ಭ್ರಷ್ಟಾಚಾರ ಮುಕ್ತ ದೇಶವನ್ನಾಗಿಸಲು ಕೈಜೋಡಿಸಿ: ನ್ಯಾ.ವಿಶ್ವನಾಥ ಶೆಟ್ಟಿ

Update: 2017-06-04 16:08 GMT
ಉಡುಪಿ, ಜೂ.4: ಇಂದಿನ ಯುವಜನತೆ ಭಾರತವನ್ನು ಭ್ರಷ್ಟಾಚಾರ ಮುಕ್ತ ದೇಶವನ್ನಾಗಿಸುವ ಬಗ್ಗೆ ನಿರ್ಧಾರ ಕೈಗೊಳ್ಳಬೇಕು. ಇವರೊಂದಿಗೆ ದೇಶದ ಪ್ರತಿ ಯೊಬ್ಬರು ಕೈಜೋಡಿಸಬೇಕು. ಇದರಿಂದ ದೇಶ ಅಭಿವೃದ್ಧಿ ಪಥದಲ್ಲಿ ಸಾಗಲು ಸಾಧ್ಯ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ಹೇಳಿದ್ದಾರೆ. ಕಲ್ಯಾಣಪುರ ಸಂತೆಕಟ್ಟೆಯ ಶ್ರೀಆದಿಶಕ್ತಿ ವೀರಭದ್ರ ಬ್ರಹ ಲಿಂಗ ದೇವಸ್ಥಾನದ ಶ್ರೀಆದಿಶಕ್ತಿ ಮತ್ತು ಶ್ರೀವೀರಭದ್ರ ದೇವರ ನೂತನ ಗರ್ಭ ಗುಡಿ ಶಿಲಾನ್ಯಾಸ ಕಾರ್ಯಕ್ರಮವನ್ನು ರವಿವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು. ಕೇಂದ್ರ ಹಾಗೂ ರಾಜ್ಯ ಸರಕಾರ ಹಲವು ಸವಲತ್ತುಗಳು ಅರ್ಹ ಬಡ ಫಲಾನುಭವಿಗಳಿಗೆ ತಲುಪಿತ್ತಿಲ್ಲ. ಈ ನಿಟ್ಟಿನಲ್ಲಿ ಅಧಿಕಾರಿಗಳು ಹೆಚ್ಚಿನ ಮುತು ವರ್ಜಿ ವಹಿಸಿ ಪಾರದರ್ಶಕವಾಗಿ ಕೆಲಸ ಮಾಡಬೇಕು. ವಿವಿಧ ಕ್ಷೇತ್ರಗಳಲ್ಲಿ ಇರುವ ವಿಫುಲ ಅವಕಾಶಗಳನ್ನು ಯುವ ಜನತೆ ಬಳಸಿಕೊಳ್ಳಲು ಪೋಷಕರು ಪ್ರೋತ್ಸಾಹ ನೀಡಬೇಕು ಎಂದು ಅವರು ತಿಳಿಸಿದರು. ಮಂದಿರ, ಮಸೀದಿ, ಚರ್ಚ್‌ಗಳನ್ನು ಸಮಾಜದ ಒಳಿತಿಗಾಗಿ ಬಳಕೆ ಮಾಡಿ ಕೊಳ್ಳಬೇಕು. ಎಲ್ಲ ಧರ್ಮದವರೊಂದಿಗೆ ಸಹಕಾರ ಹಾಗೂ ಸೌಹಾರ್ದತೆ ಅಗತ್ಯ. ದೇವರ ಮೇಲಿನ ನಂಬಿಕೆಯು ಮೂಢನಂಬಿಕೆ ಆಗಬಾರದು. ನಂಬಿಕೆ ಯನ್ನು ಸರಿಯಾಗಿ ವಿಮರ್ಶಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು. ಪೇಜಾವರ ಕಿರಿಯ ಯತಿ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಶಿಲಾನ್ಯಾಸ ನೆರವೇರಿಸಿದರು. ಅಧ್ಯಕ್ಷತೆಯನ್ನು ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ. ನಿ.ಬೀ.ವಿಜಯ ಬಲ್ಲಾಳ್ ವಹಿಸಿದ್ದರು. ಜಿಪಂ ಸದಸ್ಯ ಜನಾರ್ದನ ತೋನ್ಸೆ, ಮಾಜಿ ಶಾಸಕ ಕೆ.ರಘುಪತಿ ಭಟ್, ಭಾಸ್ಕರ ಭಟ್ ಮುಖ್ಯ ಅತಿಥಿಗಳಾಗಿದ್ದರು. ಕ್ಷೇತ್ರ ಅರ್ಚಕ ರಾಮಕೃಷ್ಣನ್ ಉಪಾಧ್ಯಾಯ, ಪ್ರಧಾನ ಮೊಕ್ತೇಸರ ಕೆ.ಸದಾ ನಂದ ಶೆಟ್ಟಿಗಾರ್, ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷ ಸಿ.ಪ್ರಭಾಕರ್, ಗೌರವಾಧ್ಯಕ್ಷ ರಾಜೇಶ್ ಪಿ. ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News