ಅದಾನಿಯಿಂದ ಎಲ್ಲೂರಿಗೆ ಸಿಮೆಂಟ್, ಮಂಗಳೂರಿಗೆ ನೀರು ಶುದ್ಧೀಕರಣ ಘಟಕ : ಕಿಶೋರ್ ಆಳ್ವ

Update: 2017-08-12 11:21 GMT

ಪಡುಬಿದ್ರಿ,ಆ.12: ಅದಾನಿ ಕಂಪೆನಿಯು ಎಲ್ಲೂರಿನಲ್ಲಿ ಸಿಮೆಂಟ್ ಘಟಕ ಹಾಗೂ ಸಮುದ್ರದ ನೀರನ್ನು ಶುದ್ಧೀಕರಿಸುವ ಘಟಕವನ್ನು ಮಂಗಳೂರಿನಲ್ಲಿ ತೆರೆಯಲು ಯೋಜನೆ ರೂಪಿಸಲಾಗಿದೆ ಎಂದು ಯುಪಿಸಿಎಲ್-ಅದಾನಿ ಜಂಟಿ ಅಧ್ಯಕ್ಷ ಕಿಶೋರ್ ಆಳ್ವ ಹೇಳಿದ್ದಾರೆ.

ಶುಕ್ರವಾರ ಅದಾನಿ-ಯುಪಿಸಿಎಲ್ ಸಂಸ್ಥೆಯ ಸಿಎಸ್‍ಆರ್ ಅನುದಾನದಲ್ಲಿ ಎಲ್ಲೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವಿವಿಧ ರಸ್ತೆ ಕಾಮಗಾರಿಗಳ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,  ಮಂಗಳೂರಿನ ಕೈಗಾರಿಕ ಸಂಸ್ಥೆಗಳು ಮಂಗಳೂರು ಮಹಾನಗರ ಪಾಲಿಕೆಗೆ ಕೈಗಾರಿಕ ಘಟಕಗಳಿಗೆ ನೀರಿನ ಅವಶ್ಯಕತೆಯ ಬೇಡಿಕೆ ಇಟ್ಟಿದೆ ಎಂದರು.

ಈ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ಖಾಸಗಿ ಸಂಘ ಸಂಸ್ಥೆಗಳು ಸಮುದ್ರ ನೀರಿನ್ನು ಶುದ್ಧೀಕರಿಸುವ ಘಟಕವನ್ನು (ಡಿಸಲೈನೇಷನ್ ಪ್ಲ್ಯಾಂಟ್) ಸ್ಥಾಪಿಸಿ ಮಂಗಳೂರು ಜನರಿಗೆ ಮತ್ತು ಕೈಗಾರಿಕ ಉದ್ದೇಶಕ್ಕೆ ನೀರನ್ನು ಪೂರೈಸುವ ಯೋಜನೆಯನ್ನು ಕೈಗೊಳ್ಳಲಿದೆ. ಅದಾನಿ ಸಮೂಹವು ನೀರನ್ನು ಶುದ್ಧೀಕರಿಸುವ ಘಟಕವನ್ನು ಸ್ಥಾಪಿಸಲು ಕ್ರಿಯಾಯೋಜನೆ ತಯಾರಿಸುತ್ತಿದೆ. ಈ ನೀರಿನ ಶುದ್ಧೀಕರಣದಿಂದ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಉಚಿತವಾಗಿ ಶುದ್ಧ ಕುಡಿಯುವ ನೀರಿನ ಸೌಕರ್ಯವನ್ನು ಕಲ್ಪಿಸಲು ಸಹ ಅದಾನಿ ಸಮೂಹದ ಯೋಜನೆ ಆಗಿದೆ ಎಂದು ಹೇಳಿದರು.

ಎಲ್ಲೂರಿನಲ್ಲಿ ಸಿಮೆಂಟ್ ಘಟಕ: ಯುಪಿಸಿಎಲ್ ಯೋಜನೆ ವಿಸ್ತೀರ್ಣದಿಂದ ಅಧಿಕ ಪ್ರಮಾಣದಲ್ಲಿ ಹಾರೂಬೂದಿ ಉತ್ಪತ್ತಿಯಾಗುವುದರಿಂದ ಅದನ್ನು ಸಂಪೂರ್ಣವಾಗಿ ಉಪಯೋಗಿಸಲು ಸ್ಥಾವರದ ವಠಾರದಲ್ಲೇ ಸಿಮೆಂಟ್ ಮಿಶ್ರಣ ಘಟಕವನ್ನು ಸ್ಥಾಪಿಸಲು ಅದಾನಿ ಸಮೂಹವು ಮುಂದಾಗಿದೆ ಎಂದು ನುಡಿದರು.

ಯುಪಿಸಿಎಲ್‍ನ ಈಗಿನ ಘಟಕಗಳಿಂದ ಉತ್ಪತ್ತಿಯಾಗುವ ಹಾರೂ ಬೂದಿಯನ್ನು ಸ್ಥಳೀಯ ಇಟ್ಟಿಗೆ ಹಾಗೂ ಸಿಮೆಂಟ್ ಉತ್ಪಾದನಾ ಘಟಕಗಳು ಉಪಯೋಗಿಸುತ್ತಿದೆ. ಯುಪಿಸಿಎಲ್‍ನಲ್ಲಿ ಅದಾನಿ ಸಂಸ್ಥೆಯ ಸಿಮೆಂಟ್ ಘಟಕ ಆರಂಭಿಸುವುದರಿಂದ ಸ್ಥಳೀಯರಿಗೆ ಉದ್ಯೋಗವಕಾಶ ಕಲ್ಪಿಸಿದಂತಾಗುತ್ತದೆ. ಸಿಮೆಂಟ್ ಘಟಕದಲ್ಲಿ ಎಲ್ಲೂರು ಹಾಗೂ ಮುದರಂಗಡಿ ಗ್ರಾಮದ 150 ಯುವಕರಿಗೆ ಉದ್ಯೋಗ ಕಲ್ಪಿಸಲಾಗುವುದು ಎಂದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷೆ ವಸಂತಿ ಮಧ್ವರಾಜ್, ಸದಸ್ಯರಾದ ವಿಮಲ ದೇವಾಡಿಗ, ಮೋಹನ್ ಆಚಾರ್ಯ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಚಂದ್ರಶೇಖರ್, ಕಂಪೆನಿಯ ಎಜಿಎಂ ಗಿರೀಶ್ ನಾವಡ, ರವಿ ಜೀರೆ, ಪ್ರಬಂಧಕ ವಸಂತಕುಮಾರ್, ಅದಾನಿ ಫೌಂಡೇಶನ್‍ನ ಅನುದೀಪ್ ಪೂಜಾರಿ, ಸುಕೇಶ್ ಸುವರ್ಣ ಉಪಸ್ಥಿತರಿದ್ದರು.

ರಸ್ತೆ ಅಭಿವೃದ್ಧಿಗೆ ಚಾಲನೆ: ಎಲ್ಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ವೀರಭದ್ರ ದೇವಸ್ಥಾನದಿಂದ ಮಾಣಿಯೂರು ಕೆರೆಗೆ ಹೋಗುವ ರಸ್ತೆಯ ಕಾಂಕ್ರೀಟ್ ಹಾಗೂ ಕೇಂಜ ಮುದರಂಗಡಿ ಮುಖ್ಯ ರಸ್ತೆಯಿಂದ ಮಾಣಿಯೂರು ಗ್ರಾಮದ ರಸ್ತೆಯ ಅಭಿವೃದ್ಧಿ ಕಾಮಗಾರಿಗಳಿಗೆ ರೂ. 48.39 ಲಕ್ಷ ವೆಚ್ಚದ ತನ್ನ ಸಿಎಸ್‍ಆರ್ ಯೋಜನೆಯಡಿಯಲ್ಲಿ ಚಾಲನೆ ನೀಡಿತು. ಗುದ್ದಲಿ ಪೂಜೆಯನ್ನು ಎಲ್ಲೂರು ದೇವಸ್ಥಾನದ ಅರ್ಚಕ ಗುರುರಾಜ ಭಟ್ ಮತ್ತು ವೀರಭದ್ರ ದೇವಸ್ಥಾನದ ಅರ್ಚಕರಾದ ಸತ್ಯನಾರಾಯಣ ಭಟ್ ನೆರವೇರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News