ಕಾಲೇಜು ನಿರ್ಮಿಸುವುದು ನನ್ನ ಕನಸು: ಹರೇಕಳ ಹಾಜಬ್ಬ
ಉಡುಪಿ, ಮೇ 27: ಮುಂದೆ ಕಾಲೇಜು ನಿರ್ಮಿಸುವುದು ನನ್ನ ಕನಸಾಗಿದ್ದು, ಇದಕ್ಕೆ ಅನುಮತಿ ನೀಡುವಂತೆ ಈಗಾಗಲೇ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರಿಗೆ ಮನವಿ ಸಲ್ಲಿಸಿದ್ದೇನೆ. ಅದೇ ರೀತಿ ಸಚಿವ ಯು.ಟಿ.ಖಾದರ್ ಕೂಡ ಇದಕ್ಕೆ ಸ್ಪಂದಿಸಿದ್ದಾರೆ ಎಂದು ಅಕ್ಷರ ಸಂತ ಹರೇಕಳ ಹಾಜಬ್ಬ ಹೇಳಿದ್ದಾರೆ.
ಉಡುಪಿಯ ಬಿಯಿಂಗ್ ಸೋಶಿಯಲ್ ವತಿಯಿಂದ ತ್ರಿಶಾ ಕ್ಲಾಸೆಸ್ ಹಾಗೂ ಎಂಜಿಎಂ ಕಾಲೇಜಿನ ಸಹಯೋಗದೊಂದಿಗೆ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಲಾದ ‘ಹೆಜ್ಜೆ ಗುರುತು’ ಸಾಧಕರ ಯಶೋಗಾಥೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.
1978ರಿಂದ ಹಂಪನಕಟ್ಟೆ ಬಸ್ ನಿಲ್ದಾಣದಲ್ಲಿ ಗೋವಾ ಪಣಜಿ ಬಸ್‌ಗಳಲ್ಲಿ ಬರುವ ಪ್ರಯಾಣಿಕರಿಗೆ ಕಿತ್ತಲೆ ಹಣ್ಣು ಮಾರಾಟ ಮಾಡುತ್ತಿರುವಾಗ ವಿದೇಶಿ ಜೋಡಿಯ ಇಂಗ್ಲಿಷ್ ಭಾಷೆಯ ಪ್ರಶ್ನೆಯಿಂದಾಗಿ ಮುಜುಗರಕ್ಕೆ ಒಳಗಾಗಿ ನಮ್ಮ ಊರಿನ ಮಕ್ಕಳು ಈ ರೀತಿಯ ಮುಜುಗರ ಅನುಭವಿಸಬಾರದೆಂದು ಸಂಕಲ್ಪ ಮಾಡಿ, ಶಾಲೆ ನಿರ್ಮಿಸುವ ಕನಸು ಕಂಡೆನು ಎಂದರು.
ನನ್ನನು ಸಮಾಜ, ಮಾಧ್ಯಮ ಗುರುತಿಸಿದೆ. ಇದರಿಂದ ನನಗೆ ಸಾಕಷ್ಟು ಪ್ರಶಸ್ತಿ ಗಳು ದೊರೆತಿವೆ. ಅವುಗಳ ಎಲ್ಲ ಮೊತ್ತವನ್ನು ಶಾಲೆಯ ಅಭಿವೃದ್ಧಿಗಾಗಿಯೇ ವಿನಿಯೋಗಿಸಿದ್ದೇನೆ. ಸದ್ಯ ನಮ್ಮ ಶಾಲೆಯಲ್ಲಿ 192 ಮಕ್ಕಳು ಕಲಿಯುತ್ತಿದ್ದಾರೆ. ಇಂಗ್ಲಿಷ್ ವ್ಯಾಮೋಹದಿಂದಾಗಿ ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆ ಕಡಿಮೆ ಯಾಗುತ್ತಿದೆ. ಎಲ್ಲರು ಸೇರಿ ನನ್ನ ಶಾಲೆಯನ್ನು ಉಳಿಸಿಕೊಡಿ ಎಂದು ಅವರು ಮನವಿ ಮಾಡಿದರು.
ನನಗೆ ಇಬ್ಬರು ಹೆಣ್ಣು ಮಕ್ಕಳು. ದೊಡ್ಡವಳಿಗೆ 23ವರ್ಷ ವಯಸ್ಸಾಗಿದೆ. ಈಗ ಎಲ್ಲೆಡೆ ವರದಕ್ಷಿಣೆಯದ್ದೆ ಸಮಸ್ಯೆ. ಉತ್ತಮ ವರ ಸಿಗದೆ ಇನ್ನು ಮದುವೆಯಾಗಿಲ್ಲ. ಆಕೆಗೆ ಮದುವೆ ಮಾಡುವುದು ನನ್ನ ಕೊನೆಯ ಆಸೆ ಎಂದು ಅವರು ತಿಳಿಸಿ ದರು. ಈ ಸಂದರ್ಭದಲ್ಲಿ ಸತೀಶ್ ಪೂಜಾರಿ ಎಂಬವರು ಹಾಜಬ್ಬರ ಮಗಳ ಮದುವೆಗೆ 10ಸಾವಿರ ರೂ. ನೀಡಿ ಮಾನವೀಯತೆ ಮೆರೆದರು.
ಹಾಜಬ್ಬರ ಯಶೋಗಾಥೆ ಧಾರವಾಡ, ಮಂಗಳೂರು ಹಾಗೂ ಕುವೆಂಪು ವಿವಿ ಯಲ್ಲಿ ಪಠ್ಯವಾಗಿದೆ. ಮುಂದೆ ತುಳು ಪಠ್ಯದಲ್ಲಿ ಇವರ ಯಶೋಗಾಥೆ ಯನ್ನು ಸೇರಿಸಲು ಇಲಾಖೆ ಒಪ್ಪಿಗೆ ನೀಡಿದೆ. ಇವರು ಈಗಲೂ ಶಾಲೆಗೆ ಹೋಗಿ ಪ್ರತಿದಿನ ಕಸ ಗುಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕಾರ್ಯಕ್ರಮ ನಡೆಸಿ ಕೊಟ್ಟ ಅವಿನಾಶ್ ಕಾಮತ್ ತಿಳಿಸಿದರು.
ಕಾರ್ಯಕ್ರಮಕ್ಕೆ ಯಕ್ಷಗಾನ ಕೇಂದ್ರದ ಗುರು ಬನ್ನಂಜೆ ಸಂಜೀವ ಸುವರ್ಣ ಚಾಲನೆ ನೀಡಿದರು. ಮುಖ್ಯ ಅತಿಥಿಯಾಗಿ ಮಂಗಳೂರು ವಿವಿ ಸೆನೆಟ್ ಸದಸ್ಯ ಅಮೃತ್ ಶೆಣೈ ಮಾತನಾಡಿದರು. ರವಿರಾಜ್ ಎಚ್.ಪಿ. ಸ್ವಾಗತಿಸಿ ಪ್ರಾಸ್ತಾವಿಕ ವಾಗಿ ಮಾತನಾಡಿದರು. ನಂದಾ ವಂದಿಸಿದರು. ಜ್ಯೋತಿ ಕಾರ್ಯಕ್ರಮ ನಿರೂ ಪಿಸಿದರು.