ಶತಮಾನ ಕಂಡ ಗಂಗೊಳ್ಳಿ ಸರಕಾರಿ ಉರ್ದು ಶಾಲೆ ಉಳಿಸಲು ಹಳೆ ವಿದ್ಯಾರ್ಥಿಗಳ ಪ್ರಯತ್ನ

Update: 2017-05-23 18:12 GMT

ಕುಂದಾಪುರ, ಮೇ 23: ಆಂಗ್ಲ ಮಾಧ್ಯಮ ಶಾಲೆಯ ಪ್ರಭಾವದಿಂದ ಸರಕಾರಿ ಶಾಲೆಗಳು ಮುಚ್ಚುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಸರಕಾರಿ ಉರ್ದು ಶಾಲೆಯನ್ನು ಉಳಿಸಿಕೊಳ್ಳುವುದು ಕೂಡಾ ಸವಾಲಿನ ಕೆಲಸವಾಗಿದೆ. ಇಂಥ ಪರಿಸ್ಥಿತಿಯಲ್ಲಿ ತಾವು ಕಲಿತ ಹಾಗೂ ಶತಮಾನ ಕಂಡ ಗಂಗೊಳ್ಳಿ ಸರಕಾರಿ ಉರ್ದು ಶಾಲೆಯನ್ನು ಅಲ್ಲಿನ ಹಳೆ ವಿದ್ಯಾರ್ಥಿಗಳು ಉಳಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.


1895ರಲ್ಲಿ ಗಂಗೊಳ್ಳಿಯ ಮನೆಯೊಂದರ ಅಂಗಳದಲ್ಲಿ ಪ್ರಾರಂಭವಾದ ಈ ಶಾಲೆಯು ಇಂದು 122 ವರ್ಷಗಳನ್ನು ಪೂರೈಸಿದೆ. 1950ರಲ್ಲಿ ನಾಖುದಾ ಮುಹಮ್ಮದ್ ಮೀರಾನ್ ಸಾಹೇಬ್ ಶಾಲೆಗಾಗಿ ಸುಮಾರು 50 ಸೆಂಟ್ಸ್ ಜಾಗವನ್ನು ದಾನ ಮಾಡಿದ್ದರು. ಆರಂಭದಲ್ಲಿ ಹಿಂದುಸ್ಥಾನಿ ಉರ್ದು ಶಾಲೆ ಎಂದು ಹೆಸರಿಸಲ್ಪಟ್ಟ ಈ ಶಾಲೆ ಈಗ ಸರಕಾರಿ ಉರ್ದು ಹಿರಿಯ ಪ್ರಾಥ ಮಿಕ ಶಾಲೆಯಾಗಿ ಮರು ನಾಮಕರಣಗೊಂಡಿದೆ.

ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡಿದ ಈ ಶಾಲೆ ಇದೀಗ ಮುಚ್ಚುವ ಹಂತಕ್ಕೆ ಬಂದು ತಲುಪಿದೆ. ಶಾಲೆ ಉಳಿಸುವ ನಿಟ್ಟಿನಲ್ಲಿ ಮಕ್ಕಳ ಸಂಖ್ಯೆ ಏರಿಸಲು ಹಳೆ ವಿದ್ಯಾರ್ಥಿಗಳು ಅವಿರತ ಪರಿಶ್ರಮ ಪಡುತ್ತಿದ್ದಾರೆ. ಇದಕ್ಕಾಗಿ ಮಕ್ಕಳನ್ನು ಶಾಲೆ ಯತ್ತ ಆಕರ್ಷಿಸಲು ಶಿಕ್ಷಣಕ್ಕೆ ಪೂರಕವಾಗುವ ಸೌಲಭ್ಯಗಳನ್ನು ಒದಗಿಸಲು ಮುಂದಾಗಿದ್ದಾರೆ. 2000ನೆ ಇಸವಿಯಲ್ಲ್ಲಿ ಆರಂಭವಾದ ಹಳೆ ವಿದ್ಯಾರ್ಥಿ ಸಂಘವು ಶಾಲೆಗೆ ಅಗತ್ಯವಾಗಿರುವ ಸಹಾಯಕಿಯರನ್ನು ನೇಮಿಸಿದೆ. 

ಎಲ್ಲಾ ಮಕ್ಕಳಿಗೂ ಕಂಪ್ಯೂಟರ್ ಶಿಕ್ಷಣ, ಇಂಗ್ಲೀಷ್ ಸ್ಪೀಕಿಂಗ್ ತರಗತಿ ನೀಡಲಾಗುತ್ತಿದೆ. ಗೌರವ ಶಿಕ್ಷಕಿಯರು ಹಾಗೂ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳ ಸಂಪೂರ್ಣ ವೆಚ್ಚವನ್ನು ಸಂಘವೇ ಭರಿಸುತ್ತಿದೆ ಎಂದು ಸಂಘದ ಅಧ್ಯಕ್ಷ ಅಬ್ದುಲ್ ಹಮೀದ್ ಸೋಮವಾರ ಶಾಲೆಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ವಿದ್ಯಾರ್ಥಿಗಳನ್ನು ಶಾಲೆಗೆ ಕರೆತರಲು ದಾನಿಗಳ ಮೂಲಕ ಹಣ ಸಂಗ್ರಹಿಸಿ ಎರಡು ಬಸ್ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗಿದೆ. ಈ ಎಲ್ಲಾ ಸೌಲಭ್ಯಗಳಿಗೆ ಪ್ರತಿ ತಿಂಗಳು ಸುಮಾರು 70,000 ರೂ. ವನ್ನು ಸಂಘ ಭರಿಸುತ್ತಿದೆ. ಮಕ್ಕಳ ದಾಖಲಾತಿ ಹೆಚ್ಚಿಸಲು ಬೇಸಿಗೆ ರಜೆಯಲ್ಲಿ ಶಿಕ್ಷಕರು 20ದಿನಗಳ ಕಾಲ ಹಳೆ ವಿದ್ಯಾರ್ಥಿಗಳ ಜೊತೆ ಮನೆಮನೆಗೆ ತೆರಳಿ ಶಾಲೆಯಲ್ಲಿನ ವಿಶೇಷ ಸೌಲಭ್ಯಗಳ ಬಗ್ಗೆ ಹೇಳುವ ಕೆಲಸ ಮಾಡುತ್ತಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಶಹಾಬುದ್ದೀನ್, ಮುಹಮ್ಮದ್ ಔಫ್, ಕಾರ್ಯದರ್ಶಿ ಅಬ್ದುಲ್ ಹಾದಿ, ಸಮಾಜಸೇವಕ ಇಬ್ರಾಹೀಂ ಗಂಗೊಳ್ಳಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News