ಮಂಗಳೂರು: ಇನ್ನೂ ತಲೆ ಎತ್ತದ ಹಜ್ ಭವನ!

Update: 2017-07-23 18:54 GMT

►ಭರವಸೆಯಲ್ಲೇ ಕಾಲ ಕಳೆದ ಜನಪ್ರತಿನಿಧಿಗಳು

►ಇಚ್ಛಾಶಕ್ತಿ ತೋರದ ಇಲಾಖಾಧಿಕಾರಿಗಳು
 
 ಮಂಗಳೂರು, ಜು.23: ನಗರ ಹೊರವಲಯದ ಬಜ್ಪೆ-ಕೆಂಜಾರು ವಿಮಾನ ನಿಲ್ದಾಣದ ಮೂಲಕ ಪವಿತ್ರ ಹಜ್ ಯಾತ್ರೆ ಕೈಗೊಳ್ಳುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಆದರೆ ಹಜ್ ಭವನದ ನಿರ್ಮಾಣ ಮಾತ್ರ ಕನಸಾಗಿ ಉಳಿದಿದೆ.

ಪ್ರತೀ ವರ್ಷ ಹಜ್ ಯಾತ್ರಾರ್ಥಿಗಳನ್ನು ಬೀಳ್ಕೊಡುವಾಗಲೆಲ್ಲಾ ಮುಖ್ಯಮಂತ್ರಿ, ಸಚಿವರು, ಅಧಿಕಾರಿಗಳು, ರಾಜಕಾರಣಿಗಳು ಹಜ್ ಭವನ ನಿರ್ಮಾಣದ ಬಗ್ಗೆ ಭರವಸೆ ನೀಡುತ್ತಾರೆ. ಆದರೆ ಅದೆಲ್ಲಾ ಗಾಳಿಯಲ್ಲೇ ಲೀನವಾಗುತ್ತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮಾ.15ರಂದು ಮಂಡಿಸಿದ ಬಜೆಟ್‌ನಲ್ಲಿ ಮಂಗಳೂರು ಹಜ್ ಭವನ ನಿರ್ಮಾಣಕ್ಕೆ 10 ಕೋಟಿ ರೂ. ಘೋಷಿಸಿದ್ದರು. ಆದರೆ, ಅದಿನ್ನೂ ಕಾರ್ಯಗತಗೊಳ್ಳುವ ಲಕ್ಷಣ ಕಾಣುತ್ತಿಲ್ಲ. ಅಂದರೆ ಹಜ್ ಭವನ ನಿರ್ಮಾಣಕ್ಕಾಗಿ ಸೂಕ್ತ ಸ್ಥಳವನ್ನು ಗುರುತಿಸಲಾಗಿದ್ದರೂ ಇದೀಗ ತಾಂತ್ರಿಕ ಸಮಸ್ಯೆ ಉಂಟಾಗಿದೆ. ಅದನ್ನು ಮಾತುಕತೆ ಮೂಲಕ ಬಗೆಹರಿಸಬಹುದಾಗಿದ್ದರೂ ಜನಪ್ರತಿನಿಧಿಗಳ, ಸಂಬಂಧಪಟ್ಟ ಇಲಾಖೆಯ ಕೆಲ ಹಿರಿಯ ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತಿದೆ.

*ಜಮೀನಿಗಾಗಿ ಸತತ ಪ್ರಯತ್ನ:

ರಾಜ್ಯ ಹಜ್ ಕಮಿಟಿಯು ಹಜ್ ಭವನ ನಿರ್ಮಿಸಲು ಕೆಂಜಾರು ವಿಮಾನ ನಿಲ್ದಾಣ ಸಮೀಪದಲ್ಲೇ ಇರುವ ಕೆಂಜಾರು ಗ್ರಾಮದ ಸರ್ವೇ ನಂಬರ್ 16ರಲ್ಲಿ 2.18 ಎಕರೆ ಜಮೀನು ಮಂಜೂರು ಮಾಡಲು ಕಂದಾಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿತ್ತು. ಆದರೆ, ಆ ಜಮೀನು ಸರಕಾರಿ ಅನಾಧೀನ ಜಮೀನು, ಕುಮ್ಕಿ ಮಿತಿಯಲ್ಲಿದೆ, ಜಮೀನು ಮಂಜೂರಾತಿಗೆ ಕುಮ್ಕಿದಾರರ ಆಕ್ಷೇಪಣೆ, ಜಮೀನು ಗ್ರಾಪಂ ವ್ಯಾಪ್ತಿಯಲ್ಲಿದೆ, ಗ್ರಾಪಂ ಸದಸ್ಯರ ಆಕ್ಷೇಪಣೆ, ಗ್ರಾಪಂ ಅಭಿಪ್ರಾಯ ನೀಡಿಲ್ಲ ಎಂದೆಲ್ಲಾ ಕಡತಗಳಲ್ಲಿ ಒಕ್ಕಣೆ ನೀಡಲಾದ ಹಾಗೂ ಸ್ಥಳೀಯರ ವಿರೋಧವಿದ್ದ ಕಾರಣ ಆ ಪ್ರಸ್ತಾವನೆಯನ್ನು ಕೈ ಬಿಡಲಾಯಿತು.

ಬಳಿಕ ಅದೇ ಗ್ರಾಮದ ಸರ್ವೇ ನಂಬರ್ 99/2ಎ1ರಲ್ಲಿ ಸುಮಾರು 5.20 ಎಕರೆ ಜಮೀನು ಇರುವುದನ್ನು ತಿಳಿದುಕೊಂಡ ಹಜ್ ಕಮಿಟಿಯು ಮತ್ತೊಂದು ಅರ್ಜಿ ಸಲ್ಲಿಸಿ ಜಮೀನು ಮಂಜೂರು ಮಾಡುವಂತೆ ಕೇಳಿಕೊಂಡಿತು. ಅದರಂತೆ 4 ವರ್ಷದ ಹಿಂದೆ ಕಂದಾಯ ಇಲಾಖೆಯು ಕೆಂಜಾರು ಗ್ರಾಮದಲ್ಲಿ ಹಜ್ ಭವನಕ್ಕೆ 1.91 ಎಕರೆ ಜಮೀನು ಮಂಜೂರು ಮಾಡಿತ್ತು. ಹಜ್ ಭವನ ನಿರ್ಮಾಣ ಮತ್ತು ವಾಹನ ಪಾರ್ಕಿಂಗ್‌ಗೆ ಈ ಜಮೀನು ಸಾಕಾಗದು ಎಂಬ ಅಭಿಪ್ರಾಯದ ಮಧ್ಯೆ ಜಮೀನಿನ ಪಕ್ಕದ ಪಟ್ಟಾ ಜಮೀನಿನ ಮಾಲಕರು ಇದನ್ನು ತನ್ನ ಕುಮ್ಕಿ ಭೂಮಿ ಎಂದು ಹೇಳಿಕೊಂಡು ಮಂಗಳೂರು ಸಹಾಯಕ ಆಯುಕ್ತರ ನ್ಯಾಯಾಲಯದ ಮೊರೆ ಹೊಕ್ಕಿದ್ದರು. ಬಳಿಕ ಅದು ಜಿಲ್ಲಾಧಿಕಾರಿಗಳ ನ್ಯಾಯಾಲಯದ ಮೆಟ್ಟಲೇರಿತು.

ಇದೀಗ ಸದ್ರಿ ಖಾಸಗಿ ವ್ಯಕ್ತಿ ಹೈಕೋರ್ಟ್‌ನ ಮೊರೆ ಹೊಕ್ಕಿದ್ದಾರೆ. ಹಾಗಾಗಿ ತೀರ್ಪು ಹೊರ ಬೀಳುವವರೆಗೆ ಅಥವಾ ಆ ವ್ಯಕ್ತಿಯ ಜೊತೆ ಸಂಧಾನ ಮಾಡದ ಹೊರತು ‘ಹಜ್ ಭವನ’ ನಿರ್ಮಾಣ ಎಂಬುದು ಹೇಳಿಕೆ ಅಥವಾ ಭರವಸೆಗೆ ಮಾತ್ರ ಸೀಮಿತವಾಗಲಿದೆ ಎಂಬ ಮಾತು ಕೇಳಿ ಬರುತ್ತಿದೆ.

ಜಮೀನು ಮಂಜೂರಾದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಹಜ್ ಭವನಕ್ಕೆ ಶಿಲಾನ್ಯಾಸ ನೆರವೇರಿಸಲು ಪ್ರಯತ್ನಿಸುವುದಾಗಿ ತಿಳಿಸಿದ್ದರು. ಆದರೆ ಆ ಭರವಸೆ ಕೂಡ ಹುಸಿಯಾಗಿದೆ. 2009ರಿಂದ 2016ರವರೆಗೆ ಮಂಗಳೂರು ವಿಮಾನ ನಿಲ್ದಾಣದ ಮೂಲಕ 6,374 ಮಂದಿ ಹಜ್ ಯಾತ್ರೆಗೆ ತೆರಳಿದ್ದಾರೆ. ಈ ಬಾರಿ 780 ಮಂದಿ ಹೊರಡಲಿದ್ದಾರೆ. ಈ ಮಧ್ಯೆ ಕಳೆದ ಬಜೆಟ್‌ನಲ್ಲಿ 10 ಕೋಟಿ ರೂ. ಮುಖ್ಯಮಂತ್ರಿ ಹಜ್ ಭವನ ನಿರ್ಮಾಣಕ್ಕೆ ಘೋಷಣೆ ಮಾಡಿದ್ದರೂ ಕೂಡ ಸದ್ಯ ನಿರ್ಮಾಣದ ಯಾವ ಲಕ್ಷಣವೂ ಕಾಣದ ಕಾರಣ ಹಣ ಪುನಃ ಹಣಕಾಸು ಇಲಾಖೆಗೆ ಮರಳುವ ಸಾಧ್ಯತೆಯಿದೆ.

ಹಜ್ ಯಾತ್ರೆಗೆ ಇಂದು ಚಾಲನೆ
ಸೋಮವಾರ ಪೂರ್ವಾಹ್ನ 11ಕ್ಕೆ ಮಂಗಳೂರು ವಿಮಾನ ನಿಲ್ದಾಣದಿಂದ 9ನೆ ವರ್ಷದ ಹಜ್ ಯಾತ್ರೆಗೆ ಸಚಿವ ರೋಶನ್ ಬೇಗ್ ಚಾಲನೆ ನೀಡಲಿದ್ದಾರೆ. ಸತತ ಮೂರು ದಿನ 780 ಯಾತ್ರಿಗಳು ಯಾತ್ರೆ ಕೈಗೊಳ್ಳಲಿದ್ದಾರೆ.


ಹಜ್ ಭವನ ನಾನು ಪ್ರತಿನಿಧಿಸುತ್ತಿರುವ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯುತ್ತಿರುವುದು ಹೆಮ್ಮೆಯ ವಿಚಾರ. ಅದರಂತೆ ಜಮೀನು ಒದಗಿಸುವಿಕೆ ಮತ್ತು ಹಜ್ ಭವನ ನಿರ್ಮಾಣಕ್ಕೆ ಸಂಬಂಧಿಸಿ ಸ್ಥಳೀಯ ಶಾಸಕನಾಗಿ ನಾನು ನನ್ನ ಪ್ರಯತ್ನವನ್ನು ಶಕ್ತಿಮೀರಿ ಮಾಡಿದ್ದೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದಂತೆ ಅನುದಾನ ಕೂಡಾ ಬಿಡುಗಡೆಯಾಗಿದೆ. ಸರಕಾರ ಏನು ಮಾಡಬೇಕಿತ್ತೋ ಮತ್ತು ಒಬ್ಬ ಜನಪ್ರತಿನಿಧಿಯಾಗಿ ನಾನು ಏನು ಮಾಡಬೇಕಿತ್ತೋ ಅದನ್ನು ಮಾಡಿದ್ದೇನೆ. ಆದರೆ ತಾಂತ್ರಿಕ ಸಮಸ್ಯೆಯಿಂದ ಸ್ವಲ್ಪ ಹಿನ್ನಡೆಯಾಗಿದೆ. ಈ ಸಮಸ್ಯೆಯನ್ನು ಬಗೆಹರಿಸಲು ಮಾತುಕತೆ ನಡೆಸಲಾಗುತ್ತಿದೆ.
-ಬಿ.ಎ.ಮೊಯ್ದಿನ್ ಬಾವಾ
ಶಾಸಕರು, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ

Writer - ಹಂಝ ಮಲಾರ್

contributor

Editor - ಹಂಝ ಮಲಾರ್

contributor

Similar News