ಮಂಗಳೂರು ವಿಮಾನ ದುರಂತಕ್ಕೆ ಏಳು ವರ್ಷ

Update: 2017-05-22 04:16 GMT

ಮಂಗಳೂರು, ಮೇ 21: ಬಜ್ಪೆ ಕೆಂಜಾರಿನಲ್ಲಿ ಭೀಕರ ವಿಮಾನ ದುರಂತ ಸಂಭವಿಸಿ ಸೋಮವಾರಕ್ಕೆ (ಮೇ 22) ಏಳು ವರ್ಷ ಗಳಾಗಲಿವೆ. ಆದರೆ ಇದರ ಸಂತ್ರಸ್ತರ ಕುಟುಂಬಗಳಿಗೆ ಇನ್ನೂ ಸೂಕ್ತ ನ್ಯಾಯ ಸಿಕ್ಕಿಲ್ಲ. ಸುಮಾರು 50ಕ್ಕೂ ಅಧಿಕ ಸಂತ್ರಸ್ತರ ಕುಟುಂಬ ಕೇರಳ ಹೈಕೋರ್ಟ್‌ನಲ್ಲಿ ದಾವೆ ಹೂಡಿ ನ್ಯಾಯದ ನಿರೀಕ್ಷೆಯಲ್ಲಿವೆ. ಈ ಮಧ್ಯೆ ಕನಿಷ್ಠ 75 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಕೇರಳದ ಸಂತ್ರಸ್ತರೊಬ್ಬರ ಕುಟುಂಬದ ಸದಸ್ಯರು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ. ಈ ಹಿನ್ನೆಲೆ ಯಲ್ಲಿ ಇತರ ಸಂತ್ರಸ್ತರ ಕುಟುಂಬಸ್ಥರು ಸುಪ್ರೀಂ ಕೋರ್ಟ್ ಆದೇಶಕ್ಕಾಗಿ ಕಾಯುತ್ತಿದ್ದಾರೆ.

2010ರ ಮೇ 22ರಂದು ಮುಂಜಾನೆ ಸುಮಾರು 6:20ಕ್ಕೆ ದುಬೈಯಿಂದ ಬಜ್ಪೆ ಕೆಂಜಾರಿನಲ್ಲಿರುವ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಆರು ಸಿಬ್ಬಂದಿ ಸಹಿತ 166 ಮಂದಿ ಇದ್ದರು. ಈ ವಿಮಾನ ಲ್ಯಾಂಡ್ ಆಗುವ ಸಂದರ್ಭ ಇದ್ದಕ್ಕಿದ್ದಂತೆ ರನ್‌ವೇಯಿಂದ ಜಾರಿ ಪ್ರಪಾತಕ್ಕೆ ಬಿದ್ದಿದೆ. ಈಮಧ್ಯೆ ಎಂಟು ಮಂದಿ ಜಿಗಿದು ಪಾರಾಗಿದ್ದರೆ, 158 ಮಂದಿ ಸುಟ್ಟು ಕರಕಲಾಗಿದ್ದರು. ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿದ್ದ ಈ ದುರಂತದಲ್ಲಿ ಮಡಿದವರಿಗೆ ಎಲ್ಲೆಡೆಯಿಂದ ಶೋಕ ವ್ಯಕ್ತವಾಗಿತ್ತು. ಮಡಿದವರ ಪೈಕಿ ಗುರುತು ಪತ್ತೆಯಾಗದ 10 ಮೃತದೇಹಗಳನ್ನು ದ.ಕ. ಜಿಲ್ಲಾಡಳಿತವು ಕೂಳೂರು-ತಣ್ಣೀರುಬಾವಿ ಬಳಿ ಸರ್ವಧರ್ಮಗಳ ಶಾಸ್ತ್ರ ಪ್ರಕಾರ ಅಂತಿಮ ಸಂಸ್ಕಾರ ಮಾಡಿಸಿತ್ತು. ಅಲ್ಲಿ ಇದೀಗ ವಿಮಾನ ದುರಂತ ಸ್ಮಾರಕ ಉದ್ಯಾನವನ ನಿರ್ಮಿ ಸಲಾಗಿದೆ. ಪ್ರತೀ ವರ್ಷ ಜಿಲ್ಲಾಡಳಿತ ಅಲ್ಲಿ ದುರಂತದಲ್ಲಿ ಮಡಿದವರನ್ನು ಸ್ಮರಿಸುವ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ.

ದುರಂತ ಸಂಭವಿಸಿದ ಬಳಿಕ ಸಂತ್ರಸ್ತರ ಕುಟುಂಬಸ್ಥರು ಸಭೆ ಸೇರಿ ಪರಿಹಾರಕ್ಕಾಗಿ ಸಮಾಲೋಚನೆ ನಡೆಸಿದರು. ಸಂಘಟನೆ ರಚಿಸಿಕೊಂಡರು. ಅಂತಿಮವಾಗಿ ಮುಂಬೈಯ ಕಾನೂನು ತಜ್ಞ ಎಚ್.ಡಿ. ನಾನಾವತಿಯ ನೇತೃತ್ವದ ಮುಲ್ಲ ಆ್ಯಂಡ್ ಮುಲ್ಲ ಎಂಬ ಸಂಸ್ಥೆಯನ್ನು ಸಂಪರ್ಕಿಸಿದರು. ಈ ಸಂಸ್ಥೆಯು ಬಹುತೇಕ ಸಂತ್ರಸ್ತ ಕುಟುಂಬಗಳಿಗೆ ಕನಿಷ್ಠ 25 ಲಕ್ಷ ರೂ. ಹಾಗೂ ಗರಿಷ್ಠ 7.75 ಕೋ.ರೂ. ಪರಿಹಾರ ಒದಗಿಸಿತ್ತು. ಈ ಮಧ್ಯೆ ಕೆಲವರು ಸಿಕ್ಕಿದ ಪರಿಹಾರಕ್ಕೆ ತೃಪ್ತಿ ಹೊಂದಿ ಸ್ಥಳೀಯ ನ್ಯಾಯಾಲಯ ಮಟ್ಟದಲ್ಲೇ ಪ್ರಕರಣ ಸಮಾಪ್ತಿ ಗೊಳಿಸಿದರೆ ಕೆಲವರು ಪರಿಹಾರ ತೃಪ್ತಿಕರವಾಗಿಲ್ಲ ಮತ್ತು ವಾಯು ಅಪಘಾತದ ಪರಿಹಾರದ ಕುರಿತು ಅಂತಾರಾಷ್ಟ್ರೀಯ ಒಪ್ಪಂದ ‘ಮೋಂಟ್ರಿಯಲ್ ಕನ್ವೆನ್ಷನ್’ನ ಅನ್ವಯ ಪರಿಹಾರ ಸಿಗಬೇಕು ಎಂದು ಒತ್ತಾಯಿಸಿ ಕೇರಳ ಹೈಕೋರ್ಟ್ ಮೊರೆ ಹೋದರು. ಅದರಂತೆ ಕೇರಳ ಹೈಕೋರ್ಟ್ ಮೊದಲ ಹಂತದಲ್ಲಿ ಎಲ್ಲರಿಗೂ ತಲಾ 75 ಲಕ್ಷ ರೂ. ಪರಿಹಾರ ನೀಡ ಬೇಕು ಎಂದು ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಏರ್ ಇಂಡಿಯಾ ಕಂಪೆನಿಯು ತ್ರಿಸದಸ್ಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿತು. ಈ ಪೀಠವು ಕಂಪೆನಿಯ ಪರವಾಗಿ ತೀರ್ಪು ನೀಡಿತು. ಸಂತ್ರಸ್ತರು ಇದರ ವಿರುದ್ಧ ಹೆಚ್ಚುವರಿ ಪರಿಹಾರಕ್ಕಾಗಿ ಸುಪ್ರೀಂ ಕೋರ್ಟ್‌ನ ಮೊರೆ ಹೋಗಿದ್ದಾರೆ.

 ಈ ಬಗ್ಗೆ ‘ವಾರ್ತಾಭಾರತಿ’ಗೆ ಪ್ರತಿಕ್ರಿಯೆ ನೀಡಿರುವ ಸಂತ್ರಸ್ತರ ಪರ ನ್ಯಾಯವಾದಿ ವರದರಾಜ್, ‘ಕಂಪೆನಿಯ ಪರವಾದ ತೀರ್ಪನ್ನು ಪ್ರಶ್ನಿಸಿ ಸಂತ್ರಸ್ತ್ಥರ ಕುಟುಂಬಸ್ಥರು 2012ರಲ್ಲಿ ಸುಪ್ರೀಂ ಕೋರ್ಟ್‌ನ ಮೆಟ್ಟಲೇರಿದ್ದಾರೆ. ಆ ವ್ಯಾಜ್ಯವಿನ್ನೂ ನಡೆಯುತ್ತಿದೆ. ಅಂತಿಮ ತೀರ್ಪು ಇನ್ನಷ್ಟೇ ಹೊರ ಬೀಳಬೇಕಿದೆ. ಅಂತೂ ಸಂತ್ರಸ್ತರ ಕುಟುಂಬಸ್ಥರಿಗೆ ಹೆಚ್ಚುವರಿ ಪರಿಹಾರಕ್ಕಾಗಿ ಸಮರ್ಥವಾಗಿ ವಾದ ಮಂಡಿಸುವ ಪ್ರಕ್ರಿಯೆ ನಡೆಯುತ್ತಿದೆ’ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News