ದನದ ಜೀವಕ್ಕಿರುವ ದಯೆ ಮನುಷ್ಯರ ಜೀವಕ್ಕಿಲ್ಲ: ಜಿ.ರಾಜಶೇಖರ್

Update: 2017-07-17 17:34 GMT

ಉಡುಪಿ, ಜು.17: ಗೋರಕ್ಷಣೆ ಹೆಸರಿನಲ್ಲಿ ನಡೆಯುತ್ತಿರುವ ಹಿಂಸೆಯನ್ನು ನಿಗ್ರಹಿಸಲು ಪ್ರಧಾನಿ ನರೇಂದ್ರ ಮೋದಿ ರಾಜ್ಯ ಸರಕಾರಗಳಿಗೆ ಕರೆ ಕೊಟ್ಟಿದ್ದಾರೆ.

ಆದರೆ ಇವರೇ ಪ್ರತಿನಿಧಿಸುವ ಸಂಘಪರಿವಾರದಲ್ಲಿ ಗೋರಕ್ಷಣೆ ಪ್ರಮುಖ ಅಜೆಂಡಾವಾಗಿದೆ. ಇವರು ಆಕಳಿನ ಜೀವಕ್ಕೆ ತೋರಿಸುವ ದಯೆ ಮನುಷ್ಯನ ಜೀವಕ್ಕೆ ಯಾಕೆ ತೋರಿಸುತ್ತಿಲ್ಲ ಎಂದು ಹಿರಿಯ ಚಿಂತಕ ಜಿ.ರಾಜಶೇಖರ್ ಪ್ರಶ್ನಿಸಿದ್ದಾರೆ.

ಕೋಮುಗಲಭೆಗೆ ಪ್ರಚೋದನೆ ನೀಡುತ್ತಿರುವ ಬಿಜೆಪಿ ನಾಯಕರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಉಡುಪಿ ಜಿಲ್ಲೆ ಸೋಮವಾರ ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಕ್ಲಾಕ್ ಟವರ್ ಎದುರು ಹಮ್ಮಿಕೊಂಡ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.

ಮೋದಿ ಹೇಳಿಕೆಯ ಬಗ್ಗೆ ಇವರದ್ದೆ ಪಕ್ಷದ ಸಂಸದೆ ಶೋಭಾ ಕರಂದ್ಲಾಜೆಯ ನಿಲುವು ಏನು ಎಂಬುದು ಸ್ಪಷ್ಟಪಡಿಸಬೇಕಾಗಿದೆ. ಇದರ ಜೊತೆ ಪ್ರವೀಣ್ ಪೂಜಾರಿ ಹತ್ಯೆಯ ಬಗ್ಗೆ ಏನು ಹೇಳುತ್ತೀರಿ ಹಾಗೂ ಮೊವಾಡಿ ಕೊರಗರ ಮೇಲಿನ ಹಲ್ಲೆಯ ಬಗ್ಗೆ ಸ್ಪಷ್ಟಿಕರಣ ನೀಡಬೇಕಾಗಿದೆ ಎಂದು ಅವರು ಹೇಳಿದರು.

ಬಿಜೆಪಿ ಹಾಗೂ ಸಂಘಪರಿವಾರದ ನಾಯಕರು ಮತ್ತು ಮಾಧ್ಯಮಗಳು ಏಕಪಕ್ಷೀಯ ರೀತಿಯಲ್ಲಿ ಒಂದು ಸಮುದಾಯದ ಮೇಲೆ ಧ್ವೇಷದ ಅಭಿಯಾನ ವನ್ನು ಆರಂಭಿಸಿದ್ದು, ಸರಕಾರದ ಪ್ರಮುಖ ವಿಭಾಗವು ರಕ್ತಪಾತ ಹಾಗೂ ದೊಂಬಿಕೋರರ ಜೊತೆ ಶಾಮೀಲಾಗಿದೆ ಎಂದು ಅವರು ಆರೋಪಿಸಿದರು.
ಪಿಎಫ್‌ಐ ದ.ಕ. ಜಿಲ್ಲಾ ಸಮಿತಿ ಸದಸ್ಯ ಅಶ್ರಫ್ ಜೋಕಟ್ಟೆ ದಿಕ್ಸೂಚಿ ಭಾಷಣ ಮಾಡಿ, ಬಿಜೆಪಿ ನಾಯಕರು ರಾಜ್ಯಕ್ಕೆ ಬೆಂಕಿ ಕೊಡುವುದಾಗಿ ಹೇಳಿದರೆ ಸಚಿವರು ನಾವು ನಂದಿಸುವ ಕೆಲಸ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಇವರು ಆ ಕೆಲಸ ಮಾಡುವ ಬದಲು ಬೆಂಕಿ ಕೊಡುವ ಕೈಗಳ ವಿರುದ್ಧ ಕಾನೂನಾತ್ಮಕ ಕ್ರಮ ಜರಗಿಸಿ ಜೈಲಿಗೆ ಕಳುಹಿಸುವ ಕೆಲಸ ಮಾಡಬೇಕು ಎಂದರು.

ಶೋಭಾ ಕರಂದ್ಲಾಜೆ ರಾಜ್ಯದಲ್ಲಿ ನಡೆದ ಸಂಘ ಪರಿವಾರದ ಕಾರ್ಯಕರ್ತರ ಹತ್ಯೆ ಪಟ್ಟಿಯನ್ನು ಕೇಂದ್ರ ಗೃಹ ಸಚಿವರಿಗೆ ಸಲ್ಲಿಸಿದ್ದು, ಇದರಲ್ಲಿರುವ ಹರೀಶ್ ಪೂಜಾರಿ ಈಗಲೂ ಜೀವಂತವಾಗಿದ್ದಾರೆ. ಅದೇ ರೀತಿ ವಾಮನ ಪೂಜಾರಿ ಎಂಬವರ ಆತ್ಮಹತ್ಯೆ ಮಾಡಿಕೊಂಡಿರುವುದು. ಅಲ್ಲದೆ ಹೆಚ್ಚಿನವರು ಬೇರೆ ಬೇರೆ ಕಾರಣಕ್ಕೆ ಹತ್ಯೆ ಹಾಗೂ ಮೃತಪಟ್ಟವರಾಗಿದ್ದಾರೆ. ಹೀಗೆ ಸುಳ್ಳು ಹೇಳಿಕೊಂಡು ರಾಜಕೀಯ ಮಾಡುತ್ತಿದ್ದಾರೆ ಎಂದು ಅವರು ಟೀಕಿಸಿದರು.

ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ರಿಯಾಝ್ ಪರಂಗಿಪೇಟೆ ಪ್ರಧಾನ ಭಾಷಣ ಮಾಡಿದರು. ಎಸ್‌ಡಿಟಿಯು ರಾಜ್ಯ ಸಂಚಾಲಕ ಅಬ್ದುಲ್ ಜಲೀಲ್, ಜಿಲ್ಲಾ ಮುಸ್ಲಿಮ್ ಒಕ್ಕೂಟ ಪ್ರಧಾನ ಕಾರ್ಯದರ್ಶಿ ಹುಸೇನ್ ಕೋಡಿಬೆಂಗ್ರೆ, ಧರ್ಮಗುರು ರೆ.ಫಾ.ವಿಲಿಯಂ ಮಾರ್ಟಿಸ್, ಇಕ್ಬಾಲ್ ಬೆಳ್ಳಾರೆ, ಎಸ್‌ಡಿಪಿಐ ಉಡುಪಿ ಕ್ಷೇತ್ರ ಅಧ್ಯಕ್ಷ ನಝೀರ್ ಅಹ್ಮದ್ ಮೊದಲಾದವರು ಉಪಸ್ಥಿತರಿದ್ದರು.

ಅಧ್ಯಕ್ಷತೆಯನ್ನು ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಆಸೀಫ್ ಕೋಟೇಶ್ವರ ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರೆಹಮಾನ್ ಮಲ್ಪೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಡುಪಿ ಕ್ಷೇತ್ರ ಕಾರ್ಯದರ್ಶಿ ಸಲೀಂ ಕೊಡಂಕೂರು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News