ಮನಪಾ: ಬಯೋಮೆಟ್ರಿಕ್ ಹಾಜರಾತಿಗೆ ಸ್ವಾಗತ
ಮಂಗಳೂರು, ಜೂ.11: ಮಹಾನಗರ ಪಾಲಿಕೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ಬಯೋಮೆಟ್ರಿಕ್ ಹಾಜರಾತಿಯ ಪ್ರಕ್ರಿಯೆ ಕ್ಷಿಪ್ರಗತಿಯಲ್ಲಿ ಸಾಗಿದ್ದು, ಶೀಘ್ರದಲ್ಲೇ ಅನುಷ್ಠಾನಗೊಳ್ಳಲಿದೆ. ಬಯೋಮೆಟ್ರಿಕ್‌ಗೆ ಆಧಾರ್ ಕಾರ್ಡ್ ಕಡ್ಡಾಯವಾಗಿದ್ದು, ಪ್ರಸ್ತುತ ಆಧಾರ್ ಕಾರ್ಡ್ ವಿವರಣೆ ಯನ್ನು ಪಡೆಯುವ ಕಾರ್ಯ ನಡೆಯುತ್ತಿದೆ. ಈ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಯನ್ನು ಪೌರ ಕಾರ್ಮಿಕರು ಕೂಡಾ ಸ್ವಾಗತಿಸುತ್ತಾರೆ. ಆದರೆ, ಅದರ ಜತೆಯಲ್ಲೇ ತಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕೆಂಬುದು ಪೌರ ಕಾರ್ಮಿಕರ ಆಗ್ರಹ.
ಜನಸಾಮಾನ್ಯರು ನಡೆದಾಡುವ ವೇಳೆ, ವಾಹನದಲ್ಲಿ ಸಂಚರಿಸುವ ಸಂದರ್ಭ, ರಸ್ತೆಯ ಧೂಳಿಗೆ ಸಿಡುಕುವ, ಒಳಚರಂಡಿ ಹಾಗೂ ತ್ಯಾಜ್ಯದ ವಾಸನೆಗೆ ಮೂಗು ಮುಚ್ಚಿಕೊಳ್ಳುವ ಪರಿಸ್ಥಿತಿ ಇರಬೇಕಾದರೆ, ಅದೇ ರಸ್ತೆಯ ಧೂಳು, ಘನತ್ಯಾಜ್ಯ ಸಂಗ್ರಹ, ಒಳಚರಂಡಿಗಿಳಿದು ಸ್ವಚ್ಛಗೊಳಿಸುವ ಪೌರ ಕಾರ್ಮಿಕರ ಆರೋಗ್ಯದ ಸ್ಥಿತಿ ಹೇಗಿರಬೇಡ ಎಂಬುದನ್ನು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಆಲೋಚಿಸಲೇ ಬೇಕು. ಕಳೆದ ಮನಪಾ ಸಾಮಾನ್ಯ ಸಭೆಯಲ್ಲೂ ಇಂತಹದೊಂದು ಚರ್ಚೆ ನಡೆದಿತ್ತು. ಪೌರ ಕಾರ್ಮಿಕರು ದಿನದ ನಾಲ್ಕೈದು ಗಂಟೆಗಳಷ್ಟು ಮಾತ್ರವೇ ಕಾರ್ಯನಿರ್ವಹಿಸುತ್ತಾರೆಂದು ಸದಸ್ಯರೊಬ್ಬರು ದೂರಿದರೆ, ಪೌರ ಕಾರ್ಮಿಕರ ಕೆಲಸದ ಅವಧಿ ಬಗ್ಗೆ ಮಾತನಾಡುವ ನಾವು ಅವರ ಆರೋಗ್ಯದ ಬಗ್ಗೆ ಮಾತೇ ಆಡುವುದಿಲ್ಲ ಎಂದು ಇನ್ನೋರ್ವ ಸದಸ್ಯರು ಪ್ರತಿವಾದಿಸಿದ್ದರು.
ಇದಾಗಿ ಬಳಿಕ ಪೌರ ಕಾರ್ಮಿಕರ ಬಯೋಮೆಟ್ರಿಕ್ ಹಾಜರಾತಿಗೆ ಒತ್ತು ನೀಡಲಾಗಿದೆ. ಜತೆಗೆ ಖಾಯಂ ಪೌರ ಕಾರ್ಮಿಕರಿಗೆ ಆರೋಗ್ಯ ಕಾರ್ಡ್ ವಿತರಣೆಯ ಕಾರ್ಯವೂ ನಡೆದಿದೆ. ಮಹಾನಗರ ಪಾಲಿಕೆಯಲ್ಲಿ 219 ಖಾಯಂ ಪೌರ ಕಾರ್ಮಿಕರು, 42 ದಿನಕೂಲಿ ಹಾಗೂ 623 ಮಂದಿ ಮಹಾನಗರ ಪಾಲಿಕೆಯ ಘನತ್ಯಾಜ್ಯ ನಿರ್ವಹಣೆಯ ಆ್ಯಂಟನಿ ವೇಸ್ಟ್ ಸಂಸ್ಥೆಯಡಿ ಮತ್ತು 22 ಮಂದಿ ಪಚ್ಚನಾಡಿಯ ಘನತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಯುನಿಕ್ ವೇಸ್ಟ್ ಪ್ರೊಸೆಸಿಂಗ್ ಕಂಪೆನಿ ಲಿಮಿಟೆಡ್‌ನಡಿ ಹೊರಗುತ್ತಿಗೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಎಲ್ಲಾ ಕಾರ್ಮಿಕರಿಗೂ ಬಯೋಮೆಟ್ರಿಕ್ ಹಾಜರಾತಿಯನ್ನು ವ್ಯವಸ್ಥೆಗೊಳಿ ಸಲಾಗುತ್ತಿದೆ. ಇದಕ್ಕಾಗಿ ಈಗಾಗಲೇ ಖಾಯಂ ಹಾಗೂ ದಿನಕೂಲಿ ನೌಕರರ ಆಧಾರ್ ಕಾರ್ಡ್ ವಿವರವನ್ನು ಪಡೆಯಲಾಗಿದೆ.
‘‘ಆ್ಯಂಟನಿ ಸಂಸ್ಥೆಯಲ್ಲಿ ದುಡಿಯುತ್ತಿರುವ ಹೊರಗುತ್ತಿಗೆ ಪೌರ ಕಾರ್ಮಿಕರಲ್ಲಿ ಶೇ.60ರಷ್ಟು ಮಂದಿ ಮಾತ್ರವೇ ಆಧಾರ್ ಕಾರ್ಡ್ ಹೊಂದಿದ್ದಾರೆ. ಇನ್ನುಳಿದವರು ಇನ್ನಷ್ಟೇ ಆಧಾರ್ ಕಾರ್ಡ್ ಮಾಡಿಸಬೇಕಿದೆ. ಬಯೋಮೆಟ್ರಿಕ್ ಹಾಜರಾತಿಗೆ ಆಧಾರ್ ಕಾರ್ಡ್ ಅಗತ್ಯವಾಗಿರುವುದರಿಂದ ಅವರ ಆಧಾರ್‌ಕಾರ್ಡ್‌ಗಾಗಿ ಎದುರು ನೋಡಲಾಗುತ್ತಿದೆ. ಎಲ್ಲರ ಆಧಾರ್ ಕಾರ್ಡ್ ವಿವರ ದೊರಕಿದಾಕ್ಷಣ ಬಯೋಮೆಟ್ರಿಕ್ ಹಾಜರಾತಿ ಆರಂಭಗೊಳ್ಳಲಿದೆ’’ ಎಂದು ಮನಪಾದ ಪರಿಸರ ವಿಭಾಗದ ಇಂಜಿನಿಯರ್ ಮಧು ಎಸ್. ಮನೋಹರ್ ಅಭಿಪ್ರಾಯಿಸಿದ್ದಾರೆ.
ಬಯೋಮೆಟ್ರಿಕ್ ಹಾಜರಾತಿ ಆರಂಭವಾದ ಬಳಿಕ ಪೌರ ಕಾರ್ಮಿಕರು ಬೆಳಗ್ಗೆ 7 ಗಂಟೆಗೆ ಮುಂಚಿತವಾಗಿ ಅಂದರೆ ತಮ್ಮ ಕರ್ತವ್ಯಕ್ಕೆ ಹಾಜರಾಗುವ ಮೊದಲು ತಮ್ಮ ಬೆರಳಚ್ಚಿನ ಮೂಲಕ ಹಾಜರಾತಿಯನ್ನು ಖಾತರಿಪಡಿಸಿಕೊಳ್ಳಬೇಕಿದೆ. ಈ ವ್ಯವಸ್ಥೆಯು ನಗರದ ಸುರತ್ಕಲ್, ಲೇಡಿಹಿಲ್, ಮಣ್ಣಗುಡ್ಡ, ಜೆಪ್ಪು, ಕೇಂದ್ರ ಮಾರುಕಟ್ಟೆ, ನೆಹರೂ ಮೈದಾನ, ಬಂದರ್ ಮತ್ತು ಇತರ ವಾರ್ಡ್ ಕಚೇರಿಗಳಲ್ಲಿ ಲಭ್ಯವಾಗಲಿದ್ದು, ಆಯಾ ವಾರ್ಡ್‌ಗಳ ಪೌರ ಕಾರ್ಮಿಕರು ಅಲ್ಲಿ ತಮ್ಮ ಹಾಜರಾತಿಯನ್ನು ನಿಗದಿತ ಅವಧಿಯೊಳಗೆ ಖಾತರಿಪಡಿಸಿಕೊಳ್ಳತಕ್ಕದ್ದು. ಅದೇ ವೇಳೆ ಹಿಂದಿರುಗುವ ವೇಳೆಯನ್ನೂ ಬೆಳರಚ್ಚಿನ ಮೂಲಕ ನಮೂದಿಸಬೇಕಾಗುತ್ತದೆ. ಈ ಹಾಜರಾತಿಯ ಸ್ಥಿತಿಗತಿಯನ್ನು ಅಧಿಕಾರಿಗಳು ತಮ್ಮ ಮೊಬೈಲ್ ಮೂಲಕ ಪಡೆದುಕೊಳ್ಳಲಿದ್ದಾರೆ ಎಂದವರು ತಿಳಿಸಿದ್ದಾರೆ.
ಬಯೋಮೆಟ್ರಿಕ್ ಹಾಜರಾತಿ ಉತ್ತಮ ವ್ಯವಸ್ಥೆ
ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಯಿಂದ ಸಿಬ್ಬಂದಿಯ ಚಲನವಲನದ ಬಗ್ಗೆ ಮಾಹಿತಿ ನಗರ ಪಾಲಿಕೆಗೆ ದೊರೆಯಲಿದೆ. ಇದೊಂದು ಉತ್ತಮ ಪ್ರಕ್ರಿಯೆ. ಇತ್ತೀಚೆಗೆ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರೂ ಈ ಪ್ರಕ್ರಿಯೆ ನಗರದಲ್ಲಿ ಆರಂಭವಾಗಬೇಕು ಎಂಬ ಇಂಗಿತವನ್ನು ವ್ಯಕ್ತಪಡಿಸಿದ್ದರು. ಇದರಿಂದ ಪ್ರಸ್ತುತ ಪೌರ ಕಾರ್ಮಿಕರ ಕೆಲಸದ ಅವಧಿಯ ಬಗ್ಗೆ ಇರುವ ಆರೋಪಗಳೂ ದೂರವಾಗಲಿದೆ ಎನ್ನುವುದು ದ.ಕ. ಜಿಲ್ಲಾ ಪೌರ ಕಾರ್ಮಿಕರು ಹಾಗೂ 4ನೆ ದರ್ಜೆ ನೌಕರರ ಸಂಘದ ಅಧ್ಯಕ್ಷ ಅನಿಲ್ ಕುಮಾರ್ ಅಭಿಪ್ರಾಯ.
ಈಗಾಗಲೇ ಘನತ್ಯಾಜ್ಯ ನಿರ್ವಹಣೆಯ ಹೊಣೆ ಹೊತ್ತಿರುವ ಆ್ಯಂಟನಿ ವೇಸ್ಟ್ ಮ್ಯಾನೇಜ್‌ಮೆಂಟ್‌ನವರು ಹಿಂದೆ ತಮ್ಮಡಿ ಹೊರಗುತ್ತಿಗೆಗೆ 730 ಜನ ದುಡಿಯುತ್ತಿರುವುದಾಗಿ ಹೇಳಿಕೊಂಡಿದ್ದರು. ಆದರೆ, ಇದೀಗ ಮನಪಾ ಪಡೆದಿರುವ ಮಾಹಿತಿ ಪ್ರಕಾರ ಕಂಪೆನಿಯಡಿ ಹೊರಗುತ್ತಿಗೆಯಲ್ಲಿ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರ ಸಂಖ್ಯೆ 623. ಈ ವ್ಯವಸ್ಥೆಯಿಂದ ಕಂಪೆನಿಯವರು ಜನರ ದುಡ್ಡನ್ನು ಪೋಲು ಮಾಡುವುದು ತಪ್ಪಲಿದೆ. ಈ ವ್ಯವಸ್ಥೆಯಿಂದ ಪೌರ ಕಾರ್ಮಿಕರಿಗೆ ಸಮಸ್ಯೆ ಆಗಲಿಕ್ಕಿಲ್ಲ ಎಂದು ಅನಿಲ್ ಕುಮಾರ್ ‘ವಾರ್ತಾಭಾರತಿ’ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಒಳಚರಂಡಿ ಸ್ವಚ್ಛತೆ ಹಾಗೂ ಘನತ್ಯಾಜ್ಯ ನಿರ್ವಹಣೆಯಲ್ಲಿ ಹೊರಗುತ್ತಿಗೆಯಲ್ಲಿ ದುಡಿಯುತ್ತಿರುವ ಪೌರ ಕಾರ್ಮಿಕರಿಗೆ ವೇತನದಲ್ಲೂ ಸಾಕಷ್ಟು ಮೋಸವಾಗುತ್ತಿದೆ. ಈ ಬಗ್ಗೆಯೂ ಮನಪಾದಿಂದ ಎಚ್ಚರಿಕೆ ವಹಿಸುವ ಕೆಲಸವಾಗಬೇಕು.
ಆರೋಗ್ಯ ಭದ್ರತೆಯೂ ಅಗತ್ಯ:
‘‘ಮನಪಾದಿಂದ ಪೌರ ಕಾರ್ಮಿಕರಿಗೆ ಬಯೋಮೆಟ್ರಿಕ್ ಹಾಜರಾತಿ ಒದಗಿಸಿರುವುದನ್ನು ನಾವು ಸ್ವಾಗತಿಸುತ್ತೇವೆ. ಅದರ ಜತೆಯಲ್ಲೇ ಎಲ್ಲಾ ಪೌರ ಕಾರ್ಮಿಕರಿಗೂ ಆರೋಗ್ಯ ಭದ್ರತೆಯೂ ಸಿಗಬೇಕು’’ ಎಂಬುದು ದ.ಕ. ಜಿಲ್ಲಾ ಪೌರ ಕಾರ್ಮಿಕರು ಹಾಗೂ 4ನೆ ದರ್ಜೆ ನೌಕರರ ಸಂಘದ ಅಧ್ಯಕ್ಷ ಅನಿಲ್ ಕುಮಾರ್ ಆಗ್ರಹ.
ಪ್ರಸಕ್ತ ಮೇಯರ್‌ರವರು ಖಾಯಂ ಪೌರ ಕಾರ್ಮಿಕರಿಗೆ ಆರೋಗ್ಯ ಕಾರ್ಡ್ ನೀಡುವ ಮೂಲಕ ಉತ್ತಮ ಕಾರ್ಯ ಮಾಡಿದ್ದಾರೆ. ಈ ಸೌಲಭ್ಯ ಎಲ್ಲಾ ಪೌರ ಕಾರ್ಮಿಕರಿಗೂ ಲಭ್ಯವಾಗಬೇಕು. ಆ ಮೂಲಕ ಸಾಕಷ್ಟು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಪೌರ ಕಾರ್ಮಿಕರಿಗೆ ಕೊಂಚ ನೆಮ್ಮದಿಯ ಬದುಕು ದೊರಕಲಿದೆ ಎಂದವರು ಹೇಳಿದ್ದಾರೆ.
‘‘ಫೈಲ್‌ಗೆ ಧೂಳು ತಾಗಿದ್ದರೆ ಡಸ್ಟ್ ಅಲರ್ಜಿಯಾಗುತ್ತದೆ ಎಂದು ಸಿಡುಕುತ್ತೇವೆ. ಹಾಗಿರುವಾಗ ಆ ಧೂಳು, ಕಸದ ರಾಶಿಯ ನಡುವೆಯೇ ದುಡಿಯುವ ಪೌರ ಕಾರ್ಮಿಕರ ದೇಹಕ್ಕೆ ಯಾವ ರೀತಿಯಲ್ಲಿ ಡಸ್ಟ್ ಅಲರ್ಜಿ ಆಗಿರಬೇಡ ಎಂಬ ಬಗ್ಗೆ ಆಲೋಚಿಸಿದರೆ ಸಾಕು ಪೌರ ಕಾರ್ಮಿಕರ ಆರೋಗ್ಯದ ಸ್ಥಿತಿಗತಿಯನ್ನು ಅರಿಯಬಹುದು’’ ಎಂದವರು ಹೇಳುತ್ತಾರೆ.
*ದಿನಕೂಲಿ, ಹೊರಗುತ್ತಿಗೆ ಪೌರ ಕಾರ್ಮಿಕರ ಖಾಯಮಾತಿಗೆ ಪ್ರತಿಭಟನೆ
ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ ಬಗ್ಗೆ ಯಾವುದೇ ಅಭ್ಯಂತರವಿಲ್ಲ. ಆದರೆ, ನಗರ ಪಾಲಿಕೆ ಹಾಗೂ ಜಿಲ್ಲೆಯ ಇತರ ಪುರಸಭೆ ಹಾಗೂ ನಗರ ಸಭೆಗಳಲ್ಲಿ ದಿನಕೂಲಿ ಹಾಗೂ ಹೊರಗುತ್ತಿಗೆಯಲ್ಲಿ ದುಡಿಯುತ್ತಿರುವ ಪೌರ ಕಾರ್ಮಿಕರನ್ನು ಖಾಯಂಗೊಳಿಸುವ ಕಾರ್ಯವನ್ನು ಸರಕಾರ ಮಾಡಬೇಕಿದೆ. ಇದಕ್ಕಾಗಿ ರಾಜ್ಯಾದಂತ ಪೌರ ಕಾರ್ಮಿಕರು ತಮ್ಮ ಕೆಲಸವನ್ನು ಸ್ಥಗಿತಗೊಳಿಸಿ ಪ್ರತಿಭಟನೆಗೆ ನಿರ್ಧರಿಸಿದ್ದಾರೆ ಎಂದು ದ.ಕ. ಜಿಲ್ಲಾ ಪೌರ ಕಾರ್ಮಿಕರು ಹಾಗೂ 4ನೆ ದರ್ಜೆ ನೌಕರರ ಸಂಘದ ಕಾರ್ಯದರ್ಶಿ ಎಸ್.ಪಿ.ಆನಂದ ಹೇಳಿದ್ದಾರೆ