ಜಾರಂದಗುಡ್ಡೆ-ಕನಪಾಡಿ ರಸ್ತೆ ಕಾಮಗಾರಿಗೆ ಶಿಲಾನ್ಯಾಸ
ಬಂಟ್ವಾಳ, ಜೂ. 3: ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಶುದ್ದೀಕರಿಸಿದ ನೀರನ್ನು ಎಲ್ಲ ಜನರಿಗೂ ಒದಗಿಸುವ ರಾಜ್ಯದ ಏಕೈಕ ವಿಧಾನಸಭಾ ಕ್ಷೇತ್ರ ಬಂಟ್ವಾಳವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.
'ನಮ್ಮ ಗ್ರಾಮ ನಮ್ಮ ರಸ್ತೆ' ಹಂತ 4 ಗಾಂಧಿಪಥ-ಗ್ರಾಮ ಪಥ ಇದರ 2.3 ಕೋಟಿ ರೂ. ಅನುದಾನದಲ್ಲಿ ಜಾರಂದಗುಡ್ಡೆ-ಕನಪಾಡಿ ರಸ್ತೆ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದ ಬಳಿಕ ಅವರು ಮಾತನಾಡಿದರು.
ಸರಕಾರ ಐದು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ ಮಂಜೂರಾತಿ ನೀಡಿದೆ. ಈಗಾಗಲೇ ಕೆಲವೊಂದು ಯೋಜನೆಗಳು ಪ್ರಾಯೋಗಿಕವಾಗಿ ಚಾಲನೆಗೊಂಡಿದ್ದು ಎರಡು ಯೋಜನೆಗಳಿಗೆ ಸರಕಾರ ಹೊಸದಾಗಿ ಮಂಜೂರಾತಿ ನೀಡಿದೆ. ಎಲ್ಲಾ ಯೋಜನೆಗಳು ಅನುಷ್ಠಾನಗೊಂಡ ಬಳಿಕ ಬಂಟ್ವಾಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಶಾಶ್ವತವಾಗಿ ದೂರವಾಗಲಿದೆ ಎಂದರು.
ಕಳ್ಳಿಗೆ ಗ್ರಾಮದ ಬಹುತೇಕ ರಸ್ತೆಗಳು ಅಭಿವೃದ್ಧಿಗೊಂಡಿದ್ದು, ನೆತ್ತರೆಕೆರೆ ಸಂಪರ್ಕ ರಸ್ತೆಯ ಅಭಿವೃದ್ಧಿ ಕಾಮಗಾರಿ ನಬಾರ್ಡ್ ಯೋಜನೆಯ ಮೂಲಕ ಈ ಬಾರಿ ಮಂಜೂರಾತಿಗೊಳ್ಳಬಹುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಜಿಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಬಂಟ್ವಾಳ ಪುರಸಭೆ ಅಧ್ಯಕ್ಷ ರಾಮಕೃಷ್ಣ ಆಳ್ವ, ಬಂಟ್ವಾಳ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಬಂಗೇರ, ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ಸದಸ್ಯ ಶಿವಪ್ರಸಾದ್ ಕನಪಾಡಿ, ಕಳ್ಳಿಗೆ ಗ್ರಾಪಂ ಅಧ್ಯಕ್ಷೆ ರತ್ನ, ಉಪಾಧ್ಯಕ್ಷ ಪುರುಷ ಸಾಲ್ಯಾನ್, ಸದಸ್ಯ ಮಧುಸೂದನ್ ಶೆಣೈ, ದಲಿತ ಮುಖಂಡ ಜನಾರ್ದನ ಚೆಂಡ್ತಿಮಾರ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸಂತೋಷ್ ಡಿ ಸ್ವಾಗತಿಸಿದರು, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಜಯಾನಂದ ಪೂಜಾರಿ ತಾಂತ್ರಿಕ ಪ್ರಸ್ತಾವನೆ ನೀಡಿದರು. ಮನೋಜ್ ಕನೋಪಾಡಿ ನಿರೂಪಿಸಿ, ವಂದಿಸಿದರು.