ಪ್ರವಾಸಿ ತಾಣ ಒತ್ತಿನೆಣೆ ನಿಸರ್ಗಧಾಮದಲ್ಲಿ ನೀರಿನ ಸಮಸ್ಯೆ
ಉಡುಪಿ, ಮೇ 8: ಜಿಲ್ಲಾದ್ಯಂತ ತಲೆದೋರಿರುವ ಕುಡಿಯುವ ನೀರಿನ ಸಮಸ್ಯೆಯ ಬಿಸಿ ಇದೀಗ ಪ್ರವಾಸೋ ದ್ಯಮಕ್ಕೂ ತಟ್ಟಿದೆ. ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಒತ್ತಿನೆಣೆ ಕ್ಷಿತಿಜ ನಿಸರ್ಗ ಧಾಮದಲ್ಲಿ ನೀರಿನ ಕೊರತೆಯಿಂದಾಗಿ ಪ್ರವಾಸಿ ಗರಿಲ್ಲದೆ ಆದಾಯದ ಮೂಲಕ್ಕೆ ದೊಡ್ಡ ಹೊಡೆತ ಬಿದ್ದಿದೆ.
ಈ ನಿಸರ್ಗಧಾಮವು ಬೈಂದೂರಿನಿಂದ ಸುಮಾರು 5 ಕಿ.ಮೀ. ದೂರದಲ್ಲಿದೆ. ಸಮನಾ ನದಿ ಮತ್ತು ಅರಬ್ಬಿ ಸಮುದ್ರದ ಸಂಗಮ ಸ್ಥಾನ ಮತ್ತು ಒತ್ತಿನೆಣೆ ಬೀಚ್ ಇಲ್ಲಿನ ಆಕರ್ಷಕ ಪ್ರವಾಸಿ ತಾಣ. ಸುಮಾರು 80ರಿಂದ 100 ಅಡಿ ಎತ್ತರದ ಬೆಟ್ಟದ ಮೇಲೆ ಇರುವ ಈ ನಿಸರ್ಗಧಾಮದಲ್ಲಿ ನಿಂತು ನದಿ ಸಂಗಮದ ವಿಹಂಗಮ ನೋಟವನ್ನು ಕಣ್ತುಂಬಿಸಿಕೊಳ್ಳಬಹುದು. ರಾಷ್ಟ್ರೀಯ ಹೆದ್ದಾರಿ 66ರಿಂದ ಒಂದೂವರೆ ಕಿ.ಮೀ. ದೂರದಲ್ಲಿರುವ ಈ ನಿಸರ್ಗಧಾಮವನ್ನು ಅರಣ್ಯ ಇಲಾಖೆ ನಿರ್ವ ಹಿಸುತ್ತಿದೆ.
ಪ್ರವಾಸಿಗರಿಗೆ ಉಳಿದುಕೊಳ್ಳಲು ಬೇಕಾದ ವಸತಿಗೃಹಗಳನ್ನು ಇಲ್ಲಿ ನಿರ್ಮಿಸಲಾಗಿದ್ದು, ಮೂರು ಕಟ್ಟಡಗಳಲ್ಲಿ ಸುಸಜ್ಜಿತ ಒಟ್ಟು ಏಳು ವಸತಿಗೃಹಗಳು ಇವೆ. ಇದರಲ್ಲಿ 2 ಎಸಿ(ದಿನಕ್ಕೆ 1600 ರೂ.) ಮತ್ತು 5 ನಾನ್‌ಎಸಿ(ದಿನಕ್ಕೆ 800 ರೂ.) ಕೊಠಡಿಗಳು ಇವೆ. ಅಕ್ಟೋಬರ್ ರಜಾದಿನಗಳ ವಾರಾಂತ್ಯದಲ್ಲಿ ಎಲ್ಲಾ 7 ಕೊಠಡಿಗಳು ಪ್ರವಾಸಿಗರಿಂದ ತುಂಬಿರುತ್ತವೆ. ಬೆಂಗಳೂರು, ಕೇರಳದಿಂದ ಹೆಚ್ಚಿನ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಮುರ್ಡೇಶ್ವರ ಹಾಗೂ ಕೊಲ್ಲೂರು ದೇವಳಕ್ಕೆ ಆಗಮಿಸುವ ರಾಜ್ಯ, ಹೊರರಾಜ್ಯಗಳ ಪ್ರವಾಸಿಗರು ಕೂಡ ಈ ನಿಸರ್ಗಧಾಮದಲ್ಲಿ ಉಳಿದುಕೊಳ್ಳುತ್ತಾರೆ.
ಆದಾಯಕ್ಕೆ ದೊಡ್ಡ ಹೊಡೆತ: ಜಿಲ್ಲೆಯ ಪ್ರಾಕೃತಿಕ ಪ್ರವಾಸೋದ್ಯಮ ತಾಣವಾಗಿರುವ ಈ ನಿಸರ್ಗ ಧಾಮದಲ್ಲಿ ಮಾರ್ಚ್, ಎಪ್ರಿಲ್, ಮೇ ತಿಂಗಳಲ್ಲಿ ನೀರಿಗೆ ತತ್ವಾರ. ಈ ಸಮಸ್ಯೆಯಿಂದಾಗಿ ಪ್ರವಾಸಿಗರು ಬಾರದೆ ಪ್ರವಾಸೋದ್ಯಮ ಹಾಗೂ ಅರಣ್ಯ ಇಲಾಖೆಯ ಆದಾಯಕ್ಕೆ ಹೊಡೆತ ಬಿದ್ದಿದೆ.
ಈ ಮೂರು ತಿಂಗಳು ಪ್ರವಾಸಿಗರ ಸೀಸನ್. ಈ ಸಂದರ್ಭ ಉಡುಪಿಗೆ ವಿವಿಧ ಜಿಲ್ಲೆ ಹಾಗೂ ರಾಜ್ಯಗಳಿಂದ ಪ್ರವಾಸಿಗರ ದಂಡೇ ಆಗಮಿಸುತ್ತದೆ. ಆದರೆ ಈ ಸಮಯದಲ್ಲಿ ನೀರಿನ ಕೊರತೆಯಿಂದ ಒತ್ತಿನೆಣೆ ಕ್ಷಿತಿಜ ನಿಸರ್ಗಧಾಮ ಅಘೋಷಿತ ಬಂದ್ ಆಗಿರುವುದು ಪ್ರವಾಸಿಗರಲ್ಲಿ ನಿರಾಶೆ ಮೂಡಿಸುತ್ತಿದೆ. ಪ್ರತಿದಿನ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿ ಉಳಿದುಕೊಳ್ಳಲು ಕೇಳಿಕೊಂಡು ಬಂದರೂ ನೀರಿನ ಕೊರತೆಯಿಂದ ಸದ್ಯ ಯಾರಿಗೂ ಇಲ್ಲಿ ಉಳಿದುಕೊಳ್ಳಲು ಅವಕಾಶ ನೀಡುತ್ತಿಲ್ಲ. ಇಲ್ಲಿರುವ ಬಾವಿ ಮತ್ತು ಕೊಳವೆ ಬಾವಿ ಮಾರ್ಚ್ ತಿಂಗಳಲ್ಲಿ ಸಂಪೂರ್ಣ ಬತ್ತಿ ಹೊಗು ತ್ತದೆ. ಹೀಗಾಗಿ ಹೊರಗಿನಿಂದ ಟ್ಯಾಂಕರ್ ಮೂಲಕ ನೀರು ತರ ಬೇಕಾಗುತ್ತದೆ. ಇದಕ್ಕೆ ಇಲಾಖೆಯಲ್ಲಿ ಯಾವುದೇ ಅನುದಾನ ಇಲ್ಲದ ಕಾರಣ ಅದನ್ನು ಪ್ರವಾಸಿಗರಿಂದಲೇ ವಸೂಲಿ ಮಾಡಬೇಕಾಗುತ್ತದೆ. ಪ್ರವಾಸಿಗರು ವಸತಿ ಗೃಹದ ಶುಲ್ಕದ ಜೊತೆಗೆ 5000 ಲೀ. ಟ್ಯಾಂಕರ್ ನೀರಿನ ಶುಲ್ಕ 1,500ರೂ. ಕೂಡ ಪಾವತಿಸಬೇಕು. ಇದು ದುಬಾರಿಯಾಗುವುದರಿಂದ ಪ್ರವಾಸಿಗರು ಇಲ್ಲಿ ತಂಗಲು ಹಿಂದೇಟು ಹಾಕುತ್ತಾರೆ. ಹಾಗಾಗಿ ಅಕ್ಟೋಬರ್‌ನಲ್ಲಿ ಪ್ರವಾಸಿಗರಿಂದ ತುಂಬಿ ಹೋಗುವ ವಸತಿಗೃಹಗಳು ಈ ಮೂರು ತಿಂಗಳು ಖಾಲಿಯಾಗಿ ಉಳಿದುಕೊಳ್ಳುತ್ತದೆ.
ಇಲ್ಲಿನ ನೀರಿನ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಬೇಕಾದರೆ 2-3 ಕಿ.ಮೀ. ದೂರದಲ್ಲಿರುವ ಶಿರೂರು ಗ್ರೀನ್ ವ್ಯಾಲಿ ಸ್ಕೂಲ್ ಬಳಿಯಿಂದ ಪೈಪ್‌ಲೈನ್ ಮೂಲಕ ನೀರು ಸರಬರಾಜು ಮಾಡಬೇಕಾಗುತ್ತದೆ. ಇದು ಬಹಳಷ್ಟು ದುಬಾರಿ ಯೋಜನೆ ಆಗಿರುವುದರಿಂದ ಸದ್ಯಕ್ಕೆ ಅನುಷ್ಠಾನಗೊಳ್ಳುವುದು ಕಷ್ಟ ಎಂಬುದು ಅರಣ್ಯ ಅಧಿಕಾರಿಗಳು ಅಭಿಪ್ರಾಯ.
- ನಿಸರ್ಗಧಾಮ ಅಭಿವೃದ್ಧಿ: ನಿಸರ್ಗಧಾಮದ ಅಭಿ ವೃದ್ಧಿ ಕಾರ್ಯವನ್ನು ಈಗಾಗಲೇ ಅರಣ್ಯ ಇಲಾಖೆ ಕೈಗೆತ್ತಿಕೊಂಡಿದ್ದು, ಪ್ರವಾಸೋದ್ಯಮ ಇಲಾಖೆಯಿಂದ ಬಿಡುಗಡೆಯಾಗಿರುವ 1 ಕೋಟಿ ರೂ. ಅನುದಾನದಲ್ಲಿ ರಾಷ್ಟ್ರೀಯ ಹೆದ್ದಾರಿಯಿಂದ ನಿಸರ್ಗಧಾಮದವರೆಗಿನ ಒಂದೂವರೆ ಕಿ.ಮೀ. ಮಣ್ಣಿನ ರಸ್ತೆಯನ್ನು ಲೋಕೋ ಪಯೋಗಿ ಇಲಾಖೆಯಿಂದ ಡಾಮರೀಕಣ ಮಾಡ ಲಾಗುತ್ತಿದೆ. ಇದರ ಕಾಮಗಾರಿ ಸದ್ಯವೇ ಆರಂಭ ಗೊಳ್ಳಲಿದೆ.
ನಿಸರ್ಗಧಾಮದಲ್ಲಿ ನಿಂತು ನದಿ ಸಂಗಮದ ದೃಶ್ಯವನ್ನು ವೀಕ್ಷಿಸಲು 1ಲಕ್ಷ ರೂ. ವೆಚ್ಚದಲ್ಲಿ ವೀಕ್ಷಣಾ ಟವರನ್ನು ನಿರ್ಮಿಸಲಾಗಿದೆ. ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಿರುವುದರಿಂದ ಮಕ್ಕಳಿಗೆ ಬೇಕಾದ ಆಟದ ಮೈದಾನವನ್ನು 1 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಅದೇ ರೀತಿ ವಾಕಿಂಗ್ ಟ್ರಾಕ್, ಮೆಟ್ಟಿಲು ಸೇರಿದಂತೆ ಒಟ್ಟು 8 ಲಕ್ಷ ರೂ. ವೆಚ್ಚದಲ್ಲಿ ನಿಸರ್ಗಧಾಮದಲ್ಲಿ ಅಭಿವೃದ್ಧಿ ಕಾಮಗಾರಿಯನ್ನು ನಡೆಸಲಾಗಿದೆ.
ಪ್ರತಿದಿನ 100ಕ್ಕೂ ಅಧಿಕ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಿರುವುದರಿಂದ ಇಲ್ಲಿ ಇನ್ನು ಹೆಚ್ಚಿನ ಅಭಿವೃದ್ಧಿ ಕಾರ್ಯ ನಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆಯಿಂದ ಹಿಂದಿನ ಜಿಲ್ಲಾ ಧಿಕಾರಿ ಡಾ.ಆರ್.ವಿಶಾಲ್ ಅವರಿಗೆ ಪ್ರವಾ ಸೋದ್ಯಮ ಇಲಾಖೆಯಿಂದ ಅನುದಾನ ಬಿಡುಗಡೆ ಮಾಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ರಸ್ತೆ ಅಭಿವೃದ್ಧಿಗೆ 1 ಕೋಟಿ ರೂ. ಅನುದಾನ ಬಿಟ್ಟರೆ ಬೇರೆ ಯಾವುದಕ್ಕೂ ಹಣ ಬಿಡುಗಡೆಯಾಗಿಲ್ಲ. 2010-11ನೆ ಸಾಲಿನಲ್ಲಿ ಸುಮಾರು 30ಲಕ್ಷ ರೂ. ವೆಚ್ಚದಲ್ಲಿ ಇಲ್ಲಿ ಹೆಚ್ಚುವರಿ ಕ್ವಾಟೇಜ್‌ನ್ನು ನಿರ್ಮಿಸಲಾಗಿತ್ತು. ಅದರ ನಂತರ ಯಾವುದೇ ಅಭಿವೃದ್ಧಿ ಕಾರ್ಯನಡೆದಿಲ್ಲ. ಇದೀಗ ನಾಲ್ಕೈದು ವರ್ಷಗಳ ನಂತರ ಮತ್ತೆ 8 ಲಕ್ಷ ಅನುದಾನ ಬಿಡುಗಡೆಯಾಗಿದೆ ಎಂದು ಬೈಂದೂರು ವಲಯ ಅರಣ್ಯಾಧಿಕಾರಿ ಪ್ರಭಾಕರ್ ಕುಲಾಲ್ ತಿಳಿಸಿದ್ದಾರೆ.
ನಿಸರ್ಗಧಾಮದಲ್ಲಿ ನೀರಿನ ಸಮಸ್ಯೆಯಿಂದ ಮಾರ್ಚ್, ಎಪ್ರಿಲ್,ಮೇ ತಿಂಗಳಲ್ಲಿ ವಸತಿ ಗೃಹಕ್ಕೆ ಯಾವುದೇ ಪ್ರವೇಶ ಸ್ವೀಕರಿಸುವುದಿಲ್ಲ. ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿದರೂ ಅದು ಪ್ರವಾಸಿಗರಿಗೆ ದುಬಾರಿಯಾಗುತ್ತದೆ. ಹೀಗಾಗಿ ಸದ್ಯ ಇಲ್ಲಿರುವ ಎಲ್ಲ 7 ಕೊಠಡಿಗಳು ಖಾಲಿ ಯಾಗಿಯೇ ಇವೆ.
- ಪ್ರಭಾಕರ್ ಕುಲಾಲ್, ವಲಯ ಅರಣ್ಯಾಧಿಕಾರಿ, ಬೈಂದೂರು
ಒತ್ತಿನೆಣೆ ನಿಸರ್ಗಧಾಮ ಅದ್ಭುತ ಪ್ರವಾಸಿ ತಾಣ. ಇದನ್ನು ಸರಕಾರ ಇನ್ನಷ್ಟು ಅಭಿವೃದ್ಧಿಪಡಿಸಿ ದೇಶ ವಿದೇಶದ ಪ್ರವಾಸಿಗರು ಬರುವಂತೆ ಮಾಡ ಬೇಕು. ಸದ್ಯಕ್ಕೆ ನೀರಿನ ಸಮಸ್ಯೆ ಹಾಗೂ ಇತರ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಬೇಕು. ಇದರಿಂದ ಪ್ರವಾಸಿಗರಿಗೆ ಅನುಕೂಲವಾಗುತ್ತದೆ.
- ವೆಂಕಟೇಶ್ ಕುಲಾಲ್, ಪ್ರವಾಸಿಗ