ಶ್ರೀಕೃಷ್ಣನ ಸಂದೇಶಗಳು ಸಾರ್ವಕಾಲಿಕ: ಸಚಿವ ಪ್ರಮೋದ್

Update: 2017-08-14 15:02 GMT

ಉಡುಪಿ, ಆ.14: ಕರ್ಮ ಸಿದ್ಧಾಂತದ, ಮನೋವಿಜ್ಞಾನದ ಬಗ್ಗೆ ಶ್ರೀಕೃಷ್ಣ ನೀಡಿರುವ ಸಂದೇಶಗಳು ಸಾರ್ವಕಾಲಿಕ. ಭಗವದ್ಗೀತೆಯಲ್ಲಿ ಶ್ರೀಕೃಷ್ಣ ನೀಡಿದ ಬೋಧನೆಗಳನ್ನು ಅನುಷ್ಠಾನಕ್ಕೆ ತರುವವರು ಬಡವರೇ ಹೊರತು ಈ ದೇಶದ ಶ್ರೀಮಂತರಲ್ಲ. ಇದರಿಂದಾಗಿ ಬಡವರಲ್ಲಿ ಕಾಯಕಪ್ರಜ್ಞೆ, ಸ್ಥಿತಪ್ರಜ್ಞತೆಯನ್ನು ಇಂದು ಕಾಣಲು ಸಾಧ್ಯವಾಗುತ್ತಿದೆ ಎಂದು ರಾಜ್ಯ ಮೀನುಗಾರಿಕೆ ಯುವಜನ ಸಬಲೀಕರಣ ಮತ್ತು ಕ್ರೀಡಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

ಉಡುಪಿ ಜಿಲ್ಲಾಡಳಿತ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಉಡುಪಿ ಸರಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು ಸಭಾಂಗಣದಲ್ಲಿ ಸೋಮವಾರ ಆಯೋಜಿಸಲಾದ ಶ್ರೀಕೃಷ್ಣ ಜಯಂತಿ ಆಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ವಿಶ್ವಕ್ಕೆ ಆಧ್ಯಾತ್ಮಿಕ ಗುರುವಿನ ಸ್ಥಾನದಲ್ಲಿರುವ ಭಾರತ, ಅತ್ಯುತ್ತಮ ವೌಲ್ಯ ಗಳನ್ನು ನೀಡಿದೆ. ಇದರಲ್ಲಿ ಶ್ರೀಕೃಷ್ಣನ ಪಾತ್ರ ಅಪಾರ. ತಂತ್ರಗಾರನಾಗಿದ್ದ ಶ್ರೀಕೃಷ್ಣ ಉತ್ತಮ ರಾಜಕಾರಣಿಯೂ ಆಗಿದ್ದ. ಎಲ್ಲದಕ್ಕೂ ಮನಸ್ಸೇ ಮೂಲ ಎಂಬುವುದನ್ನು ಭಗವದ್ಗೀತೆ ಸ್ಪಷ್ಟಪಡಿಸಿದ್ದು, ಕರ್ಮ ಸಿದ್ಧಾಂತ, ವೈಚಾರಿಕ ನೆಲೆ ವ್ಯಕ್ತಿತ್ವ ವಿಕಸನಕ್ಕೆ ಕಾರಣೀಭೂತವಾಗಿದೆ ಎಂದರು.

ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಅಪರ ಜಿಲ್ಲಾಧಿ ಕಾರಿ ಅನುರಾಧ, ತಹಶೀಲ್ದಾರ್ ಮಹೇಶ್ಚಂದ್ರ, ಜಿಲ್ಲಾ ಯಾದವ ಗೊಲ್ಲ ಸಮಾಜದ ಪುಟ್ಟಣ್ಣ ಗೊಲ್ಲ, ಸಂಪನ್ಮೂಲ ವ್ಯಕ್ತಿಯಾಗಿ ಎನ್‌ಎಸ್‌ಎಸ್‌ನ ರಾಜ್ಯ ಸಂಯೋಜನಾಧಿಕಾರಿ ಡಾ.ಗಣನಾಥ ಎಕ್ಕಾರು, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕಿ ವಿಜಯಲಕ್ಷ್ಮೀ, ಪ್ರೌಢಶಾಲಾ ಮುಖ್ಯೋಪಾಧ್ಯಾಯ ವಿಶ್ವನಾಥ ಬಾಯರಿ, ಕಾಲೇಜು ಪ್ರಾಂಶುಪಾಲ ಕೆ.ಜಗದೀಶ್ ಕುಮಾರ್, ಎಸ್‌ಡಿಎಂಸಿ ಉಪಾಧ್ಯಕ್ಷ ಪ್ರಕಾಶ್ ಅಂದ್ರಾದೆ ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಮಹದೇವಯ್ಯ ಸ್ವಾಗತಿಸಿದರು. ಶಿಕ್ಷಕ ದಯಾನಂದ ವಂದಿಸಿದರು. ಕೊಡವೂರು ದುರ್ಗಾ ಮಹಿಳಾ ಮಂಡಳಿ ಸದಸ್ಯರಿಂದ ಭಜನಾ ಕಾರ್ಯಕ್ರಮ, ಲಕ್ಷ್ಮೀ ಗುರುರಾಜ್ ಮತ್ತು ಬಳಗ ಇವರಿಂದ ನೃತ್ಯ ರೂಪಕ ಹಾಗೂ ಮಕ್ಕಳಿಂದ ಕೃಷ್ಣ ರಾೆಯ ವೇಷ ಪ್ರದರ್ಶನ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News