ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಹರೀಶ್ ಕುಮಾರ್ ಅಧಿಕಾರ ಸ್ವೀಕಾರ

Update: 2017-07-03 10:19 GMT

ಮಂಗಳೂರು, ಜು.3: ದ.ಕ. ಜಿಲ್ಲಾ ಕಾಂಗ್ರೆಸ್‌ನ ನೂತನ ಅಧ್ಯಕ್ಷರಾಗಿ ಬೆಳ್ತಂಗಡಿಯ ಕೆ.ಹರೀಶ್ ಕುಮಾರ್ ಅವರ ಪದಗ್ರಹಣ ಸಮಾರಂಭ ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಬೆಳಗ್ಗೆ ನಡೆಯಿತು.

ನಿರ್ಗಮನ ಜಿಲ್ಲಾಧ್ಯಕ್ಷ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಬಿ. ರಮಾನಾಥ ರೈಯವರು ನೂತನ ಅಧ್ಯಕ್ಷರಾಗಿ ಪಕ್ಷದ ಧ್ವಜ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು.

ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ನೂತನ ಅಧ್ಯಕ್ಷ ಹರೀಶ್ ಕುಮಾರ್, ಮುಂಬರುವ ಶಿಕ್ಷಕ ಕ್ಷೇತ್ರದ ಚುನಾವಣೆ, ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಪಕ್ಷವನ್ನು ಮತ್ತಷ್ಟು ಸಂಘಟಿಸುವುದು ತನ್ನ ಮುಖ್ಯ ಧ್ಯೇಯವಾಗಿದ್ದು, ಚುನಾವಣೆಯಲ್ಲಿ ತಾನು ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿರುವುದಿಲ್ಲ ಎಂದು ಹೇಳಿದರು.

ಕಾರ್ಯಕರ್ತರಿಂದ ಟೀಕೆ, ಟಿಪ್ಪಣಿ, ಸಲಹೆ ಸೂಚನೆಗಳಿಗೆ ಸದಾ ಸ್ವಾಗತವಿದ್ದು, ಯಾವುದೇ ರೀತಿಯ ನಿರ್ಧಾರದ ಸಂದರ್ಭದಲ್ಲೂ ಪಕ್ಷದ ಮುಖಂಡರು, ಹಿರಿಯರು, ಕಾರ್ಯಕರ್ತರ ಒಪ್ಪಿಗೆಗೆ ಪೂರಕವಾಗಿ ಸಹಮತದೊಂದಿಗೆ ಮುನ್ನಡೆಯುವುದಾಗಿ ಅವರು ಈ ಸಂದರ್ಭ ಭರವಸೆ ನೀಡಿದರು.

ಪಕ್ಷದ ಕಾರ್ಯಕರ್ತರು ಬೂತ್ ಮಟ್ಟದದಿಂದಲೇ ಪಕ್ಷ ಸಂಘಟನೆಗೆ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದ ಅವರು, ಮುಂದಿನ ಚುನಾವಣೆಯಲ್ಲಿ 8 ವಿಧಾನಸಭಾ ಕ್ಷೇತ್ರಗಳು ಹಾಗೂ ಸಂಸತ್ತಿನಲ್ಲಿ ಜಿಲ್ಲೆಯಿಂದ ಕಾಂಗ್ರೆಸ್ ಪಕ್ಷದ ನಾಯಕರ ಮುಖವನ್ನು ನೋಡುವ ಅವಕಾಶವನ್ನು ನಾವೆಲ್ಲಾ ಒಗ್ಗಟ್ಟಾಗಿ ಕಲ್ಪಿಸಬೇಕಾಗಿದೆ. ಅದರ ಜತೆಯಲ್ಲೇ ಜಿಲ್ಲೆಯಲ್ಲಿ ಕೋಮು ಸೌಹಾರ್ದತೆಯನ್ನು ಕಾಪಾಡುವಲ್ಲಿಯೂ ಹೆಚ್ಚಿನ ಆದ್ಯತೆ ನೀಡಿ ದೇಶದ ಐಕ್ಯತೆ ಕಡೆಗೆ ಗಮನ ಹರಿಸಬೇಕು ಎಂದವರು ಹೇಳಿದರು.

ಅಧಿಕಾರ ಹಸ್ತಾಂತರಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಅಧ್ಯಕ್ಷನಾಗಿ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವ ಅರ್ಹತೆ ಹಾಗೂ ಯೋಗ್ಯತೆ ಹರೀಶ್ ಕುಮಾರ್ ಅವರಿಗಿದೆ ಎಂದರು. 

ಪಕ್ಷಕ್ಕಾಗಿ ಪ್ರಾಣತ್ಯಾಗಕ್ಕೂ ಸಿದ್ಧ: 

ಸಚಿವ ರೈ ಜೀವದ ಹಂಗು ತೊರೆದು ಮತೀಯವಾದಿಗಳ ಜತೆ ಹೋರಾಟಕ್ಕೆ ಸಿದ್ಧ ಎಂದು ಹೇಳಿದ ಅವರು, ಭೂಗತ ಜಗತ್ತಿನಿಂದಲೂ ತನ್ನನ್ನು ಅಧೀರಗೊಳಿಸುವ ಪ್ರಯತ್ನ ನಡೆದಿರುವಾಗಲೂ ಅದನ್ನು ಬಹಿರಂಗಪಡಿಸದೆ ಪಕ್ಷದ ಹಿತದೃಷ್ಟಿಯಿಂದ ಕೆಲಸ ನಿರ್ವಹಿಸಿದ್ದೇನೆ. ನನ್ನ ಧರ್ಮ ಯಾವತ್ತಿದ್ದರೂ ಕಾಂಗ್ರೆಸ್ ಧರ್ಮ. ಪಕ್ಷಕ್ಕಾಗಿ ನಾನು ಪ್ರಾಣ ಕೊಡಲೂ ಸಿದ್ಧ ಎಂದು ರೈ ಹೇಳಿದರು.

ಚುನಾವಣೆಗೆ 275 ದಿನಗಳು ಬಾಕಿ ಇರುವುದರಿಂದ ಈ ಅವಧಿಯೊಳಗೆ ಸಾಕಷ್ಟು ಕೆಲಸ ಕಾರ್ಯಗಳನ್ನು ಮಾಡಬೇಕಾಗಿದೆ. 24x7 ಮಾದರಿಯಲ್ಲಿ ಕಾರ್ಯ ನಿರ್ವಹಿಸುವ ಯುವಕರನ್ನು ಪದಾಧಿಕಾರಿಗಳನ್ನಾಗಿಸಿಕೊಂಡು ನಿರಂತರ ಸಂಪರ್ಕ ಹಾಗೂ ಸಕ್ರಿಯತೆಯೊಂದಿಗೆ ಕೆಲಸ ನಿರ್ವಹಿಸಬೇಕು. ದ.ಕ. ಜಿಲ್ಲೆ ಯಾವತ್ತೂ ಮತೀಯವಾದಿಗಳ ಕೇಂದ್ರವಾಗಿಲ್ಲ. ಸರ್ವಜನರನ್ನು ಪ್ರೀತಿ ಮಾಡುವ ಜಿಲ್ಲೆ ಇದಾಗಿದೆ. ಈ ಜಿಲ್ಲೆಯಲ್ಲಿ ಸೌಹಾರ್ದತೆಯನ್ನು ಕಾಪಾಡಿಕೊಂಡು ಮತಗಳ ವಿಭಜನೆಯಾಗದಂತೆ ಎಚ್ಚರಿಕೆ ವಹಿಸಬೇಕಾಗಿದೆ ಎಂದು ಅವರು ಸಲಹೆ ನೀಡಿದರು.

ಕಾರ್ಯಕರ್ತರು ಎಚ್ಚರದಿಂದ ಕಾರ್ಯನಿರ್ವಹಿಸಬೇಕು ಎಂದು ತಿಳಿ ಹೇಳಿದ ಸಚಿವ ರೈ, ಬಹುಸಂಖ್ಯಾತ ಹಾಗೂ ಅಲ್ಪಸಂಖ್ಯಾತ ಮತೀಯವಾದಿಂದಲೂ ಪಕ್ಷಕ್ಕೆ ತೊಂದರೆಯಾಗುವುದರ ಬಗ್ಗೆ ಗಮನ ಹರಿಸಬೇಕು. ನಮ್ಮ ವಿರುದ್ಧ ಆರೋಪಗಳನ್ನು ಮಾಡಿ ನಮ್ಮನ್ನು ತಪ್ಪಿತಸ್ಥರನ್ನಾಗಿರುವ ಕಾರ್ಯ ಸಂಘ ಪರಿವಾರದಿಂದ ನಡೆಯುತ್ತಿದ್ದು, ಇಂತಹ ಸಂದರ್ಭದಲ್ಲಿ ದಿಟ್ಟತನದಿಂದ ಸಾಮರಸ್ಯ ಉಳಿಸುವ ಕೆಲಸ ಮಾಡಬೇಕು ಎಂದರು.

ಸಮಾರಂಭದಲ್ಲಿ ವಿಧಾನ ಪರಿಷತ್‌ನ ಮುಖ್ಯ ಸಚೇತಕ ಐವನ್ ಡಿಸೋಜಾ, ಶಾಸಕರಾದ ಶಕುಂತಳಾ ಶೆಟ್ಟಿ, ಅಭಯಚಂದ್ರ ಜೈನ್, ಮೊಯ್ದೀನ್ ಬಾವಾ, ಜೆ.ಆರ್. ಲೋಬೋ, ಮೇಯರ್ ಕವಿತಾ ಸನಿಲ್, ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಗೇರು ನಿಗಮದ ಅಧ್ಯಕ್ಷ ಬಿ.ಎಚ್. ಖಾದರ್, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಶಾಲೆಟ್ ಪಿಂಟೋ, ಮೂಡಾ ಅಧ್ಯಕ್ಷ ಸುರೇಶ್ ಬಳ್ಳಾಲ್, ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ರಾಜ್ಯಸಭಾ ಮಾಜಿ ಸದಸ್ಯ ಬಿ. ಇಬ್ರಾಹೀಂ, ನಾಯಕರಾದ ಮಮತಾ ಗಟ್ಟಿ, ಸದಾಶಿವ ಉಳ್ಳಾಲ್, ಸುಬೋದ್ ಆಳ್ವ, ಅಬ್ದುಲ್ಲಾ, ಡಾ. ರಘು, ದಿವ್ಯಪ್ರಭಾ, ಪ್ರತಾಪ್ ಚಂದ್ರ ಶೆಟ್ಟಿ, ಪೀತಾಂಬರ ಹೆರಾಜೆ, ದರ್ಮೇಂದ್ರ, ವಿಜಯ ಕುಮಾರ್ ಸೊರಕೆ, ಎನ್.ಎಸ್. ಕರೀಂ, ಎ.ಸಿ. ಭಂಡಾರಿ, ಧರಣೇಂದ್ರ ಕುಮಾರ್, ಕಣಚೂರು ಮೋನು, ಬಲರಾಜ್ ರೈ, ವಿಶ್ವಾಸ್ ಕುಮಾರ್ ದಾಸ್, ಸುಜೀತ ವಿ. ಬಂಗೇರ ಮೊದಲಾದವರು ಉಪಸ್ಥಿತರಿದ್ದರು.

ಶಾಹುಲ್ ಹಮೀದ್ ಕಾರ್ಯಕ್ರಮ ನಿರೂಪಿಸಿದರು. ಇಬ್ರಾಹೀಂ ಕೋಡಿಜಾಲ್ ಸ್ವಾಗತಿಸಿದರು.

 ಮಾಜಿ ಪ್ರಧಾನಿ ಇಂದಿರಾ ಗಾಂಧಿ ವಾಹನ ಸಾರಥಿಯಾಗಿದ್ದ ಹರೀಶ್ ಕುಮಾರ್!

 ಪಕ್ಷದ ಹಿರಿಯ ನಾಯಕರ ಕೊಡುಗೆಯನ್ನು ಸ್ಮರಿಸುತ್ತಾ ಕೃತಜ್ಞತೆ ಸಲ್ಲಿಸಿದ ಹರೀಶ್ ಕುಮಾರ್, ವಿದ್ಯಾರ್ಥಿಯಾಗಿದ್ದ ಸಂದರ್ಭ 1978ರ ಚಿಕ್ಕಮಗಳೂರು ಲೋಕಸಭಾ ಚುನಾವಣೆಗೆ ಸಂಬಂಧಿಸಿ ಅಂದು ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಹಾಗೂ ಇಂದಿರಾ ಗಾಂಧಿಯವರನ್ನು ತನ್ನ ವಾಹನದಲ್ಲಿ ಕುಳ್ಳಿರಿಸಿ ವಾಹನ ಚಾಲಕನಾಗಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದ ದಿನಗಳನ್ನು ನೆನಪಿಸಿಕೊಂಡರು. ಆ ಚುನಾವಣೆಯಲ್ಲಿ ತನಗೆ ಪ್ರಥಮ ಮತದಾನದ ಅವಕಾಶ ಲಭಿಸಿದ್ದು, ಅದನ್ನು ತಾನು ಇಂದಿರಾ ಗಾಂಧಿಯವರಿಗೆ ಚಲಾಯಿಸಿದ್ದಾಗಿಯೂ ಬಹಿರಂಗವಾಗಿ ಹೇಳಿದರು. ಅಂದಿನಿಂದ ಇಂದಿನವರೆಗೆ ಕಾಂಗ್ರೆಸ್ ಪಕ್ಷದ ವಿವಿಧ ಸಂಘಟನೆಗಳು, ಹುದ್ದೆಗಳಲ್ಲಿ ನಿಷ್ಠಾವಂತ ಕಾರ್ಯಕರ್ತನಾಗಿ ಕಾರ್ಯ ನಿರ್ವಹಿಸುತ್ತಿರುವುದಾಗಿ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News