ಉಳ್ಳಾಲ: ರಸ್ತೆ ಕಾಂಕ್ರೀಟಿಕರಣಕ್ಕೆ ಸಚಿವ ಸಚಿವ ಯು.ಟಿ.ಖಾದರ್ ಚಾಲನೆ
ಉಳ್ಳಾಲ, ಮೇ 19: ರಾಜ್ಯದಲ್ಲಿ ಉಳ್ಳಾಲ ಎಂದಲ್ಲಿ ಭೀತಿಯ ವಾತಾವರಣವಿದ್ದು, ಅದನ್ನು ಹೋಗಲಾಡಿಸುವ ಪ್ರಯತ್ನ ಯುವ ಸಮುದಾಯದಿಂದ ಆಗಬೇಕಿದ್ದು, ಇದರಿಂದ ಇನ್ನಷ್ಟು ಅಭಿವೃದ್ಧಿಯ ಯೋಜನೆಗಳನ್ನು ಉಳ್ಳಾಲದಲ್ಲಿ ಜಾರಿಗೊಳಿಸಬಹುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಅವರು ಶಾಸಕರ ವಿಶೇಷ ಅನುದಾನದಿಂದ ರೂ. 30 ಲಕ್ಷ ಅನುದಾನದಲ್ಲಿ ನಿರ್ಮಾಣವಾಗಲಿರುವ ಉಳ್ಳಾಲ ಶ್ರೀನಿವಾಸ ಮಲ್ಯ ರಸ್ತೆಯಿಂದ ಸೈಯದ್ ಮದನಿ ದರ್ಗಾ ರಸ್ತೆ ಕಾಂಕ್ರೀಟಿಕರಣಕ್ಕೆ ಚಾಲನೆ ನೀಡಿ ಮಾತನಾಡಿದರು.
ಸ್ಥಳೀಯ ಯುವಕರ ತಾಳ್ಮೆಯಿಂದ ಕಾಮಗಾರಿ ತಡವಾದರೂ ಯಶಸ್ವಿಯಾಗಿ ಸಮಗ್ರ ಕಾಂಕ್ರೀಟಿಕರಣಕ್ಕೆ ಅನುದಾನ ಬಿಡುಗಡೆಗೊಳಿಸಲು ಸಾಧ್ಯವಾಗಿದೆ. ಹೆಚ್ಚುವರಿ 5 ಕೋಟಿ ರೂ. ಅನುದಾನದಲ್ಲಿ ಉಳ್ಳಾಲದಾದ್ಯಂತ ಸುಸಜ್ಜಿತ ಫುಟ್ ಪಾತ್ ಹಾಗೂ ದಾರಿದೀಪಗಳ ವ್ಯವಸ್ಥೆಗಳಿಗೆ ಬಿಡುಗಡೆ ಮಾಡಲಾಗುವುದು. ಉಳ್ಳಾಲ ಕೋಡಿ ರಸ್ತೆಗೆ ರೂ. 10 ಲಕ್ಷ ರೂ., ತಲಪಾಡಿಯಿಂದ ಕೋಟೆಪುರ ಕಡಲ್ಕೊರೆತ ತಡೆಗೆ ಶಾಶ್ವತ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ. ಅಬ್ಬಕ್ಕ ಸರ್ಕಲ್ ನಿಂದ ಚೋಟಾ ಮಂಗಳೂರು ರಸ್ತೆ ಅಭಿವೃದ್ಧಿಗೆ ರೂ. 1 ಕೋಟಿ ಅನುದಾನವನ್ನು ಬಿಡುಗಡೆಗೊಳಿಸಲಾಗಿದೆ. ಶಾಂತಿ ಕಾಪಾಡಿದಲ್ಲಿ ಅಭಿವೃದ್ಧಿ ನೀಡಲು ಸಾಧ್ಯ ಎಂದರು.
ಈ ಸಂದರ್ಭ ನಗರಸಭೆ ಅಧ್ಯಕ್ಷ ಹುಸೈನ್ ಕುಂಞಿಮೋನು, ಉಳ್ಳಾಲ ವೆಂಕಟರಮಣ ದೇವಸ್ಥಾನದ ಅಧ್ಯಕ್ಷ ಶ್ರೀಕರ್ ಕಿಣಿ, ವಿಠಲ ಮಲ್ಯ, ಉಳ್ಳಾಲ ಮೊಗವೀರ ಸಂಘದ ಅಧ್ಯಕ್ಷ ಭರತ್ ಕುಮಾರ್ ಉಳ್ಳಾಲ್, ಮೊಗವೀರ ಗುರಿಕಾರ ಜಗದೀಶ ಸುವರ್ಣ, ಉಳ್ಳಾಲ ನಗರಸಭೆ ಸದಸ್ಯರಾದ ಫಾರುಕ್ ಉಳ್ಳಾಲ್, ಪೊಡಿಮೋನು, ಇಸ್ಮಾಯಿಲ್, ಬಾಝಿಲ್ ಡಿಸೋಜ, ಸ್ಥಾಯಿ ಸಮಿತಿ ಅಧ್ಯಕ್ಷ ಉಸ್ಮಾನ್ ಕಲ್ಲಾಪು, ಉಳ್ಳಾಲ ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ರವೀಂದ್ರರಾಜ್ ಉಳ್ಳಾಲ್, ಗುತ್ತಿಗೆದಾರ ಇಬ್ರಾಹಿಂ ಹೆಜಮಾಡಿ, ಇಸ್ಮಾಯಿಲ್ ಸೀದಿಯಬ್ಬ, ಯು.ಕೆ.ಯೂಸುಫ್, ಅಬ್ದುಲ್ಲಾ ಬಸ್ತಿಪಡ್ಪು, ಫಾರುಕ್ ಬಸ್ತಿಪಡ್ಪು, ಯು.ಬಿ.ಅಝೀರ್ ಬಸ್ತಿಪಡ್ಪು, ಆನಂದ ಸಪಲ್ಯ ಉಳಿಯ, ರಾಜೇಂದ್ರ ಬಂಡಸಾಲೆ, ದೂಮಣ್ಣ ಕುಂಪಲ ಮೊದಲಾದವರು ಉಪಸ್ಥಿತರಿದ್ದರು.
ಉಳ್ಳಾಲ ನಗರಸಭೆ ಸದಸ್ಯ ಇಸ್ಮಾಯಿಲ್ ನಿರ್ವಹಿಸಿದರು. ಅಹಮ್ಮದ್ ಬಾವ ಕೊಟ್ಟಾರ ವಂದಿಸಿದರು.