ಕಡಲ್ಕೊರೆತ ಸಮಸ್ಯೆ ಎದುರಿಸಲು ಸಜ್ಜಾಗಿ: ಸಚಿವ ಖಾದರ್ ಸೂಚನೆ
ಮಂಗಳೂರು, ಮೇ 28: ಉಳ್ಳಾಲ ಕೋಟೆಪುರ, ಸೋಮೇಶ್ವರ ಆಸುಪಾಸು ಕಡಲ್ಕೊರೆತ ಸಮಸ್ಯೆಯನ್ನು ಎದುರಿಸಲು ಅಧಿಕಾರಿಗಳು ಸಜ್ಜಾಗಬೇಕು ಎಂದು ಸಚಿವ ಯು.ಟಿ.ಖಾದರ್ ಸೂಚಿಸಿದರು.
ದ.ಕ.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರವಿವಾರ ನಡೆದ ಮಳೆಗಾಲ ಸಿದ್ಧತೆ-ಕಡಲ್ಕೊರೆತ ನಿರ್ವಹಣೆ ಬಗ್ಗೆ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಡಲ್ಕೊರೆತ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಸಮಸ್ಯೆಯಾದ ಬಳಿಕ ಪರಿಹರಿಸಲು ಮುಂದಾಗುವ ಬದಲು ಮುಂಚಿತವಾಗಿ ಎಚ್ಚೆತ್ತುಕೊಳ್ಳಬೇಕು. ಎಡಿಬಿ ಯೋಜನೆಯಡಿ 223 ಕೋ.ರೂ. ವೆಚ್ಚದ ಕಾಮಗಾರಿ ತೃಪ್ತಿಕರವಾಗಿಲ್ಲ. ತಂತ್ರಜ್ಞರ ಸಲಹೆಯಂತೆ ಕೈಗೆತ್ತಿಕೊಂಡ ಕಾಮಗಾರಿಗೆ ಸಂಬಂಧಿಸಿದಂತೆ ಜನಪ್ರತಿನಿಧಿಗಳಾರೂ ಹಸ್ತಕ್ಷೇಪ ಮಾಡಿಲ್ಲ. ಮಳೆಗಾಲ ಆರಂಭವಾಗುತ್ತಿದ್ದು, ಉಳ್ಳಾಲ ಮತ್ತು ಕೋಟೆಕಾರು ಭಾಗದಲ್ಲಿ ಹೆಲ್ಪ್‌ಲೈನ್ ತೆರೆಯಬೇಕು. ಜನರ ಆಸ್ತಿಪಾಸ್ತಿ ರಕ್ಷಿಸಬೇಕು. ಪ್ರಕೃತಿ ವಿಕೋಪ ಎದುರಿಸಲು ಸ್ಥಳೀಯಾಡಳಿತದ ಸಹಕಾರ ಪಡೆದು ಮುಂಜಾಗರೂಕತಾ ಕ್ರಮ ಜರಗಿಸಬೇಕು ಎಂದು ಖಾದರ್ ಹೇಳಿದರು.
ಕಡಲ್ಕೊರೆತ ಸಹಿತ ಪ್ರಕೃತಿ ವಿಕೋಪ ಸಂಭವಿಸಿದರೆ ತುರ್ತು ಕಾಮಗಾರಿ ನಡೆಸಲು ಮತ್ತು ಪರಿಹಾರ ಕಲ್ಪಿಸಲು 5 ಕೋ.ರೂ. ಆವಶ್ಯಕತೆಯಿದೆ. ಉಳ್ಳಾಲ ಮುಕ್ಕಚೇರಿ ಸಮೀಪದ ಹಿಲರಿ ನಗರದಲ್ಲಿ ಕಡಲ್ಕೊರೆತ ಸಂಭವಿಸಿದಾಗ ಪರಿಹಾರ ಕಲ್ಪಿಸುವುದಕ್ಕಾಗಿ ತೆರಳಲು ರಸ್ತೆ ಇಲ್ಲ. ಸಮುದ್ರಕ್ಕೆ ತಾಗಿಯೇ ಮನೆಗಳಿರುವುದರಿಂದ ಸಮಸ್ಯೆಯಾಗುತ್ತದೆ ಎಂದು ಅಧಿಕಾರಿಯೊಬ್ಬರು ಸಭೆಯ ಗಮನ ಸೆಳೆದರು.
ಅಪಾಯದ ಅಂಚಿನಲ್ಲಿರುವ ಮನೆಗಳ ಸರ್ವೆ ಮಾಡಬೇಕು ಮತ್ತು ಅವುಗಳನ್ನು ತೆರವುಗೊಳಿಸಲು ಕುಟುಂಬಸ್ಥರ ಮನವೊಲಿಸಬೇಕು. ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ.ಜಿ.ಜಗದೀಶ್ ಹೇಳಿದರು.
ಅನುಮತಿ ಪಡೆದುಕೊಳ್ಳಿ: ಮಂಗಳೂರು (ಉಳ್ಳಾಲ) ಕ್ಷೇತ್ರ ವ್ಯಾಪ್ತಿಯ ಮಂಜನಾಡಿ, ಪಾವೂರು, ಬೆಳ್ಮ, ಕಿನ್ಯ, ಕೊಣಾಜೆ ಮತ್ತಿತರ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಪಿಡಿಒ ಅಥವಾ ಕಾರ್ಯದರ್ಶಿ ಸೇರಿ ನೇರ ಪೂರೈಕೆ ಮಾಡುವುದು ಬೇಡ. ಗ್ರಾಪಂ ಆಡಳಿತದ ಅನುಮತಿ ಪಡೆದು ಸೂಕ್ತ ದರ ನಿಗದಿಪಡಿಸಿದ ಬಳಿಕ ನೀರು ಪೂರೈಕೆ ಮಾಡಿ ಎಂದು ಸಚಿವ ಖಾದರ್ ತಾಕೀತು ಮಾಡಿದರು.
ಚರಂಡಿಯ ಹೂಳೆತ್ತಿ: ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಜಿಲ್ಲಾ ಮತ್ತು ಗ್ರಾಮ ಮಟ್ಟದ ರಸ್ತೆಗಳ ಇಕ್ಕೆಲಗಳಲ್ಲಿನ ಚರಂಡಿಯ ಹೂಳೆತ್ತಲು ಕ್ರಮ ಜರಗಿಸಬೇಕು. ಯಾವ ಕಾರಣಕ್ಕೂ ಮಳೆ ನೀರು ರಸ್ತೆಯಲ್ಲಿ ಹರಿಯದಂತೆ ನೋಡಿಕೊಳ್ಳಿ. ಮೆಸ್ಕಾಂ, ಅಗ್ನಿಶಾಮಕ ದಳ ಕೂಡ ಮಳೆಗಾಲದ ಸಮಸ್ಯೆ ಎದುರಿಸಲು ಮುಂದಾಗಬೇಕು. ಇಲಾಖೆಯೊಳಗೆ ಈಗಲೇ ಸಂವಹನ ಮಾಡಿಕೊಳ್ಳಿ. ಸಮಸ್ಯೆಗಳಿದ್ದರೆ ತನ್ನ ಗಮನಕ್ಕೆ ತರುವಂತೆ ಸಚಿವ ಖಾದರ್ ಸೂಚಿಸಿದರು.
ತಿಂಗಳೊಳಗೆ ಅರ್ಜಿ ವಿಲೇವಾರಿ: 94 ಸಿ ಅಡಿ ಸಾಕಷ್ಟು ಅರ್ಜಿಗಳು ವಿಲೇವಾರಿಯಾಗದೆ ಬಾಕಿಯುಳಿದ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವ ಖಾದರ್, ಜೂನ್‌ನೊಳಗೆ ಎಲ್ಲ ಅರ್ಜಿಗಳನ್ನು ವಿಲೇ ಮಾಡಬೇಕು. ಎಲ್ಲ ಪ್ರಕ್ರಿಯೆ ಮುಗಿದ ಬಳಿಕವಷ್ಟೆ ಅರ್ಜಿದಾರರಿಂದ ಶುಲ್ಕ ವಸೂಲಿ ಮಾಡಬೇಕು. ಅರ್ಜಿಯೊಂದಿಗೆ ಹಣಕ್ಕೆ ಬೇಡಿಕೆ ಸಲ್ಲಿಸಿದರೆ ಕಠಿಣ ಕ್ರಮ ಜರಗಿಸಲಾಗುವುದು ಎಂದು ಎಚ್ಚರಿಸಿದರು.
ಸಭೆಯಲ್ಲಿ ದ.ಕ.ಜಿಪಂ ಸಿಇಒ ಡಾ.ಎಂ.ಆರ್ ರವಿ, ಅಪರ ಜಿಲ್ಲಾಧಿಕಾರಿ ಕುಮಾರ್, ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು, ಬಂಟ್ವಾಳ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರಾ ಉಪಸ್ಥಿತರಿದ್ದರು.
ಟೋಲ್‌ಗೇಟ್ ವ್ಯವಸ್ಥಾಪಕರ ವಿರುದ್ಧ ಪ್ರಕರಣ: ತಲಪಾಡಿ ಟೋಲ್‌ಗೇಟ್ ಸಿಬ್ಬಂದಿ ವರ್ಗವು ಪ್ರಯಾಣಿಕರ ಮೇಲೆ ಹಲ್ಲೆ ನಡೆಸುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸಚಿವ ಯು.ಟಿ. ಖಾದರ್, ಪ್ರಯಾಣಿಕರ ಮೇಲೆ ಹಲ್ಲೆ ನಡೆಸಿ ಕಾನೂನು ಕೈಗೆತ್ತಿಕೊಳ್ಳುವ ಟೋಲ್ ಸಿಬ್ಬಂದಿಯ ವಿರುದ್ಧ ಕ್ರಮ ಜರಗಿಸುವುದರ ಜೊತೆಗೆ ಟೋಲ್‌ಗೇಟ್ ವ್ಯವಸ್ಥಾಪಕರ ವಿರುದ್ಧ ಪ್ರಕರಣ ದಾಖಲಿಸಲಾಗುವು ಎಂದು ಎಚ್ಚರಿಸಿದರು.
ಎಂಡೋ ಪರಿಹಾರ ದುರುಪಯೋಗ ತಡೆಗಟ್ಟಿ: ಸಂತ್ರಸ್ತರಲ್ಲದ ಕೆಲವರು ಎಂಡೋ ಪರಿಹಾರ ಪಡೆದುಕೊಳ್ಳುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಕೆಲವರ ಬೇಡಿಕೆ ಪಟ್ಟಿ ಕೂಡ ಬೆಳೆಯುತ್ತಾ ಇದೆ. ಹೀಗೆ ಎಂಡೋ ಹೆಸರನ್ನು ದುರುಪಯೋಗಪಡಿಸಿಕೊಂಡು ಪರಿಹಾರ ಪಡೆಯುವವರನ್ನು ಪತ್ತೆ ಹಚ್ಚುವ ಕಾರ್ಯ ಆಗಬೇಕು ಎಂದು ಸಚಿವ ಖಾದರ್ ಸೂಚಿಸಿದರು.