‘ದೊಡ್ಡವರ’ ಬೆಂಬಲವಿದ್ದರೆ ನಕಲಿಗಳೂ ಇಲ್ಲಿ ಸುರಕ್ಷಿತರಾಗಿರುತ್ತಾರೆಯೇ?

ಎನ್. ಜಾನ್ ಕ್ಯಾಮ್ ಎಂಬ ಈ ನಕಲಿ ವೈದ್ಯ ಈಗ 7 ಜನರನ್ನು ಕೊಂದ ಆರೋಪ ಎದುರಿಸುತ್ತಿದ್ದಾನೆ. ರಾಜಕೀಯ ಮಾಡುವವರಿಗೆ ಕೀಳರಿಮೆ ಇರುತ್ತದೆ ಎಂದು ಬಹುಶಃ ತಿಳಿದಿದ್ದ ಆತ, ಒಬ್ಬ ಜರ್ಮನ್ ಪ್ರಾಧ್ಯಾಪಕನ ಸೋಗಿನಲ್ಲಿ ತಾನು ರಾಜಕಾರಣಿಗಳನ್ನು ಹೊಗಳುವುದರಿಂದ ಉಪಯೋಗ ಇರುತ್ತದೆ ಎಂದುಕೊಂಡಿದ್ದಿರಬಹುದು. ಹಾಗಾಗಿ ಈ ಎನ್. ಜಾನ್ ಕ್ಯಾಮ್ ಮುಖ್ಯಮಂತ್ರಿ ಆದಿತ್ಯನಾಥ್ ಅವರನ್ನು ಹೊಗಳಿದ್ದ. ಅವರ ಬುಲ್ಡೋಜರ್ ರಾಜಕಾರಣದ ಬಗ್ಗೆ ಹೊಗಳಿ ಮಾತಾಡಿದ್ದ. ಆದಿತ್ಯನಾಥ್ ಫ್ರಾನ್ಸ್‌ನಲ್ಲಿದ್ದರೆ ಅಲ್ಲಿನ ಹಿಂಸಾಚಾರ ನಿಯಂತ್ರಣದಲ್ಲಿರುತ್ತಿತ್ತು ಎಂದೆಲ್ಲ ಹೇಳಿದ್ದ.;

Update: 2025-04-10 14:49 IST
‘ದೊಡ್ಡವರ’ ಬೆಂಬಲವಿದ್ದರೆ ನಕಲಿಗಳೂ ಇಲ್ಲಿ ಸುರಕ್ಷಿತರಾಗಿರುತ್ತಾರೆಯೇ?
  • whatsapp icon

ಆ ನಕಲಿ ವೈದ್ಯನ ಮೇಲೆ 7 ಜನರನ್ನು ಕೊಂದ ಆರೋಪವಿದೆ. ಆ ನಕಲಿ ವೈದ್ಯ ಮಧ್ಯಪ್ರದೇಶದ ದಾಮೋಹ್‌ನಲ್ಲಿ ಕೆಲಸ ಮಾಡುತ್ತಿದ್ದ. ಎಫ್‌ಐಆರ್ ನಂತರ ಪರಾರಿಯಾಗಿದ್ದ ಆತನನ್ನು ಪೊಲೀಸರು ಬಂಧಿಸಿದ್ದಾರೆ.

ಕೊಲೆ ಆರೋಪ ದಾಖಲಾಗುವ ಮೊದಲು, ಈ ನಕಲಿ ವೈದ್ಯ ಮುಖ್ಯಮಂತ್ರಿ ಆದಿತ್ಯನಾಥ್ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೊಂದಿಗೆ ನಕಲಿ ಫೋಟೊಶಾಪ್ ಮಾಡಿದ ಚಿತ್ರಗಳನ್ನು ಪೋಸ್ಟ್ ಮಾಡಿದ್ದ.

ಧರ್ಮ ಮತ್ತು ರಾಷ್ಟ್ರೀಯತೆಯ ಮಾತಾಡುತ್ತ, ಬಲಪಂಥೀಯ ಗುಂಪಿನಲ್ಲಿ ಕಾಣಿಸಿಕೊಳ್ಳುವ ಮೂಲಕ ಕ್ರಿಮಿನಲ್‌ಗಳು ಕೂಡ ಏನನ್ನಾದರೂ ಮಾಡುವುದು ಸುಲಭವಾಗಿದೆಯೇ? ಮೋದಿ, ಯೋಗಿ ಗುಣಗಾನ ಮಾಡಿದರೆ ತಾವು ಸೇಫ್, ತಮ್ಮನ್ನು ಯಾರೂ ಮುಟ್ಟುವುದಿಲ್ಲ ಎಂಬುದು ಇಂಥವರ ಧೈರ್ಯವೆ?

ಈಗ ಮಧ್ಯಪ್ರದೇಶದ ದಾಮೋಹ್‌ನಲ್ಲಿ ಈ ವಿಷಯದ ಬಗ್ಗೆ ತನಿಖೆ ಪ್ರಾರಂಭವಾಗಿದೆ.

ಕ್ರಿಶ್ಚಿಯನ್ ಮಿಷನರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಆ ವ್ಯಕ್ತಿ ಅಸಲಿ ಎಂಬಂತೆ ನಟಿಸಿ ಶಸ್ತ್ರಚಿಕಿತ್ಸೆ ನಡೆಸುತ್ತಿದ್ದ. ಅದರಿಂದಾಗಿ ಏಳು ರೋಗಿಗಳು ಅಲ್ಲಿ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಲಾಗಿದೆ.

ನರೇಂದ್ರ ಯಾದವ್ ಹೃದ್ರೋಗ ತಜ್ಞನಂತೆ ನಟಿಸುವ ಮೂಲಕ ಶಸ್ತ್ರಚಿಕಿತ್ಸೆ ಮಾಡುತ್ತಿದ್ದ ಎಂದು ಸ್ಥಳೀಯ ವಕೀಲ ದೀಪಕ್ ತಿವಾರಿ ಆರೋಪಿಸಿದ್ದಾರೆ. ದೀಪಕ್ ತಿವಾರಿ ಅವರ ದೂರಿನ ನಂತರವೇ ತನಿಖಾ ಸಮಿತಿಯನ್ನು ರಚಿಸಲಾಯಿತು ಮತ್ತು ಪೊಲೀಸರು ಆ ನಕಲಿ ವೈದ್ಯನ ಬೆನ್ನುಬಿದ್ದರು. ಆತ ಬ್ರಿಟನ್‌ನ ವೈದ್ಯರೊಬ್ಬರ ಹೆಸರನ್ನು ಕದ್ದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಆತ ಸರಕಾರಿ ಮಾನ್ಯತೆ ಪಡೆದ ಸಂಸ್ಥೆಯಿಂದ ಬಂದಿದ್ದಾರೆ ಎಂಬ ಆಸ್ಪತ್ರೆಯ ಹೇಳಿಕೆ ಕೂಡ ಪತ್ರಿಕೆಯಲ್ಲಿ ಬಂದಿದೆ. ಆಸ್ಪತ್ರೆ ವಿರುದ್ಧವೂ ದೂರು ದಾಖಲಾಗಿದೆ.

ಆದರೆ ವಿಷಯವೆಂದರೆ, ಇಂಥ ಕ್ರಿಮಿನಲ್‌ಗಳೆಲ್ಲ ಯೋಗಿ ಯೋಗಿ, ಮೋದಿ ಮೋದಿ ಎಂದು ಜಪಿಸುವ ಮೂಲಕವೇ ಬಿಜೆಪಿ ವ್ಯವಸ್ಥೆಯಲ್ಲಿ ಹೇಗೆ ಪ್ರತಿಷ್ಠಿತರು ಎನ್ನಿಸಿಕೊಂಡು ಬಿಡುತ್ತಾರಲ್ಲ ಎಂಬುದು.

ಈ ಆಸ್ಪತ್ರೆ ಪ್ರಧಾನ ಮಂತ್ರಿ ಆಯುಷ್ಮಾನ್ ಯೋಜನೆದ್ದಾಗಿದೆ. ವರದಿಯ ಪ್ರಕಾರ, ರೋಗಿಯೊಬ್ಬರು ಎದೆನೋವು ಕಾಣಿಸಿಕೊಂಡು ಈ ಆಸ್ಪತ್ರೆಗೆ ದಾಖಲಾದಾಗ, ಆಂಜಿಯೋಗ್ರಫಿ ಮಾಡಲಾಗಿದೆ ಎಂದು ಆಸ್ಪತ್ರೆ ಹೇಳಿದೆ. ಅದಕ್ಕೆ ಶುಲ್ಕ ಪಡೆದುಕೊಳ್ಳಲಾಗಿದೆ. ಆದರೆ ಯಾವುದೇ ವರದಿ ನೀಡಲಾಗಿಲ್ಲ.

ಸಂದೇಹ ಬಂದಾಗ, ಆ ಕುಟುಂಬ ರೋಗಿಯನ್ನು ಜಬಲ್ಪುರಕ್ಕೆ ಕರೆದೊಯ್ದಾಗ, ಅಲ್ಲಿ ಶಸ್ತ್ರಚಿಕಿತ್ಸೆಯಿಲ್ಲದೆ ಅವರು ಗುಣಮುಖರಾದರು.

62 ವರ್ಷದ ಮತ್ತೊಬ್ಬ ವ್ಯಕ್ತಿಯನ್ನು ಫೆಬ್ರವರಿಯಲ್ಲಿ ಈ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಹೃದಯ ಶಸ್ತ್ರಚಿಕಿತ್ಸೆ ಆಗಬೇಕೆಂದು ಹೇಳಲಾಯಿತು. ಆದರೆ ಸರ್ಜರಿ ಬಳಿಕ ಆ ವ್ಯಕ್ತಿ ಮೃತಪಟ್ಟರು. ಶಸ್ತ್ರಚಿಕಿತ್ಸೆಗೆ ಮೊದಲು ಮತ್ತು ನಂತರವೂ ವೈದ್ಯರನ್ನು ಭೇಟಿ ಮಾಡಲು ಅವಕಾಶವನ್ನೇ ನೀಡಲಿಲ್ಲ ಎಂದು ಮೃತರ ಕುಟುಂಬ ಆರೋಪಿಸಿದೆ.

ಜಿಲ್ಲಾಡಳಿತ ಹೇಳುವಂತೆ ಡಾಕ್ಟರ್ ಕ್ಯಾಮ್ ಕಳೆದ ಎರಡೂವರೆ ತಿಂಗಳುಗಳಲ್ಲಿ 15 ಶಸ್ತ್ರಚಿಕಿತ್ಸೆಗಳನ್ನು ಮಾಡಿದ್ದಾರೆ. ಅದರಲ್ಲಿ ಏಳು ರೋಗಿಗಳು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಅದರ ಪ್ರಾಥಮಿಕ ತನಿಖೆಯ ವರದಿ ಬಂದಿದೆ.

ಈ ನಕಲಿ ವೈದ್ಯ ಟ್ವಿಟರ್‌ನಲ್ಲಿ ಸಿಕ್ಕಾಪಟ್ಟೆ ಪಾಪ್ಯುಲರ್.ಸೋಷಿಯಲ್ ಮೀಡಿಯಾ ಬಳಸಿಕೊಂಡು ಕೆಲ ವಂಚಕರು ಹೇಗೆ ಪ್ರಸಿದ್ಧರಾಗುತ್ತಾರೆ ಎಂಬುದಕ್ಕೆ ಇವನ ಕೇಸ್ ಒಂದು ಉದಾಹರಣೆ.

ಇಲ್ಲಿ ಆತ ತನ್ನ ಹೆಸರನ್ನು ಪ್ರೊ. ಎನ್. ಜಾನ್ ಕ್ಯಾಮ್ ಎಂದು ಇಟ್ಟುಕೊಂಡಿದ್ದ. ಟ್ವಿಟರ್‌ನಲ್ಲಿ ತನ್ನ ಪರಿಚಯದಲ್ಲಿ ಆತ ಹಿರಿಯ ಇಂಟರ್‌ವೆನ್ಷನಲ್ ಕಾರ್ಡಿಯಾಲಜಿಸ್ಟ್ ಎಂದು ಹೇಳಿಕೊಂಡಿದ್ದ.

ಪ್ರಪಂಚದಾದ್ಯಂತ ಹೃದಯರಕ್ತನಾಳದ ಸಂಸ್ಥೆಗಳ ಸ್ಥಾಪನೆ, ಸಂಶೋಧನೆ ಎಂದೆಲ್ಲ ಪ್ರೊಫೈಲ್‌ನಲ್ಲಿ ವಿವರ ಹಾಕಿದ್ದ.

ಪ್ರೊಫೈಲ್‌ನಲ್ಲಿ ಆತ ತನ್ನ ಸ್ಥಳ ನುರೆಂರ್ಬರ್ಗ್ ಎಂದು ಉಲ್ಲೇಖಿಸಿದ್ದ. ನುರೆಂರ್ಬರ್ಗ್ ಜರ್ಮನಿಯ ಒಂದು ನಗರ.

28,000 ಜನರು ಆ ಖಾತೆಯನ್ನು ಫಾಲೋ ಮಾಡುತ್ತಿದ್ದಾರೆ. ಆತ ಟ್ವಿಟರ್‌ನಲ್ಲಿ ತನ್ನನ್ನು ಜರ್ಮನ್ ಪ್ರಾಧ್ಯಾಪಕ ಎಂದು ಕರೆದುಕೊಂಡಿದ್ದಾನೆ.

ರಾಜಕೀಯ ಮಾಡುವವರಿಗೆ ಕೀಳರಿಮೆ ಇರುತ್ತದೆ ಎಂದು ಬಹುಶಃ ತಿಳಿದಿದ್ದ ಆತ, ಒಬ್ಬ ಜರ್ಮನ್ ಪ್ರಾಧ್ಯಾಪಕನ ಸೋಗಿನಲ್ಲಿ ತಾನು ರಾಜಕಾರಣಿಗಳನ್ನು ಹೊಗಳುವುದರಿಂದ ಉಪಯೋಗ ಇರುತ್ತದೆ ಎಂದುಕೊಂಡಿದ್ದಿರಬಹುದು. ಹಾಗಾಗಿ ಈ ಎನ್. ಜಾನ್ ಕ್ಯಾಮ್ ಮುಖ್ಯಮಂತ್ರಿ ಆದಿತ್ಯನಾಥ್ ಅವರನ್ನು ಹೊಗಳಿದ್ದ. ಅವರ ಬುಲ್ಡೋಜರ್ ರಾಜಕಾರಣದ ಬಗ್ಗೆ ಹೊಗಳಿ ಮಾತಾಡಿದ್ದ. ಆದಿತ್ಯನಾಥ್ ಫ್ರಾನ್ಸ್‌ನಲ್ಲಿದ್ದರೆ ಅಲ್ಲಿನ ಹಿಂಸಾಚಾರ ನಿಯಂತ್ರಣದಲ್ಲಿರುತ್ತಿತ್ತು ಎಂದೆಲ್ಲ ಹೇಳಿದ್ದ.

ಈ ಟ್ವೀಟ್ ಬಗ್ಗೆ, ಆ ಸಮಯದಲ್ಲಿ ಎಬಿಪಿ ಮತ್ತು ಎನ್‌ಡಿಟಿವಿ ಚಾನೆಲ್‌ನ ಪತ್ರಕರ್ತರು ಕೊಂಡಾಡಿದ್ದರು. ಮುಖ್ಯಮಂತ್ರಿಗಳ ಕಚೇರಿ ಕೂಡ ಟ್ವೀಟ್ ಮಾಡುವ ಮೂಲಕ ಧನ್ಯವಾದ ಹೇಳಿತ್ತು.

ಅದು ನಕಲಿ ಎಂದು ಸವಾಲು ಹಾಕಿದ್ದಾಗಲೂ ಅದರ ಬಗ್ಗೆ ಸಿಎಂ ಕಚೇರಿ ಅಷ್ಟಾಗಿ ತಲೆ ಕೆಡಿಸಿಕೊಂಡಿರಲಿಲ್ಲ.

ಅದು ಮೊದಲು ಆ ವ್ಯಕ್ತಿ ಯಾರೆಂದು ಪತ್ತೆ ಮಾಡಬೇಕಿತ್ತು. ಜರ್ಮನಿಯ ಪ್ರೊಫೆಸರ್ ಎಂದು ಯುಪಿ ಸರಕಾರವೇ ನಂಬಿದ್ದ ಈ ಜಾನ್ ಕ್ಯಾಮ್ ಜರ್ಮನಿಯವರಲ್ಲ, ಬದಲಾಗಿ ದಾಮೋಹ್‌ನಲ್ಲಿ ಕೆಲಸ ಮಾಡುತ್ತಿದ್ದವನು ಎಂದು ಈಗ ಗೊತ್ತಾಗಿದೆ.

ಟ್ವಿಟರ್‌ನಲ್ಲಿ ಇದ್ದಂತೆ ಆತನ ಹೆಸರು ಪ್ರೊಫೆಸರ್ ಎನ್. ಜಾನ್ ಕ್ಯಾಮ್ ಅಲ್ಲ, ಮತ್ತವನು ವಿದೇಶಿ ವ್ಯಕ್ತಿಯೂ ಅಲ್ಲ. ವಾಸ್ತವವಾಗಿ ಅವನ ಹೆಸರು ನರೇಂದ್ರ ವಿಕ್ರಮಾದಿತ್ಯ ಯಾದವ್. ಅವನೂ ಇದೇ ಭಕ್ತಪಡೆಯ ಭಾಗವಾಗಿದ್ದ ಮತ್ತು ಟ್ವಿಟರ್‌ನಲ್ಲಿ ದಿನವಿಡೀ ಅಸಂಬದ್ಧ ಮಾತನಾಡುತ್ತಿದ್ದ. ವಿರೋಧ ಪಕ್ಷದ ವಿರುದ್ಧ ವಿಷ ಕಾರುತ್ತಿದ್ದ.

ಬಿಜೆಪಿ ಐಟಿ ಸೆಲ್ ಮೂಲಕವೂ ಅವನಿಗೆ ಸಿಕ್ಕಾಪಟ್ಟೆ ಜನಪ್ರಿಯತೆ ಸಿಕ್ಕಿತ್ತು. ಅವನು ಅವರ ಹೀರೋ ಆಗಿದ್ದ. ಆದಿತ್ಯನಾಥ್ ಕೂಡ ಅವನ ಟ್ವೀಟ್‌ಗೆ ಉತ್ತರಿಸುತ್ತಿದ್ದರು.

ಆದರೆ ಅವನು ಈಗ ಮಾಡಿರುವುದು ಕ್ಷಮಿಸಲಾಗದ ಅಪರಾಧ. ಇಂಗ್ಲೆಂಡ್‌ನ ವೈದ್ಯ ಎಂದು ತನ್ನನ್ನು ತಾನು ಕರೆದುಕೊಂಡಿದ್ದ ಈ ನಕಲಿ ವೈದ್ಯ ಮಧ್ಯಪ್ರದೇಶದ ದಮೋಹ್‌ನಲ್ಲಿ ಅನೇಕ ಜನರಿಗೆ ಹೃದಯ ಶಸ್ತ್ರಚಿಕಿತ್ಸೆ ಮಾಡಿ ಅದರಲ್ಲಿ 7 ಜನರ ಸಾವಿಗೆ ಕಾರಣನಾಗಿದ್ದಾನೆ.

ಅವನ ಪದವಿ ನಕಲಿ ಎಂದು ತಿಳಿದ ನಂತರವೂ, ಅವನಿಗೆ ಅಲ್ಲಿ ವೈದ್ಯಕೀಯ ಪ್ರಮಾಣಪತ್ರವನ್ನು ನೀಡಲಾಯಿತು. ಯಾರು ಪ್ರಾಕ್ಟೀಸ್ ಮಾಡಲು ಅನುಮತಿ ನೀಡಿದರು ಮತ್ತು ಈಗ ಬಿಜೆಪಿಯ ಐಟಿ ಸೆಲ್, ಆದಿತ್ಯನಾಥ್ ಅಂಥವರು ಏನು ಹೇಳುತ್ತಾರೆ?

ಆಲ್ಟ್ ನ್ಯೂಸ್‌ನ ಫ್ಯಾಕ್ಟ್ ಚೆಕರ್ ಮುಹಮ್ಮದ್ ಝುಬೇರ್ ಈ ನಕಲಿಯ ವಂಚನೆಯನ್ನು ಪತ್ತೆಹಚ್ಚಿದ್ದರು.

ವಿಕ್ರಮಾದಿತ್ಯ ಯಾದವ್ ಅವರ ಟ್ವೀಟ್‌ಗಳ ಸಂಪೂರ್ಣ ಪಟ್ಟಿಯನ್ನು ಝುಬೇರ್ ಹಂಚಿಕೊಂಡಿದ್ದಾರೆ. ಅವರು ಆತನ ಹಳೆಯ ಟ್ವೀಟ್‌ಗಳ ಆರ್ಕೈವ್ ಲಿಂಕ್ ಅನ್ನೂ ಹಂಚಿಕೊಂಡಿದ್ದಾರೆ.

ಹಳೆಯ ಟ್ವೀಟ್‌ಗಳು ಆ ವ್ಯಕ್ತಿ ದಲಿತರು ಮತ್ತು ಮುಸ್ಲಿಮರ ವಿರುದ್ಧ ನಿಂದನೀಯ ಭಾಷೆಯನ್ನು ಬಳಸುತ್ತಿದ್ದುದನ್ನು ಬಹಿರಂಗಪಡಿಸಿವೆ.

ಝುಬೇರ್ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಕಚೇರಿಯ ಟ್ವಿಟರ್ ಹ್ಯಾಂಡಲ್‌ಗೆ ಟ್ವೀಟ್ ಮಾಡಿ ತಮ್ಮ ಟ್ವೀಟ್‌ಗಳನ್ನು ಹೇಗೆ ಪ್ರಚಾರ ಮಾಡಬಹುದು ಎಂದು ಎಚ್ಚರಿಸಿದ್ದರು. ಇದು ಜರ್ಮನ್ ವೈದ್ಯರ ಟ್ವಿಟರ್ ಹ್ಯಾಂಡಲ್ ಅಲ್ಲ, ಬದಲಾಗಿ ದೇಸಿ ವ್ಯಕ್ತಿಯ ಟ್ವಿಟರ್ ಹ್ಯಾಂಡಲ್ ಎಂದಿದ್ದರು.

ಝುಬೇರ್ ಅವರ ಪೋಸ್ಟ್‌ನಿಂದಾಗಿ ತನ್ನ ಹೆಸರಿಗೆ ಧಕ್ಕೆಯಾಗಿರುವುದಾಗಿ ಆತ ಝುಬೇರ್ ಅವರಿಗೆ ಕಾನೂನು ನೋಟಿಸ್ ಕಳುಹಿಸಿದ್ದ.

ವಕೀಲ ಸಂಜಯ್ ಹೆಗ್ಡೆ ಟ್ವೀಟ್ ಮಾಡಿ ಇದು ಯಾವ ಕಾನೂನು ಸಂಸ್ಥೆ ಎಂದು ಕೇಳಿದ್ದರು. ಏಕೆಂದರೆ ನೋಟಿಸ್‌ನ ಕೆಳಗೆ ಸಹಿಯ ಸ್ಥಳದಲ್ಲಿ ಜೇಮ್ಸ್ ಸ್ಮಿತ್ ಎಂದು ಬರೆಯಲಾಗಿತ್ತು.

ಅಲ್ಲದೆ, ನೋಟಿಸ್‌ನ ಭಾಷೆಯ ಶೈಲಿ ಮತ್ತು ಭಾರತೀಯ ಕಾನೂನು ಇಂಗ್ಲಿಷ್ ನಡುವೆ ಬಹಳಷ್ಟು ವ್ಯತ್ಯಾಸವಿತ್ತು. ಅದರಲ್ಲಿ ಹಲವು ಭಾಷಿಕ ಮತ್ತು ಕಾಗುಣಿತ ತಪ್ಪುಗಳಿದ್ದವು.

ಝುಬೇರ್ ಎಲ್ಲರ ಮುಂದೆ ಬೇಷರತ್ತಾಗಿ ಕ್ಷಮೆಯಾಚಿಸಬೇಕು ಮತ್ತು 1 ಮಿಲಿಯನ್ ಪೌಂಡ್‌ಗಳ ಪರಿಹಾರವನ್ನು ಕೋರಲಾಗಿದೆ ಎಂದು ಕಾನೂನು ನೋಟಿಸ್‌ನಲ್ಲಿ ಹೇಳಲಾಗಿತ್ತು. ಅದು ಆ ಸಮಯದಲ್ಲಿ 10 ಕೋಟಿ 60 ಲಕ್ಷ ಭಾರತೀಯ ರೂ.ಗಳಿಗಿಂತ ಹೆಚ್ಚು.

ಈಗ ಮುಹಮ್ಮದ್ ಝುಬೇರ್ ಟ್ವೀಟ್ ಮಾಡಿ, ತಾನು 2023ರಲ್ಲಿ ಇದನ್ನು ಬಹಿರಂಗಪಡಿಸಿದಾಗ, ಬಲಪಂಥೀಯ ಗುಂಪಿನಿಂದ ಬಹಳಷ್ಟು ನಿಂದನೆಗಳು ಬಂದಿದ್ದವು ಎಂದಿದ್ದಾರೆ.

ಅವರನ್ನು ಟ್ರೋಲ್ ಮಾಡಲಾಗಿತ್ತು. ನಕಲಿಯ ರಾಷ್ಟ್ರೀಯತಾವಾದಿ ಟ್ವೀಟ್‌ಗಳಿಗೆ ಬಿಜೆಪಿ ಮಂದಿಯೆಲ್ಲ ಮರುಳಾಗಿದ್ದರು.

ಈಗ ಪ್ರೊ. ನರೇಂದ್ರ ಜಾನ್ ಕ್ಯಾಮ್ ಮಧ್ಯಪ್ರದೇಶದ ಆಸ್ಪತ್ರೆಯಲ್ಲಿ ಹೃದಯ ಶಸ್ತ್ರಚಿಕಿತ್ಸೆ ಮಾಡಿದ ನಕಲಿ ವೈದ್ಯ ಮತ್ತು ಆತನಿಂದಾಗಿ ಹಲವರು ಸಾವನ್ನಪ್ಪಿದ್ದಾರೆ ಎಂಬುದು ಬಯಲಾಗಿದೆ.

2023ರಲ್ಲಿ ಆತ ಆದಿತ್ಯನಾಥ್ ಅವರನ್ನು ಹೊಗಳಿದಾಗಲೇ, ಈ ವಂಚನೆಯನ್ನು ಹಿಡಿಯಲು ಅನೇಕ ಫ್ಯಾಕ್ಟ್ ಚೆಕರ್‌ಗಳು ಮುಂದೆ ಬಂದರು. ಬೂಮ್ ಫ್ಯಾಕ್ಟ್‌ನ ಅನ್ಮೋಲ್ ಅಲ್ಫೋನ್ಸೊ ಮತ್ತು ಸುಜೀತ್ ನಿಜವಾದ ವೈದ್ಯ ಎ. ಜಾನ್ ಕಾಮ್ ಅವರನ್ನು ಕಂಡುಹಿಡಿದು ಅವರಿಗೆ ಈಮೇಲ್ ಕಳುಹಿಸಿದರು. ನನ್ನ ಗುರುತನ್ನು ಕದಿಯಲಾಗುತ್ತಿದೆ ಎಂದು ವೈದ್ಯರ ಉತ್ತರ ಬಂತು.

ಬೂಮ್ ಫ್ಯಾಕ್ಟ್ ಜಾನ್ ಕ್ಯಾಮ್ ವೆಬ್‌ಸೈಟ್ ಅನ್ನು ಪರಿಶೀಲಿಸಿದಾಗ, ಅದು ನರೇಂದ್ರ ಯಾದವ್ ಹೆಸರಿನಲ್ಲಿ ಇರುವುದು ಪತ್ತೆಯಾಯಿತು.

ನರೇಂದ್ರ ವಿಕ್ರಮಾದಿತ್ಯ ಯಾದವ್ ಅಲಿಯಾಸ್ ನರೇಂದ್ರ ಜಾನ್ ಕ್ಯಾಮ್ ಯುಕೆಯಲ್ಲಿ ಹೃದ್ರೋಗಶಾಸ್ತ್ರದ ಪ್ರಾಧ್ಯಾಪಕರಾಗಿರುವ ಪ್ರೊಫೆಸರ್ ಜಾನ್ ಕ್ಯಾಮ್ ಅವರ ಗುರುತನ್ನು ಕದ್ದಿದ್ದಾನೆ ಎಂಬುದನ್ನು ಬೂಮ್ ಬರೆಯಿತು.

ಆದಿತ್ಯನಾಥ್ ಬಗ್ಗೆ ಟ್ವೀಟ್ ಮಾಡಿದ ನರೇಂದ್ರ ಯಾದವ್ ಹೇಗೆ ಪ್ರೊಫೆಸರ್ ಎನ್. ಜಾನ್ ಕ್ಯಾಮ್ ಆದ ಎಂಬುದು ಬೂಮ್ ಬರಹದ ಮುಖ್ಯ ಪ್ರಶ್ನೆಯಾಗಿತ್ತು.

ಬೂಮ್ ಫ್ಯಾಕ್ಟ್ ಕಡೆಗೆ ಈ ನಕಲಿಯನ್ನೂ ಸಂಪರ್ಕಿಸಿತು. ಬೂಮ್ ಫ್ಯಾಕ್ಟ್ ನರೇಂದ್ರ ಯಾದವ್ ಅವರ ಸಂಪರ್ಕ ಮಾಹಿತಿಯನ್ನು ಕೇಳಿದಾಗ, ಅವರು ಈಗ ಸಂಪರ್ಕದಲ್ಲಿಲ್ಲ ಮತ್ತು ಇಂಗ್ಲೆಂಡ್‌ನಲ್ಲಿ ಎಲ್ಲೋ ವಾಸಿಸುತ್ತಿರುವುದಾಗಿ ಹೇಳಲಾಯಿತು.

ಈ ಸತ್ಯ ಹೊರಬಂದಾಗ, ಅನೇಕರು ಆತನ ಟ್ವಿಟರ್ ಹ್ಯಾಂಡಲ್ ಅನ್ನು ಹತ್ತಿರದಿಂದ ನೋಡಲಾರಂಭಿಸಿದರು. ಈ ವ್ಯಕ್ತಿಯ ಟ್ವೀಟ್‌ಗಳ ಭಾಷೆ ದ್ವೇಷಪೂರಿತವಾಗಿರುವುದು ಗಮನಕ್ಕೆ ಬಂತು.

ಅವನು ತನ್ನ ದ್ವೇಷವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುತ್ತಾನೆ. ನಂತರವೇ ಅವನು ಇಲ್ಲಿ ಸಿಕ್ಕಿಬೀಳುತ್ತಾನೆ.

ಫ್ರಾನ್ಸ್‌ನಲ್ಲಿ ಮುಸ್ಲಿಮರಿಂದಾಗಿ ಹಿಂಸಾಚಾರ ಸಂಭವಿಸಿದೆ, ಅಲ್ಲಿ ರಶ್ಯದ ವಿರುದ್ಧ ದೊಡ್ಡ ದಂಗೆ ನಡೆಯಲಿದೆ, ಆಫ್ರಿಕನ್ನರು ಮತ್ತು ಮುಸ್ಲಿಮರ ನಡುವೆ ಸಾಮಾನ್ಯವಾಗಿರುವುದು ಕೊಲೆ, ಅತ್ಯಾಚಾರ, ಲೂಟಿ ಮತ್ತು ಅವರು ಇಸ್ಲಾಮ್ ಮತ್ತು ಬಡತನದಿಂದಾಗಿ ಮತ್ತಷ್ಟು ಪ್ರಚೋದನೆಗೆ ಒಳಗಾಗಿದ್ದಾರೆ...ಹೀಗೆಲ್ಲ ಆತ ಬರೆಯುತ್ತಿದ್ದ.

ಆದಿತ್ಯನಾಥ್ ಮತ್ತು ಬುಲ್ಡೋಜರ್‌ನ ಚಿತ್ರವನ್ನು ಹಾಕುತ್ತಿದ್ಧ.

ಮಾರ್ಚ್ 2023ರಲ್ಲಿ ಬ್ರಿಟನ್‌ನ ಎಎಸ್‌ಐಸಿಎಸ್ ಕಾರ್ಡಿಯೋಥೊರಾಸಿಕ್ಸ್ ಸೆಂಟರ್‌ನ ಹೃದ್ರೋಗ ತಜ್ಞ ರೋಹಿನ್ ಫ್ರಾನ್ಸಿಸ್ ಎಂಬ ವೈದ್ಯರು ಈ ವಂಚನೆಯನ್ನು ಬಹಿರಂಗಪಡಿಸಿದರು.

ಅವರು ಈ ವಂಚನೆ ಬಗ್ಗೆ ದೀರ್ಘ ಟ್ವೀಟ್ ಮಾಡಿದ್ದರು.

ಬಿಜೆಪಿ ಅಧಿಕಾರವಿರುವ ರಾಜ್ಯಗಳಲ್ಲಿ ಇಂತಹ ನಕಲಿಗಳದ್ದೇ ಹಾವಳಿ. ಈಗ ಮಧ್ಯ ಪ್ರದೇಶದ ಈ ನಕಲಿ ಯುಪಿಯಲ್ಲಿ ಸಿಕ್ಕಿ ಬಿದ್ದಿದ್ದರೆ ಗುಜರಾತ್‌ನಲ್ಲಿ ಇತ್ತೀಚಿನ ವರ್ಷಗಳಲ್ಲಿ ಎಂತೆಂತಹ ವಂಚನೆಗಳೆಲ್ಲ ಬಯಲಾದವು.

ಅಲ್ಲಿಂದ ಒಬ್ಬ ನಕಲಿ ಐಎಎಸ್ ಅಧಿಕಾರಿ ಇಡೀ ಆಡಳಿತಶಾಹಿಯನ್ನೇ ವಂಚಿಸುತ್ತಾನೆ, ಇನ್ನೊಬ್ಬ ನಕಲಿ ನ್ಯಾಯಾಧೀಶನೇ ಅಲ್ಲಿ ಸಿಗುತ್ತಾನೆ, ಅವನು ಒಂದು ನಕಲಿ ಕೋರ್ಟ್ ಅನ್ನೇ ಗುಜರಾತ್‌ನಲ್ಲಿ ನಡೆಸುತ್ತಿದ್ದ ಎಂದು ಬಯಲಾಗುತ್ತದೆ, ಅದೇ ಗುಜರಾತ್‌ನಲ್ಲಿ ಒಂದು ನಕಲಿ ಟೋಲ್ ಪ್ಲಾಝಾ ಎಷ್ಟೋ ಸಮಯದಿಂದ ಇತ್ತು ಎಂದು ವರದಿಯಾಯಿತು.

ಇನ್ನೊಬ್ಬ ಗುಜರಾತಿ ಮಹಿಳೆ ಷೇರು ಮಾರುಕಟ್ಟೆಯ ಕೋರ್ಸ್ ಹೆಸರಲ್ಲಿ ಕೋಟಿಗಟ್ಟಲೆ ವಂಚನೆ ಮಾಡುತ್ತಾಳೆ. ಇನ್ನೂ ಇಂತಹ ಅದೆಷ್ಟೋ ವಂಚನೆ ಪ್ರಕರಣಗಳು ಗುಜರಾತ್ ಹಾಗೂ ಬೇರೆ ಕಡೆಯಿಂದಲೂ ವರದಿ ಆಗುತ್ತಲೇ ಇವೆ ಕಡೆಗೊಮ್ಮೆ ಅಂಥ ನಕಲಿ ಎನ್. ಜಾನ್ ಕ್ಯಾಮ್‌ಗಳು ಪೊಲೀಸರ ಕೈಗೆ ಸಿಕ್ಕಿಬೀಳುತ್ತಾರೆ.

ಆದಿತ್ಯನಾಥ್ ಫ್ರಾನ್ಸ್ ಅಂಥಲ್ಲಿ ಇರಬೇಕಿತ್ತು ಎಂದಿದ್ದವನು ಈಗ ಸಿಕ್ಕಿಬಿದ್ದಿದ್ದಾನೆ. ಆದಿತ್ಯನಾಥ್ ಮೌನವಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಪಿ.ಎಚ್. ಅರುಣ್

contributor

Similar News