ಬೆಳ್ತಂಗಡಿ : ಸಿಐಟಿಯು ಜಾಗೃತಿ ಜಾಥಾ

Update: 2017-08-12 14:14 GMT

ಬೆಳ್ತಂಗಡಿ,ಆ.12: ಒಂದೇ ದೇಶ, ಒಂದೇ ತೆರಿಗೆ ಎಂದು ಹೇಳುವ ಕೇಂದ್ರ ಸರಕಾರ ದುಡಿಯುವ ವರ್ಗಕ್ಕೆ ಮಾತ್ರ ಒಂದೇ ರೀತಿ ವೇತನ ಯಾಕೆ ಜಾರಿಮಾಡುತ್ತಿಲ್ಲ ಇದರಲ್ಲಿ ಮಾತ್ರ ಪಕ್ಷಪಾತ ಯಾಕೆ ಎಂದು ಸಿಐಟಿಯು ರಾಜ್ಯಾಧ್ಯಕ್ಷೆ ಎಸ್. ವರಲಕ್ಷ್ಮಿ  ಪ್ರಶ್ನಿಸಿದರು.

ಅವರು ಶನಿವಾರ ದುಡಿಯುವ ಜನರ ಹಕ್ಕುಗಳ ಸಂರಕ್ಷಣೆಗಾಗಿ, ಸಮೃದ್ಧ ಸಮಗ್ರ ಸೌಹಾರ್ದ ಕರ್ನಾಟಕ ಎಂಬ ಘೋಷಣೆಯಡಿ ಸಿಐಟಿಯು ಜಾಗೃತಿ ಜಾಥಾವನ್ನು ಉದ್ದೇಶಿಸಿ ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ಮಾತನಾಡುತ್ತಿದ್ದರು

 ಕನಿಷ್ಠ ವೇತನ  ಜಾರಿ ಉದ್ಯೋಗ ಭದ್ರತೆ, ಸಾರ್ವಜನಿಕ ಉದ್ದಿಮೆಗಳ ಖಾಸಗಿಕರಣದ ವಿರುದ್ಧ  ಕಾರ್ಮಿಕರ ಸ್ವಾತಂತ್ರ್ಯದ ರಕ್ಷಣೆಗಾಗಿ ಆಗಸ್ಟ್ 14ರ ರಾತ್ರಿಯಿಡೀ ರಾಜ್ಯಾದ್ಯಂತ ಸ್ವಾತಂತ್ರ್ಯ ಸತ್ಯಾಗ್ರಹ ಎಂಬ ಚಳವಳಿ ನಡೆಸಲಾಗುವುದು ಎಂದರು.

ಕೇಂದ್ರ ಸರಕಾರ ಪ್ರತೀ ವರ್ಷ 1 ಕೋಟಿ ಉದ್ಯೋಗ ನೀಡುವ ವಾಗ್ದಾನದೊಂದಿಗೆ ಅಧಿಕಾರಕ್ಕೆ ಬಂದು ಮೂರು ವರ್ಷ ಕಳೆದರೂ ಕೂಡಾ ಒಂದೇ ಒಂದು ಉದ್ಯೋಗವನ್ನು ಸೃಷ್ಟಿ ಮಾಡದೆ ದೇಶದ ಅಸಂಖ್ಯಾತ ನಿರುದ್ಯೋಗಿ ಯುವಜನರನ್ನು ವಂಚಿಸಿದೆ. ದೇಶದಲ್ಲಿ ಪ್ರತೀ ವರ್ಷ ಲಕ್ಷಾಂತರ ಉದ್ಯೋಗಿಗಳನ್ನು ಕಡಿತ ಮಾಡುವ ಮೂಲಕ ದೇಶದಲ್ಲಿ ನಿರುದ್ಯೋಗ ತಾಂಡವವಾಡುವಂತೆ ಮಾಡುತ್ತಿದೆ ಎಂದ ಅವರು ಅಂಗನವಾಡಿ, ಬಿಸಿಯೂಟ, ಆಶಾ ಸೇರಿದಂತೆ ಸ್ಕೀಂ ನೌಕರರನ್ನು ಕೇಂದ್ರ ಸರಕಾರ ಬೀದಿ ಪಾಲು ಮಾಡಲು ಹೊರಟಿದೆ. ಇದರಿಂದಾಗಿ ಕೋಟ್ಯಾಂತರ ಮಹಿಳೆಯರಿಗೆ ಉದ್ಯೋಗದ ಅಭದ್ರತೆP Áಡುತ್ತಿದೆ. ಕೇರಳ ಸರಕಾರ ರಾಜ್ಯದಯಾವುದೇ ಭಾಗದಲ್ಲಿ ದುಡಿಯುವ ವರ್ಗಕ್ಕೆರೂ. 600 ವೇತನ ನೀಡುವ ಕಾನೂನನ್ನು ಜಾರಿಗೊಳಿಸಿದೆ. ಇದನ್ನು ರಾಜ್ಯ ಸರಕಾರ ಕೂಡಾ ಜಾರಿ ಮಾಡಬೇಕು ಎಂದು ಆಗ್ರಹಿಸಿದರು. 

ದಕ್ಷಿಣಕನ್ನಡ ಜಿಲ್ಲೆಯಲ್ಲ್ಲಿ ಮನುಷ್ಯರನ್ನು ಹತ್ಯೆ ಮಾಡುವ ರಾಜಕೀಯದೂರ್ತತನ ವಿಜೃಂಭಿಸುತ್ತಿದೆ. ಧರ್ಮವನ್ನು ಚುನಾವಣೆಗಾಗಿ ಬಳಕೆ ಮಾಡುವ ಕೆಟ್ಟ ಪದ್ಧತಿ ಜಾರಿಯಲ್ಲಿದೆ. ಇದು ದುಡಿಯುವ ವರ್ಗಕ್ಕೆ ಆತಂಕಕಾರಿಯಾಗಿದೆ ಎಂದರು.

ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಮಾತನಾಡಿ ನೋಟ್ ಬ್ಯಾನ್ ಮೂಲಕ ದೇಶದ ಮೇಲೆ ಸರ್ಜಿಕಲ್ ಧಾಳಿ ನಡೆಸಿದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ 1962ರಲ್ಲಿ ಭಾರತ- ಚೀನಾಯುದ್ಧದ ಸಂದರ್ಭ ಯುದ್ಧ ಟ್ಯಾಂಕರ್‍ಗಳನ್ನು, ಮದ್ದುಗುಂಡುಗಳನ್ನು ತಯಾರಿಸಲು 4 ಕಡೆಗಳಲ್ಲಿ ನಿರ್ಮಾಣ ಕಂಪೆನಿಗಳನ್ನು ಆರಂಭಿಸಿತ್ತು. ಇದೀಗ ಮತ್ತೆ ಯುದ್ಧದ ಕಾರ್ಮೋಡ ಕವಿದಿರುವ ಈ ಸಂದರ್ಭದಲ್ಲಿ ಸರಕಾರಿ ಸೌಮ್ಯದ ಈ ಕಂಪೆನಿಗಳು ರಿಲಾಯನ್ಸ್ ಕಂಪೆನಿಗೆ ಮಾರಾಟ ಮಾಡಿದೆ. ಈ ಕಂಪೆನಿಯಿಂದ ಸರಕಾರಕ್ಕೆ ಪ್ರತೀ ವರ್ಷ 635 ಕೋಟಿ ತೆರಿಗೆ ಪಾವತಿಸಲಾಗುತ್ತಿತ್ತು. ಪ್ರತಿ ವರ್ಷ 65ರಿಂದ 68 ಕೋಟಿ ಲಾಭ ಗಳಿಸುತ್ತಿದ್ದ ಈ ಕಂಪೆನಿಯನ್ನು ಕೇವಲ 125 ಕೋಟಿಗೆ ಮಾರಾಟ ಮಾಡಲಾಗಿದೆ. ಆ ಮೂಲಕ ದೇಶಕ್ಕೆ ಕೇಂದ್ರ ಸರಕಾರವೇ ಅಪಾಯಕಾರಿಯಾಗಿ ಕಾಡಿದೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಸಿ.ಐ.ಟಿ.ಯು. ರಾಜ್ಯ ಕಾರ್ಯದರ್ಶಿ ಕೆ.ಎನ್. ಉಮೇಶ್, ಅಟೋರಿಕ್ಷಾ ಡ್ರೈವರ್ಸ್‍ಯೂನಿಯನ್‍ನ ರಾಜ್ಯ ಕಾರ್ಯದರ್ಶಿ ರಾಘವೇಂದ್ರ, ಸಂತೋಷ್, ಡಿವೈಎಫ್‍ಐನ ಬಸವರಾಜ್ ಪೂಜಾರ್ ಸಿಐಟಿಯು ದ.ಕ. ಜಿಲ್ಲಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸುನೀಲ್‍ಕುಮಾರ್ ಬಜಾಲ್, ಸಿ.ಐ.ಟಿ.ಯು. ತಾಲೂಕು ಅಧ್ಯಕ್ಷ ಶಿವಕುಮಾರ್, ಕಾರ್ಮಿಕ ಮುಖಂಡರಾದ ಹರಿದಾಸ್, ಸುಕನ್ಯಾ, ರೋಹಿಣಿ ಪೆರಾಡಿ, ಮೀನಾಕ್ಷಿ, ಜಯರಾಮ್ ಮಯ್ಯ, ಕೃಷ್ಣ ನೆರಿಯ, ಜಯಂತಿ ನೆಲ್ಲಿಂಗೇರಿ, ಲಲಿತ ಮದ್ದಡ್ಕ, ಅನಿಲ್ ಮೊದಲಾದವರು ಉಪಸ್ಥಿತರಿದ್ದರು. ವಸಂತ ನಡ ಸ್ವಾಗತಿಸಿ ಶೇಖರಎಲ್. ಧನ್ಯವಾದವಿತ್ತರು.

ಕಾರ್ಯಕ್ರಮದ ಮೊದಲು ಬೆಳ್ತಂಗಡಿ ಅಂಬೇಡ್ಕರ್ ಭವನದಿಂದ ಬಸ್‍ ನಿಲ್ದಾಣದ ತನಕ ಮೆರವಣಿಗೆ ನಡೆಸಿ ಬಸ್ ನಿಲ್ದಾಣದಲ್ಲಿ ಕಾರ್ಯಕ್ರಮ ನಡೆಸಲಾಯಿತು. ಈ ಸಂದರ್ಭ ಕಾರ್ಮಿಕ ವರ್ಗದ ಜಾಗೃತಿಗಾಗಿ ಬೀದಿ ನಾಟಕವನ್ನು ಪ್ರದರ್ಶಿಸಲಾಯಿತು.

ರಾಜ್ಯ ಸರಕಾರ ರೈತರ ಸಾಲ ಮನ್ನಾ ಮಾಡಿದ ಸಂದರ್ಭ “ರೈತರ ಸಾಲ ಮನ್ನವನ್ನು ಪ್ಯಾಶನ್” ಎಂದು ಛೇಡಿಸಿದ ವ್ಯಕ್ತಿ ಇದೀಗ ಉಪರಾಷ್ಟ್ರಪತಿಯಾಗಿರುವುದು ದೇಶದ ದುರಂತ

–ಎಸ್. ವರಲಕ್ಷ್ಮಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News