ಸೇತುವೆಯಿಂದ ಹೊಳೆಗೆ ಹಾರಿದ ವ್ಯಕ್ತಿ ನಾಪತ್ತೆ
ಉಡುಪಿ, ಜು.2: ತಲೆನೋವಿನಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಜೀವನದಲ್ಲಿ ಜಿಗುಪ್ಸೆಗೊಂಡು ಮಣಿಪುರ ಸೇತುವೆಯಿಂದ ಹೊಳೆಗೆ ಹಾರಿ ನಾಪತ್ತೆ ಯಾಗಿರುವ ಘಟನೆ ಇಂದು ಸಂಜೆ 5.30ರ ಸುಮಾರಿಗೆ ನಡೆದಿದೆ.
ಹೊಳೆಗೆ ಹಾರಿದವರನ್ನು ಉಡುಪಿ ವಾದಿರಾಜ ರಸ್ತೆಯ ನಿವಾಸಿ ಪ್ರಕಾಶ್ ಪೈ(54) ಎಂದು ಗುರುತಿಸಲಾಗಿದೆ. ಇವರು ಉಡುಪಿಯ ಎಲ್‌ಐಸಿ ಮುಖ್ಯ ಶಾಖೆಯಲ್ಲಿ ಅಭಿವೃದ್ಧಿ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. ತೀವ್ರ ತಲೆ ನೋವಿನಿಂದ ಮನನೊಂದ ಇವರು ಇಂದು ಸಂಜೆ ತನ್ನ ಕಾರಿನಲ್ಲಿ ಮಣಿಪುರಕ್ಕೆ ಹೊರಟು, ಅಲ್ಲಿ ಸೇತುವೆ ಬದಿ ಕಾರನ್ನು ನಿಲ್ಲಿಸಿ, ಅದರಲ್ಲಿ ತನ್ನ ಮೊಬೈಲ್, ಪರ್ಸ್, ವಾಚ್ ಹಾಗೂ ಮರಣಪತ್ರವನ್ನು ಇರಿಸಿ ಸೇತುವೆಯಿಂದ ಹೊಳೆಗೆ ಹಾರಿದರು.
ಮರಣ ಪತ್ರದಲ್ಲಿ ‘ತಲೆನೋವಿನ ವೇದನೆ ತಾಳಲಾರದೆ ಆತ್ಮಹತ್ಯೆ ಮಾಡಿ ಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ಯಾರೂ ಕಾರಣರಲ್ಲ’ ಎಂದು ಬರೆಯಲಾಗಿದೆ.
ಇವರ ಪತ್ನಿ ಪೃಥ್ವಿ ಪೈ ಬ್ಯೂಟಿಪಾರ್ಲರ್ ನಡೆಸುತ್ತಿದ್ದು, ಓರ್ವ ಪುತ್ರಿ ಮಣಿಪಾಲ ದಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಸ್ಥಳಕ್ಕೆ ಆಗಮಿಸದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಾಗೂ ಮುಳುಗು ತಜ್ಞರು ಸಂಜೆ 7.30ರ ವರೆಗೆ ನಾಪತ್ತೆಯಾದ ಪ್ರಕಾಶ್ ಪೈ ಅವರ ಹುಡುಕಾಟ ನಡೆಸಿದ್ದಾರೆ. ಆದರೆ ಮೃತದೇಹ ಈವರೆಗೆ ಸಿಕ್ಕಿಲ್ಲ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.