ಕೇಂದ್ರದಲ್ಲಿ ಕೊಲೆಗಡುಕ, ದೇಶದ್ರೋಹಿ ಸರಕಾರ: ಸ್ವಾತಂತ್ರೋತ್ಸವ ಸತ್ಯಾಗ್ರಹದಲ್ಲಿ ಜಿ.ರಾಜಶೇಖರ್ ಟೀಕೆ

Update: 2017-08-14 16:09 GMT

ಉಡುಪಿ, ಆ.14: ಗಾಂಧಿ ಹತ್ಯೆಗೆ ಪ್ರಚೋದಿಸಿದ, ದ್ವೇಷದ ರಾಜಕೀಯ ತತ್ವ, ಸಿದ್ಧಾಂತದ ಆರಾಧಕರು ಇಂದು ದೇಶದಲ್ಲಿ ಸರಕಾರ ನಡೆಸುತ್ತಿದ್ದಾರೆ. ದೇಶಭಕ್ತಿಯ ಬಗ್ಗೆ ಮಾತನಾಡುವವರು ಇಂದು ಇಡೀ ದೇಶವನ್ನು ಅಮೆರಿಕಾಕ್ಕೆ ಒತ್ತೆ ಇರಿಸಿದ್ದಾರೆ ಮತ್ತು ಬಹುರಾಷ್ಟ್ರೀಯ ಬಂಡವಾಳಶಾಹಿಗಳಿಗೆ ಒಪ್ಪಿಸಿದ್ದಾರೆ. ಹೀಗಾಗಿ ನಮ್ಮನ್ನು ಆಳುವವರು ಕೇವಲ ಕೊಲೆಗಡುಕರು ಮಾತ್ರವಲ್ಲ, ದೇಶದ್ರೋಹಿಗಳು ಕೂಡ ಆಗಿದ್ದಾರೆ ಎಂದು ಹಿರಿಯ ಚಿಂತಕ ಜಿ.ರಾಜಶೇಖರ್ ಕಟುವಾಗಿ ಟೀಕಿಸಿದ್ದಾರೆ.

ಉಡುಪಿ ಜಿಲ್ಲಾ ಸಿಐಟಿಯು ವತಿಯಿಂದ ಆಹಾರ, ಆರೋಗ್ಯ, ವಸತಿ, ಶಿಕ್ಷಣ ಹಾಗೂ ಸ್ವತಂತ್ರ ಭಾರತದ ಸಂರಕ್ಷಣೆಗಾಗಿ ‘ಕಾರ್ಮಿಕ ಕಾನೂನು ಉಳಿಸಿ ಸಂವಿಧಾನ ರಕ್ಷಿಸಿ’ ಘೋಷಣೆಯೊಂದಿಗೆ ಸೋಮವಾರ ಸಂಜೆಯಿಂದ ಮಧ್ಯ ರಾತ್ರಿವರೆಗೆ ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಕ್ಲಾಕ್ ಟವರ್ ಎದುರು ಹಮ್ಮಿಕೊಳ್ಳಲಾದ ಸ್ವಾತಂತ್ರೋತ್ಸವ ಸತ್ಯಾಗ್ರಹವನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಘೋರಖ್‌ಪುರ ದುರಂತದ ಮೂಲಕ ಭಾರತದ ಭವಿಷ್ಯವನ್ನು ಆಳುವವರು ನಾಶ ಮಾಡಿದ್ದಾರೆ. ಅದೇ ರೀತಿ ಮುಸ್ಲಿಮ್ ಎಂಬ ಕಾರಣಕ್ಕೆ ರೈಲಿನಲ್ಲಿ ಹತ್ಯೆ ಗೀಡಾದ ಜುನೈದ್ ಪ್ರಕರಣ ಕೂಡ 70ನೆ ವರ್ಷದ ಸ್ವಾತಂತ್ರೋತ್ಸವ ಆಚರಿ ಸುತ್ತಿರುವ ಭಾರತಕ್ಕೆ ರೂಪಕವಾಗಿ ಕಾಣುತ್ತದೆ. ಒಂಟಿ ಸಾವುಗಳು, ಸರಣಿ ಸಾವುಗಳು, ಸಾಮೂಹಿಕ ಹತ್ಯೆಗಳನ್ನು ಬಿಟ್ಟು ಈ ದೇಶದಲ್ಲಿ ನೆನಪು ಮಾಡಲು ಈಗ ಬೇರೆ ಏನು ಉಳಿದಿಲ್ಲ ಎಂದರು.

ಬಾಬರಿ ಮಸೀದಿಯನ್ನು ಧ್ವಂಸ ಮಾಡಿದವರನ್ನು ಸ್ವಾತಂತ್ರ ಹೋರಾಟ ಗಾರರು ಎಂದು ಭಾವಿಸುವ ಪಕ್ಷ ಇಂದು ಕೇಂದ್ರದಲ್ಲಿ ಅಧಿಕಾರದಲ್ಲಿದೆ. ಹೀಗಾಗಿ ಈ ಸರಕಾರದ ಉಸ್ತುವಾರಿಯಲ್ಲಿ ನಡೆಯುವ 70ರ ಸ್ವಾತಂತ್ರ ದಿನಾಚರಣೆಯು ಸಾವಿನ ಸೂತಕದ ಸಂಭ್ರಮಾಚರಣೆಯಾಗಿದೆ. ದೇಶದ ಈ ಸ್ಥಿತಿಯ ಬಗ್ಗೆ ವಿಷಾಧ ಇಲ್ಲದಿದ್ದರೆ ನಮ್ಮ ಸಂಭ್ರಮಕ್ಕೆ ಯಾವುದೇ ಅರ್ಥ ಇರುವುದಿಲ್ಲ ಎಂದು ಅವರು ಹೇಳಿದರು.

ಸಿಐಟಿಯು ಮುಖಂಡ ವಿಶ್ವನಾಥ ರೈ ಮಾತನಾಡಿ, ಭಾರತಕ್ಕೆ ದೊರೆತ ಸ್ವಾತಂತ್ರದಿಂದಾಗಿ ಬಡವರ, ಕಾರ್ಮಿಕರ, ವಿದ್ಯಾರ್ಥಿಗಳ ಜೀವನ ಮಟ್ಟ ಎಷ್ಟರ ಮಟ್ಟಿಗೆ ಸುಧಾರಿಸಿದೆ ಹಾಗೂ ಅವರಿಗೆ ಯಾವುದೆಲ್ಲ ಅನುಕೂಲ ಗಳಾಗಿವೆ ಮತ್ತು ಶ್ರೀಮಂತರು, ಅಧಿಕಾರಸ್ಥರು ಈ ಸ್ವಾತಂತ್ರವನ್ನು ಯಾವ ರೀತಿ ಬಳಸಿಕೊಂಡು ತಮ್ಮ ಅಧಿಕಾರವನ್ನು ಇನ್ನಷ್ಟು ವೃದ್ಧಿಸಿಕೊಂಡಿದ್ದಾರೆ ಎಂಬುದರ ಬಗ್ಗೆ ವಿಮರ್ಶೆ ಮಾಡಬೇಕಾಗಿದೆ ಎಂದರು.

ಸಿಐಟಿಯು ರಾಜ್ಯ ಕಾರ್ಯದರ್ಶಿ ಪ್ರಕಾಶ್ ಕೆ., ಮುಖಂಡರಾದ ಬಾಲಕೃಷ್ಣ ಶೆಟ್ಟಿ, ಕೆ.ಶಂಕರ್, ವೆಂಕಟೇಶ್ ಕೋಣಿ, ಬಿಲ್ಕೀಸ್ ಕುಂದಾಪುರ, ಲಕ್ಷ್ಮಣ್ ಕೆ., ಸುರೇಶ್ ಕಲ್ಲಾಗರ್, ಶಶಿಧರ್ ಗೊಲ್ಲ, ಸುಶೀಲಾ ನಾಡ, ಕವಿರಾಜ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News