ದಲಿತರ ಏಕತೆ ಮತ್ತು ಅಂಬೇಡ್ಕರ್ ನೀಡಿದ ಎಚ್ಚರಿಕೆ
ಅಂಬೇಡ್ಕರ್ ನೀಡಿರುವ ಎಚ್ಚರಿಕೆಯ ಬೆಳಕಿನಲ್ಲಿ ದಲಿತರು ಹೋರಾಟವನ್ನು ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ದಲಿತರೊಳಗಿನ ಒಗ್ಗಟ್ಟು ಮುರಿಯಲು ಹೊಂಚುಹಾಕುವ ಶಕ್ತಿಗಳೊಂದಿಗೆ ಕೈಜೋಡಿಸಲೇಬಾರದು.;

ಡಿಸೆಂಬರ್ 31, 1937ರಂದು ಮಹಾರಾಷ್ಟ್ರದ ಶೋಲಾಪುರದ ಮಾತಂಗ ಸಮಾವೇಶದಲ್ಲಿ ಬಾಬಾಸಾಹೇಬರು ದಲಿತರೊಳಗಿನ ವಿವಿಧ ಜಾತಿಗಳಿಗೆ ನೀಡಿದ ಎಚ್ಚರಿಕೆಯ ಮಾತುಗಳು ಹಿಂದೆಂದಿಗಿಂತಲೂ ಇಂದಿಗೆ ಹೆಚ್ಚು ಸೂಕ್ತವಾಗಿವೆ. ಆ ಭಾಷಣದ ಅಂತಿಮ ಭಾಗವು ದಲಿತರನ್ನು ಒಡೆದು ಆಳಲು ಹೊಂಚುಹಾಕುತ್ತಿರುವ ಮನುವಾದಿ ಪಟ್ಟಭದ್ರ ಹಿತಾಸಕ್ತಿಗಳ ಹುನ್ನಾರವನ್ನೂ ಹಾಗೂ ಆ ಹುನ್ನಾರವನ್ನು ನೆಲಸಮಗೊಳಿಸಬೇಕಾದ ಮಾರ್ಗವನ್ನು ತಿಳಿಸುತ್ತದೆ. ಅಂದು ದಲಿತರಿಗೆ ಬಾಬಾಸಾಹೇಬ್ ಅಂಬೇಡ್ಕರ್ ನೀಡಿದ ಎಚ್ಚರಿಕೆ ಹೀಗಿದೆ:
ಮೊದಲಿಗೆ ಮಹಾರ್, ಚಮ್ಮಾರ್, ಮಾಂಗ್, ಭಂಗಿ ಇತ್ಯಾದಿ ವಿವಿಧ ಅಸ್ಪಶ್ಯ ಜಾತಿಗಳಲ್ಲಿ ಏಕತೆ ಇಲ್ಲದಿರುವುದು ದುರದೃಷ್ಟಕರ ಸಂಗತಿಯಾಗಿದೆ. ಈ ಅನೈಕ್ಯತೆಗೆ ನೈಜ ಕಾರಣ ಹಿಂದೂ ಸಮಾಜದಲ್ಲಿರುವ ಜಾತಿ ಭೇದವೇ ಆಗಿದೆ. ಮಹಾರ್, ಮಾಂಗ್, ಚಮ್ಮಾರ್ ಅಥವಾ ಭಂಗಿಗಳು ಈ ಜಾತಿ ತಾರತಮ್ಯಗಳಿಗೆ ಜವಾಬ್ದಾರರಲ್ಲ. ಜಾತಿ ತಾರತಮ್ಯವೆಂಬುದು ಮೇಲಿನಿಂದ ಹರಿದು ಬಂದಿರುವ ಗಟಾರದ ಗಂಗೆಯಾಗಿದೆ. ಇದು ನಮ್ಮೆಡೆಗೆ ಹರಿದು ಬಂದಿರುವ ನರಕವಾಗಿದೆ. ಹಾಗೂ ಈ ಕಾರಣಕ್ಕಾಗಿಯೇ ನಾವು ಈ ಕಹಿ ಹಣ್ಣಿನ ಪರಿಣಾಮಗಳನ್ನು ಎದುರಿಸುತ್ತಿದ್ದೇವೆ. ಬಹಳ ನೋವುಂಟು ಮಾಡುವ ಸಂಗತಿಯೆಂದರೆ, ಹಿಂದೂಗಳು ತಮ್ಮ ನಡುವಿನ ಜಾತಿ ಭೇದಗಳನ್ನು ತೊಡೆದುಹಾಕುವುದು ಒತ್ತಟ್ಟಿಗಿರಲಿ, ಅದಕ್ಕೆ ವಿರುದ್ಧವಾಗಿ ಅಸ್ಪಶ್ಯರ ಅಜ್ಞಾನದ ಅನಗತ್ಯ ಲಾಭ ಪಡೆದುಕೊಂಡು ಅಸ್ಪಶ್ಯರೊಳಗಿನ ಭಿನ್ನತೆಗಳನ್ನು ಬಲಿಷ್ಠಗೊಳಿಸಲು ಶ್ರಮಿಸುತ್ತಾರೆ.
ಅವರು ಮಾಂಗ್‌ರನ್ನು ಬೆಂಬಲಿಸಿ ಮಹಾರರ ವಿರುದ್ಧ ಎತ್ತಿ ಕಟ್ಟುತ್ತಾರೆ. ಚಮ್ಮಾರರನ್ನು ಬೆಂಬಲಿಸಿ ಮಹಾರ್ ಮತ್ತು ಮಾಂಗ್‌ರ ವಿರುದ್ಧ ಎತ್ತಿಕಟ್ಟುತ್ತಾರೆ. ಅವರ ತಾರತಮ್ಯ ಸಿದ್ಧಾಂತವನ್ನು ನಮ್ಮ ಏಕತೆಯನ್ನು ತಡೆಗಟ್ಟಲು ನಮ್ಮೊಳಗೇ ಹರಡುತ್ತಾರೆ. ಆದರೆ ಜಾತಿ ಭೇದದ ಮೂಲ ಹೊಣೆಗಾರಿಕೆಯನ್ನು ಹಿಂದೂ ಸಮಾಜವೇ ಹೊರಬೇಕು. ಆದರೆ ನಾವು ನಮ್ಮ ಜವಾಬ್ದಾರಿಯನ್ನು ಮರೆತುಬಿಡುವುದು ಆತ್ಮಹತ್ಯಾಕಾರಿಯಾಗುತ್ತದೆ. ನಮ್ಮೊಳಗಿನ ಜಾತಿ ಭೇದವನ್ನು ತೊಡೆದುಹಾಕಬೇಕಾದ್ದು ಹಾಗೂ ಜಾತಿ ತಾರತಮ್ಯ ಸಿದ್ಧಾಂತವನ್ನು ನಮ್ಮೊಳಗೆ ನುಸುಳದಂತೆ ತಡೆಗಟ್ಟಬೇಕಾಗಿರುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಇದನ್ನು ಸಾಧಿಸದೆ ನಾವು ಏಳಿಗೆ ಹೊಂದುವುದು ಅಸಾಧ್ಯ. ಮಹಾರ್ ಮತ್ತು ಮಾಂಗ್ ಇತ್ಯಾದಿಗಳ ನಡುವೆ ಇರುವ ಅಂತರ್ಜಾತಿ ವಿವಾಹ ನಿಷೇಧ ಮತ್ತು ಅಂತರ್‌ಭೋಜನ ನಿರ್ಬಂಧವನ್ನು ಸಂಪೂರ್ಣವಾಗಿ ತೊಡೆದುಹಾಕಬೇಕಿದೆ. ನಾವು ನಮ್ಮ ಜಾತಿ ಪ್ರತಿಷ್ಠೆಗಳಿಗೆ ಅಂಟಿಕೊಂಡರೆ ನಮ್ಮ ಮೇಲಿನ ಅನ್ಯಾಯಗಳ ವಿರುದ್ಧ ಹೋರಾಡುವುದು ಅಸಾಧ್ಯ.
ಈ ಮೇಲಿನ ಅಂಬೇಡ್ಕರ್‌ರವರ ಮಾತುಗಳನ್ನು ಸಮಕಾಲೀನ ಪರಿಸ್ಥಿತಿಯಲ್ಲಿ ಈ ಕೆಳಗಿನಂತೆ ಅಂಶೀಕರಿಸಬಹುದು ಹಾಗೂ ವಿವರಿಸಬಹುದು.
1. ಜಾತಿಪದ್ಧತಿಯನ್ನು ಹಿಂದೂ ಧರ್ಮದ ಬ್ರಾಹ್ಮಣಾದಿಯಾಗಿ ಮೇಲ್ಜಾತಿಗಳು ಸೃಷ್ಟಿಸಿವೆ. ಇದಕ್ಕೂ ದಲಿತರಿಗೂ ಸಂಬಂಧವಿಲ್ಲ. ಆದರೆ ಈ ದುಷ್ಟ ಪದ್ಧತಿಯನ್ನು ದಲಿತರ ಮೇಲೆ ಅವರೆಲ್ಲರೂ ಹೇರಿದ್ದಾರೆ. ಅದರಂತೆ ದಲಿತರೂ ಸಹ ತಮ್ಮದಲ್ಲದ ಪದ್ಧತಿಯನ್ನು ಪಾಲಿಸುವಂತಾಗಿದೆ.
2. ಈ ಜಾತಿಪದ್ಧತಿಯು ಅಸ್ಪಶ್ಯತೆಯನ್ನು ಸೃಷ್ಟಿಸಿದ್ದು, ಈ ನೀಚ ಆಚರಣೆಯ ಪರಿಣಾಮವಾಗಿ ದಲಿತರು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ವಿಷವನ್ನು ಉಣ್ಣುತ್ತಿದ್ದಾರೆ.
3. ಈ ಜಾತಿಪದ್ಧತಿಯು ದಲಿತೇತರರಿಗೆ ಹೆಚ್ಚು ಅನುಕೂಲಗಳನ್ನು ತಂದುಕೊಡುವುದರಿಂದ ಅದರಿಂದುಂಟಾಗಿರುವ ಭೇದಗಳನ್ನು ತೊಡೆದುಹಾಕಲು ಅವರು ಶ್ರಮಿಸಲಾರರು. ಆದರೆ ದಲಿತರೊಳಗಿನ ಜಾತಿ ಭಿನ್ನತೆಗಳನ್ನು ಮತ್ತಷ್ಟು ಹೆಚ್ಚು ಮಾಡಲು ಹಗಲಿರುಳು ಕೆಲಸ ಮಾಡುತ್ತಾರೆ. ಏಕೆಂದರೆ ಜಾತಿಬಾಹಿರಗೊಳಿಸಿರುವ ದಲಿತರಿಗೆ ಜಾತಿಪದ್ಧತಿಯಿಂದಾಗಿ ಎಲ್ಲರಿಗಿಂತಲೂ ಹೆಚ್ಚಿನ ಸಂಕಷ್ಟಗಳು ಎದುರಾಗುತ್ತವೆ. ಅವರ ಘನತೆಯನ್ನು ಕಿತ್ತುಕೊಳ್ಳಲಾಗಿದೆ. ಸವಲತ್ತುಗಳನ್ನು ನಾಶಗೊಳಿಸಲಾಗಿದೆ. ಆದ್ದರಿಂದ ದಲಿತರು ತಮ್ಮ ಘನತೆಯನ್ನು ಮರಳಿ ಪಡೆಯಲು ಮುಂದಾಗುತ್ತಾರೆ. ದಲಿತರೊಳಗಿನ ಜಾತಿಗಳನ್ನು ಐಕ್ಯಗೊಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಈ ಐಕ್ಯತೆಯು ಜಾತಿಪದ್ಧತಿಯಿಂದ ಹಲವಾರು ಸಾಮಾಜಿಕ-ಆರ್ಥಿಕ-ಧಾರ್ಮಿಕ ಸವಲತ್ತು ಪಡೆಯುತ್ತಿರುವ ಮೇಲ್ಜಾತಿಗಳ ವಿರುದ್ಧ ಪ್ರಶ್ನಿಸಿ ತೊಡೆ ತಟ್ಟುತ್ತದೆ. ಹಾಗಾಗಿ ದಲಿತೇತರ ಮನುವಾದಿಗಳು ದಲಿತರ ಐಕ್ಯತೆಯ ವಿರುದ್ಧ ಹಗಲಿರುಳು ದುಡಿಯುತ್ತಾರೆ.
4. ದಲಿತೇತರರು ದಲಿತರ ಐಕ್ಯತೆಯನ್ನು ಮುರಿಯಲು ದಲಿತ ಜಾತಿಗಳ ವಿರುದ್ಧ ಮತ್ತೊಂದು ದಲಿತ ಜಾತಿಯನ್ನು ಎತ್ತಿಕಟ್ಟುತ್ತಾರೆ. ಒಂದು ದಲಿತ ಜಾತಿಯ ಎಲ್ಲಾ ಸಂಕಷ್ಟಗಳಿಗೆ ಇನ್ನೊಂದು ದಲಿತ ಜಾತಿಯೇ ಕಾರಣ ಎಂದು ಪ್ರಚಾರ ಮಾಡಿ ದಲಿತರನ್ನು ಒಡೆಯುತ್ತಾರೆ. ಆ ಮೂಲಕ ತಮ್ಮ ಅಧಿಕಾರ ಸ್ಥಾನವನ್ನು ಕಾಪಿಟ್ಟುಕೊಳ್ಳುತ್ತಾರೆ.
5. ಆದ್ದರಿಂದ ದಲಿತರು ತಮ್ಮ ಜವಾಬ್ದಾರಿಯನ್ನು ಮರೆತು ಇಂತಹ ದಲಿತ ವಿರೋಧಿ ಹಾಗೂ ಸಮಾನತಾ ವಿರೋಧಿ ಶಕ್ತಿಗಳ ಜೊತೆ ಕೈಜೋಡಿಸಿದರೆ ಆತ್ಮಹತ್ಯೆ ಮಾಡಿಕೊಂಡಂತೆ ಆಗುತ್ತದೆ. ದಲಿತರೊಳಗೆ ಅದೇನೇ ಭಿನ್ನಾಭಿಪ್ರಾಯ ಮೂಡಿದರೂ ಅದನ್ನು ದಲಿತರೇ ಬಗೆಹರಿಸಿಕೊಳ್ಳಬೇಕೇ ಹೊರತು ದಲಿತೇತರ ಜಾತಿಗಳನ್ನು ಅದರಲ್ಲಿಯೂ ಈ ಜಾತಿವಿಷಬೀಜ ಬಿತ್ತುವ ದಲಿತ ವಿರೋಧಿಗಳನ್ನು ಆಶ್ರಯಿಸಬಾರದು.
6. ದಲಿತರಲ್ಲಿನ ಪ್ರಜ್ಞಾವಂತರು ದಲಿತರೊಳಗಿನ ಜಾತಿಪದ್ಧತಿಯನ್ನು ತೊಡೆದುಹಾಕುವ ಕರ್ತವ್ಯದಿಂದ ನುಣುಚಿ ಕೊಳ್ಳಬಾರದು. ದಲಿತ ಜಾತಿಗಳೊಳಗೆ ಅಂತರ್ಜಾತಿ ಭೋಜನ ಮತ್ತು ಅಂತರ್ಜಾತಿ ವಿವಾಹಕ್ಕೆ ಅತಿ ಹೆಚ್ಚಿನ ಪ್ರೋತ್ಸಾಹ ನೀಡಿ, ದಲಿತರೊಳಗಿನ ಜಾತಿವಿನಾಶಕ್ಕೆ ಪಣ ತೊಡಬೇಕು.
7. ದಲಿತರು ತಮ್ಮ ತಮ್ಮ ಜಾತಿ ಪ್ರತಿಷ್ಠೆಗಳನ್ನು ಬಿಟ್ಟು ಬಿಡಬೇಕು. ದಲಿತರಲ್ಲಿ ನಾವೆಲ್ಲರೂ ಒಂದೇ ಎಂಬ ಐಕ್ಯತೆ ಮೂಡಬೇಕು. ದಲಿತ ಶಕ್ತಿ ದಲಿತೇತರರಿಗೆ ಮಾದರಿಯಾಗಬೇಕು.
ಈ ಮೇಲೆ ಅಂಬೇಡ್ಕರ್ ನೀಡಿರುವ ಎಚ್ಚರಿಕೆಯ ಬೆಳಕಿನಲ್ಲಿ ದಲಿತರು ಹೋರಾಟವನ್ನು ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ದಲಿತರೊಳಗಿನ ಒಗ್ಗಟ್ಟು ಮುರಿಯಲು ಹೊಂಚುಹಾಕುವ ಶಕ್ತಿಗಳೊಂದಿಗೆ ಕೈಜೋಡಿಸಲೇಬಾರದು. ಮತ್ತೊಂದು ದಲಿತ ಜಾತಿಯನ್ನು ಅಪರಾಧಿ ಸ್ಥಾನದಲ್ಲಿರಿಸುವ ಹೋರಾಟಗಳು ಖಂಡಿತವಾಗಿಯೂ ಮನುವಾದಿ ದಲಿತ ವಿರೋಧಿ ಶಕ್ತಿಗಳಿಗೆ ಬಲ ನೀಡುತ್ತವೆ. ಅದು ಬಿಟ್ಟು ವಾಮನ ಪಾದದಡಿಯಲ್ಲಿ ನೆರಳು ಪಡೆಯುತ್ತೇವೆಂಬ ಮಾತುಗಳು ಅವಕಾಶವಾದಿಗಳನ್ನೂ ಹಾಗೂ ಬಲಿಪೀಠಗಳನ್ನು ಒಟ್ಟೊಟ್ಟಿಗೆ ಸೃಷ್ಟಿಸುತ್ತವೆ.