ಶಾಸಕ ನಾರಾಯಣ ಸ್ವಾಮಿ ವಿತರಿಸಿದ ಪುಸ್ತಕಗಳ ಬಗ್ಗೆ ಏನನ್ನುತ್ತೀರಿ: ಸಂಸದರಿಗೆ ಪ್ರತಿಭಾ ಕುಳಾಯಿ ಪ್ರಶ್ನೆ

Update: 2017-06-14 08:33 GMT

ಮಂಗಳೂರು, ಜೂ. 14: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಮೊಯ್ದಿನ್ ಬಾವ ತಮ್ಮ ಕ್ಷೇತ್ರದ ಮಕ್ಕಳಿಗೆ ವಿತರಿಸಿದ ಪುಸ್ತಕಗಳ ಬಗ್ಗೆ ಅಪಸ್ವರವೆತ್ತಿರುವ ಸಂಸದ ನಳಿನ್ ಕುಮಾರ್ ಹಾಗೂ ಬಿಜೆಪಿ ನಾಯಕರು, ಹೆಬ್ಬಾಳದ ಶಾಸಕ ನಾರಾಯಣ ಸ್ವಾಮಿ ತಮ್ಮ ಭಾವಚಿತ್ರವಿರುವ ಪುಸ್ತಕಗಳನ್ನು ವಿತರಿಸಿರುವ ಬಗ್ಗೆ ಏನನ್ನುತ್ತೀರಿ ಎಂದು ಮನಪಾ ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರತಿಭಾ ಕುಳಾಯಿ ಪ್ರಶ್ನಿಸಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಅವರು ಇಂದು ಹೆಬ್ಬಾಳದ ಶಾಸಕ ನಾರಾಯಣ ಸ್ವಾಮಿಯವರು ಮಕ್ಕಳಿಗೆ ವಿತರಿಸಿರುವ ಪುಸ್ತಕಗಳನ್ನು ಪ್ರದರ್ಶಿಸಿದರು. ಹೆಬ್ಬಾಳದ ಶಾಸಕರು ತಮ್ಮ ಭಾವಚಿತ್ರ ಮಾತ್ರವಲ್ಲದೆ, ಪ್ರಧಾನಿ ನರೇಂದ್ರ ಮೋದಿ ಹಾಗೂ ತನ್ನ ಪತ್ನಿಯ ಭಾವಚಿತ್ರವನ್ನೂ ಪುಸ್ತಕಗಳಲ್ಲಿ ಮುದ್ರಿಸಿದ್ದಾರೆ. ಮಾತ್ರವಲ್ಲದೆ ಪುಸ್ತಕ ಸಂಪೂರ್ಣ ಕೇಸರಿ ಬಣ್ಣದಲ್ಲಿದೆ ಎಂದು ಅವರು ಹೇಳಿದರು.

ಶಾಸಕ ಮೊಯ್ದೀನ್ ಬಾವರವರು ಪುಸ್ತಕ ನೀಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ನೀಡಿದ್ದಾರೆ. ಪುಸ್ತಕ ನೀಡಲಾದ ಮಕ್ಕಳು ಮತದಾರರಲ್ಲ. ಇದರಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ. ಮಾತ್ರವಲ್ಲದೆ ಅವರು ಹಂಚಿರುವ ಪುಸ್ತಕದಲ್ಲಿ ಅಭಿವೃದ್ಧಿ ಕಾಮಗಾರಿಯ ಫೋಟೋ ಇದೆ ಎಂದು ಹೇಳಲಾಗಿದೆ. ಆದರೆ ಪುಸ್ತಕದಲ್ಲಿ ಶಾಸಕರು ಮಕ್ಕಳ ಜತೆಗಿರುವ ಫೋಟೋ ಮಾತ್ರ ಇದೆ. ಪಕ್ಷದ ಚಿಹ್ನೆಯೂ ಅದರಲ್ಲಿಲ್ಲ ಎಂದು ಪ್ರತಿಭಾ ಕುಳಾಯಿ ಹೇಳಿದರು.

ಈ ಪುಸ್ತಕಗಳಿಂದ ಮಕ್ಕಳಿಗೆ ಮಾತ್ರವೇ ಪ್ರಯೋಜನ. ಅವರೇನು ಚುನಾವಣೆಯಲ್ಲಿ ಮತ ಹಾಕಲಾರರು. ಆದರೆ ತಮ್ಮ ಕ್ಷೇತ್ರದ ಮಕ್ಕಳಿಗೆ ತಮ್ಮ ಗುರುತಿರಲಿ ಎಂಬ ಉದ್ದೇಶದಿಂದ ಮಾತ್ರವೇ ಚಿತ್ರ ಹಾಕಲಾಗಿದೆ. ಬಿಜೆಪಿಯ ನಾಯಕರೂ ಮಕ್ಕಳಿಗೆ ಪುಸ್ತಕ, ಕೊಡೆ ನೀಡಲಿ. ಇದರಿಂದ ಮಕ್ಕಳಿಗೆ ಪ್ರಯೋಜನವಾಗಬಹುದು. ಆದರೆ ಈ ರೀತಿಯ ಆರೋಪ ಮಾಡುವುದು ಸರಿಯಲ್ಲ ಎಂದವರು ಹೇಳಿದರು. ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಮಾತ್ರವಲ್ಲದೆ, ಬೇರೆ ಕ್ಷೇತ್ರದ ಮಕ್ಕಳಿಗೂ ಅಗತ್ಯವಿದ್ದಲ್ಲಿ ಪುಸ್ತಕಗಳನ್ನು ಒದಗಿಸಲಾಗುವುದು. ಬೇಕಿದ್ದವರು ಶಾಸಕರ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಅವರು ನುಡಿದರು.

ಗೋಷ್ಠಿಯಲ್ಲಿ ಮನಪಾ ಸದಸ್ಯ ಮುಹಮ್ಮದ್, ಸ್ಥಳೀಯ ನಾಯಕರಾದ ಶಕುಂತಳಾ, ಕೇಶವ ಸನಿಲ್, ಉತ್ತಮ್ ಆಳ್ವ, ವರುಣ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News