ಕನಕ ಹಲವು ವ್ಯಕ್ತಿತ್ವ ಸೇರಿಕೊಂಡ ವಿಚಾರವಾದಿ: ಕಾ.ತ.ಚಿಕ್ಕಣ್ಣ

Update: 2017-08-11 14:06 GMT

ಉಡುಪಿ, ಆ.11: 16ನೆ ಶತಮಾನದ ದಾರ್ಶನಿಕ ಕವಿಯೂ, ಭಕ್ತನೂ ಆಗಿದ್ದ ಕನಕದಾಸರು ಹಲವು ವ್ಯಕ್ತಿತ್ವ ಸೇರಿಕೊಂಡ ಒಬ್ಬ ವಿಚಾರವಾದಿಯಾಗಿದ್ದರು ಎಂದು ಬೆಂಗಳೂರಿನ ರಾಷ್ಟ್ರೀಯ ಸಂತ ಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಮನ್ವಯಾಧಿಕಾರಿ ಹಾಗೂ ಹಿರಿಯ ಸಾಹಿತಿ ಕಾ.ತ. ಚಿಕ್ಕಣ್ಣ ಹೇಳಿದ್ದಾರೆ.

ಉಡುಪಿಯ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಬೆಂಗಳೂರಿನ ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಮಣಿಪಾಲ ವಿವಿ ಹಾಗೂ ಕನಕದಾಸ ಅಧ್ಯಯನ ಸಂಶೋಧನಾ ಪೀಠ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ‘ತಳಸಮುದಾಯಗಳ ಸಾಂಸ್ಕೃತಿಕ ಸಂಚಲನ’ ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಕನಕದಾಸರ ಕೃತಿಗಳು ಕಿಟಕಿಯನ್ನು ತೆರೆದಿಟ್ಟು ಕಟ್ಟಿದ ಮಾನವ ಸಂವೇದನೆಯ ಮೂಲಕ ಮರು ಓದಿಗೆ ಪ್ರೇರೇಪಿಸುವ ಗುಣವನ್ನು ಹೊಂದಿವೆ. ಅವರು ತಮ್ಮ ಕೃತಿಗಳ ಮೂಲಕ ಮುರಿದು ಕಟ್ಟುವ ಕೆಲಸವನ್ನು ಮಾಡುತ್ತಾರೆ.ಮನುಷ್ಯ ಸಂವೇದನೆಯನ್ನು ಮೂಲವಾಗಿಟ್ಟುಕೊಂಡ ಭಕ್ತಿ ಕನಕ ದಾಸರದ್ದಾಗಿದೆ ಎಂದು ಕಾ.ತ.ಚಿಕ್ಕಣ್ಣ ವಿವರಿಸಿದರು.

ತತ್ವಪದಗಳ ಸಮಗ್ರ ಸಂಪುಟ: ರಾ.ಸಂ.ಕ.ಅ.ಮತ್ತು ಸಂ.ಕೇಂದ್ರ ಕನ್ನಡ ತತ್ವಪದಗಳ ಸಮಗ್ರ ಸಂಪುಟವನ್ನು ಹೊರತರುವ ಕೆಲಸ ಮಾಡುತ್ತಿದೆ. ಐದು ವರ್ಷಗಳ ಕಾಲಾವಧಿಯಲ್ಲಿ ಒಟ್ಟು ಸುಮಾರು 50 ಸಂಪುಟಗಳನ್ನು ಇದನ್ನು ಹೊರತರುವ ಯೋಜನೆ ಇದೆ. ಈಗಾಗಲೇ ಎರಡು ವರ್ಷಗಳಲ್ಲಿ 32 ಸಂಪುಟಗಳನ್ನು ಹೊರತರಲಾಗಿದೆ ಎಂದವರು ಹೇಳಿದರು.

ತಳಸಮುದಾಯಗಳ ಮೂಲಕ ರಚನೆಗೊಂಡ ತತ್ವಪದಗಳು ವಚನ ಸಾಹಿತ್ಯಕ್ಕಿಂತಲೂ ಹೆಚ್ಚು ಜಾತಿಯತೆಯನ್ನು ಮುರಿದಿರುವುದನ್ನು, ಅಲ್ಲಗಳೆದಿರುವು ದನ್ನು ಕಾಣಬಹುದು ಎಂದವರು ನುಡಿದರು.

ಮಣಿಪಾಲ ವಿವಿಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್‌ನ ಆಡಳಿತಾಧಿಕಾರಿ ಡಾ.ಎಚ್.ಶಾಂತಾರಾಮ್, ಎಂಜಿಎಂ ಕಾಲೇಜಿನ ಪ್ರಾಂಶುಪಾಲೆ ಪ್ರೊ.ಕುಸುಮಾ ಕಾಮತ್ ಮುಖ್ಯ ಅತಿಥಿಗಳಾಗಿ ಉಸ್ಥಿತರಿದ್ದರು.

ಉಡುಪಿ ಕನಕದಾಸ ಅಧ್ಯಯನ ಸಂಶೋಧನಾ ಪೀಠದ ಸಂಯೋಜ ನಾಧಿಕಾರಿ ಪ್ರೊ.ವರದೇಶ ಹಿರೇಗಂಗೆ ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಡಾ.ಅಶೋಕ ಆಳ್ವ ವಂದಿಸಿ, ಸುಪ್ರೀತಾ ಡಿ.ಎಸ್. ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News