ಬಿಬಿಎಂಪಿ ‘ಕಿಲ್ಲರ್ ಕಸದ ಲಾರಿ’ಗೆ ಇನ್ನೆಷ್ಟು ಜೀವ ಬೇಕು?

Update: 2025-04-07 11:22 IST
ಬಿಬಿಎಂಪಿ ‘ಕಿಲ್ಲರ್ ಕಸದ ಲಾರಿ’ಗೆ ಇನ್ನೆಷ್ಟು ಜೀವ ಬೇಕು?

ಸಾಂದರ್ಭಿಕ ಚಿತ್ರ

  • whatsapp icon

ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯ ಕಸ ಸಾಗಣೆ ಮಾಡುವ ಲಾರಿಗಳ ಕೆಲ ಚಾಲಕರ ನಿರ್ಲಕ್ಷ್ಯ ಹಾಗೂ ಅಜಾಗರೂಕತೆಯ ಚಾಲನೆಯಿಂದಾಗಿ ಅಮಾಯಕ ಜೀವಗಳು ಬಲಿಯಾಗುತ್ತಿವೆ. ನಗರದ ಥಣಿಸಂದ್ರ ಮುಖ್ಯರಸ್ತೆಯಲ್ಲಿರುವ ರೈಲ್ವೆ ಕೆಳ ಸೇತುವೆ ಬಳಿ ಬಿಬಿಎಂಪಿಯ ಕಸದ ಲಾರಿ ಹರಿದ ಪರಿಣಾಮ ಇತ್ತೀಚೆಗೆ 10 ವರ್ಷದ ಬಾಲಕ ಐಮಾನ್ ಸ್ಥಳದಲ್ಲೇ ಮೃತಪಟ್ಟಿದ್ದು, ಆತನ ತಂದೆ ಗಾಯಾಳುವಾಗಿ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕುರ್‌ಆನ್ ಹಿಫ್ಝ್ ಮಾಡುವ ಬಯಕೆ ಹೊಂದಿದ್ದ ಬಾಲಕ ಐಮಾನ್‌ನನ್ನು ಇಲ್ಲಿನ ಸಮೀಪದ ಹೆಗಡೆ ನಗರದಲ್ಲಿರುವ ಮದ್ರಸದಲ್ಲಿ ದಾಖಲು ಮಾಡಲು ಆತನ ತಂದೆ ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ಹಿಂದಿನಿಂದ ವೇಗವಾಗಿ ಬಂದ ಕಸದ ಲಾರಿ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದಿದೆ.

ಆಗ ನೆಲಕ್ಕೆ ಬಿದ್ದ ಬಾಲಕನ ತಲೆಯ ಮೇಲೆ ಲಾರಿ ಹರಿದು ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇದರಿಂದ ಆಕ್ರೋಶಗೊಂಡ ಸ್ಥಳೀಯರು ಲಾರಿ ಚಾಲಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಅಲ್ಲದೇ, ಕಸದ ಲಾರಿಗೆ ಬೆಂಕಿ ಹಚ್ಚಿದ್ದಾರೆ.

ಗೋವಿಂದಪುರ ನಿವಾಸಿಗಳಾಗಿದ್ದ ನಾಝಿಯಾ ಇರ್ಫಾನಾ(38) ಹಾಗೂ ನಾಝಿಯಾ ಸುಲ್ತಾನಾ(30) ಎಂಬ ಸಹೋದರಿಯರು ಜ.4ರಂದು ಥಣಿಸಂದ್ರ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಹಿಂಬದಿಯಿಂದ ಬಂದ ಕಸದ ಲಾರಿ ಢಿಕ್ಕಿ ಹೊಡೆದ ಪರಿಣಾಮ ಸಹೋದರಿಯರಿಬ್ಬರೂ ಲಾರಿಯ ಚಕ್ರಗಳಡಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದರು.ಈ ಇಬ್ಬರು ಸಹೋದರಿಯರು ಆರು ವರ್ಷದ ಮಕ್ಕಳನ್ನು ಹೊಂದಿದ್ದರು. ಇವರ ಅಗಲಿಕೆಯಿಂದಾಗಿ ಆ ಮಕ್ಕಳು ತಾಯಿ ಇಲ್ಲದ ತಬ್ಬಲಿಯಾಗಿವೆ.

2022ರ ಮೇ 14ರಂದು ದೇವಣ್ಣ ಎಂಬ 25 ವರ್ಷದ ಯುವಕ ಇದೇ ಥಣಿಸಂದ್ರ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಕಸದ ಲಾರಿ ಢಿಕ್ಕಿ ಹೊಡೆದು ಮೃತಪಟ್ಟಿದ್ದನು.

ಇದಲ್ಲದೇ, ಹೆಬ್ಬಾಳ, ನಾಯಂಡನಹಳ್ಳಿ, ಮೈಸೂರು ರಸ್ತೆ, ನಾಗರಭಾವಿ ಸೇರಿದಂತೆ ಬೆಂಗಳೂರು ನಗರದ ಹಲವು ಭಾಗಗಳಲ್ಲಿ ಕಸದ ಲಾರಿಗಳು ಢಿಕ್ಕಿ ಹೊಡೆದು ಅನೇಕ ಮಂದಿ ತಮ್ಮ ಪ್ರಾಣಗಳನ್ನು ಕಳೆದುಕೊಂಡ ಘಟನೆಗಳು ವರದಿಯಾಗಿವೆ. ಈ ಕಸದ ಲಾರಿಗಳ ಚಾಲಕರ ನಿರ್ಲಕ್ಷ್ಯದ ಚಾಲನೆಯಿಂದಾಗಿ ಅಮಾಯಕರು ತಮ್ಮ ಕುಟುಂಬಗಳ ಆಧಾರವನ್ನೇ ಕಳೆದುಕೊಳ್ಳುವಂತಾಗಿದೆ.

ಬಿಬಿಎಂಪಿ, ರಾಜ್ಯ ಸರಕಾರ ಇನ್ನಾದರೂ ಎಚ್ಚೆತ್ತುಕೊಂಡು ನಗರ ಪ್ರದೇಶದಲ್ಲಿ ಕಸ ವಿಲೇವಾರಿಗೆ ಸೂಕ್ತ ನೀತಿ ನಿಯಮಗಳನ್ನು ರೂಪಿಸಬೇಕು. ಕಸದ ಲಾರಿಗಳು ಹಗಲು ಸಮಯದಲ್ಲಿ ಸಂಚರಿಸುವ ಬದಲು ರಾತ್ರಿ ವೇಳೆ ಸಂಚರಿಸುವಂತೆ ಬಿಬಿಎಂಪಿ ಕ್ರಮ ಕೈಗೊಂಡರೆ ಅನುಕೂಲವಾಗುತ್ತದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.

ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳ ಪೈಕಿ ಈ ರಸ್ತೆಯೂ ಒಂದಾಗಿದೆ. ಅಲ್ಲದೇ, ಹಲವಾರು ಅಪಾರ್ಟ್ ಮೆಂಟ್‌ಗಳು, ಪ್ರತಿಷ್ಠಿತ ಕಾಲೇಜುಗಳು, ಹಜ್ ಭವನ ಎಲ್ಲವೂ ಇದೇ ಮಾರ್ಗದಲ್ಲಿವೆ. ಇದರಿಂದ ಹಗಲು ಸಂದರ್ಭದಲ್ಲಿ ಸಂಚಾರ ದಟ್ಟಣೆಯೂ ಹೆಚ್ಚಾಗಿರುತ್ತದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಕಸದ ಲಾರಿಗಳಿಗೆ ವೇಗ ಮಿತಿಯನ್ನು ನಿಯಂತ್ರಿಸುವ ಸಾಧನವನ್ನು ಅಳವಡಿಸಬೇಕು. ನಗರ ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿರುವುದರಿಂದ ಈ ವಾಹನಗಳು ಹೆಚ್ಚು ವೇಗವಾಗಿ, ಅಜಾಗರೂಕತೆಯಿಂದ ಸಂಚರಿಸಲು ಅವಕಾಶ ನೀಡದಂತೆ ಕ್ರಮ ಕೈಗೊಳ್ಳಬೇಕು. ಈ ವಾಹನಗಳನ್ನು ಚಲಾಯಿಸುವ ಚಾಲಕರ ಮಾನಸಿಕ ಆರೋಗ್ಯವನ್ನು ಕಾಲ ಕಾಲಕ್ಕೆ ಪರೀಕ್ಷಿಸಬೇಕು.

-ಇಕ್ಬಾಲ್ ಅಹ್ಮದ್, ಸ್ಥಳೀಯರು

ಬಿಬಿಎಂಪಿಯ ಕಸದ ಲಾರಿ ಹರಿದು ಕಳೆದ ಮೂರು ತಿಂಗಳಲ್ಲಿ ಸಂಭವಿಸುತ್ತಿರುವ ನಾಲ್ಕನೆ ಸಾವು ಇದಾಗಿದೆ. ಜನವರಿಯಲ್ಲಿ ಇಬ್ಬರು ಸಹೋದರಿಯರು ಇದೇ ರೀತಿ ಇಲ್ಲಿ ಮೃತಪಟ್ಟಿದ್ದರು. ರಾಜ್ಯ ಸರಕಾರದಿಂದ ಈವರೆಗೆ ಆ ಬಡ ಕುಟುಂಬಗಳಿಗೆ ಯಾವುದೇ ಪರಿಹಾರವಾಗಲಿ, ನೆರವು ಆಗಲಿ ಸಿಕ್ಕಿಲ್ಲ. ಪ್ರತೀ ವರ್ಷ ಇಲ್ಲಿ ಕಸದ ಲಾರಿಗಳಿಗೆ ಅಮಾಯಕರು ಬಲಿಯಾಗುತ್ತಿದ್ದಾರೆ. ಇವುಗಳಿಗೆ ಕಡಿವಾಣ ಹಾಕಲು ಬಿಬಿಎಂಪಿ, ಸರಕಾರ ಕ್ರಮ ಕೈಗೊಳ್ಳುತ್ತಿಲ್ಲ.

-ಮುಹಮ್ಮದ್ ಇಸ್ಮಾಯಿಲ್, ಸಮಾಜ ಸೇವಕ

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - -ಅಮ್ಜದ್ ಖಾನ್ ಎಂ.

contributor

Similar News