ಕುಂಜತ್ತೂರು ಪದವು: ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ನಗ-ನಗದು ಕಳವು

Update: 2017-08-18 10:31 GMT

ಮಂಜೇಶ್ವರ, ಆ.18: ಮನೆಯೊಂದರ ಹಿಂಬಾಗಿಲು ಮುರಿದು ನುಗ್ಗಿದ ಕಳ್ಳರು ಮನೆಮಂದಿ ನಿದ್ರಿಸುತ್ತಿರುವ ಮಧ್ಯೆಯೇ ಲಕ್ಷಾಂತರ ರೂ. ಮೌಲ್ಯದ ನಗ-ನಗದು ದೋಚಿ ಪರಾರಿಯಾದ ಘಟನೆ ಕುಂಜತ್ತೂರು ಪದವು ಎಂಬಲ್ಲಿ ಇಂದು ಬೆಳಗಿನ ಜಾವ ನಡೆದಿದೆ

ಕುಂಜತ್ತೂರು ಪದವು ನಿವಾಸಿ ಜೀನಸ್ ಹಾಗೂ ಹಾಲು ವ್ಯಾಪಾರಿ ಅಬ್ದುಲ್ ಮುನೀರ್ ಎಂಬವರ ಮನೆಯಿಂದ ಈ ಕಳ್ಳತನ ನಡೆದಿದೆ. ಸುಮಾರು 68 ಪವನ್ ಚಿನ್ನಾಭರಣ, 70 ಸಾವಿರ ರೂ. ನಗದು, ಹಾಗೂ ಬೆಲೆಬಾಳುವ ರೇಡೋ ವಾಚ್ ಕಳವಾಗಿರುವುದಾಗಿ ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.

ಕಳವು ಕೃತ್ಯವು ಇಂದು ಬೆಳಗ್ಗಿನ ಜಾವ 2ರಿಂದ 3 ಗಂಟೆಯ ನಡುವೆ ಸಂಭವಿಸಿದೆ. ಮುನೀರ್ ಅವರ ಪತ್ನಿ ಹಸೀನಾ ಮತ್ತು ಇಬ್ಬರು ಮಕ್ಕಳು ಮಲಗಿದ್ದ ಕೋಣೆಯಿಂದ ಈ ಕಳ್ಳತನ ಮಾಡಲಾಗಿದೆ.

ಕಳ್ಳರು ಮನೆಯ ಮುಂಬಾಗಿಲನ್ನು ಮನೆಯೊಳಗಿದ್ದವರು ತೆರೆಯದಂತೆ ಹಗ್ಗದ ಸಹಾಯದಿಂದ ಹೊರಗಿನಿಂದ ಕಾಂಕ್ರಿಟ್ ಪಿಲ್ಲರ್‌ಗೆ ಕಟ್ಟಿ ಬಳಿಕ ಮನೆಯ ಹಿಂಬಾಗಿಲನ್ನು ಮುರಿದು ಒಳನುಗ್ಗಿದ್ದಾರೆ. ಹಸೀನಾ ಮತ್ತು ಇಬ್ಬರು ಮಕ್ಕಳು ಮಲಗಿದ್ದ ಕೊಠಡಿಯಲ್ಲಿದ್ದ ಕಪಾಟಿಗೆ ಬೀಗ ಹಾಕಿರದ ಕಾರಣ ಅದರಲ್ಲಿದ್ದ ಸುಮಾರು 68 ಪವನ್ ಚಿನ್ನಾಭರಣ, 70 ಸಾವಿರ ರೂ. ನಗದು ಹಾಗೂ ಒಂದು ರೇಡೋ ವಾಚನ್ನು ಕಳ್ಳರು ಕದ್ದೊಯ್ದಿದ್ದಾರೆ.

ಈ ನಡುವೆ ರಾತ್ರಿ 2ರಿಂದ 3 ಗಂಟೆ ಮಧ್ಯೆ ತನ್ನ ಕೋಣೆಯಲ್ಲಿದ್ದ ಕಪಾಟು ತೆರೆದ ಸದ್ದು ಹಸೀನಾರ ಗಮನಕ್ಕೆ ಬಂದಿದೆ. ಆದರೆ ಅರೆನಿದ್ದೆಗಣ್ಣಲ್ಲಿ ಅವರು ಇದನ್ನು ಗಂಭೀರವಾಗಿ ಪರಿಗಣಿಸದ ಅವರು ಹಾಲು ವ್ಯಾಪಾರಿಯಾಗಿರುವ ಪತಿ ಮುನೀರ್ ಎಂದಿನಂತೆ ಹಾಲಿಗೆ ತೆರಳಲು ಸಿದ್ಧರಾಗುತ್ತಿರಬಹುದೆಂದು ಭಾವಿಸಿ ಸುಮ್ಮನಾಗಿದ್ದರು ಎಂದು ಹೇಳಲಾಗಿದೆ.

ಬಳಿಕ 3:30ರ ಸುಮಾರಿಗೆ ಮನೆಯ ಮೇಲಂತಸ್ತಿನ ಕೋಣೆಯಲ್ಲಿ ಇನ್ನೊಬ್ಬನ ಮಗನೊಂದಿಗೆ ಮಲಗಿದ್ದ ಮುನೀರ್ ಹಾಲು ವ್ಯಾಪಾರಕ್ಕೆಂದು ಎದ್ದಾಗ ಕೃತ್ಯ ಬೆಳಕಿಗೆ ಬಂದಿದೆ.

ಚಾಣಕ್ಷತನದಿಂದ ಕಳವು ನಡೆಸಿರುವ ಕಳ್ಳರು ಭಾರೀ ಮುನ್ನೆಚ್ಚರಿಕೆ ಕ್ರಮಗಳನ್ನು ತೆರೆಗುಕೊಂಡಿದ್ದಾರೆ. ಮುಂಬಾಗಿಲನ್ನು ಹೊರಗಿನಿಂದ ಭದ್ರಪಡಿಸಿದ್ದಲ್ಲದೆ, ಮನೆಯಲ್ಲಿನ ಬಹುತೇಕ ವಿದ್ಯುತ್ ದೀಪಗಳನ್ನೂ ತೆಗೆದಿದ್ದಾರೆ.

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈಮನ್ ಹಾಗೂ ಮಂಜೇಶ್ವರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಬೆರಳಚ್ಚು ತಜ್ಞರನ್ನು ಕರೆಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News