ನಿಲ್ಲಿಸಲು ಸೂಚಿಸಿದ ವಾಹನ ಢಿಕ್ಕಿ: ಹೋಮ್‌ಗಾರ್ಡ್‌ಗೆ ಗಾಯ

Update: 2017-08-15 16:18 GMT

ಕಾಪು, ಆ.15: ಪೊಲಿಪು ಜಂಕ್ಷನ್‌ನಲ್ಲಿರುವ ಚೆಕ್‌ಪೋಸ್ಟ್ನಲ್ಲಿ ಆ.15ರಂದು ನಸುಕಿನ ವೇಳೆ ವಾಹನ ತಪಾಸಣೆ ನಡೆಸುತ್ತಿದ್ದ ಸಂದರ್ಭ ನಿಲ್ಲಿಸಲು ಸೂಚಿಸಿದ ಕಾರೊಂದು ಕರ್ತವ್ಯ ನಿರತ ಹೋಮ್‌ಗಾರ್ಡ್‌ಗೆ ಢಿಕ್ಕಿ ಹೊಡೆದು ಗಾಯಗೊಳಿಸಿರುವ ಬಗ್ಗೆ ವರದಿಯಾಗಿದೆ.

ಮಲ್ಲಾರು ಗ್ರಾಮದ ಕೊಂಬಗುಡ್ಡೆಯ ವೆಂಕಟರಮಣ ಶೆರ್ವೆಗಾರ್(55) ಗಾಯಗೊಂಡ ಕಾಪು ಪೊಲೀಸ್ ಠಾಣೆಯ ಹೋಮ್‌ಗಾರ್ಡ್ ಸಿಬ್ಬಂದಿ. ಇವರು ಠಾಣೆಯ ಸಿಬ್ಬಂದಿ ಜೊತೆ ವಾಹನ ತಪಾಸಣೆ ನಡೆಸುತ್ತಿರುವಾಗ ಉಡುಪಿ ಕಂಟ್ರೋಲ್ ರೂಂನಿಂದ ಬಂದಿರುವ ಮಾಹಿತಿಯಂತೆ ಉಡುಪಿ ಕಡೆಯಿಂದ ಬರುತ್ತಿದ್ದ ಕೆಂಪು ಬಣ್ಣದ ಅನುಮಾನಾಸ್ಪದ ಆಲ್ಟೋ ಕಾರನ್ನು ನಿಲ್ಲಿಸಲು ಸೂಚಿಸಿದರು.

ಆದರೆ ಚಾಲಕ ಕಾರನ್ನು ನಿಲ್ಲಿಸದೇ ನೇರವಾಗಿ ಮುಂದಕ್ಕೆ ಚಲಾಯಿಸಿ ವೆಂಕಟರಮಣ ಶೆರ್ವೆಗಾರ್‌ಗೆ ಢಿಕ್ಕಿ ಹೊಡೆದು ಪರಾರಿಯಾದನು. ಇದರಿಂದ ರಸ್ತೆ ಬಿದ್ದು ಗಾಯಗೊಂಡ ಅವರಿಗೆ ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News