ಮರಳುಗಾರಿಕೆ: ಹುಸಿಯಾದ ಉಸ್ತುವಾರಿ ಸಚಿವರ ಭರವಸೆ; ಸಿಐಟಿಯು

Update: 2017-08-11 14:20 GMT

ಉಡುಪಿ, ಆ.11: ಕಳೆದ ಜು.26ರಂದು ಜಿಲ್ಲೆಯ ಕಟ್ಟಡ ಕಾರ್ಮಿಕರು ಉಡುಪಿಯಲ್ಲಿ ನಡೆಸಿದ ಬೃಹತ್ ಪ್ರತಿಭಟನೆಯ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿ, ಮನವಿ ಸ್ವೀಕರಿಸಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಸ್ಥಳದಲ್ಲಿ ನೀಡಿದ ಭರವಸೆ ಈಗ ಹುಸಿಯಾಗಿದೆ ಎಂದು ಸಿಐಟಿಯುಗೆ ಸೇರಿದ ಕಟ್ಟಡ ಕಾರ್ಮಿಕ ಸಂಘಗಳ ಸಮನ್ವಯ ಸಮಿತಿ ಆರೋಪಿಸಿದೆ.

ಅಂದು ಮನವಿ ಸ್ವೀಕರಿಸಿ ಮಾತನಾಡಿದ್ದ ಸಚಿವರು, ಆ.1ರಿಂದ ಮರಳುಗಾರಿಕೆ ಆರಂಭವಾಗುವುದು ಎಂದು ಭರವಸೆ ನೀಡಿ ಚಪ್ಪಾಳೆಗಿಟ್ಟಿಸಿ ಕೊಂಡಿದ್ದರು. ಆದರೆ ಇದಾಗಿ 15 ದಿನಗಳು ಕಳೆದರೂ ಇನ್ನೂ ಮರಳುಗಾರಿಕೆ ಸಂಬಂಧಿಸಿದ ಯಾವುದೇ ಪ್ರಕ್ರಿಯೆ ಪ್ರಾರಂಭಗೊಂಡಿಲ್ಲ ಎಂದು ಸಮಿತಿ ದೂರಿದೆ.

ಕರಾವಳಿ ಜಿಲ್ಲೆಗಳಲ್ಲಿ ಎರಡು ವರ್ಷಗಳಿಂದ ಮರಳು ಸಮಸ್ಯೆ ತೀವ್ರವಾಗಿದೆ. ಮರಳಿನ ದರ ಹೆಚ್ಚಳವಾಗಿದೆ. ಇದನ್ನು ಹಲವಾರು ಬಾರಿ ಸರಕಾರ ಮತ್ತು ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗಿದೆ. 2016ರ ಸೆಪ್ಟೆಂಬರ್‌ನಲ್ಲಿ ಉಪವಾಸ ಸತ್ಯಾಗ್ರಹ ನಡೆಸಿ ಹೋರಾಟ ಮಾಡಿದಾಗ ಕರಾವಳಿ ಜಿಲ್ಲೆಗಳಿಗೆ ಪ್ರತ್ಯೇಕ ಮರಳು ನೀತಿ ಜಾರಿಗೊಳಿಸುವ ಭರವಸೆ ನೀಡಿದ್ದರು. ಆದರೆ ಈ ಎಲ್ಲಾ ಭರವಸೆಗಳು ಹುಸಿಯಾಗಿವೆ ಎಂದು ಸಮಿತಿ ಹೇಳಿದೆ.

ಇದೀಗ ಮಳೆಗಾಲ ಮುಗಿಯುತ್ತಲಿದ್ದು, ನಿರ್ಮಾಣ ಚಟುವಟಿಕೆಗಳು ವೇಗ ಪಡೆಯುತ್ತಿವೆ. ಕೂಡಲೇ ಕಡಿಮೆ ದರದಲ್ಲಿ ಮರಳು ಒದಗಿಸದಿದ್ದರೆ ತೀವ್ರವಾದ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಉಡುಪಿ ಜಿಲ್ಲಾ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕ ಸಂಘಗಳ ಸಮನ್ವಯ ಸಮಿತಿ ಎಚ್ಚರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News