ಮೂಡುಬಿದಿರೆ ಮೂಲದ ಯುವತಿ ಕೊಡಗಿನಲ್ಲಿ ಆತ್ಮಹತ್ಯೆ : ಆಘಾತಕ್ಕೊಳಗಾಗಿ ಪತಿ,ಮಾವ ನೇಣಿಗೆ ಶರಣು

Update: 2017-05-10 16:07 GMT

ಮೂಡುಬಿದಿರೆ,ಮೇ 10 : ಪುರಸಭಾ ವ್ಯಾಪ್ತಿಯ ಅಲಂಗಾರು ಉಳಿಯ ನಿವಾಸಿ ಅಣ್ಣಿ ಆಚಾರ್ಯ - ಪ್ರೇಮ ಆಚಾರ್ಯ ದಂಪತಿಯ ಪುತ್ರಿ ಮಂಜುಳಾ (28) ಎಂಬವರು ಕೊಡಗು ಜಿಲ್ಲೆಯ ಭಾಗಮಂಡಲದ ತನ್ನ ಪತಿಯ ಮನೆಯಲ್ಲಿ ಮಂಗಳವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಂಜುಳಾ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ನೋಡಿ ಆಘಾತಗೊಂಡ ಅವರ ಪತಿ ಪ್ರದೀಪ್ (32) ಹಾಗೂ ಮಾವ ಗೋಪಾಲ (64) ಇಬ್ಬರೂ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಆಕೆಯದೇ ಹಾದಿ ತುಳಿದಿದ್ದಾರೆ.

ಪತಿಯ ಮನೆಯಲ್ಲಿ ನಿರಂತರವಾಗಿ ತನಗೆ ಕಿರುಕುಳ ನೀಡಲಾಗುತ್ತಿದೆ ಎಂದು ಮಂಜುಳಾ ತವರು ಮನೆಯಲ್ಲಿ ತಿಳಿಸಿದ್ದರು ಎನ್ನಲಾಗಿದೆ. ಆದರೆ ಆಕೆ ಬರೆದಿರುವ ಡೆತ್‌ನೋಟ್‌ನಲ್ಲಿ ತನ್ನ ಸಾವಿಗೆ ತಾನೇ ಕಾರಣ ಎಂಬುದಾಗಿ ವಿವರಿಸಲಾಗಿದ್ದು, ಒಟ್ಟು ಈ ಸರಣಿ ಆತ್ಮಹತ್ಯೆಯು ಗೊಂದಲಕ್ಕೆಡೆಮಾಡಿದೆ.

ಮೇ.12ರಂದು ಮಂಜುಳಾ ಪತಿ ಮನೆಯಲ್ಲಿ ನಡೆಯಲಿದ್ದ ಪೂಜೆಯೊಂದರ ಏರ್ಪಾಟು ನಡೆಯುತ್ತಿದ್ದ ಸಂದರ್ಭ ಮಾವ ಹಾಗೂ ಅತ್ತೆಯ ನಡುವೆ ಜಗಳ ನಡೆದಿತ್ತು ಎನ್ನಲಾಗಿದೆ. ಈ ಜಗಳದ ಹಿನ್ನೆಲೆಯಲ್ಲಿ ಮಂಜುಳಾ ಮನೆಯ ಪಕ್ಕಾಸಿಗೆ ನೈಲಾನ್ ಹಗ್ಗದಿಂದ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತ್ನಿಯ ಸಾವಿನಿಂದ ಆಘಾತಗೊಂಡ ಪತಿ ಪ್ರದೀಪ್ ಆಕೆಯದೇ ಹಾದಿ ತುಳಿದರೆ, ತನ್ನ ಪುತ್ರ ಹಾಗೂ ಸೊಸೆ ಇಬ್ಬರ ಸಾವಿನಿಂದ ನೊಂದ ಮಾವ ಗೋಪಾಲ ಕೂಡಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಂಜುಳಾಳ ಡೆತ್‌ನೋಟ್‌ನಲ್ಲಿ ‘ನನ್ನ ಸಾವಿಗೆ ಯಾರೂ ಕಾರಣರಲ್ಲ. ನನ್ನಿಂದ ಏನಾದರೂ ತಪ್ಪಾಗಿದ್ದಾರೆ ಕ್ಷಮಿಸಿ, ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಇತೀ ನಿಮ್ಮ ಪ್ರೀತಿಯ ಮಂಜುಳಾ’ ಎಂದು ಬರೆಯಲಾಗಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಮಂಜುಳಾಳನ್ನು ಕೊಡಗಿನ ಬಾಗಮಂಡಲಕ್ಕೆ ವಿವಾಹ ಮಾಡಿಕೊಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News