ಬಿ.ಆರ್.ಶೆಟ್ಟಿ ಆಸ್ಪತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಬೇಡಿ: ರಾಷ್ಟ್ರಪತಿಗೆ ಡಾ.ಪಿ.ವಿ.ಭಂಡಾರಿ ಮನವಿ ಪತ್ರ

Update: 2017-06-15 16:15 GMT

ಉಡುಪಿ, ಜೂ.15: ಉಡುಪಿ ಮೂಲದ ಎನ್‌ಆರ್‌ಐ ಉದ್ಯಮಿ ಬಿ.ಆರ್. ಶೆಟ್ಟಿ ಈಗಿರುವ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಜಾಗದಲ್ಲಿ ನಿರ್ಮಿಸಲಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಶಂಕು ಸ್ಥಾಪನೆಗಾಗಿ ಜೂ.18ರ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ಉಡುಪಿಯ ಖ್ಯಾತ ಮನೋ ವೈದ್ಯ ಹಾಗೂ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿಯ ಸಕ್ರಿಯ ಸದಸ್ಯ ಡಾ.ಪಿ.ವಿ.ಭಂಡಾರಿ ಅವರು ಜೂ.9ರಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಉಡುಪಿಯ ಕೊಡುಗೈ ದಾನಿ ಹಾಜಿ ಅಬ್ದುಲ್ಲಾ ಅವರು ಬಡರೋಗಿಗಳಿಗಾಗಿ ನಿರ್ಮಿಸಿಕೊಟ್ಟ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ನಾಲ್ಕು ಎಕರೆ ಜಾಗದ ಸಹಿತ ಅತ್ಯಾಧುನಿಕ ಆಸ್ಪತ್ರೆ ನಿರ್ಮಿಸಲು ದುಬಾಯಿಯಲ್ಲಿ ಉದ್ಯಮಿಯಾಗಿರುವ ಬಿ.ಆರ್.ಶೆಟ್ಟಿ ಅವರ ಬಿಆರ್‌ಎಸ್ ಹೆಲ್ತ್ ಎಂಡ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ಗೆ ಒಪ್ಪಿಸಿದೆ. ಆದರೆ ಹಾಜಿ ಅಬ್ದುಲ್ಲ ಅವರ ಕುಟುಂಬದ ಸದಸ್ಯರೊಂದಿಗೆ ಉಡುಪಿಯ ಜನತೆ ಈ ಒಪ್ಪಂದವನ್ನು ತೀವ್ರವಾಗಿ ವಿರೋಧಿಸುತಿದ್ದರೂ ರಾಜ್ಯ ಸರಕಾರ ಅದಕ್ಕೆ ಸ್ಪಂಧಿಸಿಲ್ಲ ಎಂದವರು ಪತ್ರದಲ್ಲಿ ದೂರಿದ್ದಾರೆ.

 ಉಡುಪಿಯ ಜನತೆ ರಾಜ್ಯ ಸರಕಾರ ಹಾಗೂ ಬಿಆರ್‌ಎಸ್ ಹೆಲ್ತ್ ಎಂಡ್ ರಿಸರ್ಚ್ ಇನ್‌ಸ್ಟಿಟ್ಯೂಟ್ ನಡುವಿನ ಒಪ್ಪಂದವನ್ನು ತೀವ್ರವಾಗಿ ವಿರೋಧಿಸುತಿದ್ದರೂ, ಸರಕಾರ ಅವುಗಳನ್ನೆಲ್ಲಾ ನಿರ್ಲಕ್ಷಿಸಿದೆ. ಉಡುಪಿಯ ಗಣ್ಯ ನಾಗರಿಕರು ಹಾಗೂ ಹಾಜಿ ಅಬ್ದುಲ್ಲಾ ಕುಟುಂಬಿಕರು ಹಾಜಿ ಅಬ್ದುಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಹಸ್ತಾಂತರವನ್ನು ಪ್ರಶ್ನಿಸಿ, ಒಪ್ಪಂದವನ್ನು ರದ್ದುಪಡಿಸುವಂತೆ ಆಗ್ರಹಿಸಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಲಯದ ಮುಂದೆ ವಿಚಾರಣೆಗೆ ಬಾಕಿ ಇದೆ ಎಂದವರು ಪತ್ರದಲ್ಲಿ ವಿವರಿಸಿದ್ದಾರೆ.

ಹಾಜಿ ಅಬ್ದುಲ್ಲಾ ಅವರು 1900ರ ಆರಂಭದಲ್ಲೇ ಆಸ್ಪತ್ರೆಗಾಗಿ ತನ್ನ ಜಮೀನನ್ನು ದಾನಪತ್ರದ ಮೂಲಕ ಉಡುಪಿ ತಾಲೂಕು ಬೋರ್ಡ್‌ಗೆ ನೀಡಿದ್ದು, 1932ರ ಜುಲೈ ತಿಂಗಳಲ್ಲಿ ತಾಲೂಕು ಬೋರ್ಡ್ ಅದನ್ನು ರಿಜಿಸ್ಟರ್ ಮಾಡಿದೆ. ಹಾಜಿ ಅಬ್ದುಲ್ಲಾ ಅವರು ದಾನಪತ್ರದಲ್ಲಿ ಜಾಗ ಹಾಗೂ ಆಸ್ಪತ್ರೆಯ ಭವಿಷ್ಯದ ಬಳಕೆಗೆ ಸಂಧಿಸಿದಂತೆ ಹಲವು ನಿಬಂಧನೆಗಳನ್ನು ವಿಧಿಸಿದ್ದು, ಅವೆಲ್ಲವನ್ನೂ ಸರಕಾರದ ಹಸ್ತಾಂತರ ಉಲ್ಲಂಘಿಸಿದೆ ಎಂದವರು ಪತ್ರದಲ್ಲಿ ವಿವರಿಸಿದ್ದಾರೆ.

ಈಗಲೂ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ, ಬಡ ರೋಗಿಗಳಿಂದ ಕಿಕ್ಕಿರಿದು ತುಂಬಿರುವ ಆಸ್ಪತ್ರೆಯನ್ನು ತರಾತುರಿಯಿಂದ, ಅಪಾರದರ್ಶಕ ನಡೆಗಳ ಮೂಲಕ ಖಾಸಗಿ ಸಂಸ್ಥೆಗೆ ನೀಡಿ ಜನತೆಯ ವಿಶ್ವಾಸಕ್ಕೆ ದ್ರೋಹ ಬಗೆದಿದೆ ಎಂದಿದ್ದಾರೆ.

ಉಡುಪಿ ಜಿಲ್ಲೆಗೆ ಇದೇ ಮೊದಲ ಬಾರಿ ಆಗಮಿಸುತ್ತಿರುವ ತಮಗೆ ಹಾರ್ದಿಕ ಸ್ವಾಗತವನ್ನು ಉಡುಪಿ ಜನತೆಯ ಪರವಾಗಿ ನೀಡುತಿದ್ದು, ನಿಮ್ಮ ಭೇಟಿಯನ್ನು ಎದುರು ನೋಡುತಿದ್ದೇವೆ. ಆದರೆ ಈ ಭೇಟಿಯ ವೇಳೆ ಬಿ.ಆರ್.ಶೆಟ್ಟಿ ಅವರ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರ್ಧಾರವನ್ನು ಬದಲಿಸುವಂತೆ ಮನವಿ ಮಾಡುತ್ತಿರುವುದಾಗಿ ಪತ್ರದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News