆ ಬಗ್ಗೆ ಏನನ್ನೂ ಹೇಳಲಿಲ್ಲ.
ಪ್ರತಿಭಟನೆಯ ಬಳಿಕ ಚಿತ್ರತಂಡ 24 ಕಡೆ ಕತ್ತರಿ ಹಾಕಲು ನಿರ್ಧರಿಸಿತು.
ಅಂಥ ಕೆಲವೆಂದರೆ,
1. ಹಿಂದೂ ಮಂದಿರಗಳ ಎದುರು ವಾಹನಗಳು ಹಾದುಹೋಗುವ ದೃಶ್ಯ.
2. 2002, ಭಾರತ ಎಂದು ಅವಧಿ ಮತ್ತು ಸ್ಥಳವನ್ನು ಗುರುತಿಸಲು ಮಾಡಿದ್ದ ಉಲ್ಲೇಖವನ್ನು ಕೆಲ ವರ್ಷಗಳ ಹಿಂದೆ ಎಂದು ಬದಲಿಸಲಾಯಿತು.
3. ಪಾತ್ರಗಳು ದುವಾ ಹೇಳುವ ಭಾಗವನ್ನು ಕತ್ತರಿಸಲಾಯಿತು.
4. ಸಂಘ ಪರಿವಾರದ ರಾಜಕೀಯ ಮತ್ತು ಎನ್‌ಐಎ ಭಾಗಕ್ಕೆ ಕತ್ತರಿ ಬಿತ್ತು.
5. ಎದುರಾಳಿಯ ಹೆಸರು ತೆಗೆಯಲಾಯಿತು.
ಯಾವುದೇ ರಾಜಕೀಯ ಪಕ್ಷ ಅಧಿಕೃತವಾಗಿ ಕೇಳದಿದ್ದರೂ ಇವೆಲ್ಲ ಭಾಗಗಳನ್ನು ಕತ್ತರಿಸಲಾಯಿತು.
ಎಂಪುರಾನ್‌ಗೆ ವ್ಯಕ್ತವಾದಷ್ಟು ದೊಡ್ಡ ಮಟ್ಟದ ವಿರೋಧ ಈಚೆಗೆ ಬೇರೆ ಸಿನೆಮಾಗಳ ಬಗ್ಗೆ ಇರಲಿಲ್ಲ.
‘ಪದ್ಮಾವತ್’ ಕೂಡ ಇದೇ ಥರದ ವಿರೋಧಕ್ಕೆ ತುತ್ತಾಗಿತ್ತು. ಇತಿಹಾಸಕ್ಕೆ ಅಪಚಾರ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು. ದೇಶದ ವಿವಿಧೆಡೆ ಚಿತ್ರದ ವಿರುದ್ಧ ಪ್ರತಿಭಟನೆಗಳು ನಡೆದಿದ್ದವು. ದೀಪಿಕಾ ಪಡುಕೋಣೆ ಮತ್ತು ನಿರ್ದೇಶಕರ ತಲೆಗೆ ಬಹುಮಾನ ಘೋಷಿಸುವ ಮಟ್ಟಕ್ಕೂ ಹೋಯಿತು. ಗುಜರಾತ್ ಸರಕಾರಗಳಿರುವ ರಾಜ್ಯಗಳು ಆ ಸಿನೆಮಾವನ್ನೇ ಬ್ಯಾನ್ ಮಾಡಿದವು.
ವಿಜಯ್ ದಳಪತಿ ಸಿನೆಮಾ ‘ಮಿರ್ಸಲ್’ ವಿರುದ್ಧವೂ ಬಿಜೆಪಿ ಆಕ್ರೋಶ ವ್ಯಕ್ತವಾಗಿತ್ತು. ಅದು ನೋಟ್ ಬ್ಯಾನ್ ವಿರುದ್ಧ ಮತ್ತು ಜಿಎಸ್‌ಟಿ ವಿರುದ್ಧ ಮಾತಾಡಿತ್ತೆಂಬುದು ಇದಕ್ಕೆ ಕಾರಣವಾಗಿತ್ತು. ಆಗ ತಮಿಳುನಾಡಿನಲ್ಲಿ ರಾಜಕಾರಣಿಗಳೂ ಸೇರಿ ಎಲ್ಲರೂ ಚಿತ್ರದ ಪರವಾಗಿ ನಿಂತಿದ್ದರು. ಅದು ಭಾರೀ ಯಶಸ್ಸನ್ನೂ ಗಳಿಸಿತು.
ಆದರೆ ಎಂಪುರಾನ್ ಪ್ರತಿಭಟನೆ ಎದುರಿಸುತ್ತಲೇ ಚಿತ್ರತಂಡವೇ ಸ್ವಯಂ ಪ್ರೇರಿತವಾಗಿ 24 ಕಡೆ ಕತ್ತರಿ ಹಾಕಿತು.
ಈ ವಿದ್ಯಮಾನ ಮಲಯಾಳಂ ಚಿತ್ರೋದ್ಯಮದ ಸ್ವಂತಿಕೆ ಮೇಲಿನ ಆಕ್ರಮಣದ ಬಗ್ಗೆ ಆತಂಕ ಹುಟ್ಟಿಸುತ್ತದೆ.
ಮೋಹನ್ ಲಾಲ್ ಥರದ ಸೂಪರ್ ಸ್ಟಾರ್‌ಗಳ ಚಿತ್ರಕ್ಕೇ ಈ ಗತಿಯಾದರೆ, ಇನ್ನು ಉಳಿದವರ ಚಿತ್ರಗಳ ಗತಿಯೇನಾಗ ಬಹುದು? ಚಿತ್ರದಲ್ಲಿ ಯಾವ ಕಥೆ ಇರಬೇಕು, ಯಾವುದು ಇರಬಾರದು ಎಂದು ಬಲಪಂಥೀಯರು ನಿರ್ಧರಿಸುವ ಕಾಲ ಬಂದುಬಿಟ್ಟಿತೆ? ಹಾಗಾದರೆ ಮಲಯಾಳಂನಂಥ ಭರವಸೆಯ ಚಿತ್ರಂಗದ ಭವಿಷ್ಯವೇನು ಎಂಬ ಪ್ರಶ್ನೆ ಕಾಡುತ್ತದೆ.
ಕಾಶ್ಮೀರ ಫೈಲ್ಸ್, ಕೇರಳ ಸ್ಟೋರಿ ಯಂತಹ ಹಸಿ ಹಸಿ ಸುಳ್ಳುಗಳಿರುವ, ಸತ್ಯವನ್ನು ತಿರುಚಿರುವ, ಸಂಘ ಪರಿವಾರದ ರಾಜಕೀಯಕ್ಕೆ ಬೇಕಾದಂತೆ ಚಿತ್ರಿಸಿರುವ ಸಿನೆಮಾಗಳನ್ನು ಎರ್ರಾಬಿರ್ರಿ ಪ್ರೋತ್ಸಾಹಿಸುವುದು, ಆ ಸಿನೆಮಾಗಳಿಗೆ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ತೆರಿಗೆ ವಿನಾಯಿತಿ ಕೊಡುವುದು, ಅವುಗಳ ನಟರು, ನಿರ್ದೇಶಕರ ಜೊತೆ ಮಡಿಲ ಮೀಡಿಯಾ ಗಳು ದಿನಗಟ್ಟಲೆ ಸರಣಿ ಇಂಟರ್‌ವ್ಯೆ ಮಾಡುವುದು, ಬಿಜೆಪಿಯ ನಾಯಕರು ಆ ಸಿನೆಮಾಗಳನ್ನು ಹೋಗಿ ನೋಡಿ ಅದನ್ನು ಪ್ರಶಂಸಿಸಿ ಟ್ವೀಟ್ ಮಾಡುವುದು, ಸ್ವತಃ ಪ್ರಧಾನಿಯೇ ಇಂತಹ ಸಿನೆಮಾ ಬಹಳ ಚೆನ್ನಾಗಿದೆ ಅಂತ ಭಾಷಣ ಮಾಡುವುದು, ಇನ್ನೊಂದು ಕಡೆ ಎಂಪುರಾನ್‌ನಂತಹ ಸಿನೆಮಾ ಬಂದ ಕೂಡಲೇ ಬಿಜೆಪಿ ಹಾಗೂ ಇಡೀ ಸಂಘ ಪರಿವಾರ ಆ ಸಿನೆಮಾ ತಂಡದ ವಿರುದ್ಧ ಮುಗಿ ಬೀಳುವುದು...
ಇದು ಅತ್ಯಂತ ಕಳವಳಕಾರಿ ಬೆಳವಣಿಗೆಯಾಗಿದೆ.
ಟೀಕೆ ಟಿಪ್ಪಣಿ ಪ್ರಜಾಪ್ರಭುತ್ವದ ಆತ್ಮ ಎಂದು ಪ್ರಧಾನಿ ಮೋದಿಯವರೇ ಅಂತರ್‌ರಾಷ್ಟ್ರೀಯ ವೇದಿಕೆಗಳಲ್ಲಿ ಹೇಳುವುದು, ಇಲ್ಲಿ ಇದ್ದಿದ್ದನ್ನು ಇದ್ದ ಹಾಗೆ ಹೇಳಿದರೆ, ತೋರಿಸಿದರೆ ಅವರಿಗೆ ಇನ್ನಿಲ್ಲದಂತೆ ಕಾಟ ಕೊಡುವುದು ಇದೆಂತಹ ರಾಜಕೀಯ?
2002ರಲ್ಲಿ ಗುಜರಾತ್‌ನಲ್ಲಿ ಹತ್ಯಾಕಾಂಡ ನಡೆದೇ ಇಲ್ಲವೇ? ಸಾವಿರಾರು ಜನರ ಕಗ್ಗೊಲೆ ಆಗಿಲ್ಲವೇ? ಮಹಿಳೆಯರು, ಮಕ್ಕಳು ಎಂದು ನೋಡದೆ ಬರ್ಬರವಾಗಿ ಕೊಲೆ, ಅತ್ಯಾಚಾರಗಳು ನಡೆದಿಲ್ಲವೇ? ಆ ಅಪರಾಧಗಳಲ್ಲಿ ಕೆಲವಕ್ಕಾದರೂ ಬಿಜೆಪಿ ಹಾಗೂ ಸಂಘ ಪರಿವಾರದ ಜನರಿಗೆ ನ್ಯಾಯಾಲಯಗಳಲ್ಲಿ ಶಿಕ್ಷೆ ಆಗಿಲ್ಲವೇ?
ಅದೆಲ್ಲವೂ ನಡೆದಿರುವುದು ಸತ್ಯ ಎಂದಾದರೆ ಅದರ ಬಗ್ಗೆ ಮಾತಾಡುವುದು, ಅದರ ಒಂದು ತೀರಾ ಸಣ್ಣ ಭಾಗವನ್ನು ಚಿತ್ರಿಸುವುದು ಅಪರಾಧ ಹೇಗಾಗುತ್ತದೆ?