ಹಾಸ್ಟೆಲ್ ಪ್ರವೇಶಾತಿ ವಿಳಂಬ: ಕಾಲೇಜಿನಲ್ಲೇ ವಿದ್ಯಾರ್ಥಿನಿಯರಿಗೆ ಆಶ್ರಯ!
ಮಂಗಳೂರು, ಜು.8: ಹಿಂದುಳಿದ ವರ್ಗಗಳು ಮತ್ತು ಸಮಾಜ ಕಲ್ಯಾಣ ಇಲಾಖೆಯಿಂದ ನಡೆಸಲ್ಪಡುವ ಸರಕಾರಿ ವಸತಿ ನಿಲಯಗಳಲ್ಲಿ ಪ್ರವೇಶಾತಿ ವಿಳಂಬಗೊಂಡ ಹಿನ್ನೆಲೆಯಲ್ಲಿ ನಗರದ ರಥಬೀದಿಯ ಡಾ.ಪಿ.ದಯಾನಂದ ಪೈ- ಪಿ.ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯರು ಕಾಲೇಜಿನಲ್ಲೇ ಆಶ್ರಯ ಪಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
‘‘ಪ್ರಥಮ ದರ್ಜೆ ತರಗತಿಗಳು ಜೂನ್ 19ರಿಂದಲೇ ಆರಂಭಗೊಂಡಿದೆ. ಆದರೆ ಸರಕಾರದ ವತಿಯಿಂದ ನಡೆಸಲ್ಪಡುವ ವಸತಿ ನಿಲಯಗಳ ಪ್ರವೇಶಾತಿ ಜುಲೈ 31ರಿಂದ ಆರಂಭಗೊಳ್ಳುವುದು. ಇದರಿಂದ ನೆಲ್ಯಾಡಿ, ಮೂಡಿಗೆರೆ, ಚಿಕ್ಕಮಗಳೂರು ಮತ್ತು ದೂರದ ಊರುಗಳಿಂದ ಬರುವ ವಿದ್ಯಾರ್ಥಿಗಳಿಗೆ ಅನಾನುಕೂಲವಾಗಲಿದೆ. ಅದಕ್ಕಾಗಿನ 20 ವಿದ್ಯಾರ್ಥಿನಿಯರಿಗೆ ಕಾಲೇಜಿನ ಕೊಠಡಿಗಳಲ್ಲಿ ಆಶ್ರಯ ಒದಗಿಸಲಾಗಿದೆ. ದೂರದ ಊರುಗಳಿಂದ ಬರುವ ವಿದ್ಯಾರ್ಥಿಗಳಿಗೆ ಸಮೀಪದ ಪಿಜಿಗಳಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ’’ ಎಂದು ಕಾಲೇಜಿನ ಪ್ರಾಂಶುಪಾಲ ರಾಜಶೇಖರ ಹೆಬ್ಬಾರ್ ತಿಳಿಸಿದ್ದಾರೆ.
‘‘ಕಾಲೇಜಿನ ಕೊಠಡಿಯಲ್ಲಿ ಆಶ್ರಯ ಒದಗಿಸಲಾಗಿರುವ ವಿದ್ಯಾರ್ಥಿನಿಯರಿಗೆ ಕ್ಯಾಂಟೀನ್‌ನಿಂದಲೇ ಊಟ, ಉಪಹಾರವನ್ನು ರಿಯಾಯಿತಿ ದರದಲ್ಲಿ ಪ್ರಸ್ತುತ ಒದಗಿಸಲಾಗುತ್ತಿದೆ’’ ಎಂದು ಅವರು ಹೇಳಿದರು.
ಈ ನಡುವೆ, ನಗರದ ಸರಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ನೆರೆಯ ಕೇರಳ ರಾಜ್ಯದ ಗಡಿನಾಡ ವಿದ್ಯಾರ್ಥಿಗಳಿಗೆ (ಕಾಸರಗೋಡು ಜಿಲ್ಲೆ) ಪರಿಶಿಷ್ಟ ಜಾತಿ, ಪಂಗಡದ ವಸತಿ ನಿಲಯಗಳಲ್ಲಿ ವಸತಿ ವ್ಯವಸ್ಥೆ ಮಾಡಬೇಕೆಂದು ಕೋರಿ ಸ್ಥಳೀಯ ಶಾಸಕ ಜೆ.ಆರ್. ಲೋಬೋರವರು ಸಮಾಜ ಕಲ್ಯಾಣ ಇಲಾಖೆಯ ಸಚಿವ ಎಚ್. ಆಂಜನೇಯ ಅವರಿಗೆ ಪತ್ರವೊಂದನ್ನೂ ಬರೆದಿದ್ದಾರೆ.
ನಗರದ ರಥಬೀದಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಾಗೂ ನಗರದ ಇತರ ಶಿಕ್ಷಣ ಸಂಸ್ಥೆಗಳಲ್ಲಿಯೂ ನೆರೆಯ ಕಾಸರಗೋಡಿನ ಕನ್ನಡ ಮಾತನಾಡುವ ವಿದ್ಯಾರ್ಥಿಗಳು ಸಾಕಷ್ಟು ಸಂಖ್ಯೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಅವರಲ್ಲಿ ಹೆಚ್ಚಿನವರು ವಿದ್ಯಾರ್ಥಿನಿಯರಾಗಿದ್ದಾರೆ. ದಿನವೂ 60ರಿಂದ 80 ಕಿ.ಮೀ. ದೂರದಿಂದ ಪ್ರಯಾಣಿಸಿ ಬರುವ ಈ ವಿದ್ಯಾರ್ಥಿನಿಯರು ಆರ್ಥಿಕವಾಗಿಯೂ ಹಿಂದುಳಿದವರಾಗಿರುತ್ತಾರೆ. ಆದ್ದರಿಂದ ಪರಿಶಿಷ್ಟ ಜಾತಿ ಹಾಗೂ ಪಂಗಡಗಳಿಗೆ ಸೇರಿದ ಈ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಉದ್ದೇಶದ ಹಿನ್ನೆಲೆಯಲ್ಲಿ ಇಲ್ಲಿನ ಸಂಬಂಧಪಟ್ಟ ಸರಕಾರಿ ವಸತಿ ನಿಲಯಗಳಲ್ಲಿ ಪ್ರವೇಶಕ್ಕೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಶಾಸಕರು ತಮ್ಮ ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಕಾಲೇಜಿನಲ್ಲಿ ಕಾಸರಗೋಡು ಹಾಗೂ ಕಾಂಞಂಗಾಡಿನ ಸುಮಾರು 500 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು, ಅವರಲ್ಲಿ 300ರಷ್ಟು ಮಂದಿ ಕನ್ನಡ ಮಾತನಾಡುವವರಾಗಿದ್ದಾರೆ. ಅವರಲ್ಲಿ ಶೇ. 20ರಷ್ಟು ಮಂದಿಗೆ ವಸತಿ ನಿಲಯಗಳಲ್ಲಿ ಪ್ರವೇಶದ ಅಗತ್ಯವಿದೆ ಎಂದು ಪ್ರಾಂಶುಪಾಲರಾದ ರಾಜಶೇಖರ್ ಹೆಬ್ಬಾರ್ ತಿಳಿಸಿದ್ದಾರೆ.