ಉಡುಪಿ: ಸರ್ವಧರ್ಮ ಸ್ವಚ್ಛ ಗ್ರಾಮ ಅಭಿಯಾನಕ್ಕೆ ಜೊತೆಯಾದ ಕುಂತಳನಗರ ಗ್ರಾಮಸ್ಥರು

Update: 2017-08-17 15:01 GMT

ಉಡುಪಿ, ಆ.17: ಒಂದೆಡೆ ಉಡುಪಿ ಜಿಲ್ಲೆಯನ್ನು ಸ್ವಚ್ಚ ಉಡುಪಿಯೊಂದಿಗೆ ಕಸ ಮುಕ್ತ ಜಿಲ್ಲೆಯನ್ನಾಗಿ ಪರಿವರ್ತಿಸುವತ್ತ ಪ್ರಯತ್ನಗಳು ನಡೆಯುತ್ತಿದ್ದರೆ ಅದಕ್ಕೆ ಸಹಕಾರವೆಂಬಂತೆ ತಳಮಟ್ಟದಲ್ಲಿ ಈ ಅಭಿಯಾನಕ್ಕೆ ಸಹಕಾರ ನೀಡುವ ನಿಟ್ಟಿನಲ್ಲಿ ಇತ್ತೀಚೆಗೆ ಮೂಡುಬೆಳ್ಳೆ ಸಮೀಪದ ಕುಂತಲನಗರ ಊರಿನ ಗ್ರಾಮಸ್ಥರು ಜೊತೆಯಾಗಿ ಸರ್ವ ಧರ್ಮ ಸ್ವಚ್ಛ  ಗ್ರಾಮ ಅಭಿಯಾನಕ್ಕೆ ಕೈಜೋಡಿಸಿ ಮಾದರಿಯೆನಿಸಿದ್ದಾರೆ.

ದೇಶದ ಸ್ವಾತಂತ್ರ್ಯೋತ್ಸವವನ್ನು ಸರ್ವಧರ್ಮಿಯರು ಜೊತೆಯಾಗಿ ಆಚರಿಸಿದ ಬಳಿಕ ಸುಮಾರು 200 ಮಂದಿ ಹಿಂದೂ, ಕ್ರೈಸ್ತ ಹಾಗೂ ಮುಸ್ಲಿಂ ಸಮುದಾಯದ ಸ್ವಯಂಸೇವಕರು ಸೇರಿಕೊಂಡು ತಮ್ಮ ಊರನ್ನು ಸ್ವಚ್ಛ  ಗ್ರಾಮ ಹಾಗೂ ಹಸಿರಿನಿಂದ ಕೂಡಿದ ಊರು ಮಾಡಬೇಕು ಎನ್ನುವ ಸಂಕಲ್ಪದೊಂದಿಗೆ ಜೊತೆ ಸೇರಿ ಸುಮಾರು ಮೂರು ಗಂಟೆಗಳ ಕಾಲ ಸತತ ಶ್ರಮಾದಾನದ ಮೂಲಕ ಸ್ವಚ್ಛ ತೆಯನ್ನು ಮಾಡಿದರು.

ಸ್ವಚ್ಛತೆ ಕೇವಲ ಒಬ್ಬರ ಕೆಲಸವಲ್ಲ ಬದಲಾಗಿ ಸರ್ವಧರ್ಮಿಯರ ಜವಾಬ್ದಾರಿ ಎನ್ನುವುದು ಅರಿತು ಕಾರ್ಯರೂಪಕ್ಕೆ ಇಳಿದ ಕುಂತಲನಗರ ಊರಿನ ಸಂತ ಅಂತೋನಿಯವರ ದೇವಾಲಯ, ಸಾರ್ವಜನಿಕ ಗಣೇಶೋತ್ಸವ ಸಮಿತಿ ದೆಂದೂರುಕಟ್ಟೆ, ಮಣಿಪುರ ಗ್ರಾಮಪಂಚಾಯತ್, ಜುಮ್ಮಾ ಮಸೀದಿ ಮಣಿಪುರ, ಸರ್ವಧರ್ಮ ಸೌಹಾರ್ದ ಸಮಿತಿ ಕುಂತಳನಗರ, ಸಿಎಸ್‌ಐ ಚರ್ಚ್ ಮಣಿಪುರ, ರೋಟರಿ ಕ್ಲಬ್ ಮಣಿಪುರ, ನವೋದಯ ಮಿತ್ರ ಮಂಡಳಿ ಮಣಿಪುರ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮತ್ತು ನಾರಾಯಣಗುರು ಮಿತ್ರ ಮಂಡಳಿ ಇದರ ಸರ್ವ ಸದಸ್ಯರು ಸೇರಿ ಸ್ವಚ್ಚತೆಯ ಕಾರ್ಯಕ್ಕೆ ಕೈಜೋಡಿಸಿದ್ದು ವಿಶೇಷವಾಗಿತ್ತು.

 ಭಾಗವಹಿಸಿದ ಸರ್ವ ಸದಸ್ಯರು ಸ್ವಚ್ಛತೆಯ ನವ ಭಾರತ ಸಂಕಲ್ಪ ಪ್ರತಿಜ್ಞೆ ಭೋಧಿಸಿ ನಮ್ಮ ಸ್ಥಳೀಯ ಗ್ರಾಮವನ್ನು ಪ್ಲಾಸ್ಟಿಕ್ ಮುಕ್ತ, ಕಸ ಮುಕ್ತ, ಹಸಿವು ಮುಕ್ತ, ಭೃಷ್ಟಾಚಾರ ಮುಕ್ತ, ಭೀತಿ ಮುಕ್ತ, ಕೋಮು ಸಂಘರ್ಷ ಮುಕ್ತ, ಮತ್ತು ಪರಸ್ಪರ ಸೌಹಾರ್ದಯುತ ಸಮಾಜದೊಂದಿಗೆ ಸರ್ವ ಭಾಷೆ ಸಂಸ್ಕೃತಿ ಪ್ರೀತಿಸುವ ವಿಶಿಷ್ಟ ಪ್ರತಿಜ್ಞೆಯನ್ನು ಕೈಗೊಂಡರು.

ಇದೇ ವೇಳೆ ಮಾತನಾಡಿದ ಕುಂತಳನಗರ ಚರ್ಚಿನ ಧರ್ಮಗುರು ವಂ ಡೆನಿಸ್ ಡೆಸಾ ಅವರು ಯಾವುತ್ತು ನಮ್ಮ ಹೃದಯ ಮತ್ತು ಮನಸ್ಸು ಸ್ವಚ್ಛ ವಾಗಿರುಸುದರೊಂದಿಗೆ ನಮ್ಮ ಸಮಾಜವನ್ನು ಕೂಡ ಸ್ವಚ್ಛ  ಹಾಗೂ ದ್ವೇಷ ಮುಕ್ತವಾಗಿರಿಸಬೇಕು. ಮೊದಲು ಅವುಗಳನ್ನು ಸ್ವಚ್ಛ ವಾಗಿಟ್ಟುಕೊಂಡಾಗ ತನ್ನಿಂದ ತಾನೇ ನಮ್ಮ ಊರು ಸ್ವಚ್ಛ  ಊರು ಆಗಲು ಸಾಧ್ಯವಿದೆ. ನಮ್ಮ ಪೂರ್ವಜರು ನಮಗಾಗಿ ಬಿಟ್ಟು ಹೋದ ಸುಂದರ ಪ್ರಕೃತಿಯನ್ನು ಪೋಷಿಸುವುದು ರಕ್ಷಿಸುವುದು ನಮ್ಮ ಜವಾಬ್ದಾರಿಯಾಗಿದೆ. ಅದರಂತೆ ನಮ್ಮೆಲ್ಲರ ಸಾಮಾನ್ಯ ಮನೆಯಾಗಿರುವ ಭಾರತ ದೇಶವನ್ನು ಗೌರವಿಸಿ ಸ್ವಚ್ಛ  ಹಾಗೂ ಸುಂದರ ದೇಶವನ್ನು ಮುಂದಿನ ಪೀಳಿಗೆಗೆ ನೀಡುವ ಕಾಯಕ ಕೇವಲ ಒಬ್ಬ ವ್ಯಕ್ತಿ, ಧರ್ಮಕ್ಕೆ ಸೀಮೀತವಾಗಿರದೆ ಸರ್ವ ಧರ್ಮಿಯರ ಜವಾಬ್ದಾರಿಯಾಗಿದೆ ಎಂದರು.

ಸರ್ವ ಧರ್ಮಿಯರು ಜೊತೆಯಾಗಿ ಸೇರಿ ದೆಂದೂರುಕಟ್ಟೆಯಿಂದ ಮಣಿಪುರ, ಕುಂತಳನಗರ, ಕಲ್ಮಂಜೆ ವ್ಯಾಪ್ತಿಯಲ್ಲಿನ ಪಂಚಾಯತ್ ವಠಾರ, ದೇವಸ್ಥಾನ, ಕೆಥೊಲಿಕ್ ಮತ್ತು ಸಿಎಸ್‌ಐ ಚರ್ಚು ಮಸೀದಿ, ರೋಟರಿ ಕ್ಲಬ್ ವಠಾರವನ್ನು ಸ್ವಚ್ಛ ಗೊಳಿಸಿದರು.

ಸ್ವಚ್ಛತೆಯ ಕಾರ್ಯಕ್ರಮದಲ್ಲಿ ಸರ್ವಧರ್ಮಿಯ ನಾಯಕರಾದ ಮಣಿಪುರ ಗ್ರಾಮಪಂಚಾಯತ್ ಅಧ್ಯಕ್ಷರಾದ ಗೀತಾರಾಮ, ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಸಖರಾಮ ಶೆಟ್ಟಿ, ಜುಮ್ಮಾ ಮಸೀದಿಯ ಅಧ್ಯಕ್ಷ ಮೂಫೂರ್ ಹಮೀದ್, ಸಿಎಸ್‌ಐ ಚರ್ಚಿನ ಜೋಸೇಫ್ ಕುಂದರ್, ನ್ಯಾಯವಾದಿ ಕೃಷ್ಣರಾಜ್ ಆಚಾರ್ಯ, ರೋಟರಿ ಅಧ್ಯಕ್ಷ  ಚಂದ್ರಶೇಖರ್ ಸಾಲಿಯಾನ್, ಕುಂತಳನಗರ ಚರ್ಚಿನ ಉಪಾಧ್ಯಕ್ಷ ವಿನ್ಸೆಂಟ್ ಡಿಸೋಜ, ಇತರ ನಾಯಕರಾದ ಐಡಾ ಗಿಬ್ಬಾ ಡಿಸೋಜ, ಮೊಹ್ಮದ್ ಶರೀಫ್, ಆಶಾ ಶೇಖರ್, ಅಣ್ಣಪ್ಪ ಪೂಜಾರಿ, ರಾಘು ಪೂಜಾರಿ ಹಾಗೂ ಇತರರು ಉಪಸ್ಥತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News