ಕಲ್ಲಡ್ಕ: ಯುವಕನಿಗೆ ತಂಡದಿಂದ ಚೂರಿ ಇರಿತ; ಉದ್ವಿಘ್ನ ವಾತಾವರಣ

Update: 2017-06-13 17:57 GMT

ಬಂಟ್ವಾಳ, ಜೂ. 13: ಇತ್ತೀಚೆಗೆ ಯುವಕರಿಬ್ಬರಿಗೆ ಚೂರಿ ಇರಿದ ಘಟನೆಯ ಬಳಿಕ ಬಿಗುವಿನ ವಾತಾವರಣಕ್ಕೆ ತಿರುಗಿದ್ದ ಕಲ್ಲಡ್ಕ ಪರಿಸರ ಯಥಾಸ್ಥಿತಿಗೆ ಮರಳುತ್ತಿದ್ದಂತೆ ಮತ್ತೆ ಕಲ್ಲಡ್ಕದಲ್ಲಿ ಯುವಕನೋರ್ವನಿಗೆ ತಂಡವೊಂದು ಚೂರಿ ಇರಿದ ಘಟನೆ ಮಂಗಳವಾರ ಸಂಜೆ ನಡೆದಿದ್ದು ಪರಿಣಾಮ ಕಲ್ಲಡ್ಕದಲ್ಲಿ ಉದ್ವಿಗ್ನದ ವಾತಾವರಣ ನಿರ್ಮಾಣವಾಗಿದೆ.

ಕಲ್ಲಡ್ಕದ ನಿವಾಸಿ ಅಬೂಸಾಲಿ ಎಂಬವರ ಪುತ್ರ ಇಬ್ರಾಹೀಂ ಖಲೀಲ್(25) ಚೂರಿ ಇರಿತಕ್ಕೊಳಗಾದ ಯುವಕ. ಈತನ ಕಣ್ಣಿನ ಭಾಗಕ್ಕೆ ಗಂಭೀರ ಗಾಯವಾಗಿದ್ದು ತುಂಬೆ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಅಲ್ಲಿನ ವೈದ್ಯರ ಸೂಚನೆಯ ಮೇರೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.

ಘಟನೆಯ ವಿವರ:

ಮಂಗಳವಾರ ಸಂಜೆ ಕಲ್ಲಡ್ಕ ಸಮೀಪದ ಕೆ.ಸಿ.ರೋಡಿನಲ್ಲಿ ಬೈಕೊಂದು ಅಪಘಾತಕ್ಕೀಡಾಗಿ ಇಬ್ಬರು ಗಾಯಗೊಂಡಿದ್ದರು. ಗಾಯಾಳುಗಳನ್ನು ಇಬ್ರಾಹೀಂ ಖಲೀಲ್ ಮತ್ತು ಆತನ ಸ್ನೇಹಿತನೋರ್ವ ತಮ್ಮ ವಾಹನದಲ್ಲಿ ಕಲ್ಲಡ್ಕದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಈ ವೇಳೆ ಆಸ್ಪತ್ರೆಯಲ್ಲಿ ಮಗನ ಚಿಕಿತ್ಸೆಗಾಗಿ ಬಂದಿದ್ದ ಕಲ್ಲಡ್ಕ ಪರಿವಾರ್ ಹೊಟೇಲ್ ಮಾಲಕ ಹಿಂದೂ ಜಾಗರಣ ವೇದಿಕೆಯ ಬಂಟ್ವಾಳ ತಾಲೂಕು ಅಧ್ಯಕ್ಷ ರತ್ನಾಕರ್ ಶೆಟ್ಟಿ ಕೂಡಾ ಅಲ್ಲಿದ್ದರು.

ಈ ಸಂದರ್ಭದಲ್ಲಿ ದುರುಗುಟ್ಟಿ ನೋಡಿದ ಎಂಬ ಕ್ಷುಲ್ಲಕ ವಿಚಾರಕ್ಕೆ ಇಬ್ರಾಹೀಂ ಖಲೀಲ್ ಮತ್ತು ರತ್ನಾಕರ್ ಶೆಟ್ಟಿ ನಡುವೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ. ತದ ನಂತರ ಖಲೀಲ್ ಇಫ್ತಾರ್‌ಗೆ ಹಣ್ಣುಹಂಪಲು ಖರೀದಿಸಲು ಕಲ್ಲಡ್ಕಕ್ಕೆ ಬಂದಿದ್ದು ಈ ವೇಳೆ ರಿಡ್ಝ್ ಕಾರಿನಲ್ಲಿ ಬಂದ ರತ್ನಾಕರ್ ಶೆಟ್ಟಿ, ರವಿ ಭಂಡಾರಿ ಹಾಗೂ ಆವರ ಸಹಚಾರರು ಚೂರಿಯಿಂದ ದಾಳಿ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ತಂಡದಿಂದ ಖಲೀಲ್ ತಪ್ಪಿಸಿ ಪರಾರಿಯಾಗುವಲ್ಲಿ ಯಶಸ್ವಿಯಾದರೆ ಆರೋಪಿಗಳು ಅದೇ ಕಾರಿನಲ್ಲಿ ಪರಾರಿಯಾಗಿದ್ದಾರೆ ಎಂದು ಖಲೀಲ್ ಪತ್ರಿಕೆಗೆ ತಿಳಿಸಿದ್ದಾರೆ.

ಘಟನೆಯಿಂದ ಖಲೀಲ್‌ರ ಬಲಗಣ್ಣಿನ ಕೆಳಗೆ ಗಂಭೀರ ಗಾಯಾವಾಗಿದೆ. ರತ್ನಾಕರ್ ಶೆಟ್ಟಿ ಕೂಡಾ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಖಲೀಲ್ ತನಗೆ ಹಲ್ಲೆ ನಡೆಸಿದ್ದಾನೆ ಎಂದು ಪತ್ರಿಕೆಗಳೊಂದಿಗೆ ಆರೋಪಿಸಿದ್ದಾರೆ.

ಚೂರಿ ಇರಿತ ಸುದ್ದಿ ಕಾಡ್ಗಿಚ್ಚಿನಂತೆ ಹರಿದಾಡಿದ್ದು ಕೆಲವೇ ಕ್ಷಣದಲ್ಲಿ ಕಲ್ಲಡ್ಕ ಪೇಟೆಯಲ್ಲಿ ಎರಡು ಕೋಮಿನ ನೂರಾರು ಯುವಕರು ಜಮಾಯಿಸಿದ್ದಲ್ಲದೆ ಇತ್ತಂಡಗಳ ನಡುವೆ ಕಲ್ಲುತೂರಾಟ ನಡೆದಿದೆ. ಕಲ್ಲು ತೂರಾಟದಿಂದ ಕಲ್ಲಡ್ಕ ಜುಮಾ ಮಸೀದಿಯ ಗಾಜುಗಳು ಪುಡಿಯಾಗಿದ್ದು ಅಂಗಡಿಗಳು ಮತ್ತು ಖಾಸಗಿ, ಪೊಲೀಸ್ ವಾಹನಗಳಿಗೆ ಹಾನಿಯಾಗಿದೆಯಲ್ಲದೆ ಎರಡೂ ಗುಂಪಿನ ಕೆಲವರಿಗೆ ಸಹಿತ ಪೊಲೀಸರು ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಸುಮಾರು 15ರಿಂದ 20 ನಿಮಿಷಗಳ ಕಾಲ ಎರಡು ಗುಂಪಿನ ನಡುವೆ ಕಲ್ಲು ತೂರಾಟ ನಡೆದಿದ್ದರೂ ಸ್ಥಳದಲ್ಲಿ ಭದ್ರತೆಯಲ್ಲಿದ್ದ ಎರಡು ಬಸ್‌ಗೂ ಅಧಿಕ ಪೊಲೀಸರು ಮೂಕಪ್ರೇಕ್ಷಕರಾಗಿದ್ದರು. ಸುದ್ದಿ ತಿಳಿಯುತ್ತಿದ್ದಂತೆ ಹೆಚ್ಚುವರಿ ಪೊಲೀಸರೊಂದಿಗೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸ್ ಅಧಿಕಾರಿಗಳು ಲಾಠಿ ಚಾರ್ಜ್ ನಡೆಸಿ ಎರಡೂ ಗುಂಪನ್ನು ಚದುರಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.

ಕಲ್ಲಡ್ಕ ಪರಿಸರದಲ್ಲಿ ಹಾಗೂ ಬಂಟ್ವಾಳ ತಾಲೂಕಿನ ಆಯಕಟ್ಟಿನ ಪ್ರದೇಶದಲ್ಲಿ ಬಿಗಿ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದ್ದು ಪರಿಸರದಲ್ಲಿ ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ. ಬೊರಸೆ ಮೊಕ್ಕಂ ಹೂಡಿ ಭದ್ರತೆಯನ್ನು ನೋಡಿಕೊಳ್ಳುತ್ತಿದ್ದಾರೆ.

ಮೇ 26ರಂದು ಕಲ್ಲಡ್ಕ ಮಸೀದಿಯಿಂದ ಮನೆಗೆ ತೆರಳುತ್ತಿದ್ದ ಮುಹಮ್ಮದ್ ಹಾಶೀರ್ ಸಹಿತ ಇಬ್ಬರು ಯುವಕರಿಗೆ ಮಿಥುನ್ ಹಾಗೂ ಆತನ ತಂಡ ಚೂರಿಯಿಂದ ಇರಿದ ಘಟನೆಯ ಬಳಿಕ ಕಲ್ಲಡ್ಕ ಹಾಗೂ ಪರಿಸರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಅಲ್ಲದೆ ಮೇ 27ರಿಂದ ಬಂಟ್ವಾಳ ತಾಲೂಕಿನಾದ್ಯಂತ 144 ಸೆಕ್ಷನ್ ಅಡಿಯಲ್ಲಿ ನಿಷೇದಾಜ್ಞೆ ಜಾರಿಯಲ್ಲಿದ್ದು ಈ ನಡುವೆಯೇ ತಂಡವೊಂದು ಚೂರಿಯಿಂದ ಇರಿದ ಘಟನೆ ತಾಲೂಕಿನಲ್ಲಿ ಮತ್ತೆ ಆತಂಕಕ್ಕೆ ಕಾರಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News